ಭರವಸೆಯ ಬೆಳಕಲ್ಲಿ…

ಭರವಸೆಯ ಬೆಳಕಲ್ಲಿ…

ಕವನ

ದೇಗುಲದ ಎದುರಲ್ಲೆ ಬಾಗಿಹಳು ಕುಳಿತಲ್ಲೆ

ಸಾಗಿಸಲು ಬಡತನದ ಬದುಕಿಗಾಗಿ

 

ಹೆಣೆದು ಮಾಲೆಯ ಮಾಡಿ ದಣಿದು ವದನವು ಬಾಡಿ

ಮಣಿಸಿ ಬಿಟ್ಟಿಹುದವಳ ತುತ್ತಿಗಾಗಿ

 

ಸಿರಿಯ ಜೊತೆಯಲಿ ಮೆರೆವ ಗುರಿಯು ಆಕೆಯದಲ್ಲ

ಭರವಸೆಯ ಕಿರಣವಿದೆ ಬೆನ್ನಹಿಂದೆ

 

ಸದ್ದು ಗದ್ದಲ ಮರೆತು ಜಿದ್ದಿನಲ್ಲಿಯೆ ಕಲಿವ

ಮುದ್ದು ಪುತ್ರಿಯ ಬದುಕು ಬೆಳಗೆ ಮುಂದೆ

 

ಹರಿಯುತಿಹ ಕಂಬನಿಯ ಒರೆಸುವಳು ಸೆರಗಿನಲಿ

ಕರಿವದನ ರಕ್ಷಿಪುದು ಕರುಣದಿಂದೆ

 

ಏಕೆ ಈದಿನ ಪೂರಾ ಮೂಕವಾಗಿದೆ ನಗರ

ಬಾಕಿ ಉಳಿದಿದೆ ಹೂವು ರಾಶಿ ರಾಶಿ

 

ಕೊಂಡುಕೊಳ್ಳಲು ಮಂದಿ ಬಂದು ಕೊಳ್ಳಲಿ ಹೂವ

ನೊಂದು ಬೇಡುವಳಾಕೆ ಕೊಂಡು ಹರಸಿ ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್