ಭತ್ತದ ಬೆಂಕಿ ರೋಗ

ಭತ್ತದ ಬೆಂಕಿ ರೋಗ

ಪ್ರತೀ ವರ್ಷದ ಮಳೆಗೆ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಗರಿ ತಿನ್ನುವ ಹುಳು ಹಾಗೂ ಎಲೆ ಕೆಂಪಗಾಗುವ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ಮಳೆ ಅಧಿಕವಾದದ್ದೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಸಂಪೂರ್ಣವಾಗಿ ಇದಕ್ಕೆ ಅಧಿಕ ಮಳೆಯೇ ಕಾರಣ ಎನ್ನುವಂತಿಲ್ಲ. ಬೀಜ ಜನ್ಯವಾಗಿ, ಪೋಷಕಾಂಶದ ವ್ಯತ್ಯಾಸದಿಂದಾಗಿಯೂ ಈ ರೋಗ ಬರಬಹುದಾದ ಸಾಧ್ಯತೆ ಇಲ್ಲದ್ದಿಲ್ಲ.

ಪ್ರಾರಂಭದಲ್ಲಿ ಭತ್ತದ ಪೈರಿನ ಎಲೆಗಳ ತುದಿ ಭಾಗ ಹಳದಿಯಾಗುತ್ತಾ ಬಂದು ಅದು ಬುಡ ತನಕ ವ್ಯಾಪಿಸುತ್ತದೆ. ಒಂದು ಎಲೆಯ ನಂತರ ಮತ್ತೊಂದು ಎಲೆಗೆ ಪ್ರಸಾರವಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಎಲೆಯಲ್ಲಿ ಪತ್ರ ಹರಿತ್ತಿನ ಅಂಶ ಕಡಿಮೆಯಾಗಿ ತಿಳಿ ಹಸುರು ಬಣ್ಣ ಬರುತ್ತದೆ. ದಿನ ಕಳೆದಂತೆ ಅದು ಕೇಸರಿ ಬಣ್ಣವನ್ನು ಹೊಂದುತ್ತಾ ಸಸ್ಯದ ಬೇರೆ ಬೇರೆ ಎಲೆಗೆ ವ್ಯಾಪಿಸಿ ಹೊಲದ ಪೈರಿನಲ್ಲಿ ಅಲ್ಲಲ್ಲಿ ಒಣಗಿದಂತೆ ಕಾಣಿಸುತ್ತದೆ. ಎಲೆಗಳು ಬುಡ ತನಕ ಹೀಗಾಗಿ ಸಾಯುತ್ತವೆ. ನೋಡುವಾಗ ಅದು ಪೋಷಕಾಂಶದ ಕೊರತೆಯ ತರಹವೇ ಕಾಣಿಸುತ್ತದೆ. ನೆರಳಿನ ಜಾಗದಲ್ಲಿ ಈ ಸಮಸ್ಯೆ ಕಡಿಮೆಯಾಗಿಯೂ. ಬಿಸಿಲು ಹೆಚ್ಚು ಇರುವಲ್ಲಿ ಜಾಸ್ತಿಯಾಗಿ ಕಂಡು ಬರುತ್ತದೆ. ಕರಾವಳಿಯ ಬಹುತೇಕ ಭತ್ತದ ಹೊಲದಲ್ಲಿ ಈ ಸಮಸ್ಯೆ ಕಂಡು ಬರುತ್ತಿದ್ದು ಎಲೆಗಳು ಒಣಗಿದಂತೆ ಕಾಣುವ ಕಾರಣದಿಂದ ಇದನ್ನು ಬೆಂಕಿ ರೋಗ ಎನ್ನುತ್ತಾರೆ.

ವಾಸ್ತವಿಕವಾಗಿ ಇದು ಬೆಂಕಿ ರೋಗವೇ? ಇತರ ಯಾವುದಾದರೂ ಕೀಟ ಸಮಸ್ಯೆಯೇ, ಬ್ಯಾಕ್ಟಿರಿಯಾ ಸಮಸ್ಯೆಯೇ ಎಂಬ ಬಗ್ಗೆ ಇನ್ನೂ ಅಧ್ಯಯನಗಳಾಗಿಲ್ಲ, ಪ್ರಖರ ಬಿಸಿಲಿನ ವಾತಾವರಣ ಇರುವ ಅವಧಿಯಲ್ಲಿ ಇದು ಇನ್ನಷ್ಟು ಹೆಚ್ಚಳವಾಗುತ್ತಿದೆ. ಭತ್ತದ ಎಲೆಗೆ ಈ ರೀತಿಯ ಸಮಸ್ಯೆ ಉಂಟಾಗಲು. ಪೋಷಕಾಂಶ ತೊಳೆದು ಹೋಗಿ ನಷ್ಟವಾಗಿರುವುದು. ಕೆಲವೊಮ್ಮೆ ಕೀಟ ಸಮಸ್ಯೆಯೂ ಕಾರಣವಾಗುತ್ತದೆ. ಕೆಲವೊಮ್ಮೆ ಬ್ಯಾಕ್ಟೀರಿಯಾ ಸಹ ಕಾರಣವಾಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ವೈರಸ್ ಸಹ ಇದಕ್ಕೆ ಕಾರಣವಾಗುತ್ತದೆ (ತಮಿಳುನಾಡು ಕೃಷಿ. ವಿ.ವಿ. ಅಧ್ಯಯನದ ಪ್ರಕಾರ)

ವೈರಸ್ ಸಮಸ್ಯೆ (Rice tungro disease, Rice tungro virus (RTSV, RTBV): (ಚಿತ್ರ ೧) ಅದಲ್ಲಿ ಎಲೆಯ ತುದಿ ಭಾಗ ಬಿಳುಚಿಕೊಂಡು ಕ್ರಮೇಣ ಬುಡದ ತನಕ ವ್ಯಾಪಿಸುತ್ತದೆ. ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ತೆಂಡೆ ಒಡೆಯುವಿಕೆ ಕಡಿಮೆಯಾಗುತ್ತದೆ. ಗಣನೀಯ ಪ್ರಮಾಣದಲ್ಲಿ ಇಳುವರಿ ನಷ್ಟವಾಗುತ್ತದೆ. ಬರುವ ತೆನೆಗಳು ಬರುವುದು ತಡವಾಗುತ್ತದೆ. ತೆನೆ ಕೃಶವಾಗಿರುತ್ತದೆ. ಬಹಳಷ್ಟು ಗಿಡಗಳು ತೆನೆ ಬಿಡದೆ ಬಂಜೆಯಾಗುತ್ತವೆ.

ನಿಯಂತ್ರಣ: ಪ್ರಾರಂಭದ ಹಂತದಲ್ಲಿ ಇದನ್ನು ನಿಯಂತ್ರಣಕ್ಕೆ ತರಬೇಕು. ಬೆಳಗ್ಗಿನ ಹೊತ್ತಿನಲ್ಲಿ ಎಲೆಯ ಮೇಲೆ ಹೋಪರ್ ಗಳು (ಕಂದು ಬಣ್ಣದ ಪಟ್ಟೆ ಹೊಂದಿದ ಪತಂಗ) ಇರುವುದನ್ನು ಕಾಣಬಹುದು. ಇವು ಬೆಳಕಿಗೆ ಆಕರ್ಷಿತವಾಗುತ್ತವೆ. ಬಲ್ಬು ಉರಿಸಿಟ್ಟ ಕಡೆ ರಾತ್ರಿ ಹೊತ್ತು ಬರುತ್ತವೆ.

ಇದಕ್ಕೆ ೨೦ ದಿನಗಳ ಅಂತರದಲ್ಲಿ ಎರಡು ಬಾರಿ ಇಮಿಡಾಕ್ಲೋಪ್ರಿಡ್ ಕೀಟನಾಶಕವನ್ನು (೧ ಲೀ. ನೀರಿಗೆ ೬ ಮಿಲಿಯಾ ಪ್ರಮಾಣದಲ್ಲಿ) ಸಿಂಪಡಿಸಬೇಕು. ಬರೇ ಹೊಲಕ್ಕೆ ಮಾತ್ರವಲ್ಲದೆ ಬದುಗಳ ಕಳೆಗಳಿಗೂ ಸಿಂಪರಣೆ ಮಾಡಬೇಕು. ಈ ಪತಂಗಗಳು ರೋಗವನ್ನು ಪ್ರಸರಿಸುವವುಗಳು. ಇದರ ನಿಯಂತ್ರಣದಿಂದ ರೋಗ ಪ್ರಸಾರವನ್ನು ತಡೆಯಬಹುದು.

ಬ್ಯಾಕ್ಟೀರಿಯಾ ಸೊರಗು ರೋಗ (Bacterial Leaf Blight, Xanthomonas oryzae pv, oryzae)(ಚಿತ್ರ ೨) ಆಗಿದ್ದಲ್ಲಿ ಎಲೆಯ ಮಧ್ಯದ ದಂಟಿನ ಭಾಗ ಹಸುರಾಗಿರುತ್ತದೆ. ಅಲಗುಗಳು ಬಣ್ಣ ಕಳೆದುಕೊಂಡಿರುತ್ತವೆ. ಇಂತಹ ಎಲೆಯನ್ನು ತುಂಡು ಮಾಡಿ ಗ್ಲಾಸ್ ನೀರಿನಲ್ಲಿ ತುಂಡು ಮಾಡಿದ ಭಾಗವನ್ನು ಇಳಿ ಬಿಟ್ಟಾಗ ಅದರಲ್ಲಿ ನೊರೆಯೋಪಾದಿಯಲ್ಲಿ ಗುಳ್ಳೆಗಳು ಬರುತ್ತವೆ.

ಇದರ ನಿಯಂತ್ರಣಕ್ಕೆ ೧೫ ದಿನದ ಆವರ್ತಿಯಲ್ಲಿ ಸಗಣಿ ನೀರನ್ನು (ಗೋಬರ್ ಗ್ಯಾಸ್ ಸ್ಲರಿ)ಯನ್ನು ಬುಡಕ್ಕೆ ಹಾಯಿಸಬೇಕು. ಒಂದು ವೇಳೆ ಇದು ಶಿಲೀಂದ್ರ ರೋಗ (Sheath Blight: Rhizoctonia solani) ಅಗಿದ್ದಲ್ಲಿ ಸಹ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. (ಚಿತ್ರ ೩) ಎಲೆಯಲ್ಲಿ ಅಲ್ಲಲ್ಲಿ ಚುಕ್ಕೆಗಳು ಇರುತ್ತವೆ. ತೆಂಡೆ ಒಡೆಯುವಿಕೆ ಕಡಿಮೆಯಾಗುತ್ತದೆ. ಇದರಲ್ಲೂ ಎಲೆಯ ತುದಿ ಭಾಗದಿಂದ ಒಣಗಲು ಪ್ರಾರಂಭವಾಗುತ್ತದೆ. ಅದು ಬುಡ ತನಕ ಮುಂದುವರಿಯುತ್ತದೆ. ತೆನೆ ಬರುವಿಕೆ ಕಡಿಮೆಯಾಗುತ್ತದೆ. ತಡವಾಗುತ್ತದೆ. ತೆನೆಯಲ್ಲಿ ಕಾಳುಗಳೂ ಕಡಿಮೆಯಾಗುತ್ತದೆ. ಹೆಚ್ಚಿನ ತೆಂಡೆಗಳು ಒಳಗೆ ತೆನೆ ಇಲ್ಲದೆ ಬಂಜೆಯಾಗಿರುತ್ತವೆ.

ನಿಯಂತ್ರಣ: ಹೊಲದ ಸಿದ್ಧತೆ ಮಾಡುವಾಗ ಬೇವಿನ ಹಿಂಡಿಯನ್ನು ಮಣ್ಣಿಗೆ ಮಿಶ್ರಣ ಮಾಡಬೇಕು. ಎಲೆ ತುದಿಯ ಬಣ್ಣ ಬದಲಾವಣೆ ಪ್ರಾರಂಭವಾಗುವ ಸಮಯದಲ್ಲಿ ಕಾರ್ಬನ್ ಡೈಜಿಮ್ (ಬಾವಿಸ್ಟಿನ್ .5 ಗ್ರಾಂ/ಲೀ) ಅಥವಾ ಹೆಕ್ಸಾ ಕೊನೆಜಾಲ್ ಅನ್ನು ೧೫ ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಮಾಡಬೇಕು. ಬೀಜೋಪಚಾರ ಮಾಡಿಯೇ ಬೀಜ ಬಿತ್ತನೆ ಮಾಡಬೇಕು. ಉತ್ತಮ ಗುಣಮಟ್ಟದ ಬೀಜಗಳನ್ನೇ ಖರೀದಿ ಮಾಡಬೇಕು. ಹೆಚ್ಚಾಗಿ ಈ ರೋಗಗಳು ಬೀಜದ ಮೂಲಕ ಪ್ರಸಾರವಾಗುವ ಕಾರಣ ಪ್ರಮಾಣೀಕೃತ ಬೀಜ ಒದಗಿಸುವವರ ಕಡೆಯಿಂದಲೇ ಬೀಜವನ್ನು ಆಯ್ಕೆ ಮಾಡಬೇಕು.

ಮಾಹಿತಿ: ರಾಧಾಕೃಷ್ಣ ಹೊಳ್ಳ