ಭವಿತವ್ಯಂಭವತ್ಯೇವಃ : ಇಸ್ಲಾಮಿನ ಸ್ವರ್ಣ ಯುಗದ ಸಂಕ್ಷಿಪ್ತ ಅವಲೋಕನ!

ಭವಿತವ್ಯಂಭವತ್ಯೇವಃ : ಇಸ್ಲಾಮಿನ ಸ್ವರ್ಣ ಯುಗದ ಸಂಕ್ಷಿಪ್ತ ಅವಲೋಕನ!

"ಚಲೋ ಅಬ್ ಐಸಾ ಕರ್ತೆ ಹೈ;

ಸಿತಾರೆ ಬಾಂಟ್ ಲೆತೇ ಹೈ!" - ಫೈಜ್ ಅಹ್ಮದ್ ಫೈಜ್.

5ನೇ ಶತಮಾನವು ಐರೋಪ್ಯ ಖಂಡವನ್ನು ವಿದ್ಯಾಹೀನತೆಯ ಅಂಧಕಾರದಲ್ಲಿ ತಳ್ಳಿತ್ತು. 5ನೇ ಶತಮಾನದ ಹೊಸ್ತಿಲಿನಿಂದ 13ನೇ ಶತಮಾನದವರೆಗೆ ಹಿಡಿದ ಈ 'Dark Age' ಎಂಬ ಗ್ರಹಣವು, ಐರೋಪ್ಯ ಖಂಡದ್ಯಾಂತ ಪ್ರಾಜ್ಞಚಿಂತನೆ ಮತ್ತು ಪಾಂಡಿತ್ಯದ ನಿಗ್ರಹಕ್ಕೆ ಸಾಕ್ಷಿಯಾಯಿತು; ನೇರಕಾರಣವಾದ ಚರ್ಚಿನ ಪುರೋಹಿತಶಾಹಿ ದೃಷ್ಟಿಕೋನವು ವಿಜ್ಞಾನಕ್ಕೆ ತದ್ವಿರುದ್ಧವಾಗಿತ್ತಲ್ಲದೆ, ಬುದ್ಧಿಜೀವಿಗಳಿಗೆ  ಸಂಶೋಧನೆಗಳನ್ನು ಮತ್ತು ಅವಲೋಕಿಸಲು-ವಿಮರ್ಶಿಸಲು ತಡೆಗಟ್ಟಿಸುತಿತ್ತು!   

ಯುರೋಪ್ ಖಂಡವು ಬೌದ್ಧಿಕ-ಪ್ರಾಜ್ಞ ಕಗ್ಗತ್ತಲಿನಲ್ಲಿ ನರಳುತ್ತಿದ್ದಾಗ, ಮಧ್ಯಪ್ರಾಚ್ಯದಿಂದ ಹರಡಲು ಪ್ರಾರಂಭಗೊಂಡು ಮೂರಿಶ್ ಸ್ಪೇನ್ [ಇಸ್ಲಾಮಿನ ಸ್ಪೇನ್ ದೇಶವನ್ನು Emirates of Cordoba ಎಂದು ಕರೆಯುತ್ತಾರೆ] ದೇಶದಿಂದ ಆಫ್ರಿಕಾ ಖಂಡ ಮತ್ತು ಚೀನಾ ಖಂಡದವರೆಗೆ ವಿಸ್ತರಿಸಿದ 'ಇಸ್ಲಾಮಿಕ್ ಸಾಮ್ರಾಜ್ಯ'ವು ವೈಚಾರಿಕ-ವೈಜ್ಞಾನಿಕವಾದ ಕ್ರಾಂತಿಯೊಂದಕ್ಕೆ ನಾಂದಿ ಹಾಡಿತು. ಆ ಕ್ರಾಂತಿಕಾರಿ ಯುಗಯನ್ನೇ ಇತಿಹಾಸಕಾರರು 'The Islamic Golden Age' ಎಂದು ಗುರುತಿಸತೊಡಗಿದರು. ಆ ಸುವರ್ಣ ಯುಗವು ಸರಿಸುಮಾರು 7ನೇ ಶತಮಾನದ ಮಧ್ಯದಿಂದ 13 ನೇ ಶತಮಾನದ ಮಧ್ಯಭಾಗದಲ್ಲಿದೆ - ಎಂದು ಅಂದಾಜಿಸಲಾದ – ಈ ಸಮಯದಲ್ಲಿ ಮುಸ್ಲಿಂ ಆಡಳಿತಗಾರರು ಇತಿಹಾಸದಲ್ಲಿ ಬೃಹತ್ ಸಾಮ್ರಾಜ್ಯಗಳಲ್ಲಿ ಒಂದನ್ನು ಸ್ಥಾಪಿಸಿದರು.

ಈ ಯುಗದಲ್ಲಿ, ಮುಸ್ಲಿಂ ಯಂತ್ರಶಿಲ್ಪಿಗಳು, ತಿಳಿವಳಿಕಸ್ಥರು, ಕವಿಗಳು, ತತ್ವಜ್ಞಾನಿಗಳು, ಭೂಗೋಳಶಾಸ್ತ್ರಜ್ಞರು, ಖಗೋಳಶಾಸ್ತ್ರಜ್ಞರು ಇತ್ಯಾದಿಗಳು ಕೃಷಿ, ಕಲೆ-ಸಾಹಿತ್ಯ, ಅರ್ಥಶಾಸ್ತ್ರ, ಉದ್ಯಮ, ಕಾನೂನು, ತತ್ವಶಾಸ್ತ್ರ, ವಿಜ್ಞಾನ, ಸಮಾಜಶಾಸ್ತ್ರ, ತಂತ್ರಜ್ಞಾನಕ್ಕೆ ಇತ್ಯಾದಿ ಕ್ಷೇತ್ರಗಳಿಗೆ ತಮ್ಮ ಅಮೂಲ್ಯ ಕಲಿಕೊಡುಗೆಗಳನ್ನು ಕರುಣಿಸಿದರು. ಮುಸ್ಲಿಂ ವಿಜ್ಞಾನಿಗಳಿಗೆ ಸಂಶೋಧಿಸಲು ಎಂದೂ ಮುಸ್ಲಿಮರ ಗ್ರಂಥ ಕುರಾನ್ ಅಥವಾ ಮುಸ್ಲಿಂ ಪುರೋಹಿತರು ತಡೆಗಟ್ಟಲಿಲ್ಲ; ಬದಲಾಗಿ, ಬಹಳಷ್ಟು ವೈಜ್ಞಾನಿಕ ಅನ್ವೇಷಣಗಳಿಗೆ ಕುರಾನ್ ಗ್ರಂಥವೇ ಉಲ್ಲೇಖಗ್ರಂಥವಾಗಿ ಮೂಡಿಬಂತು. ಕುರಾನಿನಲ್ಲಿ ಎತ್ತಿ ಹಿಡಿದ ವೈಜ್ಞಾನಿಕ ಶ್ಲೋಕಗಳೇ ಉತ್ತಮ ಸಂಶೋಧನೆಗಳಿಗೆ ಪ್ರೇರಣೆ ನೀಡುತಿತ್ತು! 

ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಯಾದ ಬಾಗ್ದಾದಿನಲ್ಲಿ, ಖಲೀಫ ಹಾರುನ್ ರಶೀದ್ ಅವರು "ಬೈತುಲ್ ಹಿಕ್ಮಹ್"ಅನ್ನು ಸ್ಥಾಪಿಸಿದರು; ಅಲ್ಲಿ ವಿದ್ವಾಂಸರು - ಮುಸ್ಲಿಂ ಹಾಗು ಮುಸ್ಲಿಮೇತರರು - ಅನುವಾದ ಚಳುವಳಿಯಲ್ಲಿ ಪ್ರಪಂಚದ ಜ್ಞಾನವನ್ನು ಅರೇಬಿಕ್‌ಗೆ ಸಂಗ್ರಹಿಸಲು ಮತ್ತು ಭಾಷಾಂತರಿಸಲು ಸಫಲ ಯತ್ನಪಟ್ಟರು. ಗ್ರೀಕ್, ರೋಮನ್, ಹಿಂದಿ ಮತ್ತು ಚೀನಿ ಜ್ಞಾನಭಂಡಾರಗಳನ್ನು ಅರೇಬಿಕ್ ಭಾಷೆಗೆ ಭಾಷಾಂತರಿಸಲು ಮುಸ್ಲಿಂ ವಿದ್ವಾಂಸರು ಸರಿಸುಮಾರು 700 ವರುಷಗಳ ಕಾಲ ದುಡಿದು, ಅದರ ಕರ್ತೃಪದ ವಿಷಯಗಳನ್ನು ಅರ್ಥೈಸಿಕೊಳ್ಳಲು ಪರಿಶ್ರಮಿಸಿದರು. ಆದರೆ, ಇತರ ವೈಜ್ಞಾನಿಕ ಸಾಹಿತ್ಯಗಳು ಮೌಢ್ಯತೆಯಿಂದ ತುಂಬಿ ತುಳುಕುತ್ತಿತ್ತು. ಉದಾರಣೆಗೆ, ಭರತಖಂಡದಲ್ಲಿ ದೊರೆತ ಖಗೋಳಶಾಸ್ತ್ರದ ಕೋಷ್ಠಕಗಳಲ್ಲಿ ಖಗೋಲಶಾಸ್ತ್ರದಲ್ಲಿ ಜ್ಯೋತಿಶಾಸ್ತ್ರವು ಹೆಣೆಯಲಾಗಿತ್ತು [Astronomy was interwoven with Astrology]. ಭರತಖಂಡದ ಖಗೋಳಶಾಸ್ತ್ರದಲ್ಲಿ ನಕ್ಷತ್ರಗಳ ಚಲನೆಗಳನ್ನು ವ್ಯಕ್ತಿಯ ಅದೃಷ್ಟಕ್ಕೆ ಹೋಲಿಸಲಾಗುತಿತ್ತು. ಶನಿಯೊಂದು ಗ್ರಹವಾಗಿ ಪರಿಗಣಿಸದೆ, ಅಪಶಕುನದ ಸಂಕೇತವಾಗಿ ಬೋಧಿಸಲಾಗುತ್ತಿತ್ತು. ಇವುಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಹಾಸ್ಯಾಸ್ಪದ ವಿಷಯವಾಗಿದೆ. ಇತರ ವೈಜ್ಞಾನಿಕ ಸಾಹಿತ್ಯದಲ್ಲಿ ಕಂಡು ಬರುವ ಬಹಳಷ್ಟು ಮೌಢ್ಯತೆಗಳನ್ನು ಕಡೆಗಣಿಸಿ, ಶುದ್ಧ ವಿಜ್ಞಾನವನ್ನು ಗಣಿಸಿ, ತಮ್ಮ ಸಂಶೋಧನೆಗಳನ್ನು ಬೆರೆಸಿ ಆಧುನಿಕ ವಿಜ್ಞಾನವನ್ನು ಮುಸ್ಲಿಂ ವಿದ್ವಾಂಸರು ಉತ್ತುಂಗಕ್ಕೆ ಏರಿಸಿದರು. ತತ್ಪರಿಣಾಮವಾಗಿ, ಇಸ್ಲಾಮಿನ ಸ್ವರ್ಣ ಯುಗದಲ್ಲಿ, ಮುಸ್ಲಿಂ ಜಗತ್ತು- ವಿಜ್ಞಾನ, ತತ್ವಶಾಸ್ತ್ರ, ಖಗೋಳಶಾಸ್ತ್ರ, ವೈದ್ಯಕೀಯ ಮತ್ತು ಶಿಕ್ಷಣದ ಪ್ರಮುಖ ಬೌದ್ಧಿಕ ಕೇಂದ್ರವಾಗಿ ಹೊರಹೊಮ್ಮಿತು. 

ಇಸ್ಲಾಮಿಕ್ ಸುವರ್ಣ ಯುಗದಲ್ಲಿ ಮತ್ತೊಂದು ಗಮನಿಸತಕ್ಕ ಗುಣಲಕ್ಷಣವೆಂದರೆ "ಹಕೀಮ್" ಎಂದು ಕರೆಯಲ್ಪಡುವ ಅಪಾರ ಸಂಖ್ಯೆಯ ಮುಸ್ಲಿಂ ಹಳಬಲ್ಲ ವಿದ್ವಾಂಸರು [Polymath]; ಪ್ರತಿಯೊಬ್ಬರು ಸರ್ವಾಂಗಸಮವಾಗಿ - ಧಾರ್ಮಿಕ ಮತ್ತು ಲೌಕಿಕ - ಕಲಿಕೆಯ ವಿವಿಧ ಕ್ಷೇತ್ರಗಳಿಗೆ ಅಗಣಿತ-ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇಸ್ಲಾಮಿಕ್ ಸುವರ್ಣ ಯುಗದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಜ್ಞಾನವನ್ನು ಹೊಂದಿರುವ ಮುಸ್ಲಿಂ ಬಹುಶ್ರುತ ವಿದ್ವಾಂಸರು, ಯಾವುದೊಂದು ಕಲಿಕೆಯ ಕ್ಷೇತ್ರದಲ್ಲಿ ಪರಿಣತಿ ಪಡೆದ ವಿದ್ವಾಂಸರಿಗಿಂತ ಹೆಚ್ಚಿನ ಪ್ರಸಿದ್ಧಿಗಳಿಸಿದ್ದರು. ಗಮನಾರ್ಹ ಮಧ್ಯಯುಗೀನ ಮುಸ್ಲಿಂ ವಿದ್ವಾಂಸರಾದ ಅಲ್-ಬಿರುನಿ, ಅಲ್-ಕಿಂದಿ, ಇಬ್ನ್ ಸಿನಾ, ಅಲ್-ಇದ್ರಿಸಿ, ಅಲ್-ಸುಯುತಿ, ಜಾಬಿರ್ ಇಬ್ನ್ ಹಯ್ಯನ್ ಇತ್ಯಾದಿಯರು ಸೇರಿದ್ದಾರೆ.

ಇಸ್ಲಾಮಿನ ಸ್ವರ್ಣಯುಗದಲ್ಲಿ ಮುಸ್ಲಿಂ ವಿದ್ವಾಂಸರ ಅರ್ಥಗರ್ಭಿತ ಕಲಿಕೊಡುಗೆಗಳು

ಇಬ್ನ್ ಅಲ್-ಹೈಥಮ್ ಅವರು ಜಗತ್ತಿಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆಯೆಂದರೆ: ಒಂದು ಸಿದ್ಧಾಂತವನ್ನು ಪರೀಕ್ಷಿಸಲು ಪುನರಾವರ್ತಿತ ಪ್ರಯೋಗಗಳನ್ನು ನಡೆಸುವ ಕ್ರಮಬದ್ಧ ವಿಧಾನವಾಗಿದೆ; ಇದು ನಮಗೆ ತಿಳಿದಿರುವಂತೆ ವೈಜ್ಞಾನಿಕ ವಿಧಾನವಾದ - Scientific Method - ಎಂದು ಹೊಸನಾಮ ಪಡೆಯಿತು. ಅವರು ತಮ್ಮ ಸಂಶೋಧನೆಯಲ್ಲಿ, “ವಿಜ್ಞಾನಿಗಳ ಬರಹಗಳನ್ನು ಅಧ್ಯಯನಿಸುವ ವ್ಯಕ್ತಿಯ ಕರ್ತವ್ಯ, ಸತ್ಯವನ್ನು ಕಲಿಯುವುದು ಅವನ ಗುರಿಯಾಗಿದ್ದರೆ, ಅವನು ಓದುವ ಎಲ್ಲದಕ್ಕೂ ತನ್ನನ್ನು ತಾನು ಬೆರ್ಪಡಿಸಿ ಗಾಢ ಅಧ್ಯಯನ ನಡೆಸಿ… ಅದನ್ನು ವಿಮರ್ಶಿಸುವುದು ಅತ್ಯಗತ್ಯವಾಗಿದೆ" ಎಂದು ಹೇಳಿದರು. ಒಬ್ಬ ತಮ್ಮ ವಿಮರ್ಶಾತ್ಮಕ ಅಧ್ಯಾಯನವನ್ನು ನೆರವೇರಿಸುವಾಗ ತಮ್ಮನ್ನು ತಾವು ಅನುಮಾನಿಸಬೇಕು; ಇದರಿಂದ ಒಬ್ಬ ಪೂರ್ವಾಗ್ರಹ ಅಥವಾ ಮೃದುತ್ವಕ್ಕೆ ಬೀಳುವುದನ್ನು ತಪ್ಪಿಸಬಹುದು ಎಂದು ಹೇಳಿಕೊಟ್ಟರು.

964 A.Dಯ ಸುತ್ತ ಅಗಣಿತ ಅವಲೋಕನಗಳು ನಡೆದ ಬಳಿಕ, ಇರಾನಿನ ಸುಪ್ರಸಿದ್ಧ ಖಗೋಳಶಾಸ್ತ್ರಜ್ಞರಾದ ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಅವರು 'The Book of Fixed Stars'ಅನ್ನು ಪ್ರಕಟಿಸಿದರು; ಇದು ಅಂತರೀಕ್ಷದಲ್ಲಿರುವ ನಕ್ಷತ್ರಪುಂಜಗಳ ಕುರಿತು ರಚಿಸಲಾಗಿದ್ದ ಅತ್ಯಂತ ಸಮಗ್ರ ಮೇರುಕೃತಿಗಳಲ್ಲಿ ಒಂದಾಗಿದೆ. ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಆಂಡ್ರೊಮಿಡಾ (Andromeda) ನಕ್ಷತ್ರಪುಂಜ ಮತ್ತು Giant Magellanic Cloudಅನ್ನು ನೋಡಿದ ಮೊತ್ತಮೊದಲ ಖಗೋಳಶಾಸ್ತ್ರಜ್ಞ ಎಂಬ ಹೆಗ್ಗಳಿಕೆಗೆ ಪಾತ್ರರಾದವರು! 

ದೂರದರ್ಶಕವನ್ನು ಶೋಧಿಸಲಾಗದ ಕಾರಣ ಈ ವೀಕ್ಷಣೆಗಳನ್ನು ಬರಿಗಣ್ಣಿನಿಂದ ಸಂಪೂರ್ಣವಾಗಿ ಮಾಡಲಾಗುತ್ತಿತ್ತು. ಆ ಕಾಲದಲ್ಲಿ ಅದು ತಾರಾಗಣ ಎಂದು ಅವರಿಗೆ ತಿಳಿಯದಿರುವುದರಿಂದ ಅವರು ತಮ್ಮ ಕೃತಿಯಲ್ಲಿ ಅದನ್ನು "ಮೋಡ" ಎಂದು ಉಲ್ಲೇಖಿಸಿದರು. ಈ ಕೊಡುಗೆ ಪ್ರಸಿದ್ಧ ಡ್ಯಾನಿಶ್ ಖಗೋಳಶಾಸ್ತ್ರಜ್ಞ 'ಟೈಕೋ ಬ್ರಾಹೆ'ಗೆ ಬಹಳ ಉಪಯುಕ್ತವಾಗಿತ್ತು ಎಂದು ವಿಶ್ವಕೋಶಗಳಲ್ಲಿ ಪುರಾವೆಗಳೊಂದಿಗೆ ವಿವರಿಸಲಾಗಿದೆ.

ಖಲೀಫ ಮಾಮುನ್ ಅಲ್-ರಶೀದ್ (ಖಲೀಫ ಹಾರುನ್ ರಶೀದ್ ಅವರ ಸುಪುತ್ರ) ಅವರ ಆಳ್ವಿಕೆಯಡಿಯಲ್ಲಿ ಜಗತ್ತಿನ ಮೊತ್ತಮೊದಲ ಖಗೋಳ ಸಮೀಕ್ಷಾಮಂದಿರ (Observatory) ವನ್ನು 8ನೇ ಶತಮಾನದಲ್ಲಿ ಬಾಗ್ದಾದ್‌ನಲ್ಲಿ ನಿರ್ಮಿಸಲಾಗಿತ್ತು. ತದನಂತರ, ಅದನ್ನು ಅನುಸರಿಸಿ ಬಹಳಷ್ಟು ಖಗೋಳ ಸಮೀಕ್ಷಾಮಂದಿರಗಳನ್ನು ಇರಾಕ್ ಮತ್ತು ಇರಾನಿನಲ್ಲಿ ನಿರ್ಮಿಸಲಾಯಿತು. ಖಲೀಫರ ಸುಖಿರಾಜ್ಯದಲ್ಲಿ ಅವರ ಸದಾಡಳಿತದ ನೆರಳಿನಲ್ಲಿ ಅನಂತ ವೈಜ್ಞಾನಿಕ ಪರಿಷ್ಕರಣಗಳು ಸುಖಪ್ರದವಾಗಿ ನೆರವೇರಿಸಿಲಾಯಿತು.

ಆ ಕಾಲದಲ್ಲಿ - ಅರ್ಥಾತ್ ಸುವರ್ಣ ಯುಗದ ಆರಂಭದಿಂದ ನವೋದಯದ ಆರಂಭದವರೆಗೆ - ಇಸ್ಲಾಮಿಕ್ ಸಾಮ್ರಾಜ್ಯದ (ಅಬ್ಬಾಸಿಯ) ಸುತ್ತಲೂ ಅನೇಕ ವಿಶ್ವವಿದ್ಯಾನಿಲಯಗಳು, ಮದರಸಾಗಳು, ಪ್ರಯೋಗಶಾಲೆಗಳು, ಖಗೋಳ ಸಮೀಕ್ಷಾಮಂದಿರಗಳು, ಮತ್ತು ಶಾಲೆಗಳನ್ನು ನಿರ್ಮಿಸಲಾಯಿತು. 859 A.Dಯ ಸುತ್ತ ಮೊರಾಕೊದ ಫೆಜ್‌ನಲ್ಲಿ ಮೊದಲ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಯಿತು. ಇದು ಒಬ್ಬ ಧನಿಕನ ಮಗಳಾದ ಫಾತಿಮಾ ಅಲ್-ಫಿಹ್ರಿಯಿಂದ ಕಲ್ಪಿಸಲ್ಪಟ್ಟು ಪ್ರಾರಂಭಗೊಂಡಿತು. ಖಗೋಳಶಾಸ್ತ್ರ, ಗಣಿತ ಮತ್ತು ತತ್ತ್ವಶಾಸ್ತ್ರವನ್ನು ಅಧ್ಯಯನಿಸಲು ಕ್ರಿಶ್ಚಿಯನ್ ಮತ್ತು ಯಹೂದಿ ವಿಜ್ಞಾನಿಗಳು ಸೇರಿದಂತೆ ಪ್ರಪಂಚದಾದ್ಯಂತದ ವಿದ್ವಾಂಸರು ಅಲ್ಲಿಗೆ ತಮ್ಮ ಪಯಣವನ್ನು ಬೆಳೆಸಿದರು.

ಆಸ್ಟ್ರೋಲೇಬ್ (Astrolabe) ಎಂದು ಕರೆಯಲ್ಪಡುವ ಅತ್ಯಂತ ಪ್ರಸಿದ್ಧ ಖಗೋಳ ಸಾಧನಗಳಲ್ಲಿ ಒಂದನ್ನು ಗ್ರೀಕ್ ಚಿಂತಕ ಹಿಪ್ಪರ್ಕಸ್ ರಚಿಸಿದ್ದರು. ಆದರೆ ಮುಸ್ಲಿಂ ವಿಜ್ಞಾನಿಗಳು, ವಿಶೇಷವಾಗಿ ಮಹಿಳೆಯರು ಇದನ್ನು ಪರಿಪೂರ್ಣಗೊಳಿಸಿದ್ದು ಶ್ಲಾಘನೀಯ! ಸಿರಿಯಾ ದೇಶದ ತಜ್ಞೆ 'ಮರಿಯಮ್ ಅಲ್-ಅಸ್ಟ್ರುಲಾಬಿ' 10ನೇ ಶತಮಾನದಲ್ಲಿ ಆಸ್ಟ್ರೋಲ್ಯಾಬ್ ತಯಾರಕರಾಗಿದ್ದರು. ಗಗನದಲ್ಲಿರುವ ಆಕಾಶಕಾಯಗಳ ಎತ್ತರವನ್ನು ಲೆಕ್ಕಹಾಕುವ ಈ ಉಪಕರಣಗಳನ್ನು ತಯಾರಿಸುವ ಕಲೆಯನ್ನು ಪರಿಪೂರ್ಣಗೊಳಿಸಲು ಅವರು ಸುಪ್ರಸಿದ್ಧರಾಗಿದ್ದರು. ಆಕೆಯ ಗೌರವಾರ್ಥವಾಗಿ- ಖಗೋಳಶಾಸ್ತ್ರಜ್ಞ ಹೆನ್ರಿ ಇ. ಹಾಲ್ಟ್ ಅವರು 1990 ರಲ್ಲಿ ಮುಖ್ಯ ಬೆಲ್ಟ್ ಕ್ಷುದ್ರಗ್ರಹವನ್ನು 'ಮರೀಯಂ' ಎಂಬ ಶುಭನಾಮದಿಂದ ನಾಮಕರಣಗೊಳಿಸಿದರು.

ಅಲ್-ಜಹ್ರಾವಿ ಹತ್ತನೇ ಶತಮಾನದ ಅರಬ್ ಶಸ್ತ್ರ ಚಿಕಿತ್ಸಕರು. ಅವರನ್ನು "ಶಸ್ತ್ರಚಿಕಿತ್ಸೆಯ ಪಿತಾಮಹ" ಎಂದು ಗುರುತಿಸಲಾಗುತ್ತದೆ. ಗೈನೆಕೊಮಾಸ್ಟಿಯಾ ನಿರ್ವಹಣೆಗಾಗಿ Mammaplastyಯನ್ನು ಕಡಿಮೆ ಮಾಡುವ ಮೊದಲ ಸಫಲ ಯತ್ನ ಮತ್ತು ಸ್ತನ ಅರ್ಬುದ (Breast Cancer) ಚಿಕಿತ್ಸೆ ನೀಡುವ ಮೊದಲ ಸ್ತನ ಛೇದನ ಎಂದು ಅವರು ವಿವರಿಸುತ್ತಾರೆ. ಮೊದಲ thyroidectomyಯ ಕಾರ್ಯಕ್ಷಮತೆಯ ಶ್ರೇಯ ಅವರಿಗೆ ಸಲ್ಲುತ್ತದೆ. ಅವರು ಶಸ್ತ್ರಚಿಕಿತ್ಸೆಯ ಕುರಿತು ಮೂರು ಬೃಹತ್ ಗ್ರಂಥಗಳನ್ನು ರಚಿಸಿದರು; ಇದರಲ್ಲಿ 'Manual of Medial Practitioners'ಯು ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುವ 278 ಉಪಕರಣಗಳ ಗ್ರಂಥಪಟ್ಟಿಯನ್ನು ಒಳಗೊಂಡಿದೆ.

ಖಗೋಳಶಾಸ್ತ್ರದಲ್ಲಿ ದುಡಿದ ಮುಸ್ಲಿಂ ವಿದ್ವಾಂಸರು 'The Dictionary of Scientific Biography'ಯಲ್ಲಿ ವರಿಷ್ಠ ಸ್ಥಾನಮಾನವನ್ನು ಪಡೆದಿದ್ದಾರೆ. ನಕ್ಷತ್ರಗಳ ಪ್ರಜ್ವಲತೆಯಲ್ಲೂ ಸ್ವತಃ ಇತಿಹಾಸವನ್ನು ಒಳಗೊಂಡಿದೆ; ಅವುಗಳ ಕಥೆಯು ಬಾಹ್ಯಾಕಾಶದಲ್ಲಿ ಪಯಣಿಸಲು, ಮತ್ತು ನಮ್ಮ ಕಣ್ಣುಗಳಿಗೆ ಮತ್ತು ನಮ್ಮ ದೂರದರ್ಶಕಗಳಿಗೆ ತಲುಪಲು ಕೆಲವು ಸಂದರ್ಭಗಳಲ್ಲಿ ಹತ್ತಾರು ಸಾವಿರ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ, ಒಂದು ಸಹಸ್ರಮಾನದ ನಂತರ, ಸುಮಾರು 200 ನಕ್ಷತ್ರಗಳಿಗೆ ಖಗೋಳಶಾಸ್ತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ ಮುಸ್ಲಿಂ ಖಗೋಳಶಾಸ್ತ್ರಜ್ಞರ ಅರೇಬಿಕ್ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಖಗೋಳಶಾಸ್ತ್ರಕ್ಕೆ ಕೊಡುಗೆ ನೀಡಿದ 'ಮರಿಯಂ ಅಸ್ತ್ರುಲಾಬಿ' ಅವರ ಗೌರವಾರ್ಥವಾಗಿ- ಖಗೋಳಶಾಸ್ತ್ರಜ್ಞ ಹೆನ್ರಿ ಇ. ಹಾಲ್ಟ್ ಅವರು 1990ರಲ್ಲಿ ಮುಖ್ಯ ಬೆಲ್ಟ್ ಕ್ಷುದ್ರಗ್ರಹವನ್ನು 'ಮರೀಯಂ' ಎಂಬ ಶುಭನಾಮದಿಂದ ನಾಮಕರಣಗೊಳಿಸಿದರು. ಚಂದ್ರನ ಮೇಲ್ಮೈಯಲ್ಲಿ ಮುಸ್ಲಿಂ ಖಗೋಳಶಾಸ್ತ್ರಜ್ಞರ ಹೆಸರಿನ ಇಪ್ಪತ್ತನಾಲ್ಕು ಬಾಂಬುಕುಳಿ(Lunar Craters)ಗಳಿವೆ! ಮೆಕ್‌ಗಿಲ್ ವಿವಿಯ (McGill University) ಇಸ್ಲಾಮಿಕ್ ಅಧ್ಯಯನಗಳ ಪ್ರಾಧ್ಯಾಪಕ ಜಮಿಲ್ ರಾಗೆಪ್ ಅವರು, "ಸಹಸ್ರಮಾನದ ಸುಯುಗದಲ್ಲಿ ಅಗಣಿತ ಕೊಡುಗೆಗಳು ಇದ್ದವು; ಕೆಲವುಗಳನ್ನು ಆಯ್ಕಿಸುವುದು ಅಸಾಧ್ಯಕರವಾದದ್ದು" ಎಂದು ಅಭಿಪ್ರಾಯ ಪಡುತ್ತಾರೆ.

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ