ಭಗವಾನ್ ರಮಣ ಮಹರ್ಷಿಗಳ ಸಂದೇಶ

ಭಗವಾನ್ ರಮಣ ಮಹರ್ಷಿಗಳ ಸಂದೇಶ

 
              ತನ್ನ ತಾನು ಅರಿಯಲು ಬ್ರಹ್ಮಜ್ಞಾನ ಪ್ರಾಪ್ತಿಯಾಗಬೇಕೆ?. ಈ ಬ್ರಹ್ಮಜ್ಞಾನ ಪಡೆಯಲು ಸಾಮಾನ್ಯರಿಗೆ ಸಾಧ್ಯವೇ? ಈ ಪ್ರಶ್ನೆಯನ್ನು ಭಗವಾನ್ ರಮಣ ಮಹರ್ಷಿಗಳಲ್ಲಿ ಒಬ್ಬ ವಿದೇಶಿ ಭಕ್ತ ನಿವೇದಿಸಿಕೊಂಡ.
              ಆಗ ಮಹಷಿಗಳು ಕೊಟ್ಟ ಸ್ಪಷ್ಟ ಉತ್ತರ ಏನೆಂದರೆ  "ಬ್ರಹ್ಮಜ್ಞಾನವೆಂಬುದು ಸಂಪಾದಿಸುವ ವಿದ್ಯೆಯಲ್ಲ;        ಬ್ರಹ್ಮಜ್ಞಾನ ಪಡೆಯುವುದರಿಂದ ಸಂತೋಷ ವಾಗಿರಬಹುದೆಂದು  ಆಶಿಸಿದರೆ ಇದೊಂದು ತಪ್ಪು ಗ್ರಹಿಕೆ. ನಿಮ್ಮೊಳಗಿರಬಹುದಾದ ಈ ತಪ್ಪುಗ್ರಹಿಕೆ  ಹೇಗಿದೆಯೆಂದರೆ ಹತ್ತು ಜನ ಧಡ್ಡರು ನದಿದಾಟಿದಂತಿದೆ."   ಎಂದು  ಒಂದು ಕಥೆಯನ್ನು ಹೇಳಲು ಪ್ರಾರಂಭಿಸಿದರು. " ಹತ್ತು ಜನ  ಧಡ್ಡರು ನದಿ ದಾಟಲು ಸಿದ್ದರಾದರು. ಎಲ್ಲರೂ ಈಜಿ  ದಡವನ್ನು ಸೇರಿದರು. ದಡ ಸೇರಿದ ನಂತರ ಎಲ್ಲರೂ ಬಂದು ತಲುಪಿರವರೆ, ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕೆಂದು ತಂಡದ ನಾಯಕನು ಎಲ್ಲರ ತಲೆಯನ್ನು ಎಣಿಸಿದ.    ಒಂಬತ್ತು ಜನ ಮಾತ್ರ ಲೆಕ್ಕಕ್ಕೆ ಸಿಕ್ಕಿದರು. ಪುನಃ ಎಣಿಸಿದ, ಆಗಲು ಅಷ್ಟೇ!  ಮತ್ತೊಬ್ಬನನ್ನು ಕರೆದು ಎಲ್ಲರನ್ನು ಸಾಲಾಗಿ  ನಿಲ್ಲಿಸಿ ಎಣಿಸಲು ಹೇಳಿದ. ಆಗಲೂ ಒಂಬತ್ತು ಜನರೇ!  ನಾಯಕನಿಗೆ ಗಾಭರಿ ಆಯ್ತು.  ಏನೂ ತೋಚದೆ ಎಲ್ಲರು ಅಳಲು ಪ್ರಾರಂಭಿಸಿದರು.  ಇವರ ಅಳುವನ್ನು ಕೇಳಿ ದಾರಿಯಲ್ಲಿ ಬರುತ್ತಿದ್ದ ದಾರಿಹೋಕ ಏನೆಂದು ವಿಚಾರಿಸಿದ.  ನಾಯಕ ಎಲ್ಲವನ್ನು ವಿಸ್ತಾರವಾಗಿ ವಿವರಿಸಿದ.  ದಾರಿಹೋಕ ಸುಮ್ಮನೆ ಎಣಿಸಿನೋಡುವಾಗ ಸರಿಯಾಗಿ ಹತ್ತು ಜನರಿದ್ದರು.  ಆಗ ಎಲ್ಲರನ್ನು ಸಾಲಾಗಿ ನಿಲ್ಲಿಸಿ ಎಲ್ಲರ ಬೆನ್ನು ಮೇಲೆ ಒಂದೊಂದು ಪೆಟ್ಟು ಕೊಡುತ್ತ ಎಣಿಸಿದ. ಎಲ್ಲರು ಸೇರಿ ಹತ್ತು ಜನರಾದರೆಂದು ತಿಳಿದಮೇಲೆ ಸಂತೋಷಗೊಂಡ ದಡ್ಡರು ದಾರಿಹೋಕನನ್ನು ಕೊಂಡಾಡಿದರು.  ಹತ್ತೂ ಜನರು ತಮ್ಮ ಪ್ರಯಾಣವನ್ನು ಮುದುವರೆಸಿದರು."  ಕಥೆಯನ್ನು ಮುಗಿಸಿ ಒಂದು ಕ್ಷಣ ಸುಮ್ಮನಾದರು.
              ನಂತರದಲ್ಲಿ "ಈಗ ಹೇಳಿ, ಈ ಹತ್ತನೆಯವನು ಎಲ್ಲಿಂದ ಬಂದ? ಅವನೆಲ್ಲಿಯಾದರು ಕಳೆದು ಹೋಗಿದ್ದನೇ?  ಅಲ್ಲಿಯೇ ಇದ್ದನಲ್ಲವೇ?. ಅವರುಗಳ ಜೊತೆಯಲ್ಲಿಯೇ ಅವನೂ ಇದ್ದನೆ ಹೊರತು ಹೊಸದಾಗಿ ಸೇರ್ಪಡೆಯಾಗಿಲ್ಲ, ಹೌದು ತಾನೇ?  ಈ ಹತ್ತೂ ಜನರು ದುಃಖಪಡಲು ಕಾರಣವೇ ಇರಲಿಲ್ಲ.  ಅವರ ಅಜ್ಞಾನದ ಕಾರಣದಿಂದ ಅವರೆಲ್ಲರೂ ದುಃಖಪಡುತ್ತಿದ್ದರು.  ಅವರೆಲ್ಲರ ಮನಸಿನಲ್ಲಿ ಒಬ್ಬ ಕಳೆದು ಹೊಗಿರಬಹುದೆಂಬ ಭ್ರಮೆ ದುಃಖಕ್ಕೆ ಕಾರಣವಾಗಿತ್ತು.
 ಈ ರೀತಿಯ ಕಥೆ ನಿಮ್ಮದಾಗಿದೆ. ನೀವು ಅಸಂತೋಷವಾಗಿರಲು ಮತ್ತು ಚಿಂತೆಪಡಲು ಕಾರಣಗಳೇ ಇಲ್ಲ. ನಿಮ್ಮೊಳಗೆ ಅಡಗಿರುವ ಅಪರಿಮಿತವಾದ ಶಕ್ತಿ ಅಥವಾ ಚೈತನ್ಯಕ್ಕೆ ನೀವೇ ಬೇಲಿ ಹಾಕಿಕೊಂಡು ಬಿಟ್ಟಿದ್ದೀರ.   ನಂತರದಲ್ಲಿ ನೀವೇ, ನನ್ನಲ್ಲೇನು ಶಕ್ತಿ ಇಲ್ಲವೆಂದು ರೋಧಿಸುತ್ತಿರುವ ಹಾಗಿದೆ. ನಿಮ್ಮೊಳಗೇ ಇರುವ ಚೈತನ್ಯದ ಅರಿವು ಇರದ ನೀವು, ಹಲವು ರೀತಿಯ ಅಧ್ಯಾತ್ಮಿಕ ಸಾಧನೆಗೆ ತೊಡಗಿ ಈ ಅಪರಿಮಿತವಾದ ಚೈತನ್ಯಕ್ಕಾಗಿ ಹಂಬಲಿಸುತ್ತಿದ್ದಿರ.  ಆದರೆ,  ಈ ಸಾಧನೆಗಳೇ  ಬೇಲಿಯ ಒಳಗೇ ಇದ್ದರೆ, ಈ ಅಪರಿಮಿತವಾದ ಶಕ್ತಿಯನ್ನು ಪಡೆಯುವ ಬಗೆ ಹೇಗೆ?"
               "ಆದ್ದರಿಂದ ನಾನು ಹೇಳುತ್ತೇನೆ,  ನೀವೇ ಹಾಕಿಕೊಂಡಿರುವ ಬೇಲಿಯಿಂದ ಹೊರಗೆ ಬನ್ನಿ. ನಿಮ್ಮಾತ್ಮದಲ್ಲಿ ಅಡಗಿರುವ  ಅಪರಿಮಿತವಾದ ಶಕ್ತಿಯನ್ನು ಅರ್ಥಮಾಡಿಕೊಳ್ಳಿ.   ಇದು ಹೊಸತಲ್ಲ.  ಇದು ಈಗಾಗಲೇ ಪ್ರತಿಯೊಬ್ಬರಲ್ಲೂ  ಇದೆ. ನಿಮ್ಮ ಸ್ವಸ್ವರೂಪವನ್ನು ಅರ್ಥ ಮಾಡಿಕೊಳ್ಳಿ. ಅದು ಕೇವಲ ಆತ್ಮವಸ್ತುವಲ್ಲದೆ  ಬೇರೇನೂ ಅಲ್ಲ. ಆದ್ದರಿಂದ ನೀವು ಆತ್ಮವಸ್ತುವಿನ ಬಗ್ಗೆ ಚಿಂತಿಸಿ.   ನಿಮ್ಮೊಳಗಿರುವ ಅಜ್ಞಾನವು ಕೇವಲ ಭ್ರಾಂತಿಯಿಂದ ಕೂಡಿದೆ. ಹೇಗೆಂದರೆ, ಹತ್ತೂ ಜನ ದಡ್ಡರ ಜ್ಞಾನದಂತೆ. ಈ ಅಜ್ಞಾನದ ಕಾರಣದಿಂದ ನಿಮಗೆ ದುಃಖ, ಅಸಂತೋಷ, ಚಿಂತೆ ಉಂಟಾಗುತ್ತಿದೆ. ಆದ್ದರಿಂದ, ಈಗಾಗಲೇ ನಿಮ್ಮೊಳಗಿರುವ  ಆತ್ಮವಸ್ತುವಿನ ಅಪರಿಮಿತವಾದ ಶಕ್ತಿಯನ್ನು ಅರ್ಥಮಾಡಿಕೊಂಡರೆ, ಆಗ  ನಿಮ್ಮೊಳಗೆ ಇರುವ ಅಜ್ಞಾನ ತನ್ನಷ್ಟಕ್ಕೆ ತಾನೇ ಮರೆಯಾಗಿ ಬಿಡುತ್ತದೆ. ನಿಮ್ಮಲ್ಲಿ ಆತ್ಮಾನಂದ ಮತ್ತು ಹೇಳಿಕೊಳ್ಳಲಾಗದೆ ಪರಮಸುಖದ ಅನುಭವ ನಿಮಗಾಗುತ್ತದೆ. ಇದೇ ನಿಮ್ಮ ನಿಜವಾದ ಸಹಜ  ಸ್ಥಿತಿ. ಈ ಸ್ಥಿತಿಯನ್ನು ಅರಿತಾಗ ಅನಂತವಾದ, ನಾಶವಿಲ್ಲದ, ಅಪರಿಮಿತ ಆನಂದದ  ಆತ್ಮಾನುಭವ ಆಗುತ್ತದೆ.  ನಿಮ್ಮ ಕಣ್ಣಿಗೆ ಕಾಣುವ ಬಾಹ್ಯವಸ್ತುಗಳಿಂದ ಸಿಗುವ ಆನಂದವೇ ಬೇರೆ, ಅಂತರಂಗದಲ್ಲಿ ಸಿಗುವ ಆನಂದಾನುಭಾವವೇ ಬೇರೆ. ಎಲ್ಲಿಯವರೆಗೆ ದೇಹಭಾವದ ಆನಂದ ನಿಮ್ಮದಾಗಿರುತ್ತದೋ ಅಲ್ಲಿಯವರೆಗೆ ಆತ್ಮಸುಖ ಕಾಣಲು ಸಾಧ್ಯವಿಲ್ಲ. ದೇಹಭಾವದಿಂದ ಆತ್ಮಭಾವಕ್ಕೆ ಹೋದಾಗ ಅಲ್ಲಿ ಸಿಗುವ ನಿರಂತರ ಆತ್ಮಾನಂದಕ್ಕೆ ಎಣೆಯೇ ಇಲ್ಲ."
              " ಒಂದು ಚಿಕ್ಕ ಮಗುವು ಹೇಳುತ್ತದೆ, 'ನಾನು ಇದ್ದೇನೆ, ಇದು ನನ್ನದು, ನಾನು ಮಾಡುತ್ತೇನೆ '. ಆದ್ದರಿಂದ ಪ್ರತಿಯೊಬ್ಬರಿಗೂ ಗೊತ್ತು ನಾನು ಎಂದರೆ ಏನು? ಎಂದು.  ಈ ನಾನು ಎಂಬುದು ಯಾವಾಗಲು ಇರುತ್ತದೆ.  ಈ ನಾನು ಎಂಬ ಭಾವ ದೇಹವಿರುವಷ್ಟು ಸಮಯವೂ ಇರುತ್ತದೆ. ಈ ದೇಹಕ್ಕೆ ರಾಮಣ್ಣ, ಭೀಮಣ್ಣ ಎಂಬೆಲ್ಲ ಹೆಸರುಗಳಿವೆ. ಈ ಹೆಸರಿನ ದೇಹವನ್ನು ನೋಡಲು  ಮೇಣದ ಬತ್ತಿ ಬೇಕೇ? ಅದೇ ರೀತಿ "ಆತ್ಮಸ್ವರೂಪ" ವನ್ನು ನೋಡಲು ಯಾವ ಸಹಾಯವೂ ಬೇಡ. ನಮ್ಮ ಸ್ವಸ್ವರೂಪವನ್ನು ಅಂದರೆ ಆತ್ಮಸ್ವರೂಪವನ್ನು ಅರಿಯಲು ಯಾವ ಗುರಿಯನ್ನು ಸಾಧಿಸಬೇಕಿಲ್ಲ. ನೀನೆ ಆತ್ಮ. ನೀನು ಯಾವಾಗಲು ಇದ್ದಿಯೇ. ದೇವರನ್ನು ನೋಡುವುದು ನಿನ್ನನ್ನು ನೀನು ನೋಡಿಕೊಳ್ಳುವುದು ಎರಡು ಒಂದೇ. ನೀನು ಏನು ನೋಡುತ್ತಿಯೋ ಅದು ನೀನೇ ಆಗಿದ್ದಿಯೇ.  ನೀವು  ರಮಣ ಆಶ್ರಮಕ್ಕೆ   ಬಂದು, ರಮಣ ಆಶ್ರಮಕ್ಕೆ ಯಾವದಾರಿಯಲ್ಲಿ ಬರಬೇಕೆಂದು ಕೇಳಿದ ಹಾಗೆ ಆಗುತ್ತದೆ. ಅದ್ದರಿಂದ ನೀವು  ಮಾಡಬೇಕಾಗಿರುವುದು ಏನೆಂದರೆ , ನೀವು  ದೇಹ ಎಂಬ  ಯೋಚನೆಯನ್ನು ಬಿಟ್ಟು ಬಿಡಿ  .    ಆತ್ಮದ ವಿಚಾರ ಬಿಟ್ಟು,  ಬಾಹ್ಯ ವಿಚಾರಗಳ ಯೋಚನೆ ಮಾಡದ್ದಿದ್ದರೆ ಸಾಕು. ಆಗ ಬ್ರಹ್ಮ ಜ್ಞಾನದ  ಅವಶ್ಯಕತೆ ಏನಿದೆ?'
                 
                 " ಓಂ ನಮೋ ಭಗವತೇ ರಮಣಾಯ".
                                                                                                                              
Courtesy: MOUNTAIN PATH