ಬ್ರೆಡ್ ಚನಾ ಚಾಟ್

ಬ್ರೆಡ್ ಹಾಳೆಗಳು ೪, ಬೇಯಿಸಿದ ಬಿಳಿ ಕಡಲೆ, ಬೇಯಿಸಿ ಪುಡಿಮಾಡಿದ ಬಟಾಟೆ, ಮೊಸರು ತಲಾ ಮುಕ್ಕಾಲು ಕಪ್, ಹೆಚ್ಚಿದ ನೀರುಳ್ಳಿ ೪ ಚಮಚ, ಹೆಚ್ಚಿದ ಹಸುರುಮೆಣಸಿನಕಾಯಿ ೧, ಹೆಚ್ಚಿದ ಕೊತ್ತಂಬರಿಸೊಪ್ಪು ೨ ಚಮಚ, ಕೊತ್ತಂಬರಿಸೊಪ್ಪು ಚಟ್ನಿ ೪ ಚಮಚ, ಸಿಹಿ-ಹುಳಿ ಚಟ್ನಿ ೪ ಚಮಚ, ಕೆಂಪುಮೆಣಸಿನಪುಡಿ, ಜೀರಿಗೆಪುಡಿ, ಚಾಟ್ ಮಸಾಲಾಪುಡಿ, ಲಿಂಬೇರಸ ತಲಾ ೨ ಚಮಚ., ಶಾವಿಗೆ (ಸೇವ್) ಮುಕ್ಕಾಲು ಕಪ್, ಬೆಣ್ಣೆ ೪ ಚಮಚ., ಸಕ್ಕರೆ ೧ ಚಮಚ, ಉಪ್ಪು ರುಚಿಗೆ.
ದೋಸೆ ತವೆಯನ್ನು ಹದವಾಗಿ ಬಿಸಿ ಮಾಡಿ. ಬ್ರೆಡ್ ಹಾಳೆಯ ಎರಡೂ ಬದಿಗಳಿಗೆ ಬೆಣ್ಣೆ ಸವರಿ ಬಿಸಿ ತವೆಯ ಮೇಲೆ ಮಂದ ಉರಿಯಲ್ಲಿ ಎರಡೂ ಬದಿ ಕೆಂಪಗೆ ಕಾಯಿಸಿರಿ. ಗರಿಗರಿಯಾಗಬೇಕು. ತಣಿದ ಮೇಲೆ ಹಾಳೆಯನ್ನು ಆರು ತುಂಡುಗಳನ್ನಾಗಿ ಮಾಡಿರಿ. ಬೇಯಿಸಿದ ಚನಾ ಮತ್ತು ಬಟಾಟೆಯನ್ನು ಕೈಯಿಂದ ತುಸು ಮಸೆದು ಬದಿಗಿಡಿ. ಮೊಸರಿಗೆ ಸ್ವಲ್ಪ ಉಪ್ಪು ಮತ್ತು ಸಕ್ಕರೆ ಬೆರೆಸಿ ಬದಿಗಿಡಿ. ಕಾಯಿಸಿದ ಬ್ರೆಡ್ ತುಂಡುಗಳನ್ನು ಒಂದು ಅಂದವಾದ ಪ್ಲೇಟ್‌ನ ಮೇಲೆ ಜೋಡಿಸಿರಿ. ಮೇಲೆ ಚನಾ, ಬಟಾಣಿ ಮಿಶ್ರಣ ಹರಡಿರಿ. ಮೇಲೆ ನೀರುಳ್ಳಿ, ಹಸುರುಮೆಣಸಿನಕಾಯಿ ಸೇರಿಸಿರಿ. ಮೇಲಿನಿಂದ ಕೊತ್ತಂಬರಿಸೊಪ್ಪಿನ ಚಟ್ಟಿ, ಅದರ ಮೇಲೆ ಸಿಹಿ-ಹುಳಿ ಚಟ್ನ ಅನಂತರ ತಯಾರಿಸಿದ ಮೊಸರು ಹರಡಿರಿ. ಮೆಣಸಿನಪುಡಿ, ಚಾಟ್ ಮಸಾಲಾಪುಡಿ ಮತ್ತು ಜೀರಿಗೆಪುಡಿ ಚಿಮುಕಿಸಿರಿ. ಸೇವ್ ಮೇಲಿನಿಂದ, ಕೊನೆಗೆ ಲಿಂಬೇರಸ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಬ್ರೆಡ್ ಚನಾ ಚಾಟ್ ತಯಾರು!