ಬ್ರೆಡ್ ಉಪ್ಪಿಟ್ಟು

ಬ್ರೆಡ್ ಉಪ್ಪಿಟ್ಟು

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು (ಸ್ಲೈಸ್) ೫, ಹೆಚ್ಚಿದ ಈರುಳ್ಳಿ ಅರ್ಧ ಕಪ್, ಹೆಚ್ಚಿದ ಟೊಮೆಟೋ ಅರ್ಧ ಕಪ್, ಶುಂಠಿ ತರಿ ಅರ್ಧ ಚಮಚ, ಹೆಚ್ಚಿದ ಹಸಿರು ಮೆಣಸಿನಕಾಯಿ ೪, ಕೆಂಪು ಮೆಣಸಿನ ಹುಡಿ, ಅರಸಿನ ಹುಡಿ, ಸಾಸಿವೆ, ಜೀರಿಗೆ ತಲಾ ಅರ್ಧ ಚಮಚ, ಕರಿಬೇವು ಸೊಪ್ಪು ೬ ಎಸಳು, ಹೆಚ್ಚಿದ ಕೊತ್ತಂಬರಿ ಸೊಪ್ಪು ೩ ಚಮಚ, ಲಿಂಬೆ ರಸ, ೨ ಚಮಚ, ಎಣ್ಣೆ ೪ ಚಮಚ, ಉದ್ದಿನ ಬೇಳೆ ೨ ಚಮಚ, ಕಡಲೆ ಬೇಳೆ ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಬ್ರೆಡ್ಡಿನ ಬದಿಯನ್ನು ತೆಗೆಯಿರಿ. ಬಿಳಿಭಾಗವನ್ನು ಒಂದು ಇಂಚುಗಳ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ. ಸಾಸಿವೆ ಸಿಡಿಸಿ. ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಕೆಂಪಾಗುವ ತನಕ ಹುರಿಯಿರಿ. ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಹೆಚ್ಚಿಟ್ಟ ಈರುಳ್ಳಿ ಸೇರಿಸಿ ನಸುಕೆಂಪು ಬಣ್ಣ ಬರುವವರೆಗೆ ಹುರಿಯಿರಿ.

ಕೆಂಪು ಮೆಣಸಿನ ಹುಡಿ ಮತ್ತು ಅರಸಿನ ಹುಡಿ ಸೇರಿಸಿ ಅರ್ಧ ನಿಮಿಷ ಕೈಯಾಡಿಸಿರಿ. ಉಪ್ಪು ಮತ್ತು ಟೊಮೆಟೋ ಸೇರಿಸಿ ಒಂದು ನಿಮಿಷ ಕೈಯಾಡಿಸಿ. ಬ್ರೆಡ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಉರಿ ಆರಿದ ಮೇಲೆ ಲಿಂಬೆರಸ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ, ಬೆರೆಸಿ ಬಿಸಿಬಿಸಿ ಸವಿಯಿರಿ.