ಭವಿಷ್ಯದ ಇಂಧನ - ಜಲಜನಕ
ನಾವು ಸಾಮಾನ್ಯವಾಗಿ ವಾಹನಗಳಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ಮತ್ತು ಯಂತ್ರಗಳನ್ನು ನಡೆಸಲು ಕಲ್ಲಿದ್ದಲು ಮುಂತಾದ ಸಾಂಪ್ರದಾಯಿಕ ಶಕ್ತಿಮೂಲಗಳನ್ನು ಬಳಸುತ್ತಿದ್ದೇವೆ. ಈ ಇಂಧನಗಳ ಬಳಕೆ ಜನಸಂಖ್ಯೆ ಮತ್ತು ನಾಗರಿಕತೆ ಹೆಚ್ಚುತ್ತಲೇ ಇದೆ. ಒಂದು ಅಂದಾಜಿನಂತೆ ಪೆಟ್ರೋಲಿಯಂ ಇನ್ನು ಐವತ್ತು ವರ್ಷಗಳಲ್ಲಿ ಮತ್ತು ಕಲ್ಲಿದ್ದಲು ೨೦೦-೩೦೦ ವರ್ಷಗಳಲ್ಲಿ ಬರಿದಾಗಲಿದೆ. ಇದರಿಂದ ವಿಜ್ಞಾನಿಗಳು ಪರ್ಯಾಯ ಇಂಧನಗಳ ಬೃಹತ್ ಬೇಟೆಗೆ ಸಿದ್ಧತೆ ನಡೆಸಿದ್ದಾರೆ. ಈಗ ಅವರಿಗೆ ಕಂಡಿರುವ ಭವಿಷ್ಯದ ಇಂಧನದ ಮೂಲವೇ ಜಲಜನಕ (ಹೈಡ್ರೋಜನ್).
ಜಲಜನಕದ ವೈಶಿಷ್ಟ್ಯ: ಜಲಜನಕ ಒಂದು ಸರಳ ಮೂಲವಸ್ತು. ಅಲ್ಲದೆ ಅತ್ಯಂತ ದಹನಶೀಲ. ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ದೊರಕಬಹುದಾದ ವಸ್ತು. ಆದರೆ ಈ ಜಲಜನಕ ನಮ್ಮ ಭೂಮಿಯ ಮೇಲೆ ಸ್ವತಂತ್ರವಾಗಿ ಸಿಗುವ ವಸ್ತುವಲ್ಲ. ಭೂಮಿಯ ಮೇಲೆ ಜಲರಾಶಿ ಇರುವುದರಿಂದ ಜಲಜನಕದ ತಯಾರಿಕೆಗೆ ಕಚ್ಚಾ ವಸ್ತುವಿನ ಕೊರತೆಯಿಲ್ಲ. ಆದರೆ ಈಗ ಜಲಜನಕವನ್ನು ‘ಪಳೆಯುಳಿಕೆ ಇಂಧನ' ಗಳಿಂದ (Fossil Fuels) ಪಡೆಯಲಾಗುತ್ತಿದೆ.
ಬೇರೆಲ್ಲ ಇಂಧನಗಳು ದಹನ ಕ್ರಿಯೆಯ ನಂತರ ವಾತಾವರಣಕ್ಕೆ ಕಾರ್ಬಲ್ ಡೈ ಆಕ್ಷೈಡ್ ನ್ನು ಹೊರಕ್ಕೆ ಹಾಕಿ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಆದರೆ ಜಲಜನಕ ಪರಿಸರ ಸ್ನೇಹಿ. ಇದರ ದಹನದ ನಂತರ ಬಿಡುಗಡೆಯಾಗುವ ನಿಷ್ಕಾಷ ಅನಿಲಗಳು (ಅಂದರೆ, ಬಿಸಿ ಅನಿಲಗಳು) ಅತ್ಯಂತ ಕಡಿಮೆ. ಜಲಜನಕವನ್ನು ಇಂಧನವಾಗಿ ಬಳಸುವುದರಿಂದ ಉಂಟಾಗುವ ಪ್ರಯೋಜನಗಳು ಹೀಗಿವೆ -
ಜಲಜನಕ ಒಂದು ಅತ್ಯದ್ಭುತ ಇಂಧನ. ಇದು ಪೆಟ್ರೋಲ್ ಉತ್ಪನ್ನಗಳಿಗಿಂತ ೨-೩ ಪಟ್ಟು ಹೆಚ್ಚು ದಕ್ಷತೆಯನ್ನು ಹೊಂದಿದೆ. ನಾಲ್ಕೂವರೆ ಲೀಟರ್ ಪೆಟ್ರೋಲಿಯಂ ಇಂಧನ ಕೊಡಬಹುದಾದ ಶಕ್ತಿಯನ್ನು ಕೇವಲ ಕಿಲೋಗ್ರಾಂ ಜಲಜನಕ ನೀಡಬಲ್ಲದು. ಅಲ್ಲದೆ ದಹನ ಕ್ರಿಯೆಯ ನಂತರ ವಾತಾವರಣಕ್ಕೆ ಕಾರ್ಬನ್ ಡೈ ಆಕ್ಷೈಡ್ ನಂಥ ಮಲಿನಕಾರಕಗಳನ್ನು ಬಿಡುವ ಭಯವಿಲ್ಲ. ವಿಶೇಷ ತಂತ್ರಜ್ಞಾನದಲ್ಲಿ ಜಲಜನಕವನ್ನು ಇಂಧನವಾಗಿ ಬಳಸಿದರೆ ಇದನ್ನು ಪುನರ್ ನವೀಕರಣಗೊಳಿಸಲೂ ಬಹುದು.
* ಇಂಧನವಾಗಿ ಹೈಡ್ರೋಜನ್ (ಜಲಜನಕ) ಅನ್ನು ಇಂಧನವಾಗಿ ಬಹುತೇಕ ವಾಹನಗಳಲ್ಲಿ ಬಳಸಬಹುದು. ಜಲಜನಕವನ್ನು ಬಳಸಿ ವಾಹನಗಳ ಚಾಲನೆಗೆ ಬೇಕಾಗುವ ಯಾಂತ್ರಿಕ ಶಕ್ತಿಯನ್ನು ಸಾಮಾನ್ಯವಾಗಿ ಎರಡು ವಿಧಗಳಲ್ಲಿ ಉತ್ಪಾದಿಸಲಾಗುತ್ತದೆ. ೧. ನೇರವಾಗಿ ವಾಹನಗಳ ಎಂಜಿನ್ ಗಳಲ್ಲಿ ಜಲಜನಕವನ್ನು ದಹಿಸುವಂತೆ ಮಾಡುವುದರಿಂದ ೨. ಇಂಧನಕೋಶಗಳ ಸಹಾಯದಿಂದ ಜಲಜನಕ ಮತ್ತು ಆಮ್ಲಜನಕಗಳ ಪೂರಕ ಕ್ರಿಯೆಗಳಿಂದ ಉಂಟಾಗುವ ಶಕ್ತಿಯಿಂದ.
* ಹೈಡ್ರೋಜನ್ ನ ಉತ್ಪಾದನೆ ಮೇಲೆ ತಿಳಿಸಿದಂತೆ ಭೂ ವಾತಾವರಣದಲ್ಲಿ ಜಲಜನಕ ಸ್ವತಂತ್ರ ಸ್ಥಿತಿಯಲ್ಲಿ ದೊರಕದ ಒಂದು ಮೂಲವನ್ನು ಮುಖ್ಯವಾಗಿ ನೀರನ್ನು (H20) ವಿದ್ಯುತ್ ವಿಶ್ಲೇಷಣೆಗೆ ಒಳಪಡಿಸುವುದರಿಂದ ಜಲಜನಕವನ್ನು ಸುಲಭವಾಗಿ ಉತ್ಪಾದಿಸಬಹುದು. ಆದರೆ ಈ ಉತ್ಪಾದನೆಗೆ ಆಗುವ ವೆಚ್ಚ ಅಪಾರ.
* ಇಂಧನವಾಗಿ ಬಳಸುವಲ್ಲಿ ಇರುವ ತೊಡಕುಗಳು - ಉತ್ಪಾದನಾ ವೆಚ್ಚ ವಿಪರೀತ, ಇದರ ಶಕ್ತಿ/ಗಾತ್ರದ ಪ್ರಮಾಣ ತುಂಬಾ ಹೆಚ್ಚಾಗಿರುವುದು, ಸಾಂದ್ರತೆ ಕಡಿಮೆ ಇರುವುದರಿಂದ ಇದನ್ನು ಅತ್ಯಂತ ಹೆಚ್ಚು ಒತ್ತಡದಲ್ಲಿ ತುಂಬುವುದು, ಈ ಅನಿಲವನ್ನು ಅತ್ಯಂತ ಹೆಚ್ಚು ಒತ್ತಡದಲ್ಲಿ ಮತ್ತು ಹೆಚ್ಚು ಪ್ರಮಾಣದಲ್ಲಿ ತುಂಬಲು ಭಾರವಾದ ಮತ್ತು ದಪ್ಪನಾದ ಸಂಗ್ರಹ ಟ್ಯಾಂಕ್ ಗಳ ಬಳಕೆ, ಉತ್ಪಾದನೆಯಾದ ಜಲಜನಕದ ಸಂಗ್ರಹಣೆಯ ಸಮಸ್ಯೆ, ಇದು ಪರಮ ದಹನಾನುಕೂಲಿಯಾಗಿರುವುದರಿಂದ ಇದರ ಸಾಗಣೆ/ನಿರ್ವಹಣೆ ತುಂಬಾ ಕಷ್ಟಕರ, ಸಣ್ಣ ವಾಹನಗಳಲ್ಲಿ ದೊಡ್ದ ದೊಡ್ಡ ಹೈಡ್ರೋಜನ್ ಟ್ಯಾಂಕ್ ಗಳ ನಿರ್ಮಾಣ.
* ಜಲಜನಕ ಚಾಲಿತ ವಾಹನಗಳು ಬಸ್, ಕಾರು, ಬೈಕ್, ದೋಣಿ, ಗಾಲ್ಫ್ ಕೋರ್ಟ್ ಗಳಲ್ಲಿ ಬಳಸುವ ವಾಹನಗಳು, ಮೋಟಾರ್ ಸೈಕಲ್, ಹಡಗು, ಸಬ್ ಮರೀನ್ ಮತ್ತು ರಾಕೆಟ್ ಗಳಲ್ಲಿ ಜಲಜನಕವನ್ನು ಇಂಧನವಾಗಿ ಬಳಸಬಹುದು. ಅಮೇರಿಕಾದ ನಾಸಾ ತನ್ನ ಅಂತರಿಕ್ಷ ಶೋಧ ನೌಕೆಗಳನ್ನು ಹಾರಿಸಲು ಜಲಜನಕವನ್ನೇ ಇಂಧನವಾಗಿ ಬಳಸುತ್ತಿದೆ.
* ಜಲಜನಕ ಚಾಲಿತ ಬಸ್ ಗಳನ್ನು ‘ಫ್ಯೂಯೆಲ್ ಸೆಲ್ ಬಸ್ ಗಳು' ಎಂದು ಕರೆಯುತ್ತಾರೆ. ಈ ವಾಹನಗಳಲ್ಲಿ ಮೇಲ್ಛಾವಣಿಗಳಲ್ಲಿ ಅನೇಕ ಪದರಗಳಲ್ಲಿ ಹೈಡ್ರೋಜನ್ ಟ್ಯಾಂಕ್ ಗಳನ್ನು ಜೋಡಿಸಲಾಗುತ್ತದೆ. ಇತ್ತೀಚೆಗೆ ಬಸ್ಸಿನ ಒಳಭಾಗದಲ್ಲಿ ಇವುಗಳನ್ನು ಜೋಡಿಸುವ ಪ್ರಯತ್ನಗಳೂ ನಡೆದಿವೆ. ನೆನಪಿಡಿ. ಜಲಜನಕದ ಆಧಾರದ ಮೇಲೆ ಓಡಿದ ವಾಹನದ ವೇಗ ಗಂಟೆಗೆ ೪೬೧ ಕಿ.ಮೀಗಳು. ೨೦೦೭ರಲ್ಲಿ ಚೀನಾದ ಶಾಂಘೈನಲ್ಲಿ ನಡೆದ ಚೀನಾ ಇಂಟರ್ ನ್ಯಾಶನಲ್ ಎಕ್ಸಿಬಿಷನ್ ಆನ್ ಗ್ಯಾಸ್ ಟೆಕ್ನಾಲಜಿಯಲ್ಲಿ ಆ ದೇಶದ ಪಲ್ಸ್ ಪವರ್ ಸೂಪರ್ ಸಂಸ್ಥೆ ಜಲಜನಕ ಚಾಲಿತ ಬೈಸಿಕಲ್ ಅನ್ನು ಪ್ರದರ್ಶಿಸಿತ್ತು. ಹೈಡ್ರೋಜನ್ ಫ್ಯೂಯೆಲ್ ಸೆಲ್ ಗಳನ್ನು ಬಳಸಿ ಬೈಕ್ ಮತ್ತು ಸ್ಕೂಟರ್ ಗಳನ್ನು ಇತ್ತೀಚೆಗೆ ಉತ್ಪಾದಿಸಲಾಗುತ್ತಿದೆ. ಸುಝುಕಿ ಕಂಪೆನಿಯು ನರ್ಗ್ ನ್ಯಾನ್ ಫ್ಯೂಯಲ್ ಸ್ಕೂಟರ್ ನ್ನು ಮತ್ತು ಕ್ರಾಸ್ ಕ್ರೇಜ್ ಹಾಗೂ ಬೈಪ್ಲೇನ್ ಬೈಕ್ ಗಳನ್ನು ಉತ್ಪಾದಿಸುತ್ತಿದೆ.
ಬೋಯಿಂಗ್, ಲ್ಯಾಂಜ್ ಏವಿಯೇಷನ್ ಮತ್ತು ಜರ್ಮನ್ ಏರೋಸ್ಪೇಸ್ ನಂಥ ಪ್ರಖ್ಯಾತ ವಿಮಾನ ತಯಾರಿಕಾ ಸಂಸ್ಥೆಗಳು ತಾವು ತಯಾರಿಸುವ ಮಾನವ ಸಹಿತ ಮತ್ತು ಮಾನವ ರಹಿತ ವಿಮಾನಗಳಲ್ಲಿ ಜಲಜನಕವನ್ನೇ ಇಂಧನವಾಗಿ ಬಳಸುವ ಪ್ರಯತ್ನಗಳನ್ನು ಮುಂದುವರೆಸಿವೆ. ೨೦೦೮ರಲ್ಲಿ ಬೋಯಿಂಗ್ ವಿಮಾನ ಸಂಸ್ಥೆ ಸಣ್ಣ ಮಾನವ ಸಹಿತ ವಿಮಾನವನ್ನು ನಿರ್ಮಿಸಿ, ಅದರಲ್ಲಿ ಜಲಜನಕವನ್ನು ಇಂಧನವನ್ನಾಗಿ ಬಳಸಿ ಯಶಸ್ವಿಯಾಗಿದೆ.
* ಇಂದು ಬಹಳಷ್ಟು ರಾಕೆಟ್ ಗಳಲ್ಲಿ ಜಲಜನಕವನ್ನೇ ಇಂಧನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ರಾಕೆಟ್ ಗಳಲ್ಲಿ ಹೈಡ್ರೋಜನ್ ನನ್ನು ಇಂಧನವಾಗಿ ಬಳಸಿದಾಗ ಇದರಿಂದ ಅನೇಕ ಉಪ ಉತ್ಪನ್ನಗಳು ಬಿಡುಗಡೆಯಾಗುತ್ತವೆ. ಅವುಗಳಲ್ಲಿ ನೀರು ಮತ್ತು ಆಮ್ಲಜನಕಗಳು ಗಗನಯಾತ್ರಿಗಳಿಗೆ ಅತ್ಯಂತ ಅವಶ್ಯಕ ವಸ್ತುಗಳಾಗಿವೆ.
* ಭವಿಷ್ಯದ ಕ್ರಾಂತಿಕಾರಿ ಇಂಧನ ಭವಿಷ್ಯದಲ್ಲಿ ಇದೊಂದು ಕ್ರಾಂತಿಕಾರಿ ಇಂಧನವಾಗಿದ್ದು ಇಡೀ ಸಂಚಾರದ ವ್ಯವಸ್ಥೆಯಲ್ಲೇ ಒಂದು ಅದ್ಭುತ ಶಕ್ತಿಯ ಮೂಲವಾಗಿ ಹೊರಹೊಮ್ಮಲಿದೆ. ಪೆಟ್ರೋಲ್ ಮತ್ತು ಇತರೆ ಇಂಧನಗಳು ಮುಗಿದು ಹೋಗುತ್ತಿರುವ ಸಂಧ್ಯಾಕಾಲದಲ್ಲೇ ಹೈಡ್ರೋಜನ್ ‘ಭವಿಷ್ಯದ ಆಶಾ ಕಿರಣವಾಗಿ' ಹೊರಹೊಮ್ಮಲಿದೆ.
* ೧೯೯೨ರ ಎನರ್ಜಿ ಪಾಲಿಸಿ ಆಕ್ಟ್ (Energy Policy Act) ಪ್ರಕಾರ ಜಲಜನಕವನ್ನು ಭವಿಷ್ಯದ ಪರ್ಯಾಯ ಮತ್ತು ಅತ್ಯಂತ ಸಮರ್ಥ ಶಕ್ತಿಯ ಇಂಧನದ ಮೂಲ ಎಂದು ಘೋಷಿಸಲಾಗಿದೆ.
-ಕೆ.ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ