'ಬ್ರೇಕಿಂಗ್' ನ್ಯೂಸ್ !
ಗಾಬರಿಯಿಂದ ಮತ್ತು ನಡುಗುವ ಧ್ವನಿಯಿಂದ ಮಂಕ ದೂರವಾಣಿಯಲ್ಲಿ, "ಬೇಗ ಬಾರೋ. ನಾನು ಮಹಾರಾಜ ಪಾರ್ಕಿನಲ್ಲಿದ್ದೀನಿ. ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡು ಬಿಟ್ಟಿದ್ದೀನಿ. ಪರಿಹಾರ ಸಿಗದೇ ಇದ್ದರೆ ನಾನು ಸತ್ತು ಹೋಗಿಬಿಡ್ತೀನಿ. ಏನು ಮಾಡಬೇಕೋ ಗೊತ್ತಾಗ್ತಾ ಇಲ್ಲ" ಎಂದಾಗ ಮಡ್ಡಿ, "ಏನು ಸಮಾಚಾರ? ಗಾಬರಿಯಾಗಬೇಡ. ಈಗಲೇ ಹೊರಟುಬರ್ತೀನಿ" ಅಂದವನೇ ಪ್ಯಾಂಟು ಸಿಕ್ಕಿಸಿಕೊಂಡು ಸ್ಕೂಟರ್ ಹತ್ತಿ ಪಾರ್ಕಿಗೆ ಬಂದ. ಒಂದು ಮೂಲೆಯ ಬೆಂಚಿನಲ್ಲಿ ತಲೆಯ ಮೇಲೆ ಟವೆಲ್ ಹಾಕಿಕೊಂಡು ಕುಳಿತಿದ್ದವನು ಮಂಕ ಎಂದು ಗೊತ್ತಾದದ್ದು ಅವನು ಮಡ್ಡಿಯನ್ನು ಕುರಿತು 'ನಾನು ಇಲ್ಲಿದ್ದೀನಿ, ಬಾರೋ' ಎಂದು ಕರೆದಾಗಲೇ. ಆಗ ನಡೆದ ಸಂಭಾಷಣೆ:
ಮಡ್ಡಿ: ಯಾಕೋ ಹಿಂಗಿದೀಯ? ಏನಾಯ್ತೋ?
ಮಂಕ: ಸಂಕ್ರಾಂತಿ ಹಬ್ಬದ ಹಿಂದಿನ ದಿನ ನನಗೂ ನನ್ನ ಹೆಂಡತಿಗೂ ನಾನು ಹಬ್ಬಕ್ಕೆ ಸೀರೆ ಕೊಡಿಸಲಿಲ್ಲ ಎಂದು ಜಗಳ ಆಗಿದ್ದು ನಿನಗೆ ಗೊತ್ತಲ್ಲಾ?
ಮಡ್ಡಿ: ಹೌದು, ನೀನೇ ಹೇಳಿದ್ದೆ. ಸ್ವಲ್ಪ ತೊಂದರೆ ಇದೆ. ಶಿವರಾತ್ರಿ ಹೊತ್ತಿಗೆ ಕೊಡಿಸ್ತೀನಿ ಅಂದಿದ್ದೆಯಂತೆ.
ಮಂಕ: ಹೂಂ, ಕಣೋ. ಅವಳೂ ಸುಮ್ಮನಾಗಿದ್ದಳು. ಹಬ್ಬದ ದಿನ ಅವಳ ತಮ್ಮ ಮನೆಗೆ ಬಂದಿದ್ದ. ಅವನು ನನ್ನ ಹೆಂಡತಿ ತಲೆ ಕೆಡಿಸಿ ಮತ್ತೆ ನಮಗೆ ಜಗಳ ತಂದಿಟ್ಟ. ನಾನೂ ಸಿಟ್ಟಿಗೆದ್ದು ಎರಡು ಮಾತು ಜಾಸ್ತಿನೇ ಆಡಿದೆ. ಸಿಟ್ಟಿನಲ್ಲಿ ನಿನ್ನ ಕಟ್ಟಿಕೊಂಡು ಸಾಕಾಗಿ ಹೋಗಿದೆ ಡೈವೋರ್ಸ್ ಕೊಡ್ತೀನಿ ಅಂದೆ. ಅವತ್ತೆಲ್ಲಾ ದುಸುಮುಸುನಲ್ಲೇ ಕಳೀತು ಕಣೋ. ಮರುದಿನ ಬೆಳಿಗ್ಗೆ ಅವಳು ತನ್ನ ತಮ್ಮನ ಜೊತೆಗೆ ತೌರುಮನೆಗೆ ಹೊರಟೇಬಿಟ್ಟಳು ಕಣೋ. ನಾನೂ ಹೇಳೋ ಅಷ್ಟು ಹೇಳಿದೆ, ಕೇಳಲೇ ಇಲ್ಲ.
ಮಡ್ಡಿ: ಯಾಕಂತೆ?
ಮಂಕ: ನಾನು ಯಾವೋಳ ಜೊತೆಗೋ ಸಂಬಂಧ ಇಟ್ಟುಕೊಂಡಿದ್ದೇನಂತೆ. ಅದಕ್ಕೇ ಡೈವೋರ್ಸ್ ಮಾತಾಡ್ತಿದೀನಿ, ಹಾಗೆ, ಹೀಗೆ ಅಂತ ಅಂದಳು ಕಣೋ. ಏನು ಹೇಳಿದರೂ ಕೇಳಲಿಲ್ಲ. ಹೋದಳು. ಫೋನು ಮಾಡಿದರೆ ಸ್ವಿಚಾಫ್ ಮಾಡಿಕೊಂಡಿದ್ದಳು.
ಮಡ್ಡಿ: ಆಮೇಲೆ?
ಮಂಕ: ಅವಳು ಹೋದ ದಿವಸ ನಾನು ಊಟಾನೂ ಮಾಡದೆ ಬೇಜಾರಾಗಿ ಮಲಗಿಕೊಂಡಿದ್ದೆ. ಮಧ್ಯಾಹ್ನದ ಹೊತ್ತಿಗೆ ಯಾರೋ ಡಬ ಡಬ ಅಂತ ಬಾಗಿಲು ಬಡಿದರು. ತೆಗೆದು ನೋಡಿದರೆ ಟಿವಿಯವರು ಬಂದು ನನ್ನನ್ನು ಮುತ್ತಿಕೊಂಡರು. ಮಹಿಳಾ ಸಂಘದವರೂ ಬಂದಿದ್ದರು. ಹೆಗಲ ಮೇಲೆ ಬಣ್ಣ ಬಣ್ಣದ ಶಾಲಿನಂತಹುದನ್ನು ಹಾಕಿಕೊಂಡಿದ್ದ ಕೆಲವು ದಾಂಡಿಗರೂ ಇದ್ದರು. ಅವರು ನನ್ನನ್ನು ಏನೇನೋ ಕೇಳಿದರು. ನಾನು ತಬ್ಬಿಬ್ಬಾಗಿ ಮಾತನಾಡಲು ತಡವರಿಸಿದಾಗ ಎಲ್ಲರೂ ಸೇರಿ ನನ್ನನ್ನು ಹಿಗ್ಗಾಮುಗ್ಗಾ ಹೊಡೆದರು ಕಣೋ. ಅವರಲ್ಲಿ ಒಬ್ಬಳು ಮಾರಿಮುತ್ತು ಅಂತಹವಳು ಇದ್ದಳು. ಅವಳನ್ನು ನೋಡಿದರೇ ಮೂರ್ಛೆ ಹೋಗುವಂತಾಗುತ್ತೆ. ಅವಳು ಚಪ್ಪಲಿಯಲ್ಲೂ ಹೊಡೆದಳು ಕಣೋ.
ಮುಂದೆ ಮಾತನಾಡಲಾಗದೇ ಮಂಕ ಬಿಕ್ಕಿ ಬಿಕ್ಕಿ ಅಳತೊಡಗಿದ. ಮಡ್ಡಿ ಸಮಾಧಾನ ಮಾಡಿದ.
ಮಡ್ಡಿ: ಯಾರೋ ಅವರು ಬಂದಿದ್ದವರು?
ಮಂಕ: ಆ 'ತೋರಣ' ಟಿವಿಯವರು. ಬಂದ ಜನ ಯಾರೂ ಅಂತಲೇ ನನಗೆ ಗೊತ್ತಿಲ್ಲ. ಅವರು ಏನು ಕೇಳಿದರೋ, ನಾನು ಏನು ಉತ್ತರ ಕೊಟ್ಟೆನೋ ನನಗೇ ಗೊತ್ತಿಲ್ಲ ಕಣೋ. ಟಿವಿಯವರು 'ಈಗ ಸ್ಟುಡಿಯೋಗೆ ಹೋಗಿ ಸುದ್ದಿ ಕೊಡಬೇಕು. ಇನ್ನು ಒಂದು ಗಂಟೆ ಬಿಟ್ಟು ಬರ್ತೀವಿ, ಇವನನ್ನು ಪೋಲಿಸರು ಬರುವವರೆಗೂ ಎಲ್ಲೂ ಹೋಗಲು ಬಿಡಬೇಡಿ' ಅಂತ ಅಲ್ಲಿದ್ದ ಜನಕ್ಕೆ ಹೇಳಿ ಹೋದರು. ಆ ಜನರಿಗೆ ಬಚ್ಚಲುಮನೆಗೆ ಹೋಗಿ ಬರ್ತೀನಿ ಅಂತ ಸುಳ್ಳು ಹೇಳಿ ಒಳಕ್ಕೆ ಹೋದವನು ಹಿಂದುಗಡೆ ಕಾಂಪೌಂಡು ಹಾರಿ ಇಲ್ಲಿ ಬಂದು ಕೂತಿದೀನಿ ಕಣೋ. ನಾನು ಇಲ್ಲಿರೋದು ಗೊತ್ತಾದರೆ ಕೊಂದೇ ಬಿಡ್ತಾರೋ ಏನೋ. ಆ ಜನ ನನ್ನ ಮನೇನ ಏನು ಮಾಡಿರ್ತಾರೋ ಗೊತ್ತಿಲ್ಲ. ಮೂಢಂಗೂ ವಿಷಯ ತಿಳಿಸು. ಅವನು ಏನಾದರೂ ಮಾಡ್ತಾನೆ.
ಅಳುತ್ತಾ, ಬಿಕ್ಕುತ್ತಾ ಮಾತನಾಡುತ್ತಿದ್ದ ಮಂಕನ ಗೋಳು ನೋಡಿ ಏನು ಹೇಳಬೇಕೋ ಗೊತ್ತಾಗದೇ ಅವನನ್ನು ಸಮಾಧಾನ ಮಾಡಿ 'ಸದ್ಯಕ್ಕೆ ನನ್ನ ಮನೆಗೆ ಬಂದಿರು' ಎಂದು ಹೇಳಿ ಸ್ಕೂಟರಿನಲ್ಲಿ ಕರೆದುಕೊಂಡು ಹೊರಟ. ಮಂಕ ಮುಖ ಕಾಣದಂತೆ ಟವೆಲಿನಲ್ಲಿ ಮುಖ ಮರೆ ಮಾಡಿಕೊಂಡು ಕುಳಿತಿದ್ದ. ಮಡ್ಡಿಯ ಹೆಂಡತಿ ಮಂಕನನ್ನು ಕಂಡವಳೇ, 'ಈ ದರಿದ್ರಾನ ನಮ್ಮ ಮನೆಗೆ ಯಾಕ್ರೀ ಕರಕೊಂಡು ಬಂದ್ರೀ?' ಅಂತ ಮನೆಯ ಬಾಗಿಲಲ್ಲೇ ಅಡ್ಡ ಹಾಕಿದಳು. ಅವಳನ್ನು ಸಮಾಧಾನಿಸಿ ಮನೆಯೊಳಗೆ ಕರೆದುಕೊಂಡು ಹೋಗಲು ಮಡ್ಡಿಗೆ ಸಾಕು ಸಾಕಾಯಿತು. ಟಿವಿಯಲ್ಲಿ ಮಂಕನನ್ನು ಜನರು ಹೊಡೆಯುತ್ತಿದ್ದ ದೃಷ್ಯವನ್ನು ಪದೇ ಪದೇ ತೋರಿಸಿ, 'ಪತ್ನಿಪೀಡಕ ಪತಿ ಪರಾರಿ' ಎಂಬ ಬ್ರೇಕಿಂಗ್ ನ್ಯೂಸ್ ಹಾಕಿದ್ದರು. ಮಡ್ಡಿಯ ಹೆಂಡತಿಯ ಸಿಟ್ಟಿನ ಕಾರಣ ಗೊತ್ತಾಯಿತು. ಮಂಕನ ಪತ್ನಿ ಕಣ್ಣೀರು ಹಾಕಿಕೊಂಡು 'ತನ್ನ ಗಂಡ ಯಾರೋ ಬೇರೆ ಒಬ್ಬರನ್ನು ಮದುವೆ ಆಗುವ ಸಲುವಾಗಿ ತನಗೆ ಡೈವೋರ್ಸ್ ಕೊಡ್ತೀನಿ ಅಂತ ಹೇಳಿ ನನ್ನನ್ನು ಬೀದಿಪಾಲು ಮಾಡುತ್ತಿದ್ದಾರೆ' ಎನ್ನುತ್ತಿದ್ದ ಸುದ್ದಿಯ ಕ್ಲಿಪಿಂಗ್ ಆಗಾಗ ಹಾಕುತ್ತಲೇ ಇದ್ದರು. ಟಿವಿ ನಿರ್ವಾಹಕ ರೋಗನಾಥ "ಮಂಕ ಮಳ್ಳನಂತೆ ಕಂಡರೂ ಪತ್ನಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದ; ವಿಚಾರಿಸಲು ಹೋಗಿದ್ದವರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ; ಪೋಲಿಸರು ಆರೋಪಿಯ ಹುಡುಕಾಟದಲ್ಲಿದ್ದಾರೆ. ಪರಾರಿಯಾದ ಪಾಪಿ ಪತಿಯ ವಿರುದ್ಧ ಜನರ ಆಕ್ರೋಷ ಎಷ್ಟಿತ್ತು ಎಂಬುದನ್ನು ಒಂದು ಬ್ರೇಕ್ ನಂತರ ನೋಡೋಣ. ಸದಾ ನಿಮ್ಮೊಂದಿಗೆ, ನಿಮ್ಮೆಲ್ಲರ ಅಚ್ಚುಮೆಚ್ಚಿನ ಸುಟ್ಟ-ಸೊಟ್ಟ-ಅಕಟಕಟ ಸುದ್ದಿಗಳನ್ನು ನೀಡುವ ತೋರಣ ನ್ಯೂಸ್" ಎಂದು ಹೇಳುತ್ತಿದ್ದುದನ್ನು ಕೇಳಿದ ಮಂಕ ಕುಸಿದುಬಿಟ್ಟ. ಜನರಿಂದ ಬಿದ್ದ ಪೆಟ್ಟಿನಿಂದ ಜರ್ಜರಿತನಾಗಿದ್ದ ಅವನಿಗೆ ಅದಕ್ಕಿಂತ ಈ ಸುದ್ದಿಯಿಂದ ಬಿದ್ದ ಪೆಟ್ಟು ದೊಡ್ಡದಾಗಿತ್ತು. ಮಡ್ಡಿ ಅವನನ್ನು ಸಮಾಧಾನಿಸಿ, ತನ್ನ ಪತ್ನಿಗೂ ನಿಜ ವಿಷಯ ತಿಳಿಸಿ ಅವಳನ್ನು ಒಪ್ಪಿಸಿ ಹಸಿದಿದ್ದ ಅವನಿಗೆ ತಿಂಡಿ, ಕಾಫಿ ಕೊಡಿಸಿದ. ಮಂಕನನ್ನು ತನ್ನ ಮನೆಯಲ್ಲೇ ಬಿಟ್ಟು, ಮಡ್ಡಿ ಮಂಕನ ಮನೆಯ ಸ್ಥಿತಿ ನೋಡಲು ಅವನ ಮನೆಗೆ ಹೋದರೆ ಮನೆಯ ಮುಂದೆ ಇಬ್ಬರು ಪೋಲಿಸರು ಕಾಯುತ್ತಿದ್ದರು. ಅವನ ಮನೆಯ ಟಿವಿ, ಪೀಠೋಪಕರಣಗಳು, ಸಾಮಾನುಗಳನ್ನು ಜನರು ಒಡೆದು ಹಾಕಿದ್ದು, ಮನೆಯ ಒಳಗೆ ಬಾಂಬು ಸಿಡಿದರೆ ಹೇಗಾಗುತ್ತದೋ ಹಾಗೆ ಆಗಿತ್ತು.
ಇತ್ತ ಮೂಢನೂ ಟಿವಿಯ ಸುದ್ದಿ ನೋಡಿ ಬೆಚ್ಚಿದ್ದ. 'ಇದೇನಪ್ಪಾ ಗ್ರಹಚಾರ' ಎಂದು ನೋಡಿಕೊಂಡು ಬರೋಣವೆಂದು ಹೊರಡಲು ಸಿದ್ಧವಾಗುತ್ತಿದ್ದ ಹಾಗೇ ಮಡ್ಡಿಯ ಫೋನ್ ಬಂತು. ಮಡ್ಡಿ ಮತ್ತು ಮೂಢ ತಡ ಮಾಡದೆ ಮಂಕನ ಹೆಂಡತಿಯ ಊರಿಗೆ ಹೋದರು. ಮಂಕನ ಹೆಂಡತಿಯನ್ನು ಕಂಡು ಅಲ್ಲಿ ನಡೆದಿದ್ದ ಎಲ್ಲಾ ಸಂಗತಿಯನ್ನು ಅವಳಿಗೆ ತಿಳಿಸಿದರು. ಅವಳು ಗಾಬರಿಯಾಗಿ ಅಳತೊಡಗಿದಳು. ಅವಳು ಟಿವಿಯನ್ನೇ ನೋಡಿರಲಿಲ್ಲ. ತಮ್ಮನ ಮೇಲೆ ಎಗರಾಡಿದಳು. ದೇವರಂತಹ ಗಂಡನನ್ನು ಜನರಿಂದ ಹೊಡೆಸಿದ ತಮ್ಮನ ಮೇಲೆ ಕೆಂಡದಂತೆ ಉರಿದು ಬಿದ್ದಾಗ ನಿಜ ಸಂಗತಿ ಬಯಲಾಗಿತ್ತು. ತನ್ನ ಸ್ನೇಹಿತ ಮುಠ್ಠಾಳ ತೋರಣ ಟಿವಿಯಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದು, ಟಿವಿಗೆ ಏನಾದರೂ ಹೊಸ ಸುದ್ದಿ ಕೊಟ್ಟರೆ ಅವನಿಗೆ ೫೦೦೦ ರೂ. ಸಿಗುತ್ತಿತ್ತಂತೆ. ಅದರ ನಾಲ್ಕು ಪಟ್ಟು ದುಡ್ಡನ್ನು ಮತ್ತು ಅದಕ್ಕೂ ಹೆಚ್ಚು ಹಣವನ್ನು ಸುದ್ದಿಗೆ ಸಂಬಂಧಿಸಿದವರಿಂದಲೇ ಅವರ ಶಕ್ತ್ಯಾನುಸಾರ ವಸೂಲು ಮಾಡಿಕೊಳ್ಳುತ್ತಿದ್ದರಂತೆ. ಅದರಲ್ಲಿ ೨೦೦೦ ರೂ. ಅನ್ನು ತನಗೆ ಕೊಡುವುದಾಗಿ ಪುಸಲಾಯಿಸಿ ಈ ಸುದ್ದಿ ಹೊರಬರುವಂತೆ ಮಾಡಿದ್ದನಂತೆ. ದುಡ್ಡಿನ ಆಸೆಗೆ ಮಾತ್ರ ಹೀಗೆ ಮಾಡಿದ್ದು, ಜನರನ್ನು ಸೇರಿಸಿ ಭಾವನಿಗೆ ಹೊಡೆಯುತ್ತಾರೆಂದು ತನಗೆ ನಿಜಕ್ಕೂ ಗೊತ್ತಿರಲಿಲ್ಲವೆಂದು ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿದ.
ಪ್ರಕರಣಕ್ಕೆ ಮುಕ್ತಾಯ ಹಾಡುವುದು ಹೇಗೆಂದು ಯೋಚಿಸಿದ ಮಂಕ, ಮೂಢರಿಗೆ ಒಂದು ಪ್ಲಾನು ಹೊಳೆಯಿತು. ಮಂಕನ ಭಾವಮೈದುನನನ್ನೂ ಕರೆದುಕೊಂಡು ಮುಠ್ಠಾಳನ ಮನೆಗೆ ಹೋಗಿ, 'ತಪ್ಪನ್ನು ಸರಿ ಮಾಡಿಸಿ ಸುಖಾಂತ್ಯವಾಗುವಂತೆ' ಮಾಡಬೇಕೆಂದು ಕೇಳಿಕೊಂಡರು. ಮುಠ್ಠಾಳ, 'ಇದು ಸುಮ್ಮನೆ ಆಗುವ ಕೆಲಸ ಅಲ್ಲ, ರೋಗನಾಥ ಒಪ್ಪಬೇಕು' ಅಂದ. ರೋಗನಾಥನೊಡನೆ ದೂರವಾಣಿಯಲ್ಲಿ ಮಾತನಾಡಿದ ನಂತರ, '೧೦೦೦೦ ರೂ. ಕೊಟ್ಟರೆ ಸರಿ ಮಾಡುತ್ತಾರೆ. ಇಂಥಾ ಕೇಸಿನಲ್ಲಿ ೫೦೦೦೦ಕ್ಕಿಂತ ಕಡಿಮೆ ಮುಟ್ಟಲ್ಲವಂತೆ. ಆದರೆ ಮಂಕ ಪಾಪರ್ ಮನುಷ್ಯ ಅಂತ ೧೦೦೦೦ಕ್ಕೆ ಒಪ್ಪಿದ್ದಾರೆ. ಮಂಕ ಮಾತ್ರ ಒಬ್ಬನೇ ಗುಟ್ಟಾಗಿ ಬರಬೇಕು. ನಮ್ಮ ಕರಿಬಣ್ಣದ ಕಾರು ಗೋವಿಂದ ಗ್ಯಾರೇಜ್ ಮುಂದೆ ಇರುತ್ತೆ. ಅಲ್ಲಿಗೆ ಸಾಯಂಕಾಲ ೬ಕ್ಕೆ ಸರಿಯಾಗಿ ಮಂಕ ಒಬ್ಬನೇ ಬಂದು ಹತ್ತಬೇಕು. ನೀವು ಯಾರೂ ಬರಬಾರದು' ಅಂದ. ಚೌಕಾಸಿ ಮಾಡುವುದಾದರೆ ಬರಲೇಬೇಡಿ ಅಂತಲೂ ಹೇಳಿದ. ಒಪ್ಪಿ ಹೊರಬಂದ ಮಂಕ, ಮೂಢರು ಮುಠ್ಠಾಳನನ್ನು ಮನೆಗೆ ವಾಪಸು ಕಳಿಸಿ, ಯಾರೂ ಹಿಂಬಾಲಿಸುತ್ತಿಲ್ಲವೆಂದು ಖಚಿತಪಡಿಸಿಕೊಂಡು ಹೋಗಿದ್ದು ಸೀದಾ ಲೋಕಾಯುಕ್ತರ ಬಳಿಗೆ. ವಿಷಯ ತಿಳಿದ ಅವರು ಎಲ್ಲಾ ಸಿದ್ಧತೆ ಮಾಡಿಕೊಂಡು ಹೋಗಲು ತಮ್ಮ ಎಸ್.ಪಿ.ಗೆ ಸೂಚನೆ ನೀಡಿದರು.
ಅಂದು ಸಂಜೆ "೧೦೦೦೦ ರೂ. ಲಂಚ ಸ್ವೀಕರಿಸುತ್ತಿದ್ದ 'ತೋರಣ' ಟಿವಿಯ ರಿಪೋರ್ಟರ್ ಮುಠ್ಠಾಳ ಮತ್ತು ನಿರ್ವಾಹಕ ರೋಗನಾಥನನ್ನು ಲೋಕಾಯುಕ್ತ ಪೋಲಿಸರು ಬಂಧಿಸಿದ್ದಾರೆಂದು, ಅಂದು ತೋರಣ ಟಿವಿಯಲ್ಲಿ ಪ್ರಸಾರವಾಗಿದ್ದ ಸುದ್ದಿ ಪೂರ್ವನಿಯೋಜಿತವಾಗಿದ್ದು ಅದರಿಂದಾಗಿ ಮಂಕನ ಸಂಸಾರ ಮುರಿದು ಬೀಳುವುದರಲ್ಲಿತ್ತೆಂದು, ಅವರ ಮನೆಗೆ ಆದ ಹಾನಿಗೂ ಸಹ ಅವರುಗಳೇ ಕಾರಣವೆಂದು ಮಡ್ಡಿ ನೀಡಿದ ದೂರಿನ ಪ್ರಕಾರ ತರಲೆಪೇಟೆ ಪೋಲಿಸರು ಕ್ರಿಮಿನಲ್ ಮೊಕದ್ದಮೆಯನ್ನು ಸಹ ದಾಖಲಿಸಿಕೊಂಡಿದ್ದಾರೆಂದು" 'ಕತ್ತರಿ' ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬಿತ್ತರವಾಗುತ್ತಿತ್ತು.
-ಕ.ವೆಂ.ನಾಗರಾಜ್.
Comments
ಬ್ರೇಕಿಂಗ್ ನ್ಯೂಸ್: ಇದು 'ಸಂಪದ
In reply to ಬ್ರೇಕಿಂಗ್ ನ್ಯೂಸ್: ಇದು 'ಸಂಪದ by kavinagaraj
ಹಿರಿಯರೇ
In reply to ಹಿರಿಯರೇ by venkatb83
ನಿಮ್ಮ ಬರಹಗಳ ಸಂಖ್ಯೆ ಜಾಸ್ತಿಯೇ
375ನೇ ಬರಹಕ್ಕೆ ಅಭಿನಂದನೆಗಳು
In reply to 375ನೇ ಬರಹಕ್ಕೆ ಅಭಿನಂದನೆಗಳು by sathishnasa
ಧನ್ಯವಾದ, ಸತೀಶರೇ. ಬ್ರೇಕಿಂಗ್
In reply to ಧನ್ಯವಾದ, ಸತೀಶರೇ. ಬ್ರೇಕಿಂಗ್ by kavinagaraj
ಟಿ.ವಿ.ಯ ಬ್ರೇಕಿಂಗ್ ನ್ಯೂಸ್
In reply to ಟಿ.ವಿ.ಯ ಬ್ರೇಕಿಂಗ್ ನ್ಯೂಸ್ by bhalle
ಇರುವ ಕಾನೂನುಗಳ ಅಡಿಯಲ್ಲೇ ಅವರುಗಳ
ಮತ್ತೆ ಮಂಕ ಮಡ್ಡಿ ಮೂಢರ ಸರಣಿ
In reply to ಮತ್ತೆ ಮಂಕ ಮಡ್ಡಿ ಮೂಢರ ಸರಣಿ by swara kamath
ಹೃತ್ಪೂರ್ವಕ ಧನ್ಯವಾದಗಳು, ರಮೇಶ
375 ನೇ ಬರಹ ಎಂದು ತಿಳಿದು
In reply to 375 ನೇ ಬರಹ ಎಂದು ತಿಳಿದು by tthimmappa
ಧನ್ಯವಾದಗಳು, ತಿಮ್ಮಪ್ಪನವರೇ.
ಹಾಸ್ಯ ರೂಪದ ಬರಹ ಚೆನ್ನಾಗಿದೆ ...
:) :) ಬ್ರೇಕಿಂಗ್ ನ್ಯೂಸ್
In reply to :) :) ಬ್ರೇಕಿಂಗ್ ನ್ಯೂಸ್ by ಗಣೇಶ
ಚೂಸೀ ಚಾನೆಲ್ ರವರಿಂದಲೂ
In reply to ಚೂಸೀ ಚಾನೆಲ್ ರವರಿಂದಲೂ by kavinagaraj
ಆತ್ಮೀಯ ನಾಗರಾಜರೇ,
In reply to ಆತ್ಮೀಯ ನಾಗರಾಜರೇ, by Prakash Narasimhaiya
ಆತ್ಮೀಯ ಪ್ರಕಾಶರೇ, ಕಥೆಯ ಕೊನೆಯ
ಕವಿ ನಾಗರಾಜರವರಿಗೆ ವಂದನೆಗಳು
In reply to ಕವಿ ನಾಗರಾಜರವರಿಗೆ ವಂದನೆಗಳು by H A Patil
ಅನಂತ ಪಾಟೀಲರೇ, ಹೃತ್ಪೂರ್ವಕ
In reply to ಅನಂತ ಪಾಟೀಲರೇ, ಹೃತ್ಪೂರ್ವಕ by kavinagaraj
ದಯವಿಟ್ಟು ಕ್ಷಮಿಸಿ, ಹನುಮಂತ
In reply to ದಯವಿಟ್ಟು ಕ್ಷಮಿಸಿ, ಹನುಮಂತ by kavinagaraj
ಕವಿ ನಾಗರಾಜರವರಿಗೆ ವಂದನೆಗಳು
In reply to ಕವಿ ನಾಗರಾಜರವರಿಗೆ ವಂದನೆಗಳು by H A Patil
ವಾಸ್ತವವನ್ನು ವಿಡಂಬನಾ ರೂಪದಲ್ಲಿ
In reply to ವಾಸ್ತವವನ್ನು ವಿಡಂಬನಾ ರೂಪದಲ್ಲಿ by Premashri
ಪ್ರೇಮಾಶ್ರೀಯವರೇ, ವಂದನೆಗಳು.