ಭಕ್ತಿಯ ಸುಪ್ರಭಾತವಲ್ಲ, ಬದುಕಿನ ಸುಪ್ರಭಾತ ಕೇಳಿ...

ಭಕ್ತಿಯ ಸುಪ್ರಭಾತವಲ್ಲ, ಬದುಕಿನ ಸುಪ್ರಭಾತ ಕೇಳಿ...

ಬಹುತೇಕ ನಗರದ ವಠಾರಗಳಲ್ಲಿ ಬೆಳಗಿನ ಸುಪ್ರಭಾತ ಸುಮಾರು 5 ಗಂಟೆಗೆ ಪ್ರಾರಂಭವಾಗುತ್ತದೆ. ಅಲೆಅಲೆಯಾಗಿ, ವಿವಿಧ ಶಭ್ದ ತರಂಗಗಳು ಕಿವಿಗಪ್ಪಳಿಸುವುದು ಒಂದು ರೋಚಕ ಅನುಭವ. ಒಂದು ಮನೆಯಿಂದ ಹೆಣ್ಣಿನ ಧ್ವನಿ ತನ್ನ ಗಂಡನಿಗೆ...‌‌

" ನೋಡಿ ಸ್ಕೂಲ್ ಗೆ ಮಗೂನ ಸೇರಿಸ್ಲಿಕ್ಕೆ ನಾಳೇನೇ Last date. ಏನ್ ಮಾಡ್ತೀರೊ ಗೊತ್ತಿಲ್ಲ. 10,000 ರೂಪಾಯಿ ಇವತ್ತು ರಾತ್ರಿ ಒಳಗೆ adjust ಮಾಡಲಿಲ್ಲ ಅಂದ್ರೆ, ನಾಳೆ ನೀವು ನಂದು, ನನ್ ಮಗೂದು ಹೆಣ ನೋಡ್ಬೇಕು ಅಷ್ಟೆ. "

ಇನ್ನೊಂದು ಮನೆಯಿಂದ ಗಂಡು ಧ್ವನಿ, ( ಸ್ವಗತ ) "ಅಮ್ಮ ಒಂದು ವಾರದಿಂದ ಒಂದೇ ಸಮನೆ ಕೆಮ್ತಾ ಇದಾರೆ. ಆಸ್ಪತ್ರೆಗೆ ಸೇರಿಸಬೇಕು ಅಂದ್ರೆ, 250 ರೂಪಾಯಿ ಬೇಕು. ಅಷ್ಟು ದುಡ್ಡು ನನ್ನಿಂದ ಹೊಂದಿಸಲಿಕ್ಕೆ ಆಗ್ತಾ ಇಲ್ಲ. ಛೆ, ಈ ನನ್ನ ಜನ್ಮಕ್ಕೆ ಬೆಂಕಿ ಹಾಕ. ಯಾಕಾದ್ರೂ ಬದುಕಿರಬೇಕು. "

ಮತ್ತೊಂದು ಮನೆಯೊಳಗಿನ ಗಂಡು ಧ್ವನಿ, ಕೋಪದಿಂದ, "ಲೇ, ನಾಳೆ ಒಳಗೆ ನಿಮ್ಮಪ್ಪನ ಮನೆಯಿಂದ 50,000 ದುಡ್ಡು ತರಲಿಲ್ಲ ಅಂದ್ರೆ, ನಿನ್ನ - ಮಗೂನ, ಇಬ್ಬರನ್ನು ಸಾಯಿಸಿ ಜ್ಯೆಲಿಗೆ ಹೋಗ್ ಬಿಡ್ತೀನಿ. ಹುಷಾರ್. ಇದೇ Last chance. "

ಮಗದೊಂದು ಮನೆಯಲ್ಲಿನ ಹೆಣ್ಣು ಧ್ವನಿ,‌ ಅಳುತ್ತಾ ತನ್ನ ಗಂಡನಿಗೆ, "ಅಯ್ಯೋ ಮುಂಡೆ ಮಗನೆ, ತಿನ್ನೋಕೆ ಗತಿಯಿಲ್ಲ, ರಾತ್ರಿ ಕಂಠ ಪೂರ್ತಿ ಕುಡಿದು ದನಕ್ಕೆ ಹೊಡೆದಂಗೆ ಹೊಡಿತೀಯ, ನಿನಗೆ ಬರಬಾರದು ಬರ. ದಾರಿಯಲ್ಲಿ ಓಡಾಡೊ ಯಾವುದಾದರೂ ಬಸ್ಸಿಗೆ ಸಿಕ್ಕಿ ಸಾವಾದ್ರೂ ಬರಬಾರದಾ ನಿನಗೆ. ನನ್ನ ಶಾಪ ತಟ್ಟಲಿ ನಿನಗೆ. "

ಇನ್ನೊಂದು ಮನೆಯ ಹೆಣ್ಣು ಧ್ವನಿ, ತನ್ನ ಮಗಳಿಗೆ, " ಲೇ, ಕಾಲೇಜಿನಲ್ಲಿ ಅದ್ಯಾವನೋ ಹಿಂದೆ ಬೈಕಿನಲ್ಲಿ ಓಡಾಡ್ತಾ ಇದೀಯಂತೆ. ಇದೇ ಲಾಸ್ಟು. ಇನ್ನೊಂದ್ಸಾರಿ ಈ ವಿಷ್ಯಾ ನನ್ ಕಿವಿಗೆ ಬಿದ್ರೆ, ನಾನೇ ನೇಣಾಕಿ ಸಾಯಿಸಿ ಬಿಡ್ತೀನಿ ಹುಷಾರ್. "

Digital India, Smart city, Global leader, E-Governance, Brand Bangalore, ಹೀಗೆ ಅನೇಕ ಕನಸುಗಳನ್ನು ಜನರಲ್ಲಿ ಬಿತ್ತುತ್ತಿರುವ ಸರಕಾರಗಳು, ಕೆಳ ಮಧ್ಯಮ ವರ್ಗದ ಜನರ ಬದುಕು ಬವಣೆಗಳನ್ನು ಮೇಲಿನಿಂದ ನೋಡುತ್ತಿರುವಂತಿದೆ.

ಅಯ್ಯಾ, ಶಾಸಕರೇ, ಮಂತ್ರಿಗಳೇ, ಅಧಿಕಾರಿಗಳೇ,  ಸ್ವಲ್ಪ ಕೆಳಗಿಳಿದು ಬನ್ನಿ. ಗಮನಿಸಿ ನಮ್ಮನ್ನು ನಿಮ್ಮ ಮುಂದಿನ ಯೋಜನೆಗಳನ್ನು ರೂಪಿಸುವ ಮೊದಲು. ಏಕೆಂದರೆ ನಿಜವಾದ ಕೆಳ ಮಧ್ಯಮ ವರ್ಗದ ಬದುಕು ಈಗಲೂ ಇದೇ ರೀತಿಯ ಬೆಳಗಿನ ನೋವಿನ ಸುಪ್ರಭಾತಗಳೊಂದಿಗೆ ಪ್ರಾರಂಭವಾಗುತ್ತದೆ. ಇನ್ನು ರಾತ್ರಿಯ ಕರಾಳ ಬದುಕು ನರಕವನ್ನೇ ದರ್ಶನ ಮಾಡಿಸುತ್ತದೆ. ಹೊಟ್ಟೆ ತುಂಬಿದವರಿಗೆ ಇದು ಅಷ್ಟಾಗಿ ಅರ್ಥವಾಗುವುದಿಲ್ಲ. ಈ ಸುಪ್ರಭಾತ ಹಸಿದವರಿಗೆ, ನೋವು ಅನುಭವಿಸಿದವರಿಗೆ, ಕಷ್ಟಕ್ಕೆ ಸ್ಪಂದಿಸುವವರಿಗೆ ಮಾತ್ರ. ನೊಂದವರ ನೋವು ನೋಯದವರೆತ್ತ ಬಲ್ಲರೋ...?

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ