ಭದ್ರಮುಷ್ಠಿ ಗಡ್ಡೆ

ಭದ್ರಮುಷ್ಠಿ ಗಡ್ಡೆ

ಇದು ಜೌಗು ಮಣ್ಣು, ನೀರಿನ ಪಸೆ ಇರುವಲ್ಲಿ ಬೆಳೆಯುವುದು ಜಾಸ್ತಿ. ಕುಂಡಗಳಲ್ಲಿ, ಗ್ರೋಬ್ಯಾಗಲ್ಲಿ, ಗೋಣಿಚೀಲದಲ್ಲಿ ಸಹ ಮಣ್ಣು ತುಂಬಿಸಿ ಬೆಳೆಸಬಹುದು. ತುಂಬಾ ಪರಿಮಳ. ಸಣ್ಣ ಬಿಳಿಯ ಗೊಂಡೆಯ ಹಾಗಿರುವ ಹೂ ಬಿಡುತ್ತದೆ.

ಕಫ-ಜ್ವರ, ಕೆಮ್ಮು ಇರುವಾಗ ಇದರ ಗಡ್ಡೆ ಮತ್ತು ಕಾಂಡ ಜಜ್ಜಿ ಹಾಕಿ, ಕಷಾಯ ಮಾಡಿ ಕುಡಿಯಬಹುದು. ಹೊಟ್ಟೆಯಲ್ಲಿ  ಸಣ್ಣ ಹುಳ ತುಂಬಿದರೆ ಒಂದು ರೀತಿಯ ಕೆಮ್ಮು ಬರುತ್ತದೆ. ಅದಕ್ಕೆ ಇದರ ಕಷಾಯ ಒಳ್ಳೆಯದು. ಯಕೃತ್, ಶ್ವಾಸಕೋಶದ ಕಾಯಿಲೆಗಳಿಗೆ ಇದನ್ನು ಕಷಾಯ, ಚೂರ್ಣ ರೂಪದಲ್ಲಿ ಬಳಸಬಹುದು. ಜ್ವರಕ್ಕೆ 5 ದಿನ ಕಷಾಯ ಕುಡಿದರೆ ಸಾಕು. ಹಣೆಗೆ ಗಡ್ಡೆಯನ್ನು ಅರೆದು ಹಚ್ಚಬಹುದು. ಮೂಲವ್ಯಾಧಿಗೆ ಕಾಂಡದ ಚೂರ್ಣ ಹಾಲಿಗೆ ಹಾಕಿ ಕುಡಿಯಬಹುದು. ಗಂಟಲು ನೋವಿಗೆ ಇದರ ಗಡ್ಡೆ, ಕಾಂಡ, ಅಳಲೆಕಾಯಿ, ಶುಂಠಿ, ಹಳೇಬೆಲ್ಲ ಎಲ್ಲಾ ಒಟ್ಟು ಮಾಡಿ, ರಸ ತೆಗೆದು ಕುಡಿಯಬಹುದು. ದಮ್ಮುವಿಗೆ ಸಹ ಪರಿಣಾಮಕಾರಿ. ಗಡ್ಡೆಯ ಹುಡಿಯನ್ನು, ಮೊಸರು ಸೇರಿಸಿ ರಕ್ತ ಭೇದಿಗೆ ನೀಡಬಹುದು. ನರದೌರ್ಬಲ್ಯಕ್ಕೆ ಹಾಲು ಸೇರಿಸಿ ಕುಡಿಯಬಹುದು.

ಆದರೆ ಒಬ್ಬೊಬ್ಬರ ದೇಹಪ್ರಕೃತಿ ಒಂದೊಂದು ರೀತಿ, ವೈದ್ಯರ ಸಲಹೆ ಪಡೆದು ಸೇವಿಸಬೇಕು. ಇದರ ಕಾಂಡ, ಗಡ್ಡೆ ಕಷಾಯವನ್ನು ಸಣ್ಣದಿರುವಾಗ ನಮ್ಮ ಎರಡು ಮಕ್ಕಳಿಗೂ ನಾನು ಕುಡಿಸಿದ್ದೇನೆ. ಸಾಧಾರಣ ಕೆಮ್ಮು, ಜ್ವರಕ್ಕೆ ಮುಸ್ತಕಾರಿಷ್ಟ ಎರಡು ಚಮಚಕ್ಕೆ ನಾಲ್ಕು ಚಮಚ ಕುದಿಸಿ ತಣಿಸಿದ ನೀರು ಸೇರಿಸಿ ಕುಡಿಯಬಹುದು

-ರತ್ನಾ ಕೆ.ಭಟ್, ತಲಂಜೇರಿ