ಭಕ್ತಜನ ಸುರಧೇನು
ಕವನ
ಗೋವಿಂದ ಮುಕುಂದ ಮುರಾರಿ
ದೇವಕಿ ಕಂದ ಬಾಲಕೃಷ್ಣ ಅಸುರಾರಿ/
ಯಶೋದಾ ನಂದನ ಕಂಸಾರಿ
ದುಷ್ಟರ ಪಾಲಿನ ವೈರಿ//
ಕನಕನಿಗೊಲಿದ ಶ್ರೀಕೃಷ್ಣ ಹರೇ
ರಾಧಾ ಮಾಧವ ಶ್ರೀಶ ಹರೇ/
ಮೋಹನಾಂಗ ಮಧುಸೂದನ ಹರೇ
ನಂದ ಬಾಲ ಶ್ಯಾಮಲಾಂಗ ಹರೇ//
ಕಾಳಿಂಗನ ಹೆಡೆಯ ತುಳಿದ ಧೀರ
ಗೋಪಾಲರ ಗೋವುಗಳ ರಕ್ಷಿಸಿದ ಪೋರ/
ಪೂತನಿಗೆ ಮೋಕ್ಷ ಕರುಣಿಸಿದ ಮಹಿಮ
ಶಿಶುಪಾಲನ ವಧಿಸಿ ಪೊರೆದ ಕರುಣ//
ಗೀತೆಯ ಬೋಧಿಸಿ ಸನ್ಮಾರ್ಗ ತೋರಿದೆ
ಧರ್ಮಯುದ್ಧದಿ ಪಾಂಡವರ ಗೆಲಿಸಿದೆ/
ವೃಂದಾವನವಾಸ ಭಾಮಾಳಿಗೊಲಿದೆ
ವೇಣುವಿನೋದನೆ ವನಮಾಲಿಯಾದೆ//
ಗಿರಿಯನೆತ್ತಿ ಗೋವರ್ಧನನಾದೆ
ನವಿಲುಗರಿಯ ಕಿರೀಟದಿ ಧರಿಸಿದೆ/
ವಿಶ್ವರೂಪವ ಪ್ರದರ್ಶಿಸಿ ದೇವನಾದೆ
ಭಕ್ತಜನ ಸುರಧೇನು ಎನಿಸಿದೆ//
ಹರಿಚರಣ ಸೇವೆಯಲಿ ಸಾರವಿದೆಯೆಂದೆ
ಭವಬಂಧನ ಬಿಡಿಸಲು ಭಕ್ತಿಯೊಂದೆ/
ತಂಗಿ ಕೃಷ್ಣೆಯ ಮಾನ ಕಾಪಾಡಿದೆ
ಕೇಶವನೆ ಕೃಪಾಳು ನಿನ್ನ ಭಜಿಸಿದೆ//
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು
ಚಿತ್ರ್
