ಭಗವಂತನ ಸಾಮೀಪ್ಯ

ಭಗವಂತನ ಸಾಮೀಪ್ಯ

ಒಂದು ಖಾಲಿ ಪಾತ್ರೆ ಇದ್ದರೆ ನಮಗೆ ಬೇಕಾದುದನ್ನು ಅದರಲ್ಲಿ ತುಂಬಿಕೊಳ್ಳಬಹುದು. ಆದರೆ, ಏನು ತುಂಬುತ್ತೇವೆ? ಏನು ತುಂಬಬೇಕು? ಎಂಬುದು ಬಹಳ ಮುಖ್ಯ. ಹೃದಯವೂ ಹೀಗೆಯೇ; ಒಳ್ಳೆಯ ಸಂಗತಿಗಳು ಎಷ್ಟಿದ್ದರೂ ಹೃದಯದಲ್ಲಿ ಅವಕ್ಕೆ ಜಾಗ ಇದ್ದೇ ಇರುತ್ತದೆ. ನಾವು ಭಗವಂತನಿಗೆ ಹತ್ತಿರವಾಗಬೇಕು. ಅಂತ ನಮ್ಮ ಹೃದಯ ನಿವಾಸಿಯಾಗಬೇಕು ಎಂದರೆ ನಮ್ಮ ಹೃದಯ ಖಾಲಿಯಿರಬೇಕು. 

ಕೃಷ್ಣನ ಕೈಯಲ್ಲಿ ಸದಾ ಒಂದು ಕೊಳಲು ಇರುವುದಲ್ಲವೇ? ಒಮ್ಮೆ ರಾಧೆ, ಈ ಕೊಳಲು ಅದಾವ ಜನ್ಮದಲ್ಲಿ ಅದೆಷ್ಟು ಪುಣ್ಯ ಮಾಡಿತ್ತೋ ಏನೋ....ಯಾವಾಗಲೂ ಅವನ ಸಾಂಗತ್ಯದಲ್ಲಿ ಶೋಭಿಸುತ್ತಿರುತ್ತದೆ.....ಅಂತ ಅಚ್ಚರಿಗೊಂಡಳು. ಆಕೆಗೆ ಕೃಷ್ಣ ಬಳಿಯಲ್ಲಿದ್ದರೂ ಚಿಂತೆ, ಇಲ್ಲದಿದ್ದರೂ ಚಿಂತೆ; ಇದ್ದರೆ - ಅದ್ಯಾವ ಮಾಯದಲ್ಲಿ ನನ್ನನ್ನು ಬಿಟ್ಟುಹೋಗುವನೋ.... ಎಂಬ ಚಿಂತೆ, ಇಲ್ಲದಿದ್ದರೆ - ಯಾವಾಗ ದರ್ಶನ ಕೊಡುವನೋ? ಎಂಬ ಚಿಂತೆ ! ಹೀಗೆ ಕೃಷ್ಣ ಸನಿಹದಲ್ಲಿದ್ದರೂ ಇಲ್ಲದಿದ್ದರೂ ರಾಧೆ ಚಿಂತಿತಳೇ ಆಗಿರುತ್ತಿದ್ದಳು. ಈ ಕೊಳಲು ಹಾಗಲ್ಲ, ಸದಾ ಕೃಷ್ಣನ ಬಳಿಯಿರುವ ಅದು ತನಗಿಂತ ಹೆಚ್ಚು ಪುಣ್ಯ ಮಾಡಿದೆ ಎನ್ನುತ್ತಿತ್ತು ರಾಧೆಯ ಮನ. ಕೃಷ್ಣ ಇಲ್ಲದಿರುವ ಸಮಯ ನೋಡಿಕೊಂಡು ಈ ಕುರಿತು ಕೊಳಲನ್ನೇ ಕೇಳಿಬಿಡಬೇಕು ಎಂದು ತವಕಿಸುತ್ತಿದ್ದಳು ರಾಧೆ. ಆದರೆ ಆ ಮುರಳಿ, ಮುರಾರಿಯ ಕೈಯಿಂದ ಜಾರಿದರೆ ತಾನೇ ! ಆತ ನಿದ್ರಿಸುವಾಗಲೂ ಅದು ಅವನ ಸೊಂಟದಲ್ಲಿರುತ್ತಿತ್ತು. ಅವರಿಬ್ಬರ ನಡುವಿನ ಅವಿನಾಭಾವ ಸಂಬಂಧಕ್ಕೆ ಎಲ್ಲಾ ಬಲ್ಲ ಅರಿಷ್ಟನೇಮಿಗೆ ರಾಧೆಯ ಮನದಿಂಗಿತ ಅರಿಯುವುದು ಕಷ್ಟವೇ ಒಮ್ಮೆ ಕೃಷ್ಣ ಬೇಕೆಂದೇ ಕೊಳಲನ್ನು ಸೊಂಟದಿಂದ ತೆಗೆದು ಪಕ್ಕದಲ್ಲಿಟ್ಟು ನಿದ್ರೆ ಹೋಗುವವನಂತೆ ನಟಿಸಿದ.

ಆಗ ಅದನ್ನು ಕೈಗೆತ್ತಿಕೊಂಡ ರಾಧೆ ತನ್ನ ಮನವನ್ನು ದುಂಬಿಯಂತೆ ಕೊರೆಯುತ್ತಿದ್ದ ಪ್ರಶ್ನೆಯನ್ನು ಕೇಳಿದಳು. ಆಗ ಆ ಕೊಳಲು, ತಾಯೇ, ನೀನೇನು ಕೇಳುತ್ತಿರುವೆಯೋ ನನಗೆ ತಿಳಿಯದು. ಒಂದು ಕೊಳಲಿನಲ್ಲಿ ಏನಿದೆಯೆಂದು ಕೃಷ್ಣ ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ ಎಂಬ ನಿನ್ನ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ನನ್ನನ್ನು ಒಮ್ಮೆ ಸರಿಯಾಗಿ ನೋಡು. 

ಏನಿದೆ ನನ್ನಲ್ಲಿ ? ನಾನೊಂದು ಬಿದಿರಿನ ಕೋಲು, ಅದರಲ್ಲಿ ಹತ್ತಾರು ರಂಧ್ರಗಳು. ಒಡಲೆಲ್ಲ ಖಾಲಿ ಖಾಲಿ. ಇದರಲ್ಲಿ ನನ್ನದು ಅಂತ ಏನೂ ಇಲ್ಲ. ಕೃಷ್ಣನ ಕೈಯಲ್ಲಿರುವುದರಿಂದ, ಅವನು ನನ್ನಿಂದ ಅದ್ಭುತ ರಾಗ ಹೊರಡಿಸುವುದರಿಂದಾಗಿ ನಾನೂ ಏನೋ ಆಗಿಹೋಗಿದ್ದೇನಷ್ಟೇ. ಇದು ಕೃಷ್ಣ ಕೃಪೆಯೇ ಹೊರತು ನನ್ನದೇನೂ ಇಲ್ಲ. ಕೃಷ್ಣನು ನಿನಗೂ ಸಮೀಪವಾಗಿ, ನನ್ನಂತೆ ನಿನ್ನನ್ನೂ ಬಳಿಯಲ್ಲಿಟ್ಟುಕೊಂಡಿರಬೇಕೆಂದರೆ, 

ನಿನ್ನದು ಅಂತ ಏನನ್ನೂ ಇಟ್ಟುಕೊಳ್ಳಬೇಡ. ಹೃದಯವನ್ನು ಖಾಲಿ ಮಾಡಿಕೋ. ಯಾವ ಹೃದಯದಲ್ಲಿ ಸಿಟ್ಟು- ಸೆಡವು- ಕಪಟದಂತಹ ಕಲ್ಮಶಗಳು ಕಡಿಮೆ ಇರುತ್ತವೆಯೋ ಅಥವಾ ಇಲ್ಲವೇ ಇಲ್ಲವೋ ಅಲ್ಲಿ ಭಗವಂತ ನೆಲೆಸುತ್ತಾನೆ. ಕೊಂಚವೇ ಜಾಗ ಸಿಕ್ಕಿದರೂ ಆವರಿಸಿ, ಅಲ್ಲಿರುವ ವಿಷವನ್ನು ಹೊರಹಾಕುತ್ತಾನೆ. ಆಗ ನೀನೂ ಭಗವಂತನ ಸಾಂಗತ್ಯದಲ್ಲೇ ಇರಿತ್ತೀಯೇ ಎಂದಿತು. ರಾಧೆಯ ಮನ ಪುಳಕಗೊಂಡಿತು. ಭಗವಂತನನ್ನು ಮಂದಿರದಲ್ಲೋ ಗೋಪುರದಲ್ಲೋ ಅರಸುವ ಅಗತ್ಯವಿಲ್ಲ. ಪ್ರತಿಯೊಬ್ಬರ ಹೃದಯಮಂದಿರವೂ ಆತನ ವಾಸಸ್ಥಾನವೇ. ಆದರೆ ಅವನ ಠಿಕಾಣಿ ನಿರಂತರವಾಗಿರ ಬೇಕೆಂದರೆ, ಕಲ್ಮಶಗಳು ಸೇರಿಕೊಳ್ಳದಂತೆ ಈ ಮಂದಿರವನ್ನು ನಾವು ಶುಭ್ರವಾಗಿ ಚೊಕ್ಕಟವಾಗಿಟ್ಟು ಕೊಳ್ಳಬೇಕು.

(ಆಧಾರ)-ರವೀಶ್ ಕುಮಾರ್, ಯೆಯ್ಯಾಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ