ಭದ್ರಾ ಯೋಜನೆಗೆ ಆಂಧ್ರ ಅಡ್ಡಿ

ಭದ್ರಾ ಯೋಜನೆಗೆ ಆಂಧ್ರ ಅಡ್ಡಿ

ರಾಜ್ಯದಲ್ಲಿ ನೀರಾವರಿ ಯೋಜನೆಗಳ ಪರಿಪೂರ್ಣ ಅನುಷ್ಟಾನಕ್ಕೆ ಒಂದಲ್ಲ ಒಂದು ಅಡ್ಡಿ! ದಶಕಗಳಿಂದಲೂ ಇದು ಕಗ್ಗಂಟಾಗಿರುವುದು ದುರ್ದೈವ. ಮೊನ್ನೆ ಮಹದಾಯಿ, ನಿನ್ನೆ ಮೇಕೆದಾಟು, ಇಂದು ಭದ್ರಾ ಯೋಜನೆ. ಒಂದು ವಾರದ ಹಿಂದೆಯಷ್ಟೇ ಕೇಂದ್ರ ಸರ್ಕಾರ ಈ ಯೋಜನೆಗೆ ವಿಶೇಷ ಅನುದಾನ ಘೋಷಿಸಿದ ಬೆನ್ನ ಹಿಂದೆಯೇ ಆಂಧ್ರದಿಂದ ಅಡ್ಡಿ ಆಕ್ಷೇಪ ವ್ಯಕ್ತವಾಗಿರುವುದು ಗಮನಾರ್ಹ.

ಕರ್ನಾಟಕದಲ್ಲಿ ಜೀವನದಿಗಳಾದ ಕೃಷ್ಣಾ, ಕಾವೇರಿ, ಭೀಮಾ, ತುಂಗಭದ್ರಾ ಹರಿಯುವುದೇನೋ ನಿಜ. ಆದರೆ ರಾಜ್ಯದ ಪಾಲಿನ ನದಿ ನೀರಿನ ಬಳಕೆಗೂ ನೆರೆಹೊರೆಯಿಂದ ನೂರೆಂಟು ಅಡ್ಡಿ, ಗ್ರಾಮಾಂತರ ಬೆಂಗಳೂರು ಸೇರಿದಂತೆ ರಾಮನಗರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರವು ತನ್ನ ಒಪ್ಪಿಗೆಯನ್ನು ನೀಡಿದ್ದರೂ ತಮಿಳುನಾಡಿನಿಂದ ಅಡ್ಡಗಾಲು. ಈ ಯೋಜನೆಯ ಅನುಷ್ಟಾನದಿಂದ ತಮಿಳುನಾಡಿನ ಕಾವೇರಿ ಕಣಿವೆಯ ಜನತೆಗೆ ಅನ್ಯಾಯವಾಗಲಿದೆ ಎಂಬುದು ಇಲ್ಲಿನ ಎಲ್ಲ ರಾಜಕೀಯ ಪಕ್ಷಗಳ ಕೂಗು. ಇಂತಹ ಆಕ್ಷೇಪಗಳು ವ್ಯಕ್ತವಾದ ಕೂಡಲೇ ರಾಜ್ಯದ ಉದ್ದೇಶಿತ ಜನಸಂಪನ್ಮೂಲ ಯೋಜನೆಗಳು ನೆನೆಗುದಿಗೆ ಬೀಳುವುದು ಸಹಜ. ಒಟ್ಟಿನಲ್ಲಿ ಮೇಕೆದಾಟು ಯೋಜನೆ ಈಗ ಇಂತಹ ತೊಡಕುಗಳ ಸುಳಿಯಲ್ಲಿ ಸಿಲುಕಿ ತೊಳಲಾಡುವುದು ಸಾಮಾನ್ಯವಾಗಿದೆ.

ಹುಬ್ಬಳ್ಳಿ ಮತ್ತು ಧಾರವಾಡದ ಅವಳಿ ನಗರಗಳಿಗೆ ಕುಡಿಯುವ ನೀರಿನ ಯೋಜನೆಗೆಂದೇ ನಿಗದಿತವಾದ ಮಹದಾಯಿ ನದಿ ನೀರಿನ ಹಂಚಿಕೆ ಕೂಡಾ ಈಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಪರಿಸರ ಸಂರಕ್ಷಣೆಯ ನೆಪದಲ್ಲಿ ಗೋವಾ ತೆಗೆದಿರುವ ಕ್ಯಾತೆಯಿಂದ ಅವಳಿ ನಗರಗಳಿಗೆ ನೀರು ದೊರಕುವ ಕನಸು ಮರೀಚಿಕೆಯಾಗಿಯೇ ಉಳಿದಿದೆ. ಒಂದು ಕಡೆ ರಾಜ್ಯ ಸರ್ಕಾರವು ಯೋಜನೆ ಕೈಗೆತ್ತಿಕೊಳ್ಳುವ ಸಲುವಾಗಿ ಸಂಪೂರ್ಣ ತಯಾರಿ ನಡೆಸುವ ಹಿಂದೆಯೇ ನೆರೆ ರಾಜ್ಯದವರು ಇದಕ್ಕೆ ಕಾನೂನಾತ್ಮಕ ತೊಡಕುಗಳನ್ನು ಸೃಷ್ಟಿಸಿ, ಯೋಜನೆಗಳು ಜಾರಿಯಾಗದಂತೆ ಅಡ್ಡಿಯಾಗುತ್ತಿರುವುದು ಕಳವಳಕಾರಿ.

ಭದ್ರಾ ಮೇಲ್ದಂಡೆ ಜನಸಂಪನ್ಮೂಲ ಯೋಜನೆಗಳೇನಾದರೂ ಅನುಷ್ಟಾನಗೊಂಡಲ್ಲಿ ಇದರಿಂದ ಆಂಧ್ರದ ನೀರಾವರಿ ಹಿತಾಸಕ್ತಿಗೆ ಧಕ್ಕೆಯಾಗುವುದು ನಿಶ್ಚಿತ ಎಂದು ಆಂಧ್ರ ಈಗ ಬೊಬ್ಬೆ ಹಾಕಿದೆ. ಅಲ್ಲದೆ ಬಚಾವತ್ ತೀರ್ಪಿನ ಅನ್ವಯ ಕರ್ನಾಟಕವು ಭದ್ರಾ ಯೋಜನೆಯನ್ನು ಕೈಗೊಳ್ಳಬೇಕಾದರೆ ತನ್ನ ಒಪ್ಪಿಗೆಯನ್ನು ಪಡೆಯಬೇಕೆಂದು ಆಂಧ್ರ ಕೇಂದ್ರ ಸರ್ಕಾರ ಮತ್ತು ನ್ಯಾಯಾಧೀಕರಣಗಳ ಮುಂದೆ ಅಂದಿನಿಂದಲೂ ರಾಜ್ಯದ ವಿರುದ್ಧ ಗುದ್ದಾಡುತ್ತಲೇ ಇದೆ. ಒಟ್ಟಿನಲ್ಲಿ ನದಿಯ ಮೇಲಿನ ಭಾಗದಲ್ಲಿರುವ ಕರ್ನಾಟಕವು, ಕೃಷ್ಣಾ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಇಂದಿಗೂ ಸರಿಯಾದ ಪಾಲು ಪಡೇಯಲಾಗದೆ ಇರುವುದು ದುರ್ದೈವ. ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ನೀರಾವರಿ ಯೋಜನೆಗಳನ್ನು ರೂಪಿಸಿಕೊಂಡು ತುಸು ಹೆಚ್ಚಿನ ಪಾಲಿನ ನೀರನ್ನೇ ಬಳಸಿಕೊಂಡ ಆಂಧ್ರ ಮತ್ತು ತಮಿಳುನಾಡು ಯಾವ ರೀತಿಯಲ್ಲಿಯೂ ವಂಚನೆಗೊಳಗಾಗದಿರುವುದು ರಾಜ್ಯದ ದೌರ್ಬಲ್ಯವೋ, ಶಾಪವೋ ಗೊತ್ತಾಗದ ಸಂಗತಿ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೮-೦೨-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ