ಭವ್ಯ ಋಷಿ ಪರಂಪರೆಯ ಅಗಸ್ತ್ಯ ಮುನಿ
ಕನ್ಯಾಕುಮಾರಿಯಿಂದ ಬದರಿಕಾಶ್ರಮದವರೆಗೆ, ಮತ್ತೆ ಶ್ರೀಲಂಕಾ, ಜಾವಾ, ವಿಯೆಟ್ನಾಂ, ಇಂಡೋನೇಷಿಯಾ, ಕಾಂಬೋಡಿಯ, ಥೈಲ್ಯಾಂಡ್ ಮತ್ತು ಮಲಯಾ ದೇಶಗಳಲ್ಲಿ ಸಹ ಇಂದಿಗೂ ಗೌರವಿಸಲ್ಪಡುತ್ತಿರುವ ಹೆಸರು ಅಗಸ್ತ್ಯ ಮುನಿಗಳದ್ದು. ತಮಿಳರು ಅಕ್ಕತ್ತಿಯರ್, ಅಗಸ್ತಿಯರ್ ಎಂದು, ಥಾಯ್ ಭಾಷೆಯಲ್ಲಿ ಅಕ್ಕೂಟ್ ಎಂದು ಮಲಯದಲ್ಲಿ ಅಂಗಸ್ತ ಎಂದು ಕರೆಯಲ್ಪಡುವ ಇವರು ಸಪ್ತರ್ಷಿಗಳಲ್ಲಿ ಒಬ್ಬರು.
ಪೌರಾಣಿಕ ಹಿನ್ನೆಲೆ - ನಮ್ಮ ಪುರಾಣಗಳ ಮೊತ್ತ ಮೊದಲ ಪ್ರಣಾಳ ಶಿಶು ಅಗಸ್ತ್ಯರು. ಮಿತ್ರ ಮತ್ತು ವರುಣರು ಅಪ್ಸರೆ ಊರ್ವಶಿಯಲ್ಲಿ ಮೋಹಗೊಂಡು ತಮ್ಮ ರೇತಸ್ಸನ್ನು ಮಡಕೆಯೊಳಗೆ ವಿಸರ್ಜನೆ ಮಾಡಿದಾಗ ಅದನ್ನು ವಿಶೇಷವಾದ ರೀತಿಯಲ್ಲಿ ಕಾಪಾಡಿದಾಗ ಜನಿಸಿದವರು ಅಗಸ್ತ್ಯರು. ಆದ್ದರಿಂದ ಇವರಿಗೆ ಕುಂಭಸಂಭವ, ಕುಂಭ, ಕಳಶಜ ಎಂಬ ಹೆಸರುಗಳು ಇವೆ. ಪಿತೃಗಳ ಮೋಕ್ಷಕ್ಕೆ ಲೋಪಾಮುದ್ರೆಯನ್ನು ಸೃಷ್ಟಿಸಿ ಆಕೆಯನ್ನು ಅವಂತಿಯ ರಾಜನಿಗೆ ಇತ್ತು ವಯಸ್ಸಿಗೆ ಬಂದ ಮೇಲೆ ಆಕೆಯನ್ನು ವಿವಾಹವಾದ ಅಗಸ್ತ್ಯರು ಆಕೆಯ ಬಯಕೆಯಂತೆ ಧನಾಕಾಂಕ್ಷಿಗಳಾಗಿ ಇಲ್ವಲ ಎಂಬ ರಾಕ್ಷಸನ ಬಳಿ ಬರುತ್ತಾರೆ. ಆತನು ತನ್ನ ಸಹೋದರ ವಾತಾಪಿಯನ್ನು ಆಡಾಗಿ ಮಾರ್ಪಡಿಸಿ ಬ್ರಾಹ್ಮಣರಿಗೆ ಬಡಿಸಿ ನಂತರ ಮೃತ ಸಂಜೀವಿನಿ ವಿದ್ಯಾ ಪ್ರಯೋಗದಿಂದ ಆತ ಬ್ರಾಹ್ಮಣರ ಹೊಟ್ಟೆ ಸೀಳಿಕೊಂಡು ಬರುವಂತೆ ಮಾಡಿ ಒಂಭತ್ತು ಸಹಸ್ರ ಬ್ರಾಹ್ಮಣರನ್ನು ಕೊಂದು ಅವರ ಸ್ವತ್ತನ್ನು ವಶಪಡಿಸಿಕೊಂಡಿರುತ್ತಾನೆ. ವಾತಾಪಿ ಜೀರ್ಣೋಭವ ಎಂದು ಅವನನ್ನು ಜೀರ್ಣಿಸಿಕೊಂಡ ಅಗಸ್ತ್ಯರು ಇಲ್ವಲ ನೀಡಿದ ಅಪಾರ ಧನ ಕನಕಗಳೊಂದಿಗೆ ಮರಳುತ್ತಾರೆ. ಸಮುದ್ರದ ಒಳಗೆ ಅಡಗಿದ ರಾಕ್ಷಸರನ್ನು ಕೊಲ್ಲಲು ಸಮುದ್ರವನ್ನೇ ಆಪೋಶನ ತೆಗೆದುಕೊಂಡು ದೇವತೆಗಳಿಗೆ ನೆರವಾಗುತ್ತಾರೆ. ಯೋಗಸಮಾಧಿಯಲ್ಲಿದ್ದ ಪರಶಿವನನ್ನು ಆರಾಧಿಸುತ್ತಾ ಸಪ್ತರ್ಷಿಗಳು ಮಹಾಮೇರುವಿನಲ್ಲೇ ಸ್ಥಿತರಾಗಲು ಭೂಮಿಯ ಭಾರ ಒಂದೆಡೆಗೆ ವಾಲಿದಾಗ ಪರಶಿವನ ಆದೇಶದಂತೆ ಸಮಭಾರ ಮಾಡಲು ದಕ್ಷಿಣಕ್ಕೆ ಬರುತ್ತಾರೆ. ದಾರಿಯಲ್ಲಿ ಮಹಾಮೇರುವಿನೊಡನೆ ಸ್ಪರ್ಧೆ ಹೂಡಿ ಬೆಳೆಯುತ್ತಿರುವ ವಿಂಧ್ಯ ಪರ್ವತವನ್ನು ಉಪಾಯಮಾಡಿ ತಡೆಯುತ್ತಾರೆ. ದಕ್ಷಿಣ ಭಾರತದಲ್ಲಿ ಅವರ ಕಮಂಡಲದ ಗಂಗೆಯನ್ನೇ ಗಣಪತಿ ಉರುಳಿಸಿ ಬಿಡಲು ಅದು ಕಾವೇರಿ ಎನಿಸಿಕೊಳ್ಳುತ್ತದೆ.
ನಾಲ್ಕು ವೇದಗಳಲ್ಲಿ, ರಾಮಾಯಣ, ಮಹಾಭಾರತ, ಪದ್ಮಪುರಾಣ, ಮತ್ಸ ಪುರಾಣಗಳಲ್ಲಿ ಅಗಸ್ತ್ಯರ ಉಲ್ಲೇಖ ಇದೆ. ತಮಿಳು ಪುರಾತನ ಗ್ರಂಥ ಪುನರಾರೂರು, ಮೊದಲನೇ ಶತಮಾನದ ಬೌದ್ಧ ಗ್ರಂಥಗಳಲ್ಲಿ ಅಗಸ್ತ್ಯರ ಹೆಸರು ಬರುತ್ತದೆ. ಐದನೇ ಶತಮಾನದಲ್ಲಿ ಕಟ್ಟಲ್ಪಟ್ಟ ದೇವಾಲಯಗಳು ಅಗಸ್ತ್ಯರ ವಿಗ್ರಹ ಹೊಂದಿವೆ.
ಪ್ರಸ್ತುತ ಭಾರತದಲ್ಲಿ ರುದ್ರ ಪ್ರಯಾಗದಲ್ಲಿ ಅಗಸ್ತ್ಯಮುನಿ ದೇವಸ್ಥಾನ, ಕನೌಜ್, ಸಾಂಗ್ಲಿ, ತಂಜಾವೂರು, ಕನ್ಯಾಕುಮಾರಿ, ತಿರುವನಂತಪುರಮ್, ತಿರುನೆಲ್ವೇಲಿ, ಮಧುರೈ ಮುಂತಾದ ಕಡೆಗಳಲ್ಲಿ ಅಗಸ್ತ್ಯರ ವಿಗ್ರಹ ದೇವಳಗಳಲ್ಲಿ ಕಂಡು ಬರುತ್ತದೆ. ದೇಶಾದ್ಯಂತ ಏಳುನೂರು ಆಶ್ರಮಗಳು ಅಗಸ್ತ್ಯರ ಹೆಸರಿನಲ್ಲಿ ಇವೆ.
ಅಗಸ್ತ್ಯರ ಕೊಡುಗೆಗಳು:
1. ಋಗ್ವೇದದ ಒಂದು ಭಾಗದ ರಚನೆ
2. ಲಲಿತಾ ಸಹಸ್ರ ನಾಮವನ್ನು ಹಯಗ್ರೀವ ದೇವರಿಂದ ಕಲಿತು ಲೋಕಕ್ಕೆ ನೀಡಿದ್ದು.
3. ಶ್ರೀ ರಾಮನು ರಾವಣನ ಮೇಲೆ ವಿಜಯ ಸಾಧಿಸಲು ನೆರವಾಗಲು ಆದಿತ್ಯ ಹೃದಯ ಉಪದೇಶ ಮಾಡಿದ್ದು.
4. ಲಕ್ಷ್ಮಿ ಸ್ತೋತ್ರ, ಸರಸ್ವತಿ ಸ್ತೋತ್ರ ರಚನೆ.
5. ಅಗಸ್ತ್ಯ ಸಂಹಿತೆ ರಚನೆ
6. ಇಂದಿಗೂ ಪ್ರಚಲಿತವಿರುವ ವಿಶ್ವದ ಅತ್ಯಂತ ಪ್ರಾಚೀನ ಸಮರಕಲೆ ಕಳರಿಪಯಟ್ ನ ಜನಕ ಅಗಸ್ತ್ಯರು.
7. ತಮಿಳು ಭಾಷೆಯ ಜನಕ. ಅಗತ್ತಿಯಮ್ ಅವರ ವ್ಯಾಕರಣ ಗ್ರಂಥ.
8. ಸಿದ್ಧ ಔಷಧ ವಿದ್ಯೆ ಇಂದಿಗೂ ಪ್ರಸ್ತುತ. ಜನಕ ಅಗಸ್ತ್ಯರು
9. ಇಂದಿಗೂ ಪ್ರಚಲಿತವಿರುವ ನಾಡಿಜ್ಯೋತಿಷ್ಯ ಅಗಸ್ತ್ಯರು ನೀಡಿದ ಕೊಡುಗೆ.
10. ಕ್ರಿಯಾಯೋಗವನ್ನು ಪರಶಿವನು ಪಾರ್ವತಿಗೂ, ಪಾರ್ವತಿ ಕಾರ್ತಿಕೇಯನಿಗೂ ಅವನು ಅಗಸ್ತ್ಯರಿಗೂ ತಿಳಿಸಿದ ಎಂದು ನಂಬಿಕೆ.
ಇತ್ತೀಚಿನ ಕ್ರಿಯಾಯೋಗಿಗಳಾದ ಪರಮಹಂಸ ಯೋಗಾನಂದ (ಆಟೋಬಯಾಗ್ರಫಿ ಆಫ್ ಯೋಗಿ) ಅವರ ಗುರು ಯುಕ್ತೇಶ್ವರ ಗಿರಿಯವರು ಮಹಾವತಾರಿ ಬಾಬಾ ಎಂಬ ತೇಜಸ್ವಿ ಮಹಾಪುರುಷರ ದರ್ಶನ ಮಾಡಿದ ಅನುಭವವನ್ನು ವರ್ಣಿಸಿದ್ದಾರೆ. ಮಹಾವತಾರಿ ಬಾಬಾ ಕಳೆದ ಎರಡು ಸಾವಿರ ವರ್ಷಗಳಿಂದಲೂ ಅಸ್ತಿತ್ವದಲ್ಲಿ ಇದ್ದಾರೆ. ಅವರ ಕ್ರಿಯಾಯೋಗ ಗುರುಗಳು ಅಗಸ್ತ್ಯರು. ಶ್ರೀ ಎಂ.( ಮಮ್ತಾಜ್ ಅಲಿ- ಮಧುಕರನಾಥಜಿ) ಅವರೂ ಸಹ ತಮ್ಮ ಗುರುಗಳಾದ ಮಹೇಶ್ವರನಾಥಜಿಯವರ ಮೂಲಕ ಮಹಾವತಾರಿ ಬಾಬಾರ ದರ್ಶನ ಮಾಡಿದ್ದಾಗಿ ಬರೆದುಕೊಂಡಿದ್ದಾರೆ. ಇವೆಲ್ಲ ಅನೂಹ್ಯವೂ ನಮ್ಮ ತಿಳುವಳಿಕೆಯ ವ್ಯಾಪ್ತಿಗೆ ಮೀರಿದ್ದೂ ಅಲ್ಲವೇ ?
(ಆಧಾರ) ಸತೀಶ್ ಶೆಟ್ಟಿ ಚೇರ್ಕಾಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ