'ಬ್ಲ್ಯಾಕ್ ಕಾಫಿ’ ಸೇವನೆಯಿಂದ ಲಾಭವಿದೆಯೇ?
ಮೊದಲೆಲ್ಲಾ ಕಾಫಿ ಹುಡಿಯನ್ನು ಡಿಕಾಕ್ಷನ್ ಮಾಡಿ, ಅದಕ್ಕೆ ಸಕ್ಕರೆ ಮತ್ತು ಹಾಲನ್ನು ಸೇರಿಸಿ ಕುಡಿಯುವುದು ಬಹಳ ಆಹ್ಲಾದವೆನಿಸುತ್ತಿತ್ತು. ಕ್ರಮೇಣ ಇನ್ ಸ್ಟಂಟ್ ಕಾಫಿ ಹುಡಿಗಳು ಬಂದವು. ಈಗ ಇನ್ ಸ್ಟಂಟ್ ಕಾಫಿಯೇ ಬಂದಿದೆ. ಪ್ಯಾಕೆಟ್ ತುಂಡರಿಸಿ ಬಿಸಿ ನೀರಿಗೆ ಹಾಕಿದರಾಯಿತು. ನಿಮಿಷದಲ್ಲಿ ಕಾಫಿ ತಯಾರು. ಕಾಫಿ ಹುಡಿ, ಹಾಲು, ಸಕ್ಕರೆ ಎಲ್ಲವೂ ಆ ಪ್ಯಾಕೆಟ್ ನಲ್ಲೇ ಇದೆ. ಈಗೀಗ ಹಾಲು ಬೆರೆಸಿ ಕಾಫಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎನ್ನುವ ಮಾತುಗಳು ಕೇಳಿ ಬಂದಾಗ ಶುರು ಆದದ್ದೇ ‘ಬ್ಲ್ಯಾಕ್ ಕಾಫಿ'.
ಗ್ರಾಮೀಣ ಭಾಗಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಲು ಸಿಗದೇ ಹೋದಾಗ ಅವರು ಕಣ್ಣ (ಹಾಲು ಹಾಕದ) ಕಾಫಿ ಅಥವಾ ಚಹಾ ಕುಡಿಯುವುದು ಮಾಮೂಲು ಸಂಗತಿಯಾಗಿತ್ತು. ಈಗ ಅದು ದೊಡ್ದ ದೊಡ್ಡ ಕೆಫೆಗಳ ಮೆನು ಕಾರ್ಡ್ ಅಲಂಕರಿಸಬಲ್ಲ ಪೇಯವಾಗಿದೆ. ಭಾರತದಂತಹ ದೇಶದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವವರ ಸಂಖ್ಯೆ ಬಹಳಷ್ಟಿದೆ. ಹಲವು ಮಂದಿಗೆ ಬೆಳಿಗ್ಗಿನ ಕಾಫಿ (ಬೆಡ್ ಕಾಫಿ) ಬಹಳ ಉತ್ಸಾಹ, ಲವಲವಿಕೆಯನ್ನು ತಂದುಕೊಡುತ್ತದೆ. ತಲೆನೋವು, ಒತ್ತಡಗಳ ನಿವಾರಣೆಗೆ ಕಾಫಿ ಸಹಕಾರಿ ಎನ್ನುತ್ತಾರೆ. ಹಾಲು ಮತ್ತು ಸಕ್ಕರೆಯನ್ನು ಹಾಕದ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಬಹಳಷ್ಟು ಪ್ರಯೋಜನಗಳಿವೆಯಂತೆ.
ನಿಯಮಿತವಾಗಿ ಬ್ಲ್ಯಾಕ್ ಕಾಫಿ ಸೇವನೆಯು ಪರ್ಕಿನ್ಸನ್ ಕಾಯಿಲೆ, ಮರೆವಿನ ಕಾಯಿಲೆ ಮತ್ತು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳು ತಗಲುವ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಬ್ಲ್ಯಾಕ್ ಕಾಫಿಯ ಉತ್ಕರ್ಷಣ ನಿರೋಧಕಗಳು ಈ ರೋಗ ತಡೆಗಟ್ತಲು ಉತ್ತಮ ಮೂಲವಾಗಿದೆ. ಈ ಕಾಫಿ ದೇಹದಲ್ಲಿನ ಹಾನಿಕಾರಕ ಅಂಶಗಳನ್ನು ನಿವಾರಿಸಲು ಬಹು ಉಪಯೋಗಿ.
ದೇಹದಲ್ಲಿರುವ ಅಧಿಕ ನೀರಿನ ಅಂಶವನ್ನು ನಿವಾರಿಸುವ ಕೆಲಸ ಬ್ಲ್ಯಾಕ್ ಕಾಫಿ ಮಾಡುತ್ತದೆ ಎಂಬ ನಂಬಿಕೆ ಇದೆ. ಈ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ. ಬ್ಲ್ಯಾಕ್ ಕಾಫಿಯು ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಕಾಫಿಯಲ್ಲಿರುವ ಕೆಫೀನ್ ಅಂಶವು ನರಮಂಡಲವನ್ನು ಉತ್ತೇಜಿಸುವ ಮೂಲಕ ನಮ್ಮನ್ನು ಚುರುಕಾಗಿಡಲು ಸಹಕರಿಸುತ್ತದೆ. ಕೆಫೀನ್ ಇರುವ ಕಾರಣ ಕಾಫಿಯನ್ನು ಅಧಿಕ ಪ್ರಮಾಣದಲ್ಲಿ ಕುಡಿಯುವುದು ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು. ಈ ಬಗ್ಗೆ ಎಚ್ಚರವಿರಲಿ. ಬ್ಲ್ಯಾಕ್ ಕಾಫಿಯ ನಿಯಮಿತ ಸೇವನೆಯು ತೂಕವನ್ನು ಕಡಿಮೆ ಮಾಡುತ್ತದೆ. ಹೃದಯದ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಹೃದಯದ ರಕ್ತನಾಳಗದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಬ್ಲ್ಯಾಕ್ ಕಾಫಿಯಲ್ಲಿ ಕಂಡು ಬರುವ ಕೆಫೀನ್ ಒಂದು ನೈಸರ್ಗಿಕ ಉತ್ತೇಜನ ನೀಡುವ ವಸ್ತುವಾದುದರಿಂದ ನಮ್ಮ ಮನಸ್ಥಿತಿಯನ್ನು ಸರಿಯಾಗಿಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ