ಭಕ್ತ ಕನಕದಾಸರ ಜಯಂತಿ
ದಾಸ ಸಾಹಿತ್ಯದಲ್ಲಿ ಉನ್ನತ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ‘ಕನಕದಾಸರು’. ಹಾಲುಮತದ ಕುರುಬ ಜನಾಂಗದ ಬಚ್ಚಮ್ಮ ಹಾಗೂ ಬೀರಪ್ಪರ ಮಗನೇ ತಿಮ್ಮಪ್ಪ. ಬಾಡ ಎಂಬ ಪ್ರದೇಶದ ೭೮ ಗ್ರಾಮಗಳ ಹೋಬಳಿಯ ಅಧಿಕಾರ ಹೆತ್ತವರಿಗಿದ್ದ ಕಾರಣ ಆಸ್ತಿ, ಹಣ ಯಾವುದಕ್ಕೂ ಕೊರತೆಯಿರಲಿಲ್ಲ. ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಜನಿಸಿದ ಬಾಲಕ ತಿಮ್ಮಪ್ಪನಿಗೆ ಸಕಲ ವಿದ್ಯೆ, ಸಾಹಿತ್ಯ, ಸಂಗೀತ, ಶಸ್ತ್ರ, ಶಾಸ್ತ್ರಾಭ್ಯಾಸ ಎಲ್ಲವನ್ನೂ ಬೀರಪ್ಪ ಕಲಿಸಿದ್ದ. ತಂದೆಯ ಆಕಸ್ಮಿಕ ಮರಣದಿಂದ ಬಾಲಕ ತಿಮ್ಮಪ್ಪ ತಂದೆಯ ಹೋಬಳಿ ಡಣಾಯಕನ ಜವಾಬ್ದಾರಿ ಕೈಗೆತ್ತಿಕೊಳ್ಳುತ್ತಾನೆ. ತಿಮ್ಮಪ್ಪ ಹೋಗಿ ತಿಮ್ಮನಾಯಕನಾದನು. ಹಾಗೆ ಒಂದು ದಿನ ಯಾವುದಕ್ಕೋ ಭೂಮಿಯನ್ನು ಅಗೆಯುತ್ತಿರುವಾಗ ಹೊನ್ನು ಸಿಗುತ್ತದೆ. ಈ ಎಲ್ಲಾ ಬಂಗಾರವನ್ನು ಪ್ರಜೆಗಳ ಹಿತರಕ್ಷಣೆ, ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ, ‘ಕನಕನಾಯಕ’ ಎಂಬ ಹೆಸರಿಗೆ ಪಾತ್ರನಾಗುತ್ತಾನೆ. ಮದುವೆಯಾಗಿ ಒಂದು ಮಗುವಾದರೂ ಆ ಮಗು ಇಹಲೋಕ ತ್ಯಜಿಸಿತು. ಮುಂದೆ ಬಹಳಷ್ಟು ವರ್ಷಗಳ ಕಾಲ ಪತ್ನಿ ಯೊಂದಿಗಿದ್ದು, ಆಕೆಯೂ ಮರಣಿಸಿದಳು. ಸಂಸಾರ ಸುಖವೇ ಬೇಡವೆಂದು ವೈರಾಗ್ಯ ಕಾಡತೊಡಗಿತು ಕನಕನಿಗೆ. ತಾತ ತಿರುಮಲಾಚಾರ್ಯರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿ ಕನಕದಾಸರಾದರು. ಮುಂದೆ ವ್ಯಾಸರಾಯರ ಶಿಷ್ಯರಾಗಿ, ಪುರಂದರ ದಾಸರೊಂದಿಗೆ ಸೇರಿ ದಾಸಕೂಟವನ್ನು ಸ್ಥಾಪಿಸಿದರು. ವೇದಾಂತ ಸಾರವನ್ನು ವ್ಯಾಸರಾಯರಿಂದ ಅಭ್ಯಸಿಸಿ ಜ್ಞಾನವನ್ನು ವೃದ್ಧಿಪಡಿಸಿದ ಮಹಾನುಭಾವರು. ತನ್ನ ಗುರುಗಳು ನೀಡಿದ ಬಾಳೆಹಣ್ಣನ್ನು ತಿನ್ನಲು ಪ್ರಯತ್ನಿಸುವಾಗ ಭಗವಂತ ಗಮನಿಸುತ್ತಾನೆ, ಯಾರೂ ನೋಡದ ಜಾಗದಲ್ಲಿ ಹೇಗೆ ತಿನ್ನಲಿ? ದೇವರು ಎಲ್ಲೆಡೆಯೂ ಇದ್ದಾನೆ ಎಂದು ಗುರುಗಳ ಹತ್ತಿರ ಹೇಳಿದವರು.
ತೀರ್ಥಯಾತ್ರೆ ಕೈಗೊಂಡ ಕನಕದಾಸರು ಉಡುಪಿಗೆ ಬಂದರು. ದೇವಾಲಯಕ್ಕೆ ಪ್ರವೇಶ ನೀಡದಾಗ ಕೃಷ್ಣನಿಗೆ ಮೊರೆಯಿಟ್ಟು ರಚಿಸಿದ ಕೀರ್ತನೆ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’. ಎಷ್ಟು ಸಾಹಿತ್ಯ, ಸಾರಯುಕ್ತ ರಚನೆ. ಭಕ್ತನ ಮೊರೆಯಾಲಿಸಿದ ಭಗವಂತ ಪಶ್ಚಿಮಕ್ಕೆ ತಿರುಗಿದ ಭಾಗವೇ ಇಂದಿಗೂ ‘ಕನಕನ ಕಿಂಡಿ’ ಎಂದು ಪ್ರಸಿದ್ಧಿಯಾಗಿದೆ. ನಿಜಭಕ್ತಿ ಇದುವೇ ಅಲ್ಲವೇ? 'ಕುಲ ಕುಲವೆಂದು ಹೊಡೆದಾಡದಿರಿ 'ಸಾರಿದ ದಾಸವರೇಣ್ಯರು. 'ಮಾಡಿದರೆ ಮಾಡಬೇಕು ಸತ್ಯವಂತರ ಸಂಗವನು' ಹೇಳಿದರು.
ಜಾತಿ, ಮತ, ಧರ್ಮ ಭೇದಭಾವ ಯಾತಕೆ? ಮನುಷ್ಯ ಜಾತಿಯೊಂದೇ ಎಂದು ಸಾರಿದರು. ಶ್ರೀ ಹರಿಯ ವಿವಿಧ ಅವತಾರಗಳನ್ನು ತಮ್ಮ ಕೀರ್ತನೆಗಳಲ್ಲಿ ಹಾಡಿ ಹೊಗಳಿದ್ದಾರೆ. ಮೂಢನಂಬಿಕೆ ಗಳನ್ನು ಬಲವಾಗಿ ಖಂಡಿಸುತ್ತಿದ್ದರು. ಹರಿಭಕ್ತಿ ಸಾರ ಎಂಬ ಕೃತಿಯನ್ನು ಬರೆದ ಕನಕದಾಸರು, ತನ್ನದೇ ಶೈಲಿಯಲ್ಲಿ ‘ಕಾಗಿನೆಲೆಯ ಆದಿಕೇಶವನನ್ನು’ ಅಂಕಿತವಾಗಿರಿಸಿ ತನ್ನ ಭಕ್ತಿ ಗೀತೆಗಳನ್ನು, ದಾಸರಪದಗಳನ್ನು ರಚಿಸಿದರು. ಯುದ್ಧ,ದೊಂಬಿ, ವೈರ ಆಸ್ತಿ, ಅಂತಸ್ತು ಎಲ್ಲವನ್ನೂ ತ್ಯಜಿಸಿ ದಾಸಶ್ರೇಷ್ಠರಾಗಿ ಹಲವಾರು ಅನುಯಾಯಿಗಳಿಗೆ ದಾಸದೀಕ್ಷೆ ನೀಡಿದರು. ತನಗೆ ಅಶರೀರವಾಣಿಯಾದಂತೆ ತಾನು ದಾಸನಾಗಿರುವೆ, ಯಾವ ಮೋಹ, ಸಂಸಾರ ಬಂಧನ ಬೇಡವೆಂದವರು. ಕಾಗಿನೆಲೆಯಲ್ಲಿ ಆದಿಕೇಶವನ ಮಂದಿರವನ್ನು ಕಟ್ಟಿಸಿದವರು. ವಿಜಯನಗರ ಸಾಮ್ರಾಜ್ಯದ ಅಧೀನರಾಗಿದ್ದ ಹೋಬಳಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಿಕ್ಕಿದ ನಿಧಿಯನ್ನು ಇದಕ್ಕಾಗಿ ಬಳಸಿದರು. ಇವರ ರಚನೆಗಳು ಹರಿಭಕ್ತಿ ಸಾರ ಮೊದಲಕೃತಿ, ಮೋಹನ ತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತೆ ಕಾವ್ಯಗಳನ್ನು, ಸಾವಿರಾರು ಕೀರ್ತನೆಗಳನ್ನು, ಮುಂಡಿಗೆ, ಉಗಾಭೋಗಗಳನ್ನು ರಚಿಸಿದ್ದಾರೆ. ತಮ್ಮ ಎಲ್ಲಾ ರಚನೆಗಳಲ್ಲೂ ಆಧ್ಯಾತ್ಮಿಕ ಸಂದೇಶವನ್ನು ಜನಸಾಮಾನ್ಯನಿಗೆ ಮನಮುಟ್ಟುವಂತೆ ಬಿಂಬಿಸಿದ್ದಾರೆ.
ಇವರ ಹುಟ್ಟು -ಸಾವು ಯಾವುದರ ಬಗ್ಗೆಯೂ ಸ್ಪಷ್ಟ ದಾಖಲೆಗಳು ಸಿಗುತ್ತಿಲ್ಲವೆಂಬ ಧ್ವನಿಯಿದೆ. ೯೮--೧೦೦ ವರ್ಷಗಳ ಕಾಲ ಬದುಕಿದ್ದರೆಂದು ವಿದ್ವಾಂಸರ ಅಭಿಪ್ರಾಯ. ತಮ್ಮ ಎಲ್ಲಾ ರಚನೆಗಳಲ್ಲೂ ಸಮಾಜದ ಓರೆಕೋರೆಗಳನ್ನು, ಪ್ರಚಲಿತ ಸಮಸ್ಯೆಗಳನ್ನು, ಮೂಢನಂಬಿಕೆಯ ತೊಂದರೆಗಳನ್ನು ಹಾಸುಹೊಕ್ಕಾಗಿ ಕಾಣಿಸಿದ್ದಾರೆ. ಭಕ್ತರಾಗಿ, ಕವಿಯಾಗಿ, ಸಮಾಜ ಸುಧಾರಕರಾಗಿ, ದಾಸಶ್ರೇಷ್ಠರಾಗಿ ಮೆರೆದ ಸಂತರಾಗಿದ್ದರು.
ಇಂದು (ನವೆಂಬರ್ ೨೦) ಕನಕದಾಸ ಜಯಂತಿ. ಆ ಪ್ರಯುಕ್ತ ಅವರ ಸ್ಮರಣೆಯಲ್ಲಿ ಈ ಲೇಖನ.
-ರತ್ನಾ ಕೆ.ಭಟ್ ತಲಂಜೇರಿ
(ಆಕರ ಮಾಹಿತಿ: ದಾಸ ಸಾಹಿತ್ಯ)
ಚಿತ್ರ ಕೃಪೆ: ಇಂಟರ್ನೆಟ್ ತಾಣ