ಭಗವಾನ್ ಭಾಸ್ಕರಗೆ ನಮೋ ನಮಃ

ಭಗವಾನ್ ಭಾಸ್ಕರಗೆ ನಮೋ ನಮಃ

*ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್*/

*ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್*//

ಅದಿತಿ ಮಾತೆಯ ಸುಕುಮಾರನಂತೆ ಭಗವಾನ್ ಭಾಸ್ಕರ. ದಿನನಿತ್ಯವೂ ವಿಶ್ವವನ್ನು ಬೆಳಗಿಸುವ, ಶಾಖವನ್ನು ಪಸರಿಸಿ ಜಗದ ಜೀವ ಕೋಟಿಗಳ ಹಸಿವನ್ನು ನೀಗಿಸಲು, ಉಸಿರನ್ನು ನೀಡಲು ಬೇಕಾದ ವ್ಯವಸ್ಥೆಗೆ ಸಹಕರಿಸುವ ಕರುಣಾಕರ. ಅರುಣೋದಯದೊಂದಿಗೆ ದಿನಚರಿಗೆ ಶುಭಾರಂಭ .ದೇವಾನುದೇವತೆಗಳಿಂದ ಪೂಜೆಗೊಳುವ ಮಹಾತ್ಮನಿವನು. ಅರ್ಕ, ಭಾಸ್ಕರ, ರವಿ, ತರಣಿ, ದಿನಕರ, ಪ್ರಭಾಕರ, ಸೂರ್ಯನಾರಾಯಣ, ಆದಿತ್ಯ, ಇನ, ನೇಸರ ಎಷ್ಟೊಂದು ಹೆಸರುಗಳಿವೆಯಲ್ಲವೇ? ಈ ದಿನದ ಸ್ನಾನ ಜಪ-ತಪಾದಿಗಳಿಗೆ ವಿಶೇಷತೆಯಿದೆಯಂತೆ. ವಿಷ್ಣುಸ್ಮೃತಿಯಲ್ಲೊಂದೆಡೆ ನಾವು ಇದನ್ನು ಓದಿ ತಿಳಿಯಬಹುದು.

*ಸೂರ್ಯಗ್ರಹಣತುಲ್ಯಾ ತು ಶುಕ್ಲಾ ಮಾಘಸ್ಯ ಸಪ್ತಮೀ/*

*ಅರುಣೋದಯವೇಲಾಯಾಂ ತಸ್ಯಾಂ ಸ್ನಾನಂ ಮಹಾಫಲಮ್//*

ದಿನಕರನು ಇನ್ನು ಉತ್ತರದತ್ತ ಚಲಿಸುವುದು ಅಥವಾ ವಾಲುವುದರಿಂದ ಚಳಿ ಹೋಗಿ ಕಡು ಬಿಸಿಲ ತಾಪವಿರುತ್ತದೆ. ಮಾಘಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯೇ ರಥಸಪ್ತಮಿ. ಒಂದೆಡೆ ಈ ದಿನವನ್ನು  ಸೂರ್ಯನಾರಾಯಣನ ಹುಟ್ಟಿದ ದಿನವೆಂದೂ ಓದಿದ ನೆನಪು.

ಏಳು ಅಶ್ವಗಳುಳ್ಳ ರಥವನ್ನೇರಿ ತನ್ನ ದಿನಚರಿಯನ್ನು ಆರಂಭಿಸಿದ ದಿನವೇ ರಥಸಪ್ತಮಿಯಂತೆ. ಸೂರ್ಯನು ಎಲ್ಲರಿಗೂ ಮಾದರಿ. ಅವರವರ ಪಾಲಿನ ಕಾಯಕವನ್ನು ತಪ್ಪದೇ ಮಾಡಬೇಕೆಂಬ ಸಂದೇಶ ಸಾರುವ ಜನಕನೀತ. ಅರುಣೋದಯದಿಂದ ಆರಂಭವಾಗುವ ನಮ್ಮ ಎಲ್ಲಾ ಚಟುವಟಿಕೆಗಳಿಗೂ ವಿರಾಮ ರಾತ್ರಿಯೆನ್ನಬಹುದು. ಬಿಡುವಿಲ್ಲದೆ, ಸೋಮಾರಿತನವಿಲ್ಲದೆ ದುಡಿಯುವ ಸೂರ್ಯ ಚಂದ್ರಾದಿ ಆಕಾಶಕಾಯಗಳು, ಪ್ರಕೃತಿಯೇ ಕಾಯಕ ನಿಷ್ಠೆಗೆ ಉದಾಹರಣೆಗಳು. ಸೂರ್ಯ ನಮಸ್ಕಾರದಿಂದ ಅತ್ಯುತ್ತಮ ವ್ಯಾಯಾಮ, ಮಾನಸಿಕ ನೆಮ್ಮದಿ, ಆರೋಗ್ಯ ಸಿಗುತ್ತದೆ. ಭಗವಾನ್ ಭಾಸ್ಕರನಿಗೆ ಸ್ನಾನ ಮುಗಿಸಿ ಅರ್ಘ್ಯ ನೀಡುವುದು ಪುರಾಣ ಕಾಲದಿಂದಲೂ ಇದೆ.

*ಆದಿ ದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ*/

*ದಿವಾಕರ ನಮಸ್ತ್ಯುಭ್ಯಂ ಪ್ರಭಾಕರ ನಮೋಸ್ತುತೇ*//

ಮೂರೂ ಹೊತ್ತು ಧ್ಯಾನಿಸುವುದರಿಂದ ಮನದ ಕ್ಲೇಶ ನಿವಾರಣೆಯಾಗುವುದು, ಚರ್ಮವ್ಯಾಧಿಗಳ ನಾಶ, ಮನಸ್ಸಿಗೆ ಶಾಂತಿ, ಉಲ್ಲಾಸ, ಕಣ್ಣಿನ ಕಾಂತಿ ವೃದ್ಧಿ, ಅಗಲಿದ ಹಿರಿಯರಿಗೆ ಸೌಖ್ಯ, ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿ, ಸುಖ ಲಭ್ಯವಂತೆ. ರವಿಯಲ್ಲಿ ತ್ರಿಮೂರ್ತಿಗಳ ಶಕ್ತಿಯಿದೆಯಂತೆ.

ಉದಯ ಕಾಲದಲ್ಲಿ ಬ್ರಹ್ಮನಾಗಿ, ಮಧ್ಯಾಹ್ನ ಮಹೇಶ್ವರನ್ನಾಗಿ, ಸಂಜೆ ಕಾಲದಲ್ಲಿ ವಿಷ್ಣುವಾಗಿ ಕಾಣಿಸ್ತಾನಂತೆ ತ್ರಿಮೂರ್ತಿಗಳನ್ನು ದಿನಮಣಿಯಲ್ಲಿ ನೋಡಬಹುದು. ಸಕಲಪಾಪಗಳ ಪರಿಹಾರ ಮಾಡುವ ಶಕ್ತಿ ಸೂರ್ಯನಿಗೆದೆಯಂತೆ.

ಸೂರ್ಯ ದ್ವಾದಶ ನಾಮಗಳನ್ನು ಹೇಳುವುದರಿಂದ ಶರೀರದ ವ್ಯಾಧಿ ನಿವಾರಣೆ, ಸೂರ್ಯ ನಮಸ್ಕಾರ ಅತ್ಯಂತ ಶ್ರೇಯಸ್ಕರ.ಸೂರ್ಯ ಅಷ್ಟೋತ್ತರ ನಾಮಾವಳಿಗಳನ್ನು ಜಪಿಸಬಹುದು. ರೋಗಗಳ ನಾಶಕ್ಕೆ ‌ಸೂರ್ಯ ಮಂಡಲ ಪ್ರಶಸ್ತವೆಂಬುದಾಗಿ ಉಲ್ಲೇಖವಿದೆ. ಸೂರ್ಯ ನಮಸ್ಕಾರದಿಂದ ಬುದ್ಧಿವಿಕಸನವೆಂದು ಹೇಳಲಾಗುತ್ತಿದೆ. ಸೂರ್ಯನ ತೇಜಸ್ಸು ಬೀಳದ ಜಾಗವಿಲ್ಲ ಎನ್ನಬಹುದು.ನಮ್ಮ ದೇಹದ ದೃಢತೆಗೆ ಕಾರಣನಾದ ಅರ್ಕನ ಪೂಜೆ, ಧ್ಯಾನ ಮಾಡುತ ಸಕಲರಿಗೂ ಸನ್ಮಂಗಲವನ್ನುಂಟು ಮಾಡೆಂದು, ಈ ರಥ ಸಪ್ತಮಿಯ ಶುಭದಿನದಂದು ಪ್ರಾರ್ಥಿಸೋಣ.

*ನಮೋಸ್ತು ಸೂರ್ಯಾಯ ಸಹಸ್ರರಶ್ಮಯೇ*

*ಸಹಸ್ರ ಶಾಖಾನ್ವಿತ ಸಂಭವಾತ್ಮನೇ*

*ಸಹಸ್ರ ಯೋಗೋದ್ಭವ ಭಾವಭಾಗಿನೇ*

*ಸಹಸ್ರ ಸಂಖ್ಯಾಯುಧಧಾರಿಣೇ ನಮ:*

-ರತ್ನಾ ಕೆ ಭಟ್, ತಲಂಜೇರಿ

ಆಕರ:ನಿತ್ಯ ಸ್ತೋತ್ರ ಮಾಲಾ ಸಂಗ್ರಹ

ಚಿತ್ರ ಕೃಪೆ: ‘ವಿಜಯವಾಣಿ’ ಜಾಲ ತಾಣ