ಭಗವಂತನಲ್ಲಿ ನಮ್ಮ ಭಕ್ತಿ ಹಾಗೂ ಶ್ರದ್ಧೆ

ಭಗವಂತನಲ್ಲಿ ನಮ್ಮ ಭಕ್ತಿ ಹಾಗೂ ಶ್ರದ್ಧೆ

ವಯಸ್ಸಾದ ವ್ಯಕ್ತಿಯೊಬ್ಬರು ಬಹಳ ವರ್ಷಗಳಿಂದ ಹಾಸಿಗೆ ಹಿಡಿದಿದ್ದರು, ಅವರಿಗೆ ಪಾರ್ಶ್ವ ವಾಯು  ಖಾಯಿಲೆ ಬಂದು  ಹಾಸಿಗೆಯಿಂದ ಏಳಲು ಆಗುತ್ತಿರಲಿಲ್ಲ. ವಿಚಿತ್ರವೆಂದರೆ ಅವರ ಹಾಸಿಗೆ ಎದುರಿಗೆ ಯಾವಾಗಲೂ ಒಂದು ಖಾಲಿ ಕುರ್ಚಿ ಇರುತ್ತಿತ್ತು. ಯಾರೂ ಅದರಲ್ಲಿ ಕುಳಿತುಕೊಳ್ಳುತ್ತಿರಲ್ಲಿಲ್ಲ. ಮುದುಕರು ತಮಗೆ ಸಮಯ ಸಿಕ್ಕಾಗಲೆಲ್ಲಾ ಆ ಕುರ್ಚಿಯ ಜೊತೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಅವರ ಮನೆಯವರು ಇದನ್ನು ನೋಡಿ, ಇವರಿಗೆಲ್ಲೊ ಹುಚ್ಚು ಹಿಡಿದಿರಬೇಕು ಅಥವಾ ಖಾಯಿಲೆಯಿಂದ ಬುದ್ಧಿಮಾಂದ್ಯತೆ ಆಗಿರಬೇಕು ಎಂದು ನಿರ್ಲಕ್ಷ ಮಾಡುತ್ತಿದ್ದರು. ಆದರೆ ಅವರು ಮನೆಯವರ  ನಿರ್ಲಕ್ಷ್ಯವನ್ನು ತಲೆಗೆ ಹಚ್ಚಿಕೊಳ್ಳದೇ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಅವರ ನಡವಳಿಕೆಯಲ್ಲಿ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ.

ಮನೆಯವರೆಲ್ಲರೂ ಕೆಲಸಕ್ಕೂ ಅಥವಾ ಇನ್ನೆಲ್ಲಿಗಾದರೂ ಹೋದಾಗ, ಅಥವಾ ರಾತ್ರಿ ಸಮಯದಲ್ಲಿ ಎಲ್ಲರೂ ಮಲಗಿದಾಗ, ಆ ಕುರ್ಚಿಯ ಜೊತೆ ತಮ್ಮ ಸಂಭಾಷಣೆಯನ್ನು ಮುಂದುವರಿಸುತ್ತಿದ್ದರು. ಅವರ ಮಕ್ಕಳು ವೈದ್ಯರನ್ನು ಕರೆದು ತಮ್ಮ  ತಂದೆಯ  ಈ ನಡವಳಿಕೆ, ಹಾಗೂ ಅವರ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿದರು. ವೈದ್ಯರು ಅವರಿಗೆ ಯಾವುದೇ ತರಹದ ಮಾನಸಿಕ ಕಾಯಿಲೆಯೂ ಇಲ್ಲ ಎಂದು ಹೇಳಿದರು. 

ಒಂದು ಸಲ ಗಂಡನ ಮನೆಯಲ್ಲಿದ್ದ ವೃದ್ದರ ಮಗಳು, ತನ್ನ ತಂದೆಯನ್ನು ನೋಡಲೆಂದು ತವರಿಗೆ ಬಂದಳು. ಅವರ ನಡವಳಿಕೆಯ ಬಗೆ ಅವಳಿಗೆ ಸ್ವಲ್ಪ ಬೇಜಾರು, ಆಶ್ಚರ್ಯವೂ ಆಯಿತು. ಅಪ್ಪ ಹೀಗೇಕೆ ಮಾಡುತ್ತಿದ್ದಾರೆ, ಈ ತರಹದ ವರ್ತನೆಗೆ ಕಾರಣವೇನು? ಇದಕ್ಕೆಲ್ಲಾ ಪರಿಹಾರವೇನು ಎಂದು ಯೋಚಿಸುತ್ತಾ, ಒಬ್ಬ ಸಂತರನ್ನು ಕಂಡು, ಅವರಲ್ಲಿ ತನ್ನ ತಂದೆಯ ವಿಚಿತ್ರ ನಡವಳಿಕೆಯ ಬಗ್ಗೆ ವಿವರಿಸಿ, ಇದಕ್ಕೆನಾದರೂ ಪರಿಹಾರ ತಮ್ಮಿಂದ ಸಿಗಬಹುದೇ,? ದಯವಿಟ್ಟು  ತಿಳಿಸಿ ಎಂದು ಕೇಳಿದಳು.

ಸಂತರು, ಅವಳ ತಂದೆಯ ನೆಡವಳಿಕೆಯನ್ನು ಕೇಳಿಸಿಕೊಂಡು, ಒಂದು ಸಲ ಆ ಮುದುಕರನ್ನು ನೋಡಲು ಅವಳ ಮನೆಗೆ ಬರಲು ಒಪ್ಪಿಕೊಂಡರು. ಒಂದು ದಿನ ಸಂತರು ಇವರ ಮನೆಗೆ ಬಂದು, ವೃದ್ಧರಿರುವ ಕೊಣೆಗೆ ಬಂದು, ಅವರ  ಮುಂದಿದ್ದ ಕುರ್ಚಿಯ ಮೇಲೆ ಕುಳಿತುಕೊಂಡು, ಯಜಮಾನರೇ, ಏನು ಸಮಾಚಾರ? ನಿಮ್ಮ ಮಗಳು ಹಾಗೂ ಮನೆಯ ಎಲ್ಲಾ ಸದಸ್ಯರೂ ನಿಮ್ಮ ವರ್ತನೆಯ ಬಗ್ಗೆ ಬಹಳ ಚಿಂತಿತರಾಗಿದ್ದಾರೆ ಎಂದು ವೃದ್ಧರನ್ನು ಕೇಳಿದರು. 

ಆಗ, ಆ ವೃದ್ದರು, ಸ್ವಾಮಿ ದಯವಿಟ್ಟು ಈ ಕೋಣೆಯ ಬಾಗಿಲನ್ನು ಮುಂದೆ ಮಾಡಿ, ಏಕೆಂದರೆ ನಾನು ನಿಮ್ಮ ಬಳಿ ಯಾವುದೋ ವಿಷಯ ಹೇಳುವುದಿದೆ, ಅದನ್ನು ನನ್ನ ಮನೆಯ  ಸದಸ್ಯರು ಯಾರೂ ಕೇಳಿಸಿಕೊಳ್ಳಬಾರದು, ಎಂದರು. ಸಂತರು ಕೋಣೆಯ ಬಾಗಿಲನ್ನು ಮುಚ್ಚಿದರು. ಆಗ ಮದುಕರು ನಿಧಾನವಾಗಿ ಮಾತನಾಡ ತೊಡಗಿದರು. 

ಗುರುಗಳೇ, ನಾನೊಬ್ಬ ಬ್ಯಾಂಕ್ ಮ್ಯಾನೇಜರ್ ಆಗಿ, ಕೆಲಸ ನಿರ್ವಹಿಸಿ, ನಿವೃತ್ತಿಯಾಗಿ ಬಹಳ ವರ್ಷಗಳು ಕಳೆದಿದೆ, ಕೆಲವು ವರ್ಷಗಳ ಹಿಂದೆ ನನ್ನ ಪತ್ನಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದಳು. ನಂತರ ನನಗೆ ಈ ಪಾರ್ಶ್ವವಾಯು ಖಾಯಿಲೆ ಬಂದು ಹಾಸಿಗೆ ಹಿಡಿದಿದ್ದೇನೆ, ನನ್ನ ಮಕ್ಕಳೆಲ್ಲಾ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ನನಗೆ ಹಾಸಿಗೆಯಿಂದ ಏಳಲು ಆಗುತ್ತಿಲ್ಲ, ಹೀಗೆ ಕಾಲ ಕಳೆಯುವುದೇ ನನಗೆ ದೊಡ್ಡ ಸಮಸ್ಯೆಯಾಗಿ, ನಾನು ಡಿಪ್ರೆಶನ್ ಗೆ ಹೋಗಿ ಬಿಟ್ಟೆ, ಮಕ್ಕಳು ಮನೋರೋಗ ತಜ್ಞರ ಬಳಿ ತೋರಿಸಿದರು. ತುಂಬಾ ದಿನಗಳು ನಿದ್ರೆ ಗುಳಿಗೆಗಳನ್ನು ಸೇವನೆ ಮಾಡಿದೆ. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

ಒಂದು ದಿನ ನನ್ನ ಬಾಲ್ಯದ ಗೆಳೆಯ, ಈ ಸ್ಥಿತಿಯಲ್ಲಿದ್ದ ನನ್ನನ್ನು ನೋಡಲೆಂದು ಬಂದ. ಅವನು ನನ್ನ ಪರಮಾಪ್ತಮಿತ್ರ. ಈಗ ಅವನು ದೂರದ ದೇಶದಲ್ಲಿ ಇದ್ದಾನೆ. ಆತ ಒಬ್ಬ ಆಧ್ಯಾತ್ಮಿಕ ವ್ಯಕ್ತಿ, ಅವನು ನನಗೆ, ನೋಡು ಗೆಳೆಯ, ನಿನ್ನ ಈ ಸ್ಥಿತಿಗೆ ನೀನೇ ಮಾರ್ಗ ಕಂಡು ಕೊಳ್ಳಬೇಕು. ನಾನೊಂದು ಮಾತನ್ನು ಹೇಳುತ್ತೇನೆ ,ಅದನ್ನು ನೀನು ಸರಿಯಾಗಿ ಕೇಳಿಸಿಕೋ, ನಿನ್ನ ಮಲಗುವ ಕೋಣೆಯ ಎದುರಿಗೆ ಒಂದು ಕುರ್ಚಿ ಇಡು, ಅದು ಖಾಲಿ ಕುರ್ಚಿಯಾಗಿರಲಿ, ಇಂದಿನಿಂದ ಆ ಕುರ್ಚಿಯ ಮೇಲೆ ನಿನ್ನ ಇಷ್ಟದ ದೇವರು ಕುಳಿತಿದ್ದಾನೆ ಎಂಬ ಭಾವದಿಂದ  ಅವನೊಡನೆ ನಿನ್ನೆಲ್ಲಾ ಸಂಕಷ್ಟದ ವಿಷಯವನ್ನು ಮಾತನಾಡುತ್ತಾ ಕಾಲ ಕಳೆಯಲು ಪ್ರಾರಂಭಿಸು. ನಿನ್ನ ಕಷ್ಟ , ಸುಖ,ನೋವು ನಲಿವು, ಎಲ್ಲವನ್ನೂ ಯಾವ ಸಂಕೋಚವೂ ಇಲ್ಲದೆ ಅವನ ಬಳಿ ಹೇಳು, ಇದಕ್ಕೆಲ್ಲಾ  ಪರಿಹಾರವನ್ನು ಕೂಡಾ ಅವನಲ್ಲಿ ಬೇಡು, ಸಾಕ್ಷಾತ್ ಭಗವಂತನೇ ನಿನ್ನ ಮುಂದೆ ಆ ಕುರ್ಚಿಯ ಮೇಲೆ ಕುಳಿತಿದ್ದಾನೆ ಎಂಬ ಭಾವದಿಂದ ಅವನೊಡನೆ ಮಾತನಾಡುತ್ತಾ ಕಾಲ ಕಳೆ, ಇದರಿಂದ ನಿನ್ನ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಮಾಧಾನ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನನಗೆ ಸಲಹೆ ನೀಡಿದ. 

ಅಂದಿನಿಂದ ನಾನು ಪ್ರತಿದಿನವೂ , ಅವನು  ಹೇಳಿದಂತೆಯೇ,ನನ್ನ ಇಷ್ಟದ ದೇವರೊಡನೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದೇನೆ. ಈಗ ನನ್ನ ಮನಸ್ಸಿಗೆ ಎಷ್ಟೋ ಸಮಾಧಾನ ಸಿಕ್ಕಿದೆ. ನನಗೆ ಅನಾಯಾಸ ಮರಣವನ್ನು ನೀಡು ದೇವಾ ಎಂದು ಪ್ರಾರ್ಥಿಸುತ್ತಲೇ ಇರುತ್ತೇನೆ. ಇದರಿಂದ ನನ್ನ ಮನಸ್ಸಿಗೆ ಎಷ್ಟೋ ಧೈರ್ಯ, ಸಮಾಧಾನ, ನೆಮ್ಮದಿ ಸಿಕ್ಕಿದೆ. ಆದರೆ ನನ್ನ ಮಕ್ಕಳು ನಾನೊಬ್ಬ ಹುಚ್ಚನೆಂದು, ಮನೋರೋಗಿ ಎಂದು ಭಾವಿಸಿದ್ದಾರೆ. ಅವರು ಹಾಗೆ ಅಂದುಕೊಂಡರೆ ಅದರಿಂದ ನನಗೇನೂ ತೊಂದರೆ ಇಲ್ಲ, ನನ್ನ ಇಷ್ಟ ದೇವರು ನನ್ನೊಂದಿಗಿದ್ದಾಗ, ನನಗೆ ಯಾವುದರ ಕೊರತೆಯೂ ಇಲ್ಲ ಎಂದು ವೃದ್ಧರು, ಸಂತರ ಬಳಿ ತಮ್ಮ ಕಥೆಯನ್ನು  ಹೇಳಿಕೊಂಡರು.

ಇವರ ಕಥೆ  ಕೇಳಿ, ಸಂತರ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ. ಅವರು ಆ ವೃದ್ಧರಿಗೆ, ಸ್ವಾಮಿ, ನೀವು ಬಹಳ ಎತ್ತರವಾದ ಸ್ಥಾನದಲ್ಲಿದ್ದೀರಿ, ನನ್ನ ಉಪದೇಶ ನಿಮಗೇನೂ ಬೇಕಾಗಿಲ್ಲ. ನಿಮಗೆ ಉಪದೇಶ ಮಾಡುವ ಯೋಗ್ಯತೆಯೂ ನನಗಿಲ್ಲ ಎಂದು ಹೇಳಿ, ಅವರಿಗೆ ಕೈ ಮುಗಿದು ಅಲ್ಲಿಂದ ಎದ್ದು ಹೊರಟರು. ಕೆಲವು ದಿನಗಳ ನಂತರ, ವೃದ್ಧರ ಮಗಳು ಸಂತರ ಬಳಿಗೆ ಬಂದು, ಗುರುಗಳೇ, ನಿಮಗೆ ಹೃತ್ಪೂರ್ವಕ ಧನ್ಯವಾದಗಳು, ನೀವು ಬಂದು ನಮ್ಮ ತಂದೆಗೆ ಅದೇನು ಉಪದೇಶ ಮಾಡಿದಿರೊ, ಅದು ನಮಗೆ ಗೊತ್ತಿಲ್ಲ, ಆದರೆ, ನೀವು ಬಂದು ಹೋದಾಗಿನಿಂದಲೂ ಅವರು ಬಹಳ ಲವಲವಿಕೆಯಿಂದ , ಸಂತೋಷದಿಂದ ಇರುತ್ತಿದ್ದರು. ಆದರೆ ಇಂದು ಬೆಳಗ್ಗೆ ನಾನು ಅವರ ಕೋಣೆಗೆ ಹೋದಾಗ, ನನ್ನ ತಂದೆ ಆ ಖಾಲಿ ಕುರ್ಚಿಯ ಮೇಲೆ ತಲೆ ಇಟ್ಟು, ಪ್ರಾಣ ಬಿಟ್ಟಿದ್ದರು. ಇಷ್ಟು ವರ್ಷ ಹಾಸಿಗೆಯಿಂದ ಸ್ವಲ್ಪವೂ ಅಲುಗಾಡದ ಸ್ಥಿತಿಯಲ್ಲಿದ್ದ ನಮ್ಮ ತಂದೆ, ಆ ಖಾಲಿ ಕುರ್ಚಿಯ ವರೆಗೆ ಹೇಗೆ ನಡೆದುಕೊಂಡು ಬಂದರು? ಮತ್ತು ಆ ಕುರ್ಚಿಯ ಮೇಲೆ ತಮ್ಮ ತಲೆ ಇಟ್ಟು, ಏಕೆ ಪ್ರಾಣಬಿಟ್ಟರು?  ಎಂಬುದು ಆಶ್ಚರ್ಯವೆನಿಸುತ್ತಿದೆ. 

ಅವರ ಮುಖದಲ್ಲಿ ನಾವ್ಯಾರೂ ಹಿಂದೆಂದೂ ಕಾಣದ, ಒಂದು ತರಹದ ಸಂತೃಪ್ತಿ ,ಇಂದು  ಎದ್ದು ಕಾಣುತ್ತಿತ್ತು, ಎಂದು ಹೇಳುತ್ತಿದ್ದ, ಅವಳ ಕಣ್ಣಿನಿಂದ ನೀರು ಬಳಬಳನೆ ಇಳಿಯುತ್ತಿತ್ತು. ಇವಳ ಮಾತನ್ನು ಕೇಳಿ, ಆ ಸಂತರ ಕಣ್ಣಲ್ಲಿಯೂ ಕೂಡಾ ಕಣ್ಣೀರು ಧಾರೆಯಾಗಿ ಹರಿಯ ತೊಡಗಿತು.ಅವರು ತಮ್ಮ ಎರಡೂ ಕೈಗಳನ್ನು ಎತ್ತಿ , ಆಕಾಶದೆಡೆಗೆ ನೋಡುತ್ತಾ, ಹೇ,ಭಗವಂತ, ನನಗೆ ಯಾವಾಗ ಈ ಲೋಕದಿಂದ, ಮುಕ್ತಿ ಕೊಡುವೆ, ಎಂದು ಉದ್ಗರಿಸಿದರು.

ನನಗೂ ಕೂಡ, ಈ ವೃದ್ಧರ ಹಾಗೆಯೇ, ನಿನ್ನ ತೊಡೆಯ ಮೇಲೆ ತಲೆ ಇಟ್ಟು, ಮರಣ ಹೊಂದುವಂತಹ ಭಾಗ್ಯವನ್ನು ಕರುಣಿಸು, ದೇವಾ ಎಂದರು. ಭಗವಂತನಲ್ಲಿಯ  ಅಗಾಧವಾದ ಭಕ್ತಿ, ಹಾಗೂ ನಂಬಿಕೆಯೇ ನಮಗೆ ಎಂಥಾ ಪರಿಸ್ಥಿತಿಯಲ್ಲೂ ಕೂಡ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ತಂದು ಕೊಡುವುದು. ಹೀಗೆ ಎಲ್ಲರಿಗೂ ಭಗವಂತನ ಬಗ್ಗೆ, ನಂಬಿಕೆ ಇರಬೇಕು. ಭಗವಂತ ಸರ್ವಂತರ್ಯಾಮಿ ಎಂಬ ಭಾವ ಮೂಡಬೇಕು. ಯಾವಾಗ ಆ ಭಾವ ನಮ್ಮಲ್ಲಿ ಬರುವುದೋ, ಅಂದೇ ನಮ್ಮ ಜೀವನದಲ್ಲಿ ನೆಮ್ಮದಿ, ಶಾಂತಿ, ಉಂಟಾಗುವುದು. ಭಗವಂತನಲ್ಲಿಯ ನಂಬಿಕೆ , ಪ್ರಾರ್ಥನೆ, ಈ ರೀತಿಯದಾಗಿರಬೇಕು. ಅದು ಅತ್ಯಂತ ಪವಿತ್ರವಾದದ್ದು, ಅತ್ಯಂತ ಗಹನವಾದದ್ದು ಅಲ್ಲವೇ?

ಕೃಪೆ:ಸುವರ್ಣಾ ಮೂರ್ತಿ, ಸಂಗ್ರಹ:ವೀರೇಶ್ ಅರಸೀಕೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ