ಭಗವಾನ್ ರಮಣ ಮಹರ್ಷಿಗಳ ಸಂದೇಶ
ಭಗವಾನ್ ಶ್ರೀ ರಮಣ ಮಹರ್ಷಿಗಳು ಕೊಡುತ್ತಿದ್ದ ಸಂದೇಶಗಳು ಮನನೀಯವಾಗಿರುತ್ತಿತ್ತು. ಆದರೆ, ಅವರ ಸಂದೇಶಗಳನ್ನು ಓದಿಕೊಂಡು ಅವರ ದಿನಚರಿಯನ್ನು ಗಮನಿಸಿದರೆ ಮಹರ್ಷಿಗಳೇ ಈ ಜಗತ್ತಿಗೆ ಸಂದೇಶವಾಗಿ ಕಾಣುತ್ತಿದ್ದರು. ಅವರು ಏನು ಹೇಳುತ್ತಿದ್ದರೋ ಅವರು ಅದೇ ಆಗಿರುತ್ತಿದ್ದರು. ಇದು ಅವರ ಜೀವನದುದ್ದಕ್ಕೂ ಧಾಖಲಾಗಿದೆ.
ಒಂದು ಸಂದರ್ಭದಲ್ಲಿ ಭಗವಾನ್ ರಮಣರು ಕೈವಲ್ಯ ನವನೀತಂನ ಎರಡು ಶ್ಲೋಕಗಳನ್ನು ಉದಾಹರಿಸಿ ಆತ್ಮಜ್ಞಾನದ ಬಗ್ಗೆ ತಿಳಿಸಿದರು. ನವನೀತಂ, ಬೃಹದ್ದಾಕರವಾದ ಆಲದ ಮರದ ಕೆಳಗೆ ನಿಂತು " ನಾನು ಸತ್ಯವನ್ನೇ ಹೇಳುತ್ತೇನೆ, ನೀನೆ ಈ ಜಗತ್ತಿನ ಚೈತನ್ಯ. ಈ ಜಗತ್ತಿನಲ್ಲಿ ಆಗುಹೊಗುತ್ತಿರುವ ಎಲ್ಲವನ್ನು ಸಾಕ್ಷಿಭೂತವಾಗಿ ನೋಡುತ್ತಿರುವ ನೀನು ಯಾವತ್ತು ಬದಲಾಗದ ಸ್ಥಿತಿಯಲ್ಲಿ ಇದ್ದೀಯ. ನೀನು ಭೂತ, ಭವಿಷ್ಯ ಮತ್ತು ವರ್ತಮಾನದಲ್ಲಿ ಕೊನೆಮೊದಲಿಲ್ಲದ ಸಾಗರದ ಅಲೆಗಳ ಏರಿಳಿತದಂತೆ ಸಕಲವನ್ನು ಸಾಕ್ಷಿಯಾಗಿ ಸದಾಕಾಲ ನೋಡುತ್ತಿರುವೆ. ನಾನು ಈಗಾಗಲೇ ಲೆಕ್ಕವಿಲ್ಲದಷ್ಟು ಜನ್ಮಗಳನ್ನು ಕಳೆದ್ದಿದ್ದರೂ ದೇಹವನ್ನೇ ಆತ್ಮವೆಂದು ತಪ್ಪಾಗಿ ಗ್ರಹಿಸಿ ಎಲ್ಲಾ ಜನ್ಮಗಳನ್ನು ಹಾಳುಮಾಡಿಕೊಂಡಿದ್ದೇನೆ. ಹೆಚ್ಚು ಕಡಿಮೆ ಎಲ್ಲಾ ಜನ್ಮದಲ್ಲೂ ಮರಳುಗಾಡಿನಲ್ಲಿ ದೂರದಿಂದ ಕಾಣುವ ಜಲದಂತೆ, ಬ್ರಾಂತಿಯಲ್ಲೇ ಮುಳುಗಿ ಜನ್ಮವನ್ನು ವ್ಯರ್ಥ ಮಾಡಿಕೊಂಡಿದ್ದೇನೆ. ಕೊನೆಗೆ 'ನಾನು ಯಾರು?' ಎಂಬುದನ್ನು ಅರಿಯಲು ನೀನು ನನಗೆ ಬುದ್ದಿಕೊಟ್ಟ ಮೇಲೆ ನನ್ನಲ್ಲಿ ಜನ್ಮ ಜನ್ಮಗಳಿಂದ ಇದ್ದ ಎಲ್ಲಾ ಪೊರೆಯು ಕಳಚಿತು. ಈಗ ನಾನು ಮುಕ್ತನಾದೆ. ಈಗ ನನಗೆ ಸತ್ಯದ ಅರಿವಾಯಿತು." ಎಂದು ಹೇಳಿದ್ದನ್ನು ಮಹರ್ಷಿಗಳು ಉದಾಹರಿಸಿದರು.
ಇನ್ನೊಂದು ಸಂದರ್ಭದಲ್ಲಿ ಮಹರ್ಷಿಗಳು ಸತ್ಯ ಮತ್ತು ಕರ್ಮದ ಬಗ್ಗೆ ಮಾಡಿದ ಉಪದೇಶ ಹೀಗಿದೆ. " ಸತ್ಯ ಯಾವಾಗಲೂ ಒಂದೇ, ಕೇವಲ ಒಂದೇ. ಈ ಸತ್ಯವನ್ನು ಅನಾದಿಕಾಲದಿಂದ ಒಬ್ಬರು ಇನ್ನೊಬ್ಬರಿಗೆ ವರ್ಗಾಯಿಸುತ್ತಲೇ ಬಂದಿದ್ದಾರೆ. ಉದ್ದಾಲಕ ಮಹರ್ಷಿಯು ಶ್ವೇತಕೆತುವಿಗೆ ವರ್ಗಾಯಿಸಿದರು. ನಂತರ ಯಮಧರ್ಮ ನಚಿಕೇತುವಿಗೆ, ಯಾಜ್ಞವಲ್ಕ್ಯರು ಗಾರ್ಗಿಗೆ, ಮೈತ್ರ್ಯೇಯಿಗೆ ಮತ್ತು ಜನಕನಿಗೆ ವರ್ಗಾಯಿಸಿದರು. ವ್ಯಾಸರು ಶುಕಮುನಿಗೆ, ವಸಿಷ್ಟರು ಶ್ರೀರಾಮನಿಗೆ , ಶ್ರೀರಾಮ ಆಂಜನೇಯನಿಗೆ , ಶ್ರೀಕೃಷ್ಣ ಅರ್ಜುನನನಿಗೆ, ಶ್ರೀ ಶಂಕರರು ಮಂಡನಮಿಶ್ರರಿಗೆ, ಶ್ರೀ ರಾಮಕೃಷ್ಣರು ವಿವೇಕಾನಂದರಿಗೆ ವರ್ಗಾಯಿಸಿದರು. ಹೀಗೆ ಸತ್ಯ ವರ್ಗಾವಣೆ ಆಗುತ್ತಲೇ ಬಂದಿದೆ.ಇವೆಲ್ಲವುಗಳ ಸಾರಸಂಗ್ರಹವೇ ಉಪನಿಷತ್ತು. ಈ ಜಗತ್ತಿನಲ್ಲಿ ಅದೆಷ್ಟೋ ಸಂತರು ನಮ್ಮ ಮೇಲೆ ಅಪಾರ ಅನುಕಂಪದಿಂದ ಈ ಸತ್ಯದ ವಿಚಾರವನ್ನು ತಿಳಿಸುವ ಕೃಪೆಯ ಅನುಗ್ರಹ ಮಾಡಿದ್ದಾರೆ. ಇವರ ಅನುಗ್ರಹದ ಅನುಕಂಪವನ್ನು ನಾವೆಲ್ಲರೂ ಅರಿಯಬೇಕಾಗಿದೆ. ಮನುಷ್ಯ ಮೊದಲು ತನ್ನ ಆತ್ಮದ ಅರಿವನ್ನು ತಿಳಿಯಬೇಕಾಗಿದೆ. ಆತನು ದೇಹವಲ್ಲ, ಇಂದ್ರಿಯ ಅಲ್ಲ ಅಥವ ಮನಸ್ಸು ಅಲ್ಲ. ಶುಭ್ರವಾದ ನೀಲಾಕಾಶದಂತೆ ಇರುವ ಈ ಅರಿವು ನಮ್ಮ ದೇಹದೊಳಗೆ ಇದೆಯಾದರೂ, ಕಮಲದ ಎಲೆಗಳಂತೆ ನೀರಿನಲ್ಲಿದ್ದರು, ದುಂಬಿ ಗಳು ಹೂವಿನಮೇಲೆ ಇದ್ದರು, ಯಾವುದು ಯಾವುದಕ್ಕೂ ಅಂಟಿಕೊಳ್ಳದಂತೆ ಇದೆ. ಆಕಾಶದಂತೆ ಭೂಮಿ, ನೀರು, ಬೆಂಕಿ, ಗಾಳಿ ಎಲ್ಲೆಡೆ ವ್ಯಾಪಿಸಿದ್ದರು ಯಾವುದು ಯಾವುದಕ್ಕೂ ಅಂಟಿಕೊಂಡಿಲ್ಲ, ಇದೆ ರೀತಿ ದೇಹ ಮತ್ತು ಮನಸ್ಸಿನಲ್ಲೆಲ್ಲ ಈ ಆತ್ಮದ ಅರಿವು ವ್ಯಾಪಿಸಿದ್ದರೂ ಯಾವುದರಿಂದಲೂ ಇದು ಬಂಧಿತವಾಗಿಲ್ಲ. ಈ ಆತ್ಮಕ್ಕೆ ಹುಟ್ಟು ಇಲ್ಲ ಸಾವು ಇಲ್ಲ ; ಯಾವ ಬಂಧನವು ಇಲ್ಲ ಬಿಡುಗಡೆಯು ಇಲ್ಲ ;ಈ ಆತ್ಮದ ಅರಿವೇ ನಮ್ಮ ನಿಜ ಸ್ವರೂಪ. ಈ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ.
ಎಲ್ಲಾ ಸಂದರ್ಭದಲ್ಲೂ, ಎಲ್ಲಾ ಸಮಯದಲ್ಲೂ ತನ್ನ ಈ ಸ್ವಸ್ವರೂಪವನ್ನು ಸಾಧಕನು ಅರಿತಾಗ ಈ ಜಗತ್ತಿನ ಎಲ್ಲಾ ಬಂಧನದಿಂದ ಮುಕ್ತನಾಗಿ ಶಾಂತವಾಗಿ ಇರಲು ಸಾಧ್ಯ. ಆಗ ತಾನು ಮಾಡುವ ಎಲ್ಲಾ ಕಾರ್ಯಗಳಲ್ಲಿ ಯಾವುದೇ ಅಂಟಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಂತೃಪ್ತಿಯಿಂದ ನಿರ್ವಹಿಸಲು ಸಾದ್ಯ ಇಂತಹ ಮನೋಸಂಕಲ್ಪ ಸಾಧಕನು ಮಾಡಿದರೆ ಸಾಧನೆಯ ಹಾದಿ ಸುಲಭವಾಗುತ್ತದೆ."
ಇದನ್ನು ಮಹರ್ಷಿಗಳು ಕೇವಲ ಹೇಳದೆ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದರು. ಅವರ ದಿನನಿತ್ಯದ ಬದುಕು ಆರಂಭವಾಗುತ್ತಿದ್ದುದೆ ಮುಂಜಾವಿನ ನಾಲ್ಕು ಘಂಟೆಗೆ. ಆಗಿಲಿಂದ ಒಂದು ನಿಮಿಷ ಕೂಡ ಹಾಳುಮಾಡುತ್ತಿರಲಿಲ್ಲ. ಸದಾಕಾಲ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಅಡುಗೆಮನೆಯಲ್ಲಿ ರುಬ್ಬುವುದು, ಚಟ್ನಿ ತಯಾರು ಮಾಡುವುದು, ತರಕಾರಿ ಹೆಚ್ಚುವುದು, ಅಡುಗೆ ತಯಾರು ಮಾಡುವುದು, ಮುತ್ತುಗದ ಎಲೆ ಮತ್ತು ದೊನ್ನೆ ತಯಾರು ಮಾಡುವುದು, ನಾಯಿ ಮಂಗಗಳಿಗೆ ಶಿಶ್ರೂಷೆ ಮಾಡುವುದು, ಆಶ್ರಮದ ಇನ್ನಿತರೇ ಕೆಲಸಗಳಲ್ಲಿ ಭಾಗಿಯಾಗುವುದು ಹೀಗೆ ಎಲ್ಲಾ ಕೆಲಸಗಳನ್ನು ಅತ್ಯಂತ ಶ್ರದ್ದೆಯಿಂದ ಮಾಡುತ್ತಿದ್ದರು. ಆಶ್ರಮಕ್ಕೆ ಬರುವ ಪ್ರತಿ ಭಕ್ತರ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಿ ಸಂತೈಸುತ್ತಿದ್ದರು. ಪ್ರತಿಯೊಂದು ಕೆಲಸವೂ ಭಗವಂತನ ಸೇವೆಯೆಂದು ಮಾಡಿ ಮುಗಿಸಿ ಶಾಂತರಾಗಿರುತ್ತಿದ್ದರು. ಈ ಬಗ್ಗೆ ಯಾರಾದರು ಕೇಳಿದರೆ ಶಾಂತವಾಗಿಯೇ " ನಾನೇನು ಮಾಡಿದೆ? ಆ ಭಗವಂತ ಹೇಗೆ ಮಾಡಿಸಿದನೋ ಹಾಗೆ ಆಗಿದೆ. ಆತನ ಆದೇಶದಂತೆ ಕೆಲಸಗಳು ಎಲ್ಲರ ಕೈಯಲ್ಲಿ ನಡೆದಿದೆ ." ಎಂದು ಉತ್ತರಿಸುತ್ತಿದ್ದರು.
ಮಹರ್ಷಿಗಳ ಒಡನಾಟದಲ್ಲಿ ಇದ್ದ ಹಲವಾರು ಮಹನೀಯರು ತಮ್ಮ ಅನುಭವಗಳನ್ನು ಹಂಚಿಕೊಂದಿರುವುದನ್ನು ಓದುವಾಗ ಅವರೆಷ್ಟು ಧನ್ಯರು! ಎನ್ನುವ ಭಾವ ನಮಗೆ ಬಂದರೂ ಈ ವಿಚಾರಗಳನ್ನು ಎಲ್ಲಾ ಭಕ್ತರಿಗೆ ತಿಳಿಸುವ ಪ್ರಯತ್ನವನ್ನು ರಮಣ ಆಶ್ರಮ ಮಾಡಿ ನಮ್ಮನ್ನು ಧನ್ಯರನ್ನಾಗಿಸಿದ್ದಾರೆ.
Comments
ಉ: ಭಗವಾನ್ ರಮಣ ಮಹರ್ಷಿಗಳ ಸಂದೇಶ
In reply to ಉ: ಭಗವಾನ್ ರಮಣ ಮಹರ್ಷಿಗಳ ಸಂದೇಶ by kavinagaraj
ಉ: ಭಗವಾನ್ ರಮಣ ಮಹರ್ಷಿಗಳ ಸಂದೇಶ
ಉ: ಭಗವಾನ್ ರಮಣ ಮಹರ್ಷಿಗಳ ಸಂದೇಶ
In reply to ಉ: ಭಗವಾನ್ ರಮಣ ಮಹರ್ಷಿಗಳ ಸಂದೇಶ by sathishnasa
ಉ: ಭಗವಾನ್ ರಮಣ ಮಹರ್ಷಿಗಳ ಸಂದೇಶ