ಭತ್ತ ಬೆಳೆಯುವ ರೈತ ಆತ್ಮಹತ್ಯೆಯತ್ತ, ಅಕ್ಕಿ ಮಾರುವ ವ್ಯಾಪಾರಿ ಅರಮನೆಯತ್ತಾ...
ಇತರ ಕೆಟ್ಟ ರಾಜಕೀಯ ವಿಷಯ ಮತ್ತು ರೈತರ ದಿನದ ಆಯ್ಕೆಯಲ್ಲಿ ಬಹುತೇಕ ಮಾಧ್ಯಮಗಳು ರಾಜಕೀಯ, ಸಿನಿಮಾ ಸುದ್ದಿಗಳಿಗೆ ಮಹತ್ವ ನೀಡಿದರು. ಆಹಾರ ಮತ್ತು ರಾಜಕೀಯದ ನಡುವೆ ರಾಜಕೀಯವೇ ಪ್ರಧಾನವಾಯಿತು. ಬೆವರಿನ ಮುಂದೆ ಪರ್ಫ್ಯೂಮ್ ಶ್ರೇಷ್ಠವಾಯಿತು. ನಾವೆಲ್ಲರೂ ನೆನಪಿಡಬೇಕಾದ - ಪ್ರೀತಿಯಿಂದ - ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ. ರಾಷ್ಟ್ರೀಯ ರೈತ ದಿನ (ಕಿಸಾನ್ ದಿವಸ್) ಡಿಸೆಂಬರ್ 23, ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಮತ್ತು ರೈತ ಹುತಾತ್ಮ ದಿನ ಜೂನ್ 21.. (ಕರ್ನಾಟಕದಲ್ಲಿ ಮಾತ್ರ) ನರಗುಂದ - ನವಲಗುಂದ ಹೋರಾಟದಲ್ಲಿ ಹುತಾತ್ಮರಾದ ರೈತರ ನೆನಪಿಗಾಗಿ…
ಅನ್ನದಾತ ಅನಾಥನಾಗುವ ಮುನ್ನ… ಅನ್ನಕ್ಕಾಗಿ ನಾವು ಪರದಾಡುವ ಮುನ್ನ… ರೈತರಿಗೆ ಕೊಡಲು ನಮ್ಮ ಬಳಿ ಹಣವಿಲ್ಲ, ರೈತರ ಸಂಕಷ್ಟ ಪರಿಹರಿಸಲು ನಮ್ಮ ಬಳಿ ಅಧಿಕಾರವೂ ಇಲ್ಲ, ಸಣ್ಣ ಪುಟ್ಟ ಹೋರಾಟಗಳಿಗೆ ಕೈ ಜೋಡಿಸಿದರು ಉತ್ತಮ ಫಲಿತಾಂಶ ಕಾಣುತ್ತಿಲ್ಲ. ಏಕೆಂದರೆ ಪ್ರಾಮುಖ್ಯತೆ ಕೊಡಬೇಕಾದ ವಿಷಯಗಳನ್ನು ಮರೆಸಿ ಭಾವನಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದು ಇಡೀ ರೈತ ಸಮೂಹವನ್ನು ವಂಚಿಸಲಾಗುತ್ತಿದೆ. ಮನರಂಜನೆಗೆ ಸಾಕಷ್ಟು ಪ್ರೇಕ್ಷಕರಿದ್ದಾರೆ, ರಾಜಕಾರಣಕ್ಕಾಗಿ ಸಾಕಷ್ಟು ಹಿಂಬಾಲಕರಿದ್ದಾರೆ, ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಭಕ್ತರಿದ್ದಾರೆ, ಆದರೆ ರೈತರ ಕಷ್ಟಗಳಿಗೆ ಧ್ವನಿಯಾಗಲು ಮಾತ್ರ ಕೆಲವೇ ಜನರಿದ್ದಾರೆ. ಅದಕ್ಕೆ ಕಾರಣ ಜನರಿಗೆ ತಿನ್ನುವ ಅನ್ನ ಬೆಳೆಯುವ ಕೃಷಿ ಎಂಬುದು ಏನು ಎಂದೇ ಸರಿಯಾದ ತಿಳಿವಳಿಕೆ ಇಲ್ಲ.
ವಿಶ್ವದಲ್ಲಿ ಅತಿಹೆಚ್ಚು ರೈತರನ್ನು ಹೊಂದಿರುವ ದೇಶ ಭಾರತ. ಆದರೆ, ಎಲ್ಲಿಯೂ ಹೇಳಿಕೊಳ್ಳುವಷ್ಟು ಸಾರ್ವಜನಿಕ ಆಚರಣೆ ಇಲ್ಲ, ಸಂಭ್ರಮ ಇಲ್ಲ, ಚರ್ಚೆಗಳಿಲ್ಲ, ಕೃತಜ್ಞತೆಗಳಿಲ್ಲ. ಆ ಉಳುವ ಯೋಗಿ ಮಾತ್ರ ಹೇಳುವುದೇನು ? ಬರೆಯಲು ಒಳ್ಳೆಯ ಪದಗಳು, ಭಾವನೆಗಳು, ಮನಮಿಡಿಯುವ ಘಟನೆಗಳು, ಆಕ್ರೋಶದ ನಿಂದನೆಗಳು, ಪರಿಹಾರದ ಸೂತ್ರಗಳು ಎಲ್ಲವೂ ನೆನಪಾಗುತ್ತದೆ. ಪ್ರಯೋಜನವೇನು ?
ಅದೇ ಬಡಕಲು ಶರೀರ, ಅದೇ ಮಾಸಿದ ಬಟ್ಟೆ, ಅದೇ ಭುಜದ ಮೇಲಿನ ಟವಲ್, ಅದೇ ಕುಡುಗೋಲು ಕೈಯಲ್ಲಿ, ಅದೇ ನಿಟ್ಟುಸಿರು, ಅದೇ ಬೇಡಿಕೆ, ಅದೇ ಕೀಟನಾಶಕ ಕುಡಿದು ಆತ್ಮಹತ್ಯೆ, ಅದೇ ಸುದ್ದಿ, ಅದೇ ಪರಿಹಾರ, ಅದೇ ಬೃಹತ್ ಪ್ರತಿಭಟನೆಗಳು. ದುಡಿದು ದುಡಿದು ಸವೆಯುತ್ತಿರುವ ರೈತರು.. ತಿಂದು ತಿಂದು ಕೊಬ್ಬುತ್ತಿರುವ ಕೆಲವರು. ದುಡಿಯದೇ ತಿನ್ನುತ್ತಾ ಅನ್ನವೇ ವಿಷವಾಗಿ ಸಾಯುತ್ತಿರುವ ಹಲವರು. ಕೃಷಿ ಮತ್ತು ರೈತ ನಮ್ಮ ಕಣ್ಣ ಮುಂದೆಯೇ ಬಿಕ್ಕಳಿಸುವುದನ್ನು ನೋಡುವ ದೌರ್ಭಾಗ್ಯ ನಮ್ಮದು.
ಏಳಿ ಎದ್ದೇಳಿ ಎಚ್ಚರಗೊಳ್ಳಿ, ಅರ್ಥಮಾಡಿಕೊಳ್ಳಿ ನೀವು ದಡ್ಡರೆಂದು, ಆಗ ನಿಮಗೆ ಅರಿವಾಗುತ್ತದೆ ನೀವು ಯಾರೆಂದು, ಆಗ ನಿಮ್ಮ ಶೋಷಣೆಯ ಕಾರಣಗಳು ಅರ್ಥವಾಗುತ್ತದೆ, ಬೆನ್ನು ಮೂಳೆಗೂ ಎಲುಬಿಲ್ಲದ ನಾಲಿಗೆಗೂ ಇರುವ ವ್ಯತ್ಯಾಸ, ಆಗ ತೋರಿಸಿ ಈ ದುರಹಂಕಾರಿಗಳಿಗೆ ಅನ್ನದ ಮಹತ್ವ, ಆಗ ನೋಡಿ ನಿಮ್ಮ ಕಾಲಿಗೆ ಬೀಳುತ್ತಾರೆ, ನೀವೇ ಅನ್ನದಾತರೆಂದು, ಆಮೇಲೆ ಪ್ರತಿದಿನವೂ ನಿಮ್ಮನ್ನೇ ನೆನಪಿಸಿಕೊಳ್ಳುತ್ತಾರೆ, ಅಲ್ಲಿಯವರೆಗೂ ನಿಮ್ಮ ದಿನ ನಿಮ್ಮ ತ್ಯಾಗ ಯಾರಿಗೂ ನೆನಪಾಗುವುದಿಲ್ಲ. ಇದನ್ನು ಸಾಧ್ಯವಾಗಿಸಬೇಕಾಗಿರುವುದು ಶೇಕಡ 70% ರಷ್ಟು ಇರುವ ರೈತರ ವಿದ್ಯಾವಂತ ಮಕ್ಕಳು. ಅವರುಗಳು ಜಾಗೃತರಾದರೆ ಯಾರೂ ತಡೆಯಲು ಸಾಧ್ಯವಿಲ್ಲ.
ರೈತರಾಗುವುದು ವರವೋ ? ಶಾಪವೋ ? ಅನ್ನದಾತ - ದೇಶದ ಬೆನ್ನೆಲುಬು - ರೈತನೇ ದೇವರು ಈ ಭಾವನಾತ್ಮಕ ನಂಬಿಕೆಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ವಾಸ್ತವ ಪರಿಶೀಲಿಸೋಣ. ಈ ಕ್ಷಣದಲ್ಲಿ "ತಿನ್ನುವವರಿಗೆ ವರ, ಬೆಳೆಯುವವರಿಗೆ ಶಾಪ" ಮಂಗನಿಂದ ಮಾನವನಾದ ಕಾಲ ಮುಗಿದು ಕ್ರಮೇಣ ಮಾನವ ಮಂಗನಾಗುತ್ತಿರುವ ಈ ಸನ್ನಿವೇಶದಲ್ಲಿ ರೈತ ಮಾತ್ರ ಆಗಲೂ ಮಂಗನೇ ಈಗಲೂ ಮಂಗನೇ ಎಂದು ವಿಷಾದದಿಂದ, ದುಃಖದಿಂದ ಮತ್ತು ಆಕ್ರೋಶದಿಂದ ಹೇಳಬೇಕೆನಿಸುತ್ತದೆ. ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ಮುನ್ನಡೆಯುತ್ತಿರುವಾಗ ಶಿಕ್ಷಣ ಸಾಹಿತ್ಯ ಸಂಗೀತ ವಿಜ್ಞಾನ ಆರೋಗ್ಯ ಆಡಳಿತ ಸಾರಿಗೆ ಸಂಪರ್ಕ ದಿನದಿನಕ್ಕೂ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿರುವಾಗ ಭಾರತದ ಕೃಷಿ ಮಾತ್ರ ಎಲ್ಲೋ ಕೆಲವು ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ ಮೂಲ ನಿಯಮಗಳು ಮಾತ್ರ ಇನ್ನೂ ಗತಕಾಲದ ಅಂಶಗಳನ್ನೇ ಅಳವಡಿಸಿಕೊಂಡಿದೆ.
ಭೂಮಿಯ ಉಪಯೋಗ, ಬಿತ್ತನೆ, ನೀರಾವರಿ, ಸಸ್ಯಗಳ ಬೆಳವಣಿಗೆ, ಕಟಾವು, ಸಂಗ್ರಹಣೆ, ಮಾರುಕಟ್ಟೆ, ಬೆಲೆ ನಿಗದಿ, ಲಾಭ ಹಣದ ಉಪಯೋಗ, ನಷ್ಟದ ಪರಿಸ್ಥಿತಿಯ ನಿರ್ವಹಣೆ, ಕೌಟುಂಬಿಕ ನಿರ್ವಹಣೆ, ನಂಬಿಕೆಗಳು, ಅರಿವು ಮತ್ತು ಅವರ ಒಟ್ಟು ವ್ಯಕ್ತಿತ್ವ ಸಮಾಜದ ದೃಷ್ಟಿಯಲ್ಲಿ ಇನ್ನೂ ಹಾಸ್ಯಾಸ್ಪದವಾಗಿಯೇ ಇದೆ. ಅವರನ್ನು ಶೋಷಿಸಲು ಯಾವ ತಂತ್ರಗಳೂ ಬೇಡ. ಆತನ ವ್ಯಕ್ತಿತ್ವವೇ ಶೋಷಣೆಯನ್ನು ಸ್ವತಃ ತಾನೇ ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿದೆ. ವ್ಯಕ್ತಿ ಮೂಲಭೂತವಾಗಿ ಪ್ರಜ್ಞಾವಂತನಾಗಿದ್ದರೆ ಆತ ಮಾಡುವ ಕೆಲಸಗಳು ಸಹ ಘನತೆಯಿಂದ ಕೂಡಿರುತ್ತದೆ. ವೈದ್ಯನೇ ಇರಬಹುದು, ಇಂಜಿನಿಯರೇ ಇರಬಹುದು, ಚಾಲಕ ಶಿಕ್ಷಕ ವಕೀಲ ರಾಜಕಾರಣಿ ವ್ಯಾಪಾರೋದ್ಯಮಿ ಯಾರೇ ಆಗಲಿ ಧೃಡ ಮನಸ್ಸಿನ ಅರಿವಿರುವ ವ್ಯಕ್ತಿತ್ವ ಅವನದಾಗಿದ್ದರೆ ಆತ ಯಾವುದೇ ವ್ಯವಸ್ಥೆಯಲ್ಲಿ ಕನಿಷ್ಠ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು.
ಆದರೆ ಮೂಲ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಆತ ಸೋಲುವ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯೇ ಹೆಚ್ಚು. ವಾಸ್ತವವಾಗಿ ಭಾರತೀಯ ಬಹುತೇಕ ರೈತರು ಸಾಮಾನ್ಯ ಜ್ಞಾನದಿಂದ ವಂಚಿತರಾಗಿದ್ದಾರೆ. ಜಾಗತೀಕರಣದ ಸ್ಪರ್ಧಾತ್ಮಕ ಬದಲಾವಣೆಗಳನ್ನು ಗಮನಿಸಲೇ ಸಾಧ್ಯವಾಗದಂತ ಕತ್ತಲೆಯಲ್ಲಿ ಮುಳುಗುತ್ತಿದ್ದಾರೆ. ರಾಜಕಾರಣಿಗಳ, ಮಧ್ಯವರ್ತಿಗಳ, ವ್ಯಾಪಾರಿ ವಾಣಿಜ್ಯೋದ್ಯಮಿಗಳ ಬಲೆಯೊಳಗೆ ಬಹು ಸುಲಭವಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ಬಲಿಷ್ಠ ರಕ್ಷಣಾತ್ಮಕ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರದ ವಿರುದ್ಧ ಇನ್ನೂ ಹಳೆಯ ಅಸ್ತ್ರಗಳಾದ ಪ್ರತಿಭಟನೆ, ಮುತ್ತಿಗೆ, ಉಪವಾಸ, ಸತ್ಯಾಗ್ರಹ ಎಂಬ ಮೊಂಡಾದ ಕತ್ತಿಯನ್ನು ಉಪಯೋಗಿಸುತ್ತಿದ್ದಾರೆ.
ಅತಿಯಾದ ಜನಸಂಖ್ಯೆಯ ಪರಿಣಾಮ ಮತ್ತು ಬಡತನ ಅಜ್ಞಾನದ ಕಾರಣದಿಂದ ಅನಿವಾರ್ಯವಾಗಿ ಒಡೆದು ಆಳುವ ರಾಜಕೀಯ ಪಕ್ಷಗಳ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಅತಿಯಾದ ಹಣದ ಹರಿವಿನಿಂದ ಹಾಗು ಹಣದ ಮಹತ್ವದಿಂದ ರೈತನೆಂಬುದು ಶಾಪವಾಗಿ ಮಾರ್ಪಟ್ಟಿದೆ. ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬುದನ್ನು ಮರೆಯದಿರಿ. ಮತ ಎಂಬುದು ನಮ್ಮ ಮತಿಯ ( ಮನಸ್ಸಿನ ) ಅಸ್ತ್ರವಾದಾಗ… ಒಂದು ವೇಳೆ ಹೊಸ ನಾಯಕತ್ವದ ಹೊಸ ಚಿಂತನೆಯ ಹೊಸ ಗಾಳಿಯೊಂದು ಬಲವಾಗಿ ರೈತರ ಮನಸ್ಸಿನಲ್ಲಿ ಬೀಸಿ ಅವರನ್ನು ಪ್ರಬುದ್ದತೆಯೆಡಗೆ ಆಧುನಿಕತೆಯೆಡೆಗೆ, ಸ್ವತಂತ್ರ ಚಿಂತನೆಯೆಡೆಗೆ ಮುನ್ನಡೆಸಿದರೆ.. ವಿಧಾನಸೌಧ - ಪಾರ್ಲಿಮೆಂಟು, ಅಧಿಕಾರಶಾಹಿ, ವ್ಯಾಪಾರಿಗಳು, ಮಧ್ಯವರ್ತಿಗಳು,
ವೃತ್ತಿನಿರತರು, ಅಷ್ಟೇ ಏಕೆ, ಇಡೀ ವ್ಯವಸ್ಥೆಯೇ ಬುಡಮೇಲಾಗಿ " ರೈತನೇ ಅನ್ನದಾತ. ನಮ್ಮ ಬದುಕಿನ ಜೀವ ದ್ರವ್ಯ ರೈತನೇ " ಎಂದು ಕೂಗಿ ಹೇಳುತ್ತಾ ಎಲ್ಲರೂ ಆತನ ಬಗ್ಗೆ ಘನತೆಯಿಂದ ನಡೆದುಕೊಳ್ಳುವ ದಿನಗಳು ಬರುತ್ತದೆ. ಮುಖ್ಯವಾಗಿ ರೈತನನ್ನು ಹಾಸ್ಯಾಸ್ಪದವಾಗಿ ನೋಡುವ ಮನರಂಜನಾ ಉದ್ಯಮ, ರಾಜಕೀಯ ವ್ಯವಸ್ಥೆ, ವಾಣಿಜ್ಯೋಧ್ಯಮ, ಮಧ್ಯವರ್ತಿ ವೃತ್ತಿಯಲ್ಲಿರುವವರು ತಾವೇ ಹಾಸ್ಯಾಸ್ಪದವಾಗುತ್ತಾರೆ.. ಆ ಹೊಸ ನಾಯಕತ್ವ ಮತ್ತು ಚಿಂತನೆಯ ತಂಗಾಳಿಗಾಗಿ ಕಾಯುತ್ತಿರುವ. ಹಾಗಾಗಲಿ ಎಂದು ಆಶಿಸುತ್ತಾ .....
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ