ಭಜನ ದಸರಾ
ಈ ಸಲದ ದಸರಾದಲ್ಲಿ ‘ಭಜನ ದಸರಾ’ವನ್ನು ಸೇರಿಸಿರುವುದು ಕೆಲ ಪ್ರಗತಿಪರರು ಎಂದು ಹೇಳಿಕೊಳ್ಳುವವರ ಕಣ್ಣು ಕೆಂಪಗಾಗಿಸಿದೆ. ಹಿಂದೆ ಈ ಸಲದ ದಸರಾವನ್ನು ಉದ್ಘಾಟಿಸಲು ಪ್ರಖ್ಯಾತ ಸಾಹಿತಿಯೊಬ್ಬರನ್ನು ಆರಿಸಿದಾಗಲೂ ಇದೇ ರೀತಿ ವಿರೋಧ ವ್ಯಕ್ತವಾಗಿತ್ತು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ವಿಚಾರ ತಿಳಿಸುವ ಹಕ್ಕಿದೆ, ಎಲ್ಲರಿಗೂ ಅವರವರ ವಿಚಾರ ಉನ್ನತವೇ. ಸರಿಯೋ ತಪೆÇ್ಪೀ ಅಭಿವ್ಯಕ್ತಿಯ ಬಗ್ಗೆ ಆರೋಗ್ಯಕರ ಚರ್ಚೆ ಇರಲಿ, ವ್ಯಕ್ತಿಯನ್ನೇ ಗುರಿಯಾಗಿಸಿದರೆ ಹೇಗೆ? ಸನಾತನ ಸುಮೌಲ್ಯಗಳನ್ನು ಅವರು ದಾಖಲೆ ಸಮೇತ ಸಾತ್ವಿಕವಾಗಿ ಬರಹದಲ್ಲಿ ಅಭಿವ್ಯಕ್ತಿಗೊಳಿಸಿದರೆ ಅದಕ್ಕೆ ಅದೇ ರೀತಿಯಲ್ಲಿ ಉತ್ತರ ಕೊಡಲಿ, ಯಾಕೆ ಈ ಕೊಡಲಿಯಂತಹ ಹೇಳಿಕೆಗಳು.
ಭಜನೆ ತಪ್ಪಲ್ಲ, ಅದು ವ್ಯಕ್ತಿಯೋರ್ವನ ಭಕ್ತಿಯ ಅಭಿವ್ಯಕ್ತಿ. ಇದೇ ಸಂಕೀರ್ತನೆಯಿಂದ ಕನಕರು ಕೃಷ್ಣನನ್ನು, ತಮ್ಮತ್ತ ಸೆಳೆದದ್ದು, ಸಂಕೀರ್ತನೆ ಇಂದಲೇ ವ್ಯಾಧ ವಾಲ್ಮೀಕಿಯಾದದ್ದು, ಮೌಲಿಕ ಕೃತಿರಚಿಸಿದ್ದು. ಶರಣರು ಇಷ್ಟಲಿಂಗದ ಮೂಲಕ ಕ್ರಾಂತಿ ಮಾಡಿದ್ದು, ಅದು ಭಕ್ತಿಮಾರ್ಗವೇ. ಸಾಸ್ಕೃತಿಕ ದಸರಾವನ್ನು ಧಾರ್ಮಿಕವಾಗಿ ಮಾಡಲಾಗಿದೆ ಎಂದುಸುರಿದರೆ, ಧರ್ಮವಿಲ್ಲದ ಸಂಸ್ಕೃತಿ ಯಾವುದಯ್ಯಾ. ಭಜನಾ ಮಂಡಳಿಯವರನ್ನು ಕರೆಸಿರಿವುದರಲ್ಲಿ ಅವ್ಯಹಾರವಾಗಿ, ಹಣದ ಗೋಲ್ ಮಾಲ್ ಆಗಿದೆ, ಸ್ವಜನ ಪಕ್ಷಪಾತ ಅಥವಾ ಭ್ರಷ್ಟಾಚಾರವಾಗಿದೆ ಎಂದಾದರೆ ದಾಖಲೆ ಸಮೇತ ಬಹಿರಂಗಪಡಿಸಲಿ. ಅದನ್ನು ಕೇಸರೀಕರಣ ಎನ್ನುವುದು ಎಷ್ಟು ಸರಿ. ಈ ಲೇಖನದ ಹಿಂದೆ ಯಾರನ್ನು ವೃಥಾ ಸಮರ್ಥಿಸಿಕೊಳ್ಳುವ ಉದ್ದೇಶವಿಲ್ಲಾ. ವಿರೋಧ ಪಕ್ಷದವರ ತರಹ, ತಮ್ಮಂತಹ ತಿಳಿದವರೂ ಗೊಂದಲ ಸೃಷ್ಟಿಸುವುದು ಬೇಡ ಎಂಬ ಕಳಕಳಿಯ ಮನವಿ ಅಷ್ಟೆ.
ಭಾರತೀಯ ಸಂಸ್ಕೃತಿಯ ಪ್ರತಿ ಆಚರಣೆಗಳಲ್ಲಿಯೂ ಧಾರ್ಮಿಕ ಲೇಪ ಇದ್ದೇ ಇದೆ. ಯಾವ ಜಾತಿ, ಉಪಜಾತಿ ಬುಡಕಟ್ಟುಗಳ ಭೇದವಿಲ್ಲದೇ ಎಲ್ಲರೂ ದಸರಾ ಅಥವಾ ಆಡುಭಾಷೆಯಲ್ಲಿ ‘ಮಾರ್ನೋಮಿ’(ಮಹಾ ನವಮಿ) ತಮ್ಮದೇ ರೀತಿಯಲ್ಲಿ ಆಚರಿಸುತ್ತಾರೆ. ನೇಪಾಳದಲ್ಲಂತೂ ಇದು ರಾಷ್ಟ್ರೀಯ ಹಬ್ಬ. ದಸರಾ ಕೇಸರಿಕರಣ ಆಗಿದೆ, ಹಸರೀಕರಣ ಮತ್ತು ಶ್ವೇತಿಕರಣ ಮಾಡಿರಿ ಎಂದು ಹೇಳಿರುವುದರಲ್ಲಿ ಸುಮ್ಮನೆ ವಿವಾದ ಸೃಷ್ಟಿಸುವ, ತನ್ಮೂಲಕ ತಮ್ಮನ್ನು ಪ್ರಚಲಿತರನ್ನಾಗಿಸಿಕೊಳ್ಳುವ ಹುನ್ನಾರವಲ್ಲದೇ ಇನ್ನೇನೂ ಇಲ್ಲ. `ಶುಭ ನುಡಿಯೇ ಶಕುನದ ಹಕ್ಕಿ ಎಂದರೆ, ಹೇಳಿದ್ದೆಲ್ಲಾ ಅಪಶಕುನವೇ’ ಎಂಬಂತಾಗಿದೆ. ಹಸರೀಕರಣ ಮತ್ತು ಶ್ವೇತಿಕರಣ ಮಾಡಿದಾಗ ಅದು ಧಾರ್ಮಿಕವಾಗದೇ ಸಾಂಸ್ಕೃತಿಕವಾಗಿ ಉಳಿಯುತ್ತದೆಯೇ?. ನಮ್ಮೂರಲ್ಲಿ ಎಲ್ಲರ ಮನೆಗೂ ಹೋಗಿ ಬನ್ನಿ(ಶಮಿ) ಹಂಚುತ್ತೇವೆ ಅದರಲ್ಲಿ ಕೇಸರಿ ಬಿಳಿ ಹಸಿರು ಬಣ್ಣಗಳ ವ್ಯತ್ಯಾಸದ ಗೊಡವೆ ಇಲ್ಲ, ಮೈಸೂರು ದಸರಾ ನಾಡಿನ ಹೆಮ್ಮೆ. ಅದು ಕೇಸರಿಕರಣ ಎನಿಸಿದ್ದರೆ ಅದು ಹೇಳುವವರ ಹಳದಿ ಕಣ್ಣುಗಳಿಗೆ ಮಾತ್ರ.
ದಸರಾ ರಾವಣ ಎಂಬ ಅಸುರಿಶಕ್ತಿಯ ವಧೆಯ ದಿನ, ಪಾಂಡವರು ತಮ್ಮ ಅಜ್ಞಾತವಾಸ ಮುಗಿಸಿ, ವಿರಾಟನ ಗೋವುಗಳನ್ನು ಅಪಹರಿಸಿದ ಕೌರವರ ವಿರುದ್ಧ ಯುದ್ಧಕ್ಕೆ ಸನ್ನದ್ಧವಾದ ದಿನ. ನವದುರ್ಗೆಯರ, ಶಕ್ತಿದೇವತೆಗಳ ಆರಾಧನೆಯ ಪರ್ವ. ಹಿಂದು ಧಾರ್ಮಿಕ ಸಂಪ್ರದಾಯದ ಹಬ್ಬವೇ ಸರಿ. ಹಬ್ಬದ ಮೂಲಕ ಹಿಗ್ಗನ್ನು ಹಂಚಿಕೊಳ್ಳುವ, ಪರಸ್ಪರ ಶಮೀ ಪತ್ರ ಹಂಚಿ ಒಬ್ಬರಿಗೊಬ್ಬರು ಶುಭ ಆಶಿಸುವ ಆಚರಣೆ. `ಬನ್ನಿ ತೊಗೆಂಡು ಎಲ್ಲಾರು ಭಂಗಾರದ ಹಾಂಗ್ ಇರೂನು’. ಇಂತಹ ಅಗ್ಗದ ಪ್ರಚಾರಕ್ಕೆ ಕಿವಿಗುಡುವುದು ಬೇಡ.