ಬ್ಲ್ಯಾಕ್ ಫ್ರೈಡೇ

ಬ್ಲ್ಯಾಕ್ ಫ್ರೈಡೇ

ಪುಸ್ತಕದ ಲೇಖಕ/ಕವಿಯ ಹೆಸರು
ಆಂಗ್ಲ ಮೂಲ: ಎಸ್. ಹುಸೇನ್ ಜೈದಿ, ಕನ್ನಡಕ್ಕೆ: ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ: ೧೨೫.೦೦, ಮುದ್ರಣ: ಆಗಸ್ಟ್ ೨೦೦೫

ಪೆನ್ ಗ್ವಿನ್ ಬುಕ್ಸ್ ಪ್ರಕಾಶನ ಸಂಸ್ಥೆಯವರು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ ‘ಬ್ಲ್ಯಾಕ್ ಫ್ರೈಡೇ’ ಎಂಬ ನೈಜ ಘಟನಾಧಾರಿತ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ ಇವರು. ಈ ಪುಸ್ತಕದ ಮೂಲ ವಸ್ತು ಮುಂಬಯಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಮತ್ತು ಆ ನಂತರ ನಡೆದ ಘಟನಾವಳಿಗಳ ವಿವರಗಳು ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. 

ಈ ಬಗ್ಗೆ ರವಿ ಬೆಳಗೆರೆಯವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ “ಭಾರತವೆಂಬ ಮಹಾದೈತ್ಯ. ಸಾತ್ವಿಕ ಶಕ್ತಿಯ ಕರಡಿಗೆ ಮೈಯೆಲ್ಲ ಗಾಯ. ಹಾಗೆ ಗಾಯ ಮಾಡಿ ಮಾಡಿ, ನೆತ್ತರು ಹರಿಸಿ ಹರಿಸಿಯೇ ಭಾರತವನ್ನು ನಿಶ್ಯಕ್ತಗೊಳಿಸುವುದು ಪಾಕಿಸ್ತಾನವೆಂಬ ಕ್ಷುದ್ರರಾಷ್ಟ್ರದ ಹುನ್ನಾರ, ಅಂಥದ್ದೊಂದು ಹುನ್ನಾರಕ್ಕೆ ಮುಂಬಯಿ ಎಂಬ ಮಹಾನಗರಿ ಬಲಿಯಾದದ್ದು ೧೯೯೩ರಲ್ಲಿ. ಆ ಸರಣಿ ಬಾಂಬ್ ಸ್ಪೋಟಗಳ ದುರಂತವನ್ನು ಈ ದೇಶ ಯಾವತ್ತಿಗೂ ಮರೆಯಲಾರದು.

ಪಾಕಿಸ್ತಾನದ ಈ ಹುನ್ನಾರಕ್ಕೆ ಜೊತೆಯಾದವರು ಮುಂಬಯಿಯ ಅಂದರ್ ವರ್ಲ್ಡ್ ಮಂದಿ. ಅವರು ಬಾಂಬೆಯನ್ನು ಪ್ರೀತಿಸುತ್ತೇವೆ ಎಂದು ಹೇಳಿಕೊಂಡೇ ಆ ಮಹಾನಗರಕ್ಕೆ ಪದೇ ಪದೇ ಚೂರಿ ಹಾಕಿದವರು, ಅವರೊಂದಿಗೆ ಕೈ ಮಿಲಾಯಿಸಿದವರು ನಮ್ಮ ಸಿನೆಮಾ ನಟರು ! ದಾವೂದ್ ಇಬ್ರಾಹಿಂನಿಂದ ಹಿಡಿದು ಟೈಗರ್ ಮೆಮನ್ ತನಕ, ಛೋಟಾ ಶಕೀಲ್ ನಿಂದ ಹಿಡಿದು ಸಂಜಯ್ ದತ್ ತನಕ ಎಲ್ಲರ ಸ್ಪಷ್ಟ ಚಿತ್ರಣಗಳು ಇಲ್ಲಿವೆ. ಓದಲು ಕುಳಿತಾಗ ಪತ್ತೇದಾರಿ ಕಾದಂಬರಿಯಂತೆ, ಓದಿ ಮುಗಿಸಿದಾಗ ಇತಿಹಾಸದ ಒಂದು painful ಅಧ್ಯಾಯದಂತೆ ಭಾಸವಾಗುತ್ತದೆ ಈ ಪುಸ್ತಕ."

ಮೂಲ ಲೇಖಕರಾದ ಹುಸೇಜ್ ಜೈದಿ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿಕೊಳ್ಳುವಂತೆ “ ಈ ಪುಸ್ತಕದ ಎಲ್ಲ ಪಾತ್ರಗಳು ಮತ್ತು ಘಟನೆಗಳು ಸತ್ಯವಾದಂಥವು. ಯಾವೂ ಕಾಲ್ಪನಿಕವಲ್ಲ. ಎರಡು ಹೆಸರುಗಳನ್ನು ಮಾತ್ರ ಉದ್ದೇಶಪೂರ್ವಕವಾಗಿ ಬದಲಿಸಿದ್ದೇನೆ. ಇದರ ಪೈಕಿ ಬಾದಶಾಹ್ ಖಾನ್ ಈ ಕೇಸಿನಲ್ಲಿ ಪೋಲೀಸ್ ಸಾಕ್ಷಿದಾರ (ಸಾಕ್ಷಿ ನಂ.೨) ನಾಗಿರುವುದರಿಂದ ಆತನ ನಿಜವಾದ ಹೆಸರನ್ನು ಬಹಿರಂಗಗೊಳಿಸುವಂತಿಲ್ಲ ಎಂಬುದಾಗಿ ಟಾಡಾ ನ್ಯಾಯಾಲಯದ ಮೊದಲ ನ್ಯಾಯಾಧೀಶರಾದ ಜೆ.ಎನ್.ಪಟೇಲ್ ತೀರ್ಪು ನೀಡಿದ್ದಾರೆ. ತನ್ನನ್ನು ಬಾದಶಾಹ್ ಖಾನ್ ಅಂತಲೇ ಕರೆಯಬೇಕು, ಹಾಗೆಯೇ ದಾಖಲಿಸಬೇಕು ಎಂಬುದು ಆ ವ್ಯಕ್ತಿಯ ಅಭಿಲಾಷೆ. ಅಂತೆಯೇ ಅಲ್-ಹುಸೇನಿ ಕಟ್ಟಡದಲ್ಲಿ ಮರಿಯಾ ಜೊತೆ ಮಾತನಾಡಿ, ತನಿಖೆಗೆ ನೆರವಾಗುವಂತಹ ಪ್ರಮುಖ ಕ್ಲೂಗಳನ್ನು ಕೊಟ್ಟ ಹುಡುಗಿಯ ಹೆಸರನ್ನು ರಹಸ್ಯವಾಗಿಟ್ಟು, ಆಕೆಯನ್ನು ಕ್ಯಾಥರೀನ್ ಅಂತ ಕರೆದಿದ್ದೇನೆ.

ಈ ಪುಸ್ತಕದಲ್ಲಿ ಹಾದು ಹೋಗುವ ಪಾತ್ರಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಸಾಧ್ಯವಾದಷ್ಟೂ ವಸ್ತು ನಿಷ್ಟರನಾಗಿರಲು ಪ್ರಯತ್ನಿಸಿದ್ದೇನೆ. ಕೆಲ ಸಂಗತಿಗಳನ್ನು ಅವರ ದೃಷ್ಟಿಕೋನದಿಂದಲೂ ನೋಡಲು ಪ್ರಯತ್ನ ಪಟ್ಟಿದ್ದೇನೆ. ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿ, ಸತ್ಯವೆನ್ನಿಸಿದಂತಹ ಮಾಹಿತಿಯನ್ನೇ ಕೊಡಮಾಡಿದ್ದೇನೆ. ಉಳಿದೆಲ್ಲ ಪಾತ್ರಗಳಿಗಿಂತ ಇಲ್ಲಿ ದಾವೂದ್ ಇಬ್ರಾಹಿಂ ಕಸ್ಕರ್ ಮತ್ತು ಟೈಗರ್ ಮೆಮೊನ್ ರ ಪಾತ್ರಗಳು ಅತ್ಯಂತ ವಿವಾದಾತ್ಮಕವಾದಂಥವು. ಅವರ ಬಗ್ಗೆ ಬರೆಯುವಾಗ ಎಷ್ಟು ಸಾಧ್ಯವೋ ಅಷ್ಟು ಎಚ್ಚರ ವಹಿಸಿ, ಸತ್ಯ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡೇ ಬರೆದಿದ್ದೇನೆ. ಉದಾಹರಣೆಗೆ, ದಾವೂದ್ ಇಬ್ರಾಹಿಂನನ್ನೇ ಸರಣಿ ಸ್ಫೋಟಗಳ ಹಿಂದಿನ ಮುಖ್ಯ ಶಕ್ತಿ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ತನಿಖೆ ಮಾಡಿದ ಅಧಿಕಾರಿಗಳಿಗೆ ಎಷ್ಟರ ಮಟ್ಟಿಗೆ ದಾವೂದ್ ಸಂಬಂಧಿಸಿದ ಸಾಕ್ಷ್ಯಗಳು ಸಿಕ್ಕವೋ ಅವುಗಳನ್ನಷ್ಟೇ ನಾನು ಆಧಾರವಾಗಿಟ್ಟುಕೊಂಡು ಬರೆದಿದ್ದೇನೆ. ಉಳಿದಂತೆ ಟೈಗರ್ ಮೆಮೊನ್ ವಿರುದ್ಧದ ಸಾಕ್ಷ್ಯಗಳೇ ಮೊಕದ್ದಮೆಯಲ್ಲಿ ಹೆಚ್ಚು ಸ್ಫುಟವಾಗಿ ದಾಖಲಾಗಿವೆ. ಪುಸ್ತಕದಲ್ಲಿ ಅದೇ ಪ್ರತಿಫಲನಗೊಂಡಿದೆ.” ಎಂದಿದ್ದಾರೆ. 

ಪುಸ್ತಕವು ದಾವೂದ್ ಮನೆಯಲ್ಲಿ ನಡೆಯುವ ಮಾತುಕತೆಯಿಂದ ಆರಂಭವಾಗುತ್ತದೆ. ಕ್ರಮೇಣ ಟೈಗರ್ ಮೆಮೊನ್, ಛೋಟಾ ಶಕೀಲ್ ಹೀಗೆ ಹತ್ತಾರು ಪಾತಕಿಗಳು ಓದುತ್ತಾ ಓದುತ್ತಾ ನಿಮಗೆ ಎದುರಾಗುತ್ತಾರೆ. ಘಟನಾವಳಿಗಳಿಗೆ ಸೂಕ್ತ ಚಿತ್ರಗಳನ್ನು ಮುದ್ರಿಸಲಾಗಿದೆ. ಸುಮಾರು ೨೩೫ ಪುಟಗಳ ಈ ಪುಸ್ತಕವನ್ನು ಅನುವಾದಕರಾದ ರವಿ ಬೆಳಗೆರೆ ಅವರು ತಮ್ಮ ಪ್ರೀತಿಯ ಮಗಳು ಚೇತನಾಳಿಗೆ ಅರ್ಪಿಸಿದ್ದಾರೆ. ಮುಂಬೈ ಬಾಂಬ್ ಸ್ಫೋಟವಾಗಿ ಸುಮಾರು ಮೂರು ದಶಕಗಳೇ ಸಂದರೂ ಅದರ ಕಂಪನಗಳು ಈಗಲೂ ಆಗಾಗ ಆಗುತ್ತಲೇ ಇದೆ. ಆಗಿನ ಘಟನಾವಳಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಈ ಪುಸ್ತಕವನ್ನು ಆಸಕ್ತರು ಒಮ್ಮೆ ಖಂಡಿತವಾಗಿಯೂ ಓದಬಹುದಾಗಿದೆ.