ಭಾಗ - ೫: ಅಯ್ಯಪ್ಪ ದೀಕ್ಷೆಯ ನಿಜವಾದ ಅರ್ಥ

ಭಾಗ - ೫: ಅಯ್ಯಪ್ಪ ದೀಕ್ಷೆಯ ನಿಜವಾದ ಅರ್ಥ

     ಮಹಿಷಿ ನೋಡಿದರೆ ಒಂದು ಕಾಲದವಳು, ಸಮುದ್ರ ಮಥನ ನಡೆದದ್ದು (ಆಗ ವಿಷ್ಣು ಮೋಹಿನಿ ಅವತಾರವೆತ್ತಿದ್ದು) ಒಂದು ಕಾಲದಲ್ಲಿ, ಪರಶುರಾಮ, ಶಬರಿ ಮತ್ತು ಆಂಜನೇಯರು ಜೀವಿಸಿದ್ದು ಮತ್ತೊಂದು ಕಾಲದಲ್ಲಿ, ಮಣಿಕಂಠ ಜನಿಸಿದ್ದು ಪಾಂಡುಕುಲದ ಸಾಮಂತರಾಗಿದ್ದ ಪಂದಳದ ಅರಸರ ಕಾಲದಲ್ಲಿ. ಇವನ್ನೆಲ್ಲಾ ನೋಡುತ್ತಿದ್ದರೆ ಅಯ್ಯಪ್ಪನ ಪುರಾಣ ಅದನ್ನು ಭೂತನಾಥೋಪಖ್ಯಾನ ಎಂದೂ ಕರೆಯುತ್ತಾರೆ ಇದರ ಬಗ್ಗೆ ಅನುಮಾನ ಮೂಡುವುದರಲ್ಲಿ ಸಂಶಯವಿಲ್ಲ. ಹಾಗದರೆ ಇದೆಲ್ಲಾ ಸುಳ್ಳೇ ಎನ್ನುವ ಪ್ರಶ್ನೆಯೂ ಕಾಡದಿರದು. ಇದನ್ನು ಸದ್ಗುರು ಜಗ್ಗಿ ವಾಸುದೇವರ ಮಾತಿನಲ್ಲಿ ವಿವರಿಸ ಬಹುದೆನಿಸುತ್ತದೆ. ಅವರು ಹೇಳುವುದೇನೆಂದರೆ ಪುರಾಣಗಳೆಲ್ಲ ವಾಸ್ತವವಲ್ಲ ಆದರೆ ಸತ್ಯಗಳು. (Puranas are not facts but they are truth). ಅಂದರೆ ಅವುಗಳಲ್ಲಿ ಚಾರಿತ್ರಿಕ ಸತ್ಯವಿಲ್ಲದೇ ಇರಬಹುದು ಆದರೆ ಅವುಗಳಲ್ಲಿ ಸರ್ವಕಾಲಿಕ ಸತ್ಯಗಳು ಅಡಗಿವೆ ಎಂಬುದೇ ಆಗಿದೆ. ಅವುಗಳು facts ಅಲ್ಲವೆಂದ ಮೇಲೆ ಅವುಗಳನ್ನು ಇಟ್ಟುಕೊಳ್ಳಬೇಕೇಕೆ ಎನ್ನುವ ಪ್ರಶ್ನೆ ಉದ್ಭವಿಸುವುದೂ ಅಷ್ಟೇ ಸಹಜ. ಅದಕ್ಕೆ ಶ್ರೀ ರಾಮಕೃಷ್ಣ ಪರಮಹಂಸರು ಒಂದು ಉದಾಹರಣೆ ಕೊಡುತ್ತಾರೆ. ನಮ್ಮ ಅನೇಕ ಸಂಪ್ರದಾಯಗಳು ಬತ್ತದ ಮೇಲಿನ ತೌಡಿನಂತೆ ಅದರಿಂದ ಯಾವುದೇ ಪ್ರಯೋಜನವಿಲ್ಲದೆ ಇರಬಹುದು ಆದರೆ ಅದು ತಲೆಮಾರಿನಿಂದ ತಲೆಮಾರಿಗೆ ಕಾಳಿನ ಅಂತಃಸತ್ವವಾದ ಬೀಜವನ್ನು ಕಾಪಾಡಿಕೊಂಡು ಬರುತ್ತದೆ ಎನ್ನುವುದರಲ್ಲಿ ಅದರ ಮಹತ್ವವನ್ನು ವಿವರಿಸುತ್ತಾರೆ. ಅದೇ ರೀತಿ ನಾವು ಯಾವುದೇ ಗಹನವಾದ ವಿಷಯವನ್ನು ಹೇಳುವಾಗ ಅದನ್ನು ಒಂದು ಕತೆಯ ರೂಪದಲ್ಲಿ ಹೇಳಿದಾಗ ಅದು ಹೆಚ್ಚು ಕಾಲ ಮನದಲ್ಲಿ ನಿಲ್ಲುವುದು ಈ ದೃಷ್ಠಿಯಿಂದಲೂ ನಮಗೆ ಪುರಾಣಗಳು ಮಹತ್ವದ್ದೆನಿಸುತ್ತವೆ. ತಿರುಳಿಗಿಂತ ಸಿಪ್ಪೆಯ ಬಗ್ಗೆಯೇ ಚರ್ಚೆ ಹೆಚ್ಚಾಯಿತೆಂದುಕೊಳ್ಳುತ್ತೇನೆ; ಈಗ ಮೂಲ ವಿಷಯಕ್ಕೆ ಬರೋಣ.


      ಸಂಸಾರವೆಂಬ ಅಡವಿಯಲ್ಲಿ ನಾವು ಭಗವಂತನನ್ನು ಅನುಸರಿಸಿ ಹೊರಟಾಗ ಅನೇಕ ಅಡೆ-ತಡೆಗಳುಂಟಾಗುತ್ತವೆ. ಅವುಗಳನ್ನು ಒಂದೊಂದಾಗಿ ಜಯಿಸಿದಾಗ ನಮಗೆ ಭಗವಂತನ ಬಳಿ ಸೇರಲು ಅನುಕೂಲವಾಗುತ್ತದೆ. ಈ ಹಾದಿಯಲ್ಲಿ ಹೊರಟ ನಾವು ಪ್ರಪ್ರಥಮವಾಗಿ ದುರಾಸೆಯನ್ನು ಜಯಿಸಬೇಕು. ಈ ದುರಾಸೆಯ ಪ್ರತೀಕವೇ ವಾವರ. ಅವನ ಮೇಲಿನ ಜಯವನ್ನೇ ನಶ್ವರವಾದ ಐಶ್ವರ್ಯದ ಮೇಲಿನ ದುರಾಸೆಯ ಮೇಲಿನ ಜಯವೆಂದು ಸಾಂಕೇತಿಕವಾಗಿ ನಾವು ಅರಿತುಕೊಳ್ಳ ಬೇಕು. ಹೀಗೆ ದುರಾಸೆಯನ್ನು ಜಯಿಸಿದ ಮನುಷ್ಯನಿಗೆ  ತನ್ನ ದಾರಿಯಲ್ಲಿ ಹಿನ್ನಡೆಯುಂಟಾಗುವುದು ಆಲಸ್ಯತನ ಅಥವಾ ಸೋಮಾರಿತನ ಮತ್ತು ಅಜ್ಞಾನದಿಂದ. ಎಮ್ಮೆ ಅಥವಾ ಮಹಿಷಿ ಈ ಸೋಮಾರಿತ ಮತ್ತು ಅಜ್ಞಾನದ ಸಂಕೇತ. ಇವುಗಳ ಮೇಲಿನ ವಿಜಯವೇ ಮಹಿಷಿಯ ಮರ್ಧನ. ಹಲವಾರು ದಿನಗಳ ಕಾಲ ನಡೆಯುವ ಯುದ್ಧ ನಾವು ದೀರ್ಘಕಾಲ ಆಲಸ್ಯ ಮತ್ತು ಅಜ್ಞಾನದ ವಿರುದ್ಧ ಹೋರಾಡಬೇಕೆಂದು ಸೂಚಿಸಿದರೆ; ಶಿವ ಮತ್ತು ಪಾರ್ವತಿಯರು ಮಹಿಷಿ ಮತ್ತು ಮಣಿಕಂಠನ ಹೋರಾಟವನ್ನು ನೋಡುತ್ತಿದ್ದರೆಂದರೆ ನಮ್ಮ ಈ ಹೋರಾಟದಲ್ಲಿ ಭಗವಂತನು ನಮಗೆ ಸಹಾಯಕನಾಗಿ ನಿಂತಿರುವುದರ ಸಂಕೇತವೆ ಆಗಿದೆ. ಸೋಮಾರಿತನ ಮತ್ತು ಅಜ್ಞಾನವನ್ನು ಮನುಷ್ಯ ಹೋಗಲಾಡಿಸಿಕೊಂಡು ಚುರುಕಾಗಿದ್ದು ಜ್ಞಾನವಂತನಾದರೂ  ಕಾಮದಿಂದ ವಿಮುಕ್ತನಾಗಲಾರ ಇದರ ಸಂಕೇತವೇ ಮಹಿಷಿಯಿಂದ ಶಾಪ ವಿಮೋಚನೆಗೊಂಡ ಗಂಧರ್ವ ಕನ್ಯೆಯ ಪ್ರಸಂಗ. ಮನುಷ್ಯ ಕಾಮಕ್ಕಾಗಿ ಅಥವಾ ಬಯಸಿದವರಿಗಾಗಿ ಕೊಡಗಟ್ಟಲೆ ಏಕೆ ನದಿಯಷ್ಟು ಕಣ್ಣೀರು ಸುರಿಸುತ್ತಾನೆನ್ನುವುದರ ಸಂಕೇತವೇ ಅಳುದಾ ನದಿಯ ಪ್ರತೀಕ. ಸೋಮಾರಿತನವನ್ನು ಮತ್ತು ಅಜ್ಞಾನವನ್ನು ಗೆದ್ದುದರ ಸಂಕೇತ ಮತ್ತು ಅದು ಮತ್ತೊಮ್ಮೆ ಎದ್ದು ಬಾರದಿರಲೆಂದು ನಾವು ಎರೆಡೆರಡು ಬಾರಿ ಧೃಡಪಡಿಸಿಕೊಳ್ಳುವುದರ ಸಾಂಕೇತಿಕ ರೂಪವೇ ಮಹಿಷಿ ಸತ್ತ ಜಾಗದಲ್ಲಿ ಎರಡು ಕಲ್ಲನ್ನಿರಿಸಿ ಹಿಂತಿರುಗಿ ನೋಡದೇ ಬರುವ ಉದ್ದೇಶ. ಹೀಗೆ ಮನುಷ್ಯ ಸೋಮಾರಿತನ, ದುರಾಸೆ, ಅಜ್ಞಾನ ಮತ್ತು ಕಾಮವನ್ನು ಜಯಿಸಿದಾಗ ನಮಗೆ ಒಲಿಯುವುದೇ ಅಧಿಕಾರ. ಮೊದಲನೆಯವನ್ನು ಜಯಸಿದರೂ ಕೂಡಾ ಅಧಿಕಾರ ಮೋಹ ಅಥವಾ ಕೀರ್ತಿಯ ಮೋಹ ನಮ್ಮನ್ನು ಬಿಡದು. ಹೀಗೆ ಅಧಿಕಾರದ ಸಂಕೇತವೇ ದೇವೇಂದ್ರ ಮೇಲಿನಿಂದ ಕೆಳಗೆ ಇಳಿದು ಬರುವುದರ ಹಿಂದಿನ ಅರ್ಥ. ಈ ಅಧಿಕಾರವೆನ್ನುವು ಹುಲಿಯ ಮೇಲಿನ ಸವಾರಿಯಿದ್ದಂತೆನ್ನುವುದನ್ನು ಪ್ರತಿಬಿಂಬಿಸುವುದೇ ಮಣಿಕಂಠನ ಹುಲಿಯ ಸವಾರಿಯ ಹಿಂದಿರುವ ಅರ್ಥ. ಒಮ್ಮೆ ಹುಲಿಯನ್ನೇರಿದವನು ಬಹಳ ಹೊತ್ತು ಅದರ ಮೇಲೂ ಕೂರಲಾರ ಮತ್ತು ಕೆಳಗಿಳಿಯಲಾರ ಏಕೆಂದರೆ ಮೇಲಿದ್ದರೂ ಹುಲಿ ಯಾವಾಗ ನಮ್ಮನ್ನು ಕೆಡವಿ ಕೊಲ್ಲುತ್ತದೋ ತಿಳಿಯದು ಮತ್ತು ಕೆಳಗಿಳಿದರೂ ಕೂಡ ಅದು ನಮ್ಮನ್ನು ಕಬಳಿಸದೆ ಸುಮ್ಮನೆ ಬಿಡದು ಎನ್ನುವುದು ಇದರ ವಿಶಾಲ ಅರ್ಥ. ರಾಣಿಗೆ ಅಧಿಕಾರ ಸವಿಯ ಬೇಕೆಂಬ ಕಲ್ಪನೆಯೇ ಹುಲಿಯ ಹಾಲನ್ನು ಸೇವಿಸಬೇಕೆಂಬುದರ ದ್ಯೋತಕ. ಅಂದರೆ ಅಧಿಕಾರದ ಆಸೆ ನಮಗೆ ತಲೆಶೂಲೆಯನ್ನುಂಟು ಮಾಡುತ್ತದೆ ಮತ್ತು ಅಧಿಕಾರವೆನ್ನುವುದು ಹುಲಿಯ ಹಾಲಿನಷ್ಟೇ ದುರ್ಲಭ ಎಂದು ತಿಳಿಸುತ್ತದೆ. ದೇವೇಂದ್ರನ ಪರಿವಾರವೂ ಕೂಡ ಹುಲಿಯಾಗುವುದರ ಅರ್ಥ ಅಧಿಕಾರದ ಸುತ್ತ ಇರುವವರೂ ಕೂಡ ಹುಲಿಯಷ್ಟೇ ಭಯಂಕರರು ಎನ್ನುವುದರ ಸಂಕೇತ. ಮುಂದೆ ಆಂಜನೇಯ ಮತ್ತು ಶಬರಿಯರು ಕೊಡುವ ಸಂಕೇತ ಹೀಗಿದೆ. ಆಂಜನೇಯನಂತೆ ಸ್ವಾಮಿ ಭಕ್ತಿಯಿಟ್ಟುಕೊಂಡು ಶಬರಿಯಂತೆ ನಿಃಸ್ವಾರ್ಥ ಸೇವೆಯಿಂದ ಬಹುಕಾಲ ಕಾಯ್ದರೆ ನಮಗೆ ಭಗವಂತನ ದರ್ಶನವಾಗುವುದೆಂದು.


    ಹದಿನೆಂಟು ಮೆಟ್ಟಿಲುಗಳು ನಾವು ಹದಿನೆಂಟು ವರ್ಷಗಳು ಅಕುಂಠಿತ ದೀಕ್ಷೆಯನ್ನು ಕೈಕೊಂಡರೆ ಭಗವಂತನ ಹತ್ತಿರ ಹೋಗುತ್ತೇವೆನ್ನುವುದರ ಸಂಕೇತ. ಹಾಗೆಯೇ ಒಂದೊಂದು ಮೆಟ್ಟಿಲನ್ನು ಏರುತ್ತಾ ಹೋದಂತೆ ನಮಗೆ ಒಂದೊಂದೇ ಶಕ್ತಿಗಳು/ಸಿದ್ಧಿಗಳು ಉಂಟಾಗುತ್ತವೆ ಎನ್ನುವುದರ ಸಂಕೇತ. ಅವು ಅಣಿಮಾದಿ ಸಿದ್ಧಿಗಳು ಮೊದಲಾದವು. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದು. ಅಣಿಮಾ ಎಂದರೆ ಅಣುವಿನಷ್ಟು ಸಣ್ಣಗಾಗಿ ಯಾರ ಕಣ್ಣಿಗೂ ಬೀಳದಂತೆ ಇರುವುದು. ಗರಿಮಾ ಎಂದರೆ ಬೆಟ್ಟದಷ್ಟು ಭಾರವಾಗುವುದು. ಈ ಸ್ಥಿತಿಯಲ್ಲಿ ಯಾರು ಎಷ್ಟೇ ಬಲಪ್ರಯೋಗಿಸಿದರೂ ಕೂಡ ಒಂದು ಅಂಗುಲವೂ ಕದಲಿಸಲಾಗುವುದಿಲ್ಲ. ಲಘಿಮಾ, ಹಕ್ಕಿಯ ಪುಕ್ಕದಷ್ಟು ಹಗುರವಾಗುವುದು. ಮಹಿಮಾ ಎಂದರೆ ಬೃಹದಾಕಾರ ಆಕಾಶದಷ್ಟೆತ್ತರ ಬೆಳೆಯುವ ಸಾಮರ್ಥ್ಯ. ಬಹುರೂಪ ಧಾರಣೆ, ಪಶು ಪಕ್ಷಿಗಳ ಭಾಷೆಯನ್ನು ಅರಿಯುವುದು, ಬೇರೆಯವರ ಮನಸ್ಸಿನಲ್ಲಿದ್ದುದ್ದನ್ನು ತಿಳಿಯುವ ಸಾಮರ್ಥ್ಯ, ನಮ್ಮ ಆಲೋಚನೆ ಬೇರೆಯವರಿಗೆ ಗೊತ್ತಾಗದಂತೆ ಮಾಡುವುದು, ನಮಗೆ ಬೇಕಾದ ರೀತಿಯಲ್ಲಿ ಎದುರಿಗಿನ ವ್ಯಕ್ತಿಗೆ ಭ್ರಮೆಯುಂಟು ಮಾಡುವುದು, ಶೂನ್ಯದಿಂದ ಬೇಕಾದ್ದನ್ನು ಸೃಷ್ಟಿಸುವುದು ಹೀಗೆ ಹತ್ತು ಹಲವು ರೀತಿಯ ಶಕ್ತಿಗಳು ನಮಗೆ ದೀಕ್ಷೆಯನ್ನು ನಿಷ್ಠೆಯಿಂದ ಮಾಡಿದರೆ ದೊರೆಯುತ್ತವೆ. ಈ ಹದಿನೆಂಟು ಮೆಟ್ಟಲುಗಳು ಬಹಳ ಕಿರಿದಾಗಿ ಮತ್ತು ಕಡಿದಾಗಿರುವುದರ ಸಂಕೇತ ಈ ಶಕ್ತಿಗಳನ್ನು ಪಡೆದವರು ಅದರ ಸದುಪಯೋಗವನ್ನು ಮಾಡಿಕೊಳ್ಳದಿದ್ದರೆ ಮೆಟ್ಟಿಲುಗಳ ಮೇಲಿಂದ ಆಯತಪ್ಪಿ ಬಿದ್ದಂತೆ ನೈತಿಕವಾಗಿ ಕೆಳಗೆ ಬೀಳುತ್ತಾನೆ ಮತ್ತು ಭಗವಂತನ ಹತ್ತಿರ ಹೋಗಲಾಗುವುದಿಲ್ಲ ಎನ್ನುವುದರ ಬಗ್ಗೆ ಎಚ್ಚರಿಸುತ್ತವೆ. ಒಂದೊಂದು ಮೆಟ್ಟಲಿಗೆ ಕರ್ಪೂರ ದೀಪವನ್ನು ಅಂಟಿಸುತ್ತಾ ಮೇಲೆ ಸಾಗುವ ಪೂಜಾ ಕ್ರಮವಿದೆ. ಇದು ನಮ್ಮಲ್ಲಿರುವ ಅರಿಷಡ್ವರ್ಗ ಮೊದಲಾದ ದುರ್ಗುಣಗಳು ಅವು ಕೂಡ ಸುಮಾರು ಹದಿನೆಂಟು ಬಗೆಯವು ಅವುಗಳೆಲ್ಲಾ ಕರ್ಪೂರದಂತೆ ಶೇಷವಿಲ್ಲದೆ ಕರಗಿ ಹೋದಾಗ ನಾವು ಭಗವಂತನಿಗೆ ಸಮೀಪರಾಗುತ್ತಾ ಹೋಗುತ್ತೇವೆ ಎಂದು ಬಿಂಬಿಸುತ್ತದೆ. ಇನ್ನು ಮೆಟ್ಟಿಲುಗಳನ್ನು ದಾಟಿದ ಮೇಲೆ ಗುಡಿಯ ಮುಂಭಾಗದಲ್ಲಿ ಕಾಣುವ ತತ್ವಮಸಿ ಎನ್ನುವ ಸಂಸ್ಕೃತ ವಾಕ್ಯಕ್ಕೆ ಬರೋಣ. ಅದರ ಅರ್ಥ ಅದು ನೀನೇ ಆಗಿದ್ದೀಯಾ. ಅಂದರೆ ಅಯ್ಯಪ್ಪನನ್ನು ನೋಡಲು ಬಂದಿರುವ ನೀನು ಸಾಕ್ಷಾತ್ ಅಯ್ಯಪ್ಪನೇ ಆಗಿದ್ದೀಯಾ ಎನ್ನುವುದೇ ಆಗಿದೆ; ಏಕೆಂದರೆ ತನ್ನಲ್ಲಿರುವ ದುರ್ಗುಣಗಳನ್ನೆಲ್ಲಾ ದಹಿಸಿಕೊಂಡು ನಾನಾ ವಿಧವಾದ ಶಕ್ತಿಗಳನ್ನು ಪಡೆದುಕೊಂಡವನು ಸಾಕ್ಷಾತ್ ಭಗವಂತನ ಸ್ವರೂಪನೇ ಆಗುತ್ತಾನೆ ಎನ್ನುವುದರಲ್ಲಿ ಸಂದೇಹವಿಲ್ಲ.  ಇದನ್ನು ಜ್ಞಾಪಿಸುವ ಉದ್ದೇಶದಿಂದ ಅಯ್ಯಪ್ಪನ ಮಾಲೆಯನ್ನು ಧರಿಸುವವರು ತಮ್ಮಲ್ಲಿ ಮತ್ತು ಇತರೆಲ್ಲರಲ್ಲಿಯೂ ಅಯ್ಯಪ್ಪನನ್ನು ಕಾಣಬೇಕೆಂದು ಎಲ್ಲರನ್ನೂ ಅಯ್ಯಪ್ಪ ಅಥವಾ ಸಂಕ್ಷಿಪ್ತವಾಗಿ ಸ್ವಾಮಿ ಎಂದು ಸಂಭೋದಿಸುವುದನ್ನು ರೂಢಿಗೆ ತಂದಿದ್ದಾರೆ. ಇನ್ನು ಜ್ಯೋತಿಯ ಉದ್ದೇಶ ಮತ್ತು ಅದು ನಮಗೆ ತಿಳಿಸುವ ಸಂದೇಶವೇನೆಂದರೆ ಭಗವಂತ ನನ್ನ ಅಥವಾ ನಿನ್ನ ಹಾಗೆ ಮನುಷ್ಯ ರೂಪಿಯಲ್ಲ ಅವನು ಜ್ಯೋತಿ ಸ್ವರೂಪ. ಅಂದರೆ ಅವನು ನಿರಾಕಾರ ಮತ್ತು ಜ್ಞಾನದ ಸಂಕೇತ ಎನ್ನುವುದನ್ನು ಬಿಂಬಿಸುವುದೇ ಆಗಿದೆ. ಜ್ಯೋತಿಯು ನಾವು ಅಯ್ಯಪ್ಪನ ಸನ್ನಿಧಿಯಲ್ಲಿ ನಿಂತಾಗ ನಮ್ಮ ಬೆನ್ನಹಿಂದಿರುವ ಬೆಟ್ಟದಲ್ಲಿ ಕಾಣುವ ಉದ್ದೇಶ ನಿನ್ನಲ್ಲಿಯೇ ಆ ಜ್ಯೋತಿಯನ್ನು ಕಂಡುಕೋ ಎನ್ನುವುದರ ಉದ್ದೇಶವೂ ಅಡಗಿದೆ.

    ಇರುಮುಡಿಯ ಉದ್ದೇಶವೇನು ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡರೆ ಅದಕ್ಕೂ ವಿಶೇಷವಾದ ಅರ್ಥವಿದೆ. ಅದರಲ್ಲಿ ಮೊದಲೇ ತಿಳಿಸಿದಂತೆ ಒಂದೆಡೆ ಪೂಜೆಗೆ ಬೇಕಾಗುವ ಸಾಮಾನು ಮತ್ತು ಇನ್ನೊಂದೆಡೆ ನಾವು ಬದುಕಲು ಆವಶ್ಯವಿರುವ ಸಾಮಾನು ಅಕ್ಕಿ ಇರುತ್ತದೆ. ಇವೆರಡನ್ನೂ ನಾವು ತಲೆಯ ಮೇಲೆ ಹೊತ್ತು ಎಲ್ಲಿಯೂ ಕೆಳಗಿಳಿಸದೆ ಸಾಗಬೇಕೆನ್ನುವುದರ ಹಿನ್ನಲೆ ಮನುಷ್ಯನಾದವನು ಮುಕ್ತಿ ಮತ್ತು ಭುಕ್ತಿ ಸಾಧನವನ್ನು ಜೊತೆಜೊತೆಯಾಗಿಯೇ ತೆಗೆದುಕೊಂಡು ಹೋಗಬೇಕು. ನಾನು ಕೆಲಸದಲ್ಲಿ ಬಹಳ ನಿರತನಾಗಿದ್ದೇನೆಂದು ದೇವರ ಭಕ್ತಿಯನ್ನು ಬಿಡಬಾರದು ಅಥವಾ ನಾನು ದೇವರ ಪೂಜೆಯಲ್ಲಿ ನಿರತನಾಗಿರುವುದರಿಂದ ದೈನಂದಿನ ಕಾರ್ಯಕ್ರಮಗಳನ್ನು ಬಿಡಬಾರದೆನ್ನುವುದರ ಸಂಕೇತವೇ ಆಗಿದೆ. ಇರುಮುಡಿಯನ್ನು ಎಲ್ಲೆಂದರಲ್ಲಿ ಇಳಿಸಬಾರದೆನ್ನುವುದರ ಉದ್ದೇಶ ನಾವು ಭಗವಂತನ ಸಾಕ್ಷಾತ್ಕಾರವಾಗುವವರೆಗೆ ನಮ್ಮ ಜವಾಬ್ದಾರಿಯನ್ನು ಹೊತ್ತುಕೊಂಡಿರಬೇಕೆನ್ನುವುದೇ ಆಗಿದೆ. ಇನ್ನು ಐದು ಕಾಯಿಗಳು ಪಂಚಭೂತದಿಂದಾದ ನಮ್ಮ ಕಾಯ ಅಂದರೆ ದೇಹವನ್ನು ಸೂಚಿಸುತ್ತವೆ. ಕಾಯಿಯನ್ನು ನುಣ್ಣಗೆ ತಯಾರಿಸಿದಂತೆ ನಮ್ಮ ಕಾಯವನ್ನೂ ಹದಗೊಳಿಸಿ ಭಗವಂತನಿಗೆ ಸಮರ್ಪಿಸಬೇಕೆನ್ನುವುದೇ ಆಗಿದೆ.

    ಕಡೆಯಲ್ಲಿ ಒಂದು ಮಾತು ಈ ದೀಕ್ಷೆ ಎಲ್ಲ ರೀತಿಯಿಂದ ಪರಿಪೂರ್ಣವಾಗಿರುವುದರಿಂದ ಅಯ್ಯಪ್ಪ ಸ್ವಾಮಿಯನ್ನು ಪೂರ್ಣನಾಥ ಎನ್ನುತ್ತಾರೆ ಮತ್ತು ಅಯ್ಯಪ್ಪನ ದೀಕ್ಷೆಯಲ್ಲಿ ಹಲವಾರು ವಿಚಾರಗಳು ಪುಷ್ಕಳವಾಗಿ ದೊರೆಯುವುದರಿಂದ ಅವನಿಗೆ ಪುಷ್ಕಳನಾಥ ಎನ್ನುವ ಹೆಸರೂ ಅನ್ವರ್ಥವಾಗಿದೆ. ನಾವು ಅಯ್ಯಪ್ಪ ದೀಕ್ಷೆಯ ಹಿಂದಿರುವ ಅಧ್ಯಾತ್ಮಿಕ ಕಾರಣಗಳನ್ನು ಒಪ್ಪದೇ ಇದ್ದರೂ ಆ ಸಮಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸುವ ನಿಯಮಗಳು ನಮಗೆ ವರ್ಷದ ಇತರೆ ದಿನಗಳಲ್ಲಿ ನಾವು ಇರಬೇಕಾದ ರೀತಿಯ ತರಬೇತಿ ಎಂದುಕೊಂಡರೂ ಇದರಿಂದ ಸಮಾಜಕ್ಕೆ ಬಹಳಷ್ಟು ಪ್ರಯೋಜನವಾದೀತು.

                                                               ಸ್ವಾಮಿಯೇ ಶರಣಂ ಅಯ್ಯಪ್ಪ


ವಿ.ಸೂ.: ಇಲ್ಲಿ ಪ್ರಸ್ತಾಪಿಸಿರುವ ವಿಷಯಗಳು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದು. ಇವನ್ನು ಬಹುತೇಕ ನನ್ನ ನೆನಪಿನ ಶಕ್ತಿಯನ್ನು ನಂಬಿ ಬರೆದಿರುವುದರಿಂದ ಕೆಲವೊಂದು ಮೂಲ ವಿಷಯಗಳು ಸರಿಯಾಗಿ ಪ್ರತಿಬಿಂಬಿತವಾಗದೇ ಇರಬಹುದು. ಸಹೃದಯರಾದ ಸಂಪದಿಗರು ಅದನ್ನು ಸರಿಪಡಿಸಿವಿರೆಂದು ಆಶಿಸುತ್ತೇನೆ.
 ---------------------------------------------------------------------------------------------------------------------------------------

ವಿ.ಸೂ.: ಈ ಲೇಖನ ಮಾಲೆಯನ್ನು ಒಂದೇ ಕಂತಿನಲ್ಲಿ ಕೊಡೋಣವೆಂದಿದ್ದೆ; ಆದರೆ ಲೇಖನ ಬಹಳ ದೀರ್ಘವೆನಿಸಿದ್ದರಿಂದ ಅದನ್ನು ಐದು ಭಾಗಗಳಾಗಿ ವಿಭಜಿಸಿ ಪ್ರತ್ಯೇಕ ಶೀರ್ಷಿಕೆಗಳನ್ನು ಕೊಟ್ಟಿದ್ದೇನೆ. ಅವುಗಳು ಈ ರೀತಿ ಇವೆ:
    
ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ಚಿಂತನೆ  (ಭಾಗ - ೧) http://sampada.net/%E0%B2%B6%E0%B2%AC%E0%B2%B0%E0%B2%BF%E0%B2%AE%E0%B2%B2%E0%B3%86-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86-%E0%B2%85%E0%B2%A5%E0%B2%B5%E0%B2%BE-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%B5%E0%B3%8D%E0%B2%B0%E0%B2%A4%E0%B2%A6-%E0%B2%B9%E0%B2%BF%E0%B2%A8%E0%B3%8D%E0%B2%A8%E0%B2%B2%E0%B3%86-%E0%B2%92%E0%B2%82%E0%B2%A6%E0%B3%81-%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86-%E0%B2%AD%E0%B2%BE%E0%B2%97-%E0%B3%A7
ಭಾಗ - ೨: ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮಾಲಾ ಧಾರಣೆ ಮತ್ತು ಯಾತ್ರೆ http://sampada.net/%E0%B2%AD%E0%B2%BE%E0%B2%97-%E0%B3%A8-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86-%E0%B2%85%E0%B2%A5%E0%B2%B5%E0%B2%BE-%E0%B2%AE%E0%B2%BE%E0%B2%B2%E0%B2%BE-%E0%B2%A7%E0%B2%BE%E0%B2%B0%E0%B2%A3%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86
ಭಾಗ - ೩: ಅಯ್ಯಪ್ಪ ಸ್ವಾಮಿಯ ದೀಕ್ಷೆಯ ಚಾರಿತ್ರಿಕ ಹಿನ್ನಲೆ  http://sampada.net/%E0%B2%AD%E0%B2%BE%E0%B2%97-%E0%B3%A9-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%9A%E0%B2%BE%E0%B2%B0%E0%B2%BF%E0%B2%A4%E0%B3%8D%E0%B2%B0%E0%B2%BF%E0%B2%95-%E0%B2%B9%E0%B2%BF%E0%B2%A8%E0%B3%8D%E0%B2%A8%E0%B2%B2%E0%B3%86
ಭಾಗ - ೪: ಅಯ್ಯಪ್ಪ ಮತ್ತು ಅಯ್ಯಪ್ಪ ದೀಕ್ಷೆಯ ವಿಶೇಷಗಳು  http://sampada.net/%E0%B2%AD%E0%B2%BE%E0%B2%97-%E0%B3%AA-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%B5%E0%B2%BF%E0%B2%B6%E0%B3%87%E0%B2%B7%E0%B2%97%E0%B2%B3%E0%B3%81
ಭಾಗ - ೫: ಅಯ್ಯಪ್ಪ ದೀಕ್ಷೆಯ ನಿಜವಾದ ಅರ್ಥ

 

Comments