ಭಕ್ತಿಯೇ ಮುಕ್ತಿಗೆ ಸೋಪಾನ

ಭಕ್ತಿಯೇ ಮುಕ್ತಿಗೆ ಸೋಪಾನ

‘ಧರ್ಮ, ಅರ್ಥ, ಕಾಮ, ಮೋಕ್ಷ’ ಇವು ನಾಲ್ಕು ಚತುಷ್ಪಯಗಳ ಸಾಧನೆಯೇ ಮಾನವ ಜನ್ಮದ ಮುಖ್ಯ ಗುರಿ ಅಥವಾ ಧ್ಯೇಯವಾಗಿರಬೇಕು. ಈ ಸಾಧನೆಗೆ ಆಸ್ತಿಕ್ಯ ಮನೋಭಾವನೆ ಇರಬೇಕು. ದೇವರ ಅಸ್ತಿತ್ವವರಿಯದೆ ಭಕ್ತಿ ಭಾವ ಮೂಡುವುದಾದರೂ ಹೇಗೆ? ಇದಕ್ಕೆ ಪೂರಕ ಭಜನೆಗಳು ಹಾಗೂ ಕೀರ್ತನೆಗಳು.

ವೇದೋಪನಿಷತ್ತುಗಳಲ್ಲಿ, ಪುರಾಣಗಳಲ್ಲಿ, ರಾಮಾಯಣ, ಮಹಾಭಾರತ ಪುಣ್ಯ ಮಹಾಕಾವ್ಯಗಳಲ್ಲಿ ನಿರೂಪಿಸಿದ ಉದಾತ್ತ ತತ್ವಗಳನ್ನು, ಸರಳವಾಗಿ ತಿಳಿಗನ್ನಡದಲ್ಲಿ, ಸುಂದರವಾಗಿ, ಶ್ರುತಿ, ತಾಳ,ಲಯ, ಗೇಯತೆಯಿಂದ ಹಾಡುವಂತೆ ತಿಳಿಸಿದವರು *ದಾಸವರೇಣ್ಯರು*.

ಕ್ರಿ.ಶ.೧೫೦೯--೧೬೦೯ರ, ೧೬ನೇ ಶತಮಾನದಲ್ಲಿ, ಜನರಲ್ಲಿ ಮನೆ ಮಾಡಿದ್ದ ಮೌಢ್ಯತೆ, ಮೂಢನಂಬಿಕೆ, ಜಾತಿಯ ರೀತಿ-ನೀತಿಗಳನ್ನು ಹೋಗಲಾಡಿಸಿ,ಕವಿಯಾಗಿ, ಸಮಾಜ ಸುಧಾರಕರಾಗಿ, ಭಕ್ತರಾಗಿ, ದಾಸಶ್ರೇಷ್ಠರೆನಸಿದವರು *ಕನಕದಾಸರು*.

'ನಾನು ನೀನು ಎನ್ನದಿರೊ ಹೀನ ಮಾನವ

ಜ್ಞಾನ ದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ'

ಮೊದಲು ಕಾಗಿನೆಲೆಯಾದಿ ಕೇಶವನ ಭಕ್ತನಾಗೆಲೊ ಎಂದಿದ್ದಾರೆ.

ಪ್ರತಿಯೊಂದು ವಿದ್ಯೆಯನ್ನು’ಕರತಲಾಮಲಕ’ ಮಾಡಿಕೊಂಡವರು ತಿಮ್ಮಪ್ಪ. ತನಗೆ ಸಿಕ್ಕಿದ ಅಪಾರ ನಿಧಿಯಿಂದ ಕಾಗಿನೆಲೆಯಲ್ಲಿ ‘ಆದಿಕೇಶವನ’ ಮಂದಿರವನ್ನು ಕಟ್ಟಿಸಿದ ಕೀರ್ತಿ ಇವರದ್ದು. ಜನರ ಹಿತರಕ್ಷಣೆ, ಲೋಕೋಪಯೋಗಿ  ಕೆಲಸಗಳಿಗಾಗಿ ಬಳಸಿದ ತಿಮ್ಮಪ್ಪನೇ ಜನರಿಂದ ‘ಕನಕ ನಾಯಕ’ ಅಂತ ಕರೆಯಲ್ಪಟ್ಟರು. ಮುಂದೆ ದಂಡನಾಯಕನಾಗಿದ್ದ ಇವರು ಯುದ್ಧ ಮಾಡಬೇಕಾಗಿ ಬಂದು, ತೀವ್ರ ತರದ ಗಾಯ ಹೊಂದಿ ಮಲಗಿದ್ದಾಗ* ಕನಕಾ, ಇನ್ನಾದರೂ ನನ್ನ ದಾಸನಾಗಯ್ಯ*ಎಂಬ ಅಶರೀರವಾಣೀಯ ಪ್ರಭಾವಕ್ಕೆ ಒಳಗಾಗಿ ವ್ಯಾಸರಾಯರ ಶಿಷ್ಯರಾದರು.

ಪುರಂದರದಾಸರೊಡಗೂಡಿ ದಾಸಕೂಟವನ್ನು ರಚಿಸಿದ ಇವರು*ಅಹಂಕಾರ*ವನ್ನು ತ್ಯಜಿಸಿದವ ಮೋಕ್ಷವನ್ನು ಪಡೆಯಬಹುದೆಂದರು.

"ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ" ನಮಗೆಲ್ಲ ತಿಳಿದ ಕೀರ್ತನೆ. ಉಡುಪಿಯ ಕನಕನ ಕಿಂಡಿಯ ಬಗ್ಗೆ ಪ್ರತ್ಯಕ್ಷವಾಗಿ ನೋಡಿದವರು, ಹೇಗಾಯಿತೆಂದು ತಿಳಿದವರಿದ್ದೇವೆ.

ಎಲ್ಲರೂ ದುಡಿಯಲೇ ಬೇಕು, ಕಷ್ಟ ಪಟ್ಪರೆ ಸುಖವಿದೆ, ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ, ತಲ್ಲಣಿಸದಿರು ಕಂಡ್ಯ ತಾಳು ಮನವೇ, ಕುಲವ್ಯಾತಕೆ ಮನುಜ ಕುಲವೊಂದೇ, ಎಳ್ಳು ಕಾಳಿನಷ್ಟಾದರೂ ಭಕ್ತಿ ಇರಲಿ, ಢಾಂಬಿಕತನ ಬೇಡ, ನಾರಾಯಣನೆಂಬ ನಾಮದ ಮಹಿಮೆಯ, ಕುಲ ಕುಲವೆಂದು ಹೊಡೆದಾಡದಿರಿ, ಸುಜ್ಞಾನವೆಂಬ ಅಡುಗೆಯ ಮಾಡಬೇಕಣ್ಣ, ನೇಮವಿಲ್ಲದ ಹೋಮವ್ಯಾತಕಯ್ಯ ಈ ಮುಂತಾಗಿ ಅನೇಕ ಪದ್ಯಗಳನ್ನು ಹಾಡಿ, ಲೋಕದ ಜನರ ಅಹಂಕಾರ, ಮೌಢ್ಯ, ಅಸಮಾನತೆ, ಜಾತಿ ಇತ್ಯಾದಿಗಳನ್ನು ಹೋಗಲಾಡಿಸುವಲ್ಲಿ ಶ್ರಮಿಸಿದವರು. ಸುಮಾರು ೨೦೦ ಕೀರ್ತನೆಗಳನ್ನು ರಚಿಸಿದ್ದಾರೆಂದು ಹೇಳಿಕೊಂಡಿದ್ದಾರೆ.

ಇಂದು (ಡಿಸೆಂಬರ್ ೩) ಶ್ರೀ ಕನಕದಾಸ ಜಯಂತಿಯ ಅಂಗವಾಗಿ ಕಿರು ಮಾಹಿತಿ.

-ರತ್ನಾ ಭಟ್ ತಲಂಜೇರಿ (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ