ಭಗ್ನ ಕನಸುಗಳ ಬೆಳಕು
ಸತ್ತ ಕನಸುಗಳಿಗೆ ವರುಷ ಸರಿದುಹೋಯ್ತು;
ಅರಳುತಿವೆ ದಿನಗಳು ಹೊಸ ರೂಪದಲ್ಲಿ.
"ಮೈಗಳ್ಳ ನೀನು!" ಎಂದು ನಗುತ್ತಿವೆ ಕನಸುಗಳು,
ನನ್ನ ನೆಮ್ಮದಿಗಿಂದು ಬೆಂಕಿ ಹಚ್ಚಿವೆ||
ರಕ್ಕಸರ ನಗೆಯಲ್ಲಿ ನನ್ನ ಪಥವಾಯಿತು;
ಎದೆಯು ಬಾರವಾಯಿತು ಉಸಿರಾಡಲು .
ಜ್ವರ-ನೋವೆನ್ನುವುದೆಂದು ನೆನಪಿಲ್ಲ;
ಈ ಬದುಕಿನಲ್ಲಿ ಉಳಿದದ್ದು ಉಸಿರಷ್ಟೆ||
ಅನುತ್ತರಿತ ಪ್ರಶ್ನೆಗಳ ಹೊರೆ ಹೆಚ್ಚಾಗುತ್ತಿದೆ
ಆಹಾರ, ನಿದ್ದೆ, ಆಸೆಗಳಿಲ್ಲದ ವಿರಕ್ತ ಜೀವನ.
ಭಾವನೆಗಳ ಬಿಸಿಲಲ್ಲಿ ಹೃದಯ ಬೇನೆ;
ಜೀವಂತ ಶವವಾಗಿ, ನಿರೀಕ್ಷೆಯಲ್ಲಿ ಕಾಯುತ್ತಿರುವೆ||
ನೋವು ಹೇಗೆ ಬಂದಿದೆ ಎನ್ನುವುದೇ ತಿಳಿಯದಿದ್ದರೂ,
ಅದನ್ನು ಭರಿಸುವ ಶಕ್ತಿ ಬೇಡಿಕೊಳ್ಳುವೆನು ದಿನವೂ,
ಪ್ರತಿ ಹೊಡೆತವೂ ಮೌನವಾಗಿ ಮುದುಡಿಕೊಳ್ಳುತ್ತಿದೆ.
ಇದಕ್ಕೂ ಕೊನೆ ಇದೆಯಾ ಎಂಬ ಪ್ರಶ್ನೆಯೊಂದೆ ಬಾಕಿಯಿದೆ||
ಬಾ ನೋವೇ, ಬಾ! ನಿನ್ನ ಕೈಹಿಡಿದು ನಗುತ್ತೇನೆ.
ಇನ್ನು ನಾಳೆಗಳು ನಿನ್ನದಲ್ಲ, ಅದು ನನ್ನದು!
ಭಗ್ನ ಕನಸುಗಳ ಚಿಂದಿ ಚೂರುಗಳಿಂದ
ಹೊಸ ಕನಸುಗಳ ಸಾಮ್ರಾಜ್ಯ ಕಟ್ಟುತ್ತೇನೆ||
ನೀನು ನಕ್ಕು ಹೋಗುವುದ ನೋಡಿ ನಾನೀಗ ನಗುತ್ತೇನೆ—
ಇನ್ನು ನಿನಗೆ ಪ್ರವೇಶ ಇಲ್ಲ ನನ್ನ ನಾಳೆಗೆ.
ಊರಿಲ್ಲದ ನೋವೆ, ನಾಳೆಯ ಭರವಸೆಯ ದಾರಿ
ಈಗ ನನಗೆ ತಿಳಿದಿದೆ… ನಾನು ಹಾರುತ್ತಿದ್ದೇನೆ||