ಬ್ರೆಡ್ ದೋಸೆ

ಬೇಕಿರುವ ಸಾಮಗ್ರಿ
ಬಿಳಿ ಬ್ರೆಡ್ ಹಾಳೆಗಳು (ಸ್ಲೈಸ್) ೧೦, ಬಾಂಬೆ ರವಾ ಅರ್ಧ ಕಪ್, ಮೊಸರು ೪ ಚಮಚ, ಅಕ್ಕಿ ಹಿಟ್ಟು ೨ ಚಮಚ, ತುರಿದ ಶುಂಠಿ ೨ ಚಮಚ, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ೪-೫, ಕರಿಬೇವು ಸೊಪ್ಪು ೮-೧೦ ಎಸಳು, ಎಣ್ಣೆ ೬ ಚಮಚ, ನೀರು ಒಂದೂವರೆ ಕಪ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಬ್ರೆಡ್ ಹಾಳೆಗಳ ಬದಿಯನ್ನು ಕತ್ತರಿಸಿ ತೆಗೆದು ಬದಿಗಿಡಿ. ಬಿಳಿ ಭಾಗದ ಮೇಲೆ ಅರ್ಧ ಕಪ್ ನೀರು ಚಿಮುಕಿಸಿ ಬದಿಗಿಡಿ. ರವೆ, ಮೊಸರು, ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಅಕ್ಕಿಹಿಟ್ಟು ಸೇರಿಸಿ ರುಬ್ಬಿ. ಬಳಿಕ ಅದಕ್ಕೆ ನೆನೆದ ಬ್ರೆಡ್ ಹಾಳೆಗಳು ಮತ್ತು ಉಳಿದ ನೀರು ಸೇರಿಸಿ ರುಬ್ಬಿ. ಉಪ್ಪು ಹಾಕಿ. ಹದ ಬಿಸಿಯಾದ ದೋಸೆ ಕಾವಲಿಯ ಮೇಲೆ ದೋಸೆ ಮಾಡಿರಿ. ಬಿಸಿಬಿಸಿ ದೋಸೆಗಳನ್ನು ಕೊತ್ತಂಬರಿಸೊಪ್ಪಿನ ಚಟ್ನಿಯೊಂದಿಗೆ ಸವಿಯಿರಿ. ಕತ್ತರಿಸಿ ಬದಿಗಿಟ್ಟ ಬ್ರೆಡ್ ಹಾಳೆಯ ಬದಿಗಳನ್ನು ಬಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ಬಹಳ ರುಚಿಯಾಗಿರುತ್ತದೆ.