ಭಕ್ತಿಯ ಸುಪ್ರಭಾತವಲ್ಲ, ಬದುಕಿನ ಸುಪ್ರಭಾತ ಕೇಳಿ...

ಭಕ್ತಿಯ ಸುಪ್ರಭಾತವಲ್ಲ, ಬದುಕಿನ ಸುಪ್ರಭಾತ ಕೇಳಿ...

ಬಹುತೇಕ ನಗರದ ವಠಾರಗಳಲ್ಲಿ ಬೆಳಗಿನ ಸುಪ್ರಭಾತ ಸುಮಾರು 5 ಗಂಟೆಗೆ ಪ್ರಾರಂಭವಾಗುತ್ತದೆ. ಅಲೆ ಅಲೆಯಾಗಿ, ವಿವಿಧ ಶಬ್ಧ ತರಂಗಗಳು ಕಿವಿಗಪ್ಪಳಿಸುವುದು ಒಂದು ರೋಚಕ ಅನುಭವ...

ಒಂದು ಮನೆಯಿಂದ ಹೆಣ್ಣಿನ ಧ್ವನಿ ತನ್ನ ಗಂಡನಿಗೆ...‌‌

" ನೋಡಿ ಸ್ಕೂಲ್ ಗೆ ಮಗೂನ ಸೇರಿಸ್ಲಿಕ್ಕೆ ನಾಳೇನೇ Last date. ಏನ್ ಮಾಡ್ತೀರೊ ಗೊತ್ತಿಲ್ಲ. 10,000 ರೂಪಾಯಿ ಇವತ್ತು ರಾತ್ರಿ ಒಳಗೆ adjust ಮಾಡಲಿಲ್ಲ ಅಂದ್ರೆ, ನಾಳೆ ನೀವು ನಂದು, ನನ್ ಮಗೂದು ಹೆಣ ನೋಡ್ಬೇಕು ಅಷ್ಟೆ. "

ಇನ್ನೊಂದು ಮನೆಯಿಂದ ಗಂಡು ಧ್ವನಿ, ( ಸ್ವಗತ )

"ಅಮ್ಮ ಒಂದು ವಾರದಿಂದ ಒಂದೇ ಸಮನೆ ಕೆಮ್ತಾ ಇದಾರೆ. ಆಸ್ಪತ್ರೆಗೆ ಸೇರಿಸಬೇಕು ಅಂದ್ರೆ, 250 ರೂಪಾಯಿ ಬೇಕು. ಅಷ್ಟು ದುಡ್ಡು ನನ್ನಿಂದ ಹೊಂದಿಸಲಿಕ್ಕೆ ಆಗ್ತಾ ಇಲ್ಲ. ಛೆ, ಈ ನನ್ನ ಜನ್ಮಕ್ಕೆ ಬೆಂಕಿ ಹಾಕ. ಯಾಕಾದ್ರೂ ಬದುಕಿರಬೇಕು. "

ಮತ್ತೊಂದು ಮನೆಯೊಳಗಿನ ಗಂಡು ಧ್ವನಿ, ಕೋಪದಿಂದ, "ಲೇ, ನಾಳೆ ಒಳಗೆ ನಿಮ್ಮಪ್ಪನ ಮನೆಯಿಂದ 50,000 ದುಡ್ಡು ತರಲಿಲ್ಲ ಅಂದ್ರೆ, ನಿನ್ನ - ಮಗೂನ, ಇಬ್ಬರನ್ನು ಸಾಯಿಸಿ ಜ್ಯೆಲಿಗೆ ಹೋಗ್ ಬಿಡ್ತೀನಿ. ಹುಷಾರ್. ಇದೇ Last chance. "

ಮಗದೊಂದು ಮನೆಯಲ್ಲಿನ ಹೆಣ್ಣು ಧ್ವನಿ,‌ ಅಳುತ್ತಾ ತನ್ನ ಗಂಡನಿಗೆ, "ಅಯ್ಯೋ, ತಿನ್ನೋಕೆ ಗತಿಯಿಲ್ಲ, ರಾತ್ರಿ ಕಂಠ ಪೂರ್ತಿ ಕುಡಿದು ದನಕ್ಕೆ ಹೊಡೆದಂಗೆ ಹೊಡಿತೀಯ, ನಿನಗೆ ಬರಬಾರದು ಬರ. ದಾರಿಯಲ್ಲಿ ಓಡಾಡೊ ಯಾವುದಾದರೂ ಬಸ್ಸಿಗೆ ಸಿಕ್ಕಿ ಸಾವಾದ್ರೂ ಬರಬಾರದಾ ನಿನಗೆ. ನನ್ನ ಶಾಪ ತಟ್ಟಲಿ ನಿನಗೆ. "

ಇನ್ನೊಂದು ಮನೆಯ ಹೆಣ್ಣು ಧ್ವನಿ, ತನ್ನ ಮಗಳಿಗೆ, " ಲೇ, ಕಾಲೇಜಿನಲ್ಲಿ ಅದ್ಯಾವನೋ ಹಿಂದೆ ಬೈಕಿನಲ್ಲಿ ಓಡಾಡ್ತಾ ಇದೀಯಂತೆ. ಇದೇ ಲಾಸ್ಟು. ಇನ್ನೊಂದ್ಸಾರಿ ಈ ವಿಷ್ಯಾ ನನ್ ಕಿವಿಗೆ ಬಿದ್ರೆ, ನಾನೇ ನೇಣಾಕಿ ಸಾಯಿಸಿ ಬಿಡ್ತೀನಿ ಹುಷಾರ್. "

Digital India, Smart city, Global leader, E-Governence,

ಹೀಗೆ ಅನೇಕ ಕನಸುಗಳನ್ನು ಜನರಲ್ಲಿ ಬಿತ್ತುತ್ತಿರುವ ಸರಕಾರಗಳು,

ಕೆಳ ಮಧ್ಯಮ ವರ್ಗದ ಜನರ ಬದುಕು ಬವಣೆಗಳನ್ನು ಮೇಲಿನಿಂದ ನೋಡುತ್ತಿರುವಂತಿದೆ,

ಅಯ್ಯಾ ಮಂತ್ರಿಗಳೆ, ಅಧಿಕಾರಿಗಳೆ,  ಸ್ವಲ್ಪ ಕೆಳಗಿಳಿದು ಬನ್ನಿ. ಗಮನಿಸಿ, ನಮ್ಮನ್ನು ನಿಮ್ಮ ಮುಂದಿನ ಯೋಜನೆಗಳನ್ನು ರೂಪಿಸುವ ಮೊದಲು.

ಏಕೆಂದರೆ ನಿಜವಾದ ಕೆಳ ಮಧ್ಯಮ ವರ್ಗದ ಬದುಕು ಈಗಲೂ ಇದೇ ರೀತಿಯ ಬೆಳಗಿನ ನೋವಿನ ಸುಪ್ರಭಾತಗಳೊಂದಿಗೆ ಪ್ರಾರಂಭವಾಗುತ್ತದೆ. ಇನ್ನು ರಾತ್ರಿಯ ಕರಾಳ ಬದುಕು ನರಕವನ್ನೇ ದರ್ಶನ ಮಾಡಿಸುತ್ತದೆ. ಹೊಟ್ಟೆ ತುಂಬಿದವರಿಗೆ ಇದು ಅಷ್ಟಾಗಿ ಅರ್ಥವಾಗುವುದಿಲ್ಲ.

ಈ ಸುಪ್ರಭಾತ ಹಸಿದವರಿಗೆ, 

ನೋವು ಅನುಭವಿಸಿದವರಿಗೆ,

ಕಷ್ಟಕ್ಕೆ ಸ್ಪಂದಿಸುವವರಿಗೆ ಮಾತ್ರ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 106 ನೆಯ ದಿನ ಬೆಳಗಾವಿ ನಗರದಲ್ಲಿಯೇ ವಾಸ್ತವ್ಯ. 

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್

 

Comments

Submitted by shreekant.mishrikoti Wed, 02/17/2021 - 16:14

ಲೇಖನದ ಹಿಂದಿನ ಕಳಕಳಿ ಮನಸ್ಸನ್ನು  ತಟ್ಟುತ್ತದೆ ಆದರೆ ಕೊನೆಯ ಸಾಲು - "ಜ್ಞಾನ ಭಿಕ್ಷಾ ಪಾದಯಾತ್ರೆಯ 106 ನೆಯ ದಿನ ಬೆಳಗಾವಿ ನಗರದಲ್ಲಿಯೇ ವಾಸ್ತವ್ಯ.  "  ಒಟ್ಟಾರೆ  ಬರಹಕ್ಕೆ ಯಾವ ರೀತಿ ಸಂಬಂಧಿಸಿದೆ ತಿಳಿಯಲಿಲ್ಲ.

Submitted by Shreerama Diwana Wed, 02/17/2021 - 17:52

In reply to by shreekant.mishrikoti

ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡಿದುದಕ್ಕೆ ಧನ್ಯವಾದಗಳು. ನೀವು ನನ್ನ ಸರಣಿ ಲೇಖನಗಳನ್ನು ಓದುತ್ತಾ ಬಂದರೆ ನಿಮಗೆ ನಾನು ಮಾಡುತ್ತಿರುವ ಜ್ಞಾನಭಿಕ್ಷಾ ಪಾದಯಾತ್ರೆಯ ಬಗ್ಗೆ ಮಾಹಿತಿ ಸಿಗುತ್ತದೆ. ನಾನು ಕಳೆದ ೧೦೮ ದಿನಗಳಿಂದ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದೇನೆ. ಪ್ರತೀ ದಿನ ಒಂದು ಊರಿನಲ್ಲಿ ವಾಸ್ತವ್ಯ. ಆ ಸಮಯದಲ್ಲಿ ಒಂದು ವಿಷಯದ ಕುರಿತು ಬರಹ. ನನ್ನ ಪಾದಯಾತ್ರೆಯ ೧೦೦ ನೆಯ ದಿನದ ಸಂದರ್ಭದಲ್ಲಿ ಬರೆದ ಲೇಖನ 'ಸಂಜೆ ಪ್ರೀತಿ ಅಭಿಮಾನ, ಬೆಳಗು ವಿರಹ ವಿದಾಯ' ಸಂಪದದ ಆರ್ಕೈವ್ ನಲ್ಲಿ ಓದ ಬಹುದು.

ನನ್ನ ಬರಹಗಳನ್ನು ಓದಿದಕ್ಕೆ ಕೃತಜ್ಞತೆಗಳು.

Submitted by shreekant.mishrikoti Wed, 02/17/2021 - 23:19

ಶ್ರೀರಾಮರೆ, 

ನನ್ನ ಪ್ರತಿಕ್ರಿಯೆಗೆ ಉತ್ತರಿಸಿದುದಕ್ಕೆ ಧನ್ಯವಾದಗಳು.  ಹಿನ್ನೆಲೆ ಗೊತ್ತಿಲ್ಲದೆ ನೇರವಾಗಿ ನನ್ನಂತೆ ನಿಮ್ಮ ಲೇಖನ ಓದುವವರ ನೆರವಿಗಾಗಿ -'ನನ್ನ ಪಾದಯಾತ್ರೆಯ  ಇಂತಿಷ್ಟನೆಯ ದಿನ    ಈ ಊರಿನಲ್ಲಿ  ವಾಸ್ತವ್ಯ ಮಾಡಿ ಬ‌ರೆದ ಲೇಖನ  ' ಎಂದು ಟಿಪ್ಪಣಿ ಬರೆಯುವುದು ಉಚಿತವೇನೋ , ನೋಡಿ.

Submitted by Shreerama Diwana Thu, 02/18/2021 - 10:53

ಜ್ಞಾನ ಭಿಕ್ಷಾ ಪಾದಯಾತ್ರೆ ನಡೆಸುತ್ತಿರುವ ವಿವೇಕಾನಂದ ಹೆಚ್ ಕೆ ಅವರು ಲೇಖನ ಬರೆಯುವವರು. ನಾನು ಅವರ ಅನುಮತಿ ಪಡೆದು ಇದನ್ನು ಪ್ರಕಟ ಮಾಡುತ್ತಿರುವೆ. ಈ ಬಗ್ಗೆ ಅವರ ಬಳಿ ಮಾತಾಡಿ ನಿಮ್ಮ ಅನಿಸಿಕೆಯನ್ನು ತಿಳಿಸುವೆ. ಬದಲಾವಣೆ ಸೂಕ್ತವೆಂದು ಕಂಡು ಬಂದರೆ ಖಂಡಿತಕ್ಕೂ ಬದಲಾಯಿಸುವ. ಹೀಗೆಯೇ ನಿಮ್ಮ ಪ್ರೋತ್ಸಾಹ, ಬೆಂಬಲ, ಅಭಿಪ್ರಾಯಗಳು ಮುಂದುವರೆಯಲಿ ಸರ್.

-ಶ್ರೀರಾಮ