ಭಾನುಮತಿ ನೀ ಸುಮತಿ..
ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ ಉಲ್ಲೇಖ ಅಲ್ಲಿಲ್ಲಿ ತುಸು ಮೆಲುವಾಗಿ ಹೆಸರಿಸಿದ್ದು ಬಿಟ್ಟರೆ ಗಾಢವಾದ ವಿವರಣೆ ಕಾಣಿಸುವುದಿಲ್ಲ. ಬಹುಶಃ ಸುಯೋಧನನಿಗೆ ಆರೋಪಿಸಿದ ಋಣಾತ್ಮಕ, ಖಳನಾಯಕ ಪಟ್ಟದಿಂದಲೊ ಅಥವಾ ಚತುಷ್ಟಯದ ಚಟುವಟಿಕೆಗಳಿಗೆ ಕೊಟ್ಟಷ್ಟೆ ಗಮನ ಅವನ ಖಾಸಗಿ ಜೀವನಕ್ಕೆ ಕೊಡಲಿಲ್ಲವೆಂದೊ - ಒಟ್ಟಾರೆ ಭಾನುಮತಿ ಹೆಚ್ಚಾಗಿ ತೆರೆಮರೆಯ ಅಪ್ರತ್ಯಕ್ಷ ಪ್ರಭಾವ ಬೀರುವ ಪಾತ್ರವಾಗಷ್ಟೆ ಆಗಿ ಗೌಣವಾಗಿಬಿಡುತ್ತಾಳೆ. ಈಗಲೂ ಅಂತರ್ಜಾಲ ಹುಡುಕಿದರೆ ಅವಳ ಕುರಿತಾದ ವಿವರ ಸಿಗುವುದು ತೀರಾ ಅಲ್ಪವೆ.
ಅಲ್ಲೆ ಅಚ್ಚರಿಯಾಗುವ ಅಂಶ ಅಡಗಿರುವುದು. ಒಳ್ಳೆಯವನೊ, ಕೆಟ್ಟವನೊ ದುರ್ಯೋಧನ ರಾಜ್ಯವಾಳುವ ವಿಷಯದಲ್ಲಿ ಅದೃಷ್ಟವಂತನೆಂದೆ ಹೇಳಬೇಕು. ಬದುಕಿರುವ ಕಡೆಗಳಿಗೆಯತನಕ ಚಕ್ರಾಧಿಪತಿಯಾಗಿಯೆ ಉಳಿದಿದ್ದವ. ಪಾಂಡವರಂತೆ ವನವಾಸದಲ್ಲಿ ಪಾಡುಪಡುತ್ತಲೊ, ರಾಜ್ಯ ಕೋಶ ಕಳೆದುಕೊಂಡ ಅನಾಥರಂತೆಯೊ ಬದುಕಬೇಕಾಗಲಿಲ್ಲ. ಐಷಾರಾಮಿ ಜೀವನದ ಸಿರಿ ಕಡೆಗಾಲದವರೆಗೂ ಹಾಸಿಕೊಂಡು, ಕಾಲು ಮುರಿದಂತೆ ಬಿದ್ದಿತ್ತು ಅವನ ಕಾಲ ಬಳಿಯಲ್ಲೆ. ಇಷ್ಟೆಲ್ಲ ಸುಖ ಸಂಪದ ಬರಿ ಚತುಷ್ಟಯದ ಕೂಟ ತಂತ್ರ ಮತ್ತು ಪೀಳಿಗೆಯಿಂದ ಬಂದ ಅಧಿಕಾರದ ಅದೃಷ್ಟದೇವತೆಯ ಕೃಪೆಯಷ್ಟೆ ಕಾರಣವಾಗಿತ್ತೆ? ಬೇರಾವಾ ಅಂಶವೂ ಸಹಾಯಕವಾಗಿರಲಿಲ್ಲವೆ ಈ ಅಭೂತಪೂರ್ವ ಯಶಸ್ಸಿನ ಯಾನಕ್ಕೆ?
ನನಗನಿಸುವ ಪ್ರಕಾರ ಬೇರೆ ಕಾರಣಗಳೂ ಇರಬೇಕು. ನಾಣ್ಣುಡಿಯೆ ಹೇಳುವಂತೆ ಪ್ರತಿ ಗಂಡಿನ ಜಯದ ಹಿಂದೆ ಒಂದು ಹೆಣ್ಣಿನ ಕಾಣದ ಕೈವಾಡವಿರುತ್ತದಂತೆ - ಸತಿಯೊ, ಮಾತೆಯೊ ಅಥವಾ ಇನ್ನಾವುದೊ ರೂಪದಲ್ಲಿ. ಮಾತೆ ಗಾಂಧಾರಿಯದಂತೂ ಇದ್ದಿರಲೆಬೇಕು - ಹೆತ್ತವಳ ಧರ್ಮವದು. ಆದರೆ ವಯಸಿಗೆ ಬಂದ ಮೇಲೆ ಅಲ್ಲಿ ಪ್ರಮುಖ ಸ್ಥಾನ ವಹಿಸುವುದು ವರಿಸಿ ಕೈ ಹಿಡಿದ ಹೆಣ್ಣಿನದು. ಪುರುಷ ಯಶಸ್ವಿಯಾಗುತ್ತಾನೊ, ವಿಫಲತೆಯ ಸುಳಿಗೆ ಸಿಕ್ಕಿ ಕೊಚ್ಚಿ ಹೋಗುತ್ತಾನೊ ಎಂಬುದರ ನಿರ್ಧಾರವಾಗುವುದು ಬಹುತೇಕ ಅವರು ನಿಭಾಯಿಸುವ ಹಿನ್ನಲೆ ಭೂಮಿಕೆಯಿಂದಲೆ. ಅದೇ ತರ್ಕದಲ್ಲಿ ನೋಡಿದರೆ ದುರ್ಯೋಧನನ ಅಸಾಧಾರಣ ಯಶಸ್ಸು ಕಣ್ಣು ಕುಕ್ಕುವಷ್ಟು ಪ್ರಖರ. ಇಷ್ಟು ನಿರಾಳವಾಗಿ ಅವನು ಯಶಸ್ಸಿನ ಕುದುರೆಯ ಬೆನ್ನು ಹತ್ತಿರಬೇಕಾದರೆ, ಅದಕ್ಕೆ ಪ್ರಚಂಡ ಪ್ರೇರಕ ಶಕ್ತಿಯಾಗಿ ನಿರಂತರ ಪ್ರೋತ್ಸಾಹಿಸುವ ಸತಿಯ ಪಾತ್ರವಿರಲೇಬೇಕು. ಆ ಪಾತ್ರದ ಭೂಮಿಕೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿಯೂ ದಾಖಲೆಯ ಮಟ್ಟದಲ್ಲಿ ಗೌಣವಾಗಿಬಿಟ್ಟ ದೌರ್ಭಾಗ್ಯ ಭಾನುಮತಿಯದು. ಅದರ ತುಣುಕುಗಳನ್ನೆ ಹೊಸೆದು, ಹೆಣೆದು ಕಾವ್ಯರೂಪಕದಲ್ಲಿ ಪ್ರಸ್ತುತ ಪಡಿಸುವ ಒಂದು ಪುಟ್ಟ ಯತ್ನ ಈ ಬರಹದ್ದು.
ಪ್ರಾಗ್ಜ್ಯೋತಿಷ ಪುರದರಸು ಭಗದತ್ತನ ಕುವರಿ ಕುಶಲೆ
ಏಕಚಕ್ರಾಧಿಪತ್ಯ ಭೂಪಾಲನೊಡತಿಯಾಗಲ್ಹವಣಿಸಲೆ
ಭಾನುಮತಿ ಭೂಲೋಕ ರತಿ ಧುರ್ಯೋದನನ ಪಾಲೆ
ಛಲದಂಕಮಲ್ಲನ್ಹಮ್ಮು ಪೊಗರಿನ ಮನವ ಗೆದ್ದ ಬಾಲೆ ||
ದುಷ್ಠ ಚತುಷ್ಟಯ ಕೂಟದ ನಾಯಕನೆಂದು ತಿಳಿದೂ
ಸೂಕ್ಷ್ಮವನರಿತ ಜಾಣೆ, ಚಕ್ರಾಧಿಪತಿಯಾಗಿಸೆ ಸನ್ನದ್ಧು
ಕುಟಿಲವೊ ಜಟಿಲವೊ ಮನೆವಾರ್ತೆಗವ ಮಹಾರಾಣಿ
ಕಾತರಿಸಿ ವರಿಸಿದಳಲ್ಲ ಮಹಾತ್ವಾಕಾಂಕ್ಷಿಯ ರಮಣಿ ||
ಭಾನುಮತಿಯ ವಿವರಕ್ಕಾಗಿ ತಡಕಾಡಿದಾಗ ಬಹುಶಃ ಅವಳ ಗೌಣ ಪಾತ್ರ ಚಿತ್ರಣದಿಂದಲೊ ಅಥವ ಚತುಷ್ಟಯದ ಚಟುವಟಿಕೆಗಳ ಅಬ್ಬರದಲ್ಲಿ ನೇಪಥ್ಯಕೊ, ಹಿನ್ನಲೆಗೊ ಸರಿದು ಸೂತ್ರಧಾರಿ ಪಾತ್ರ ನಿಭಾಯಿಸಿದ ಚಾತುರ್ಯಕೊ - ಅವಳು ಪ್ರಾಗ್ಜ್ಯೋತಿಷಪುರದರಸು ಭಗದತ್ತನ ಸುಪುತ್ರಿ ಎಂಬುದರ ಹೊರತು ಹೆಚ್ಚು ವಿವರ ಸಿಗುವುದಿಲ್ಲವಾದರೂ, ಪೊಗರು-ಹಮ್ಮಿನ ಕೌರವೇಶನ ಕೈ ಹಿಡಿವ ಸಂಧರ್ಭ ಬಂದಾಗ ಆ ಮೂಲಕ ಇಡೀ ಚಕ್ರಾಧಿಪತ್ಯದ ಸಾಮ್ರಾಟನ ರಾಣಿಯಾಗುವ ಭಾಗ್ಯ ಪಡೆದವಳು. ಅಂತಹ ವ್ಯಕ್ತಿತ್ವದ ಜತೆ ಪಳಗಿ ಏಗುವುದು ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ. ಆದರೂ, ಅಂತಹ ಸುಯೋಧನನೆ ಅವಳಿಗೆ ಮನಸೋಲುವಂತೆ ಮಾಡಿರಬೇಕೆಂದರೆ ಅವಳು ಸಾಕಷ್ಟು ಚತುರಮತಿಯೆ ಇರಬೇಕು. ದುರ್ಯೋಧನನ ಗುಣಾವಗುಣಗಳ ಪರಿಚಯವಂತೂ ಎಲ್ಲರಿಗು ಚೆನ್ನಾಗಿಯೆ ಇದ್ದ ಕಾರಣ ಭಾನುಮತಿಗೂ ಅದು ಗೊತ್ತಿರಲೆ ಬೇಕು. ಗೊತ್ತಿದ್ದೂ ಅವನನ್ನು ಹಿಂದೇಟು ಹಾಕದೆ ವರಿಸಿರಬೇಕಾದರೆ, ಅವಳೇನೂ ಹಿಂದೆ ಮುಂದೆ ಆಲೋಚಿಸದೆ 'ಹೂಂ'ಗುಟ್ಟಿರಲಾರಳು ವಿವಾಹಕ್ಕೆ. ಅವನ ಕೆಚ್ಚು, ರೊಚ್ಚು, ಕುಟಿಲೋಪಾಯ ವಿಧಾನಗಳಲ್ಲೂ ಅವಳಿಗೆ ಅವನ ಮಹಾತ್ವಾಕಾಂಕ್ಷೆಯ ಸುಳಿವಷ್ಟೆ ಅಲ್ಲ, ಅದನ್ನು ಸಾಧಿಸಬಲ್ಲ ಛಲವೂ ಕಂಡುಬಂದಿರಬೇಕು. ಅದರಿಂದಾಗಿಯೆ ತಾನು ಕೇವಲ ರಾಜ್ಯವೊಂದರ ರಾಜಕುಮಾರಿ ಪಟ್ಟದಿಂದ ಚಕ್ರಾಧಿಪತ್ಯವೊಂದರ ಸಾಮ್ರಾಟನ ಮಹಾರಾಣಿಯಾಗುವ ಸಾಧ್ಯತೆಯಿದ್ದರೆ ಅದು ಕೌರವೇಶನಂತಹವರ ಸಾಂಗತ್ಯದಿಂದಲೆ ಸಾಧ್ಯ ಎಂದು ಮನಗಂಡಿರಬೇಕು. ಅಲ್ಲದೆ ಒಂದು ಬಾರಿ ಅಂತಹವನ ಮನಗೆದ್ದು ಅಂತರಂಗದ ರಾಣಿಯಾಗಿಬಿಟ್ಟರೆ ಸಾಕು - ಬೇರಾರು ಅಷ್ಟು ಸುಲಭದಲ್ಲಿ ಗೆದ್ದು ನಿಭಾಯಿಸಲಾಗದ ಸಾಂಗತ್ಯದಿಂದಾಗಿ ಅವಳಿಗೆ ಸ್ಪರ್ಧಿಗಳಾಗಿ ಇತರರು ಬರುವ ಸಾಧ್ಯತೆಯೂ ಕಡಿಮೆಯೆ (ದುರ್ಯೋಧನನ ವಿಷಯದಲ್ಲಿ ಇದು ನಿಜವೂ ಆಯ್ತೆಂದು ತೋರುತ್ತದೆ - ನನಗರಿವಿರುವಂತೆ ಭಾನುಮತಿಯ ಹೊರತಾಗಿ ಮತ್ತಾವ ಪತ್ನಿಯರೂ ಇದ್ದ ಹಾಗೆ ಕಾಣಲಿಲ್ಲ). ಇದೆಲ್ಲಾ ಮುಂದಾಲೋಚನೆಯ ಜತೆಗೆ ಅವನೊಂದಿಗಿನ ಪರಿಣಯಕ್ಕೆ ಅಣಿಯಾಗಿರಬೇಕು ಭಾನುಮತಿ.
ಬಲ್ಲನೆ ಸುಯೋಧನ ಸರಿ ವಲ್ಲಭೆಯಿರದಿರೆ ದುಸ್ತರ
ಮಂಚ ಮನೆ ನೆಮ್ಮದಿಯಿರದೆ ಮನದಾಶೆ ಸಂಚಕಾರ
ಅವಳೊಬ್ಬಳಿರೆ ಬೆನ್ನಾಗಿಹ ಮಹತಿ ಹಿನ್ನಲೆ ಸುಸೂತ್ರ
ನಿರಾಳ ಸಂತೃಪ್ತಮನ ಮುನ್ನುಗ್ಗೆ ಆತ್ಮವಿಶ್ವಾಸ ಪ್ರಖರ ||
ಎಲ್ಲೂ ಕೇಳದು ಕೊಂಕು ಬರಿ ರಾಣಿವಾಸದ ಹೊರತು
ನಿಭಾಯಿಸಿರಬೇಕು ಸೂಕ್ಷ್ಮ ಜಾಣ್ಮೆ ಸಂಧರ್ಭವನರಿತು
ಗರ್ವದ ಭಾಂಡದ ಪತಿಯ ಸೋತು ಗೆದ್ದ ಚಾಕಚಕ್ಯತೆ
ಗೆಲಿಸುತವನ ಸಂಭ್ರಮಿಸೆ ಬಿಟ್ಟು ಮನ ಗೆದ್ದ ಅರ್ಹತೆ ||
ಇನ್ನು ದುರ್ಯೋಧನನ ವಿಷಯಕ್ಕೆ ಬಂದರೆ ಅವನೇನು ಕಡಿಮೆ ಚಾಣಾಕ್ಷನೆನುವಂತಿಲ್ಲ. ತನ್ನ ಮಹತ್ವಾಕಾಂಕ್ಷೆಯ ಸಾಧನೆಗೆ ಏನೆಲ್ಲಾ ಮಾಡಬೇಕಿರುವ ಹುನ್ನಾರದ ಅರಿವು ಚೆನ್ನಾಗಿಯೆ ಇದ್ದಿರಬೇಕು. ತನ್ನ ಗುರಿ ಸಾಧನೆಯಲ್ಲಿ ಬರಿ ಸೋದರರ, ಮಿತ್ರರ, ಬಂಧುಗಳ ಸಹಕಾರವಿದ್ದರಷ್ಟೆ ಸಾಲದು - ತನ್ನ ಮನಸು ಸಮತೋಲನದಲ್ಲಿ ಸ್ವಸ್ಥವಾಗಿರಬೇಕಾದ್ದು ಅಷ್ಟೆ ಮುಖ್ಯ ಎಂಬ ಅರಿವು ಚೆನ್ನಾಗಿಯೆ ಇತ್ತು. ಅದು ಸಿದ್ಧಿಸಬೇಕಾದರೆ ಬಹು ಮುಖ್ಯವಾದ ಅಂಶ - ಸಂಗಾತಿಯಾಗುವವಳ ಗುಣ, ನಡತೆ, ಸಹಕಾರ. ಮನೆಯಲ್ಲಿ, ಅಂತರಂಗದಲ್ಲಿ ಆ ನೆಮ್ಮದಿ ಇರದಿದ್ದರೆ ಅವನು ನಿರಾಳವಾಗಿ ತನ್ನ ರಾಜಕಾರಣದ ಕುಟಿಲೋಪಾಯಗಳಲ್ಲಿ ತೊಡಗಿಸಿಕೊಂಡಿರಲಾಗದು. ಅದಕ್ಕೆಂದೆ ಅವನಿಗೂ ತನ್ನ ಆಸೆ ಆಕಾಂಕ್ಷೆಯೆಲ್ಲ ಅರಿತು ಅವನ ಬೆನ್ನಾಗಿ ನಿಲಬಲ್ಲವಳ ಸಖ್ಯ ಸಾಂಗತ್ಯ ಬಲು ಮುಖ್ಯ. ಆ ವಿಚಾರಧಾರೆಯ ಆಳವನ್ನು ನೋಡಬಲ್ಲ, ಮಂತ್ರಿಣಿಯಂತೆ ಅದಕ್ಕೆ ನೀರೆರೆದು ಪೋಷಿಸಬಲ್ಲ, ಸ್ಪೂರ್ತಿಯ ಸೆಲೆಯಾಗಿ ಹೆಜ್ಜೆಜ್ಜೆಗೆ ಕುಮ್ಮುಕ್ಕು ನೀಡಬಲ್ಲ ಹೆಣ್ಣಿನ ಜತೆಯಿದ್ದರಷ್ಟೆ ಅವನು ತನ್ನ ಸಾಧನೆಯತ್ತ ಪೂರ್ಣ ಗಮನವಿರಿಸಿ ಮುನ್ನಡೆಯಲು ಸಾಧ್ಯ. ಅಂತಹ ಗುಣಗಳಿರುವ ಭಾನುಮತಿಯನ್ನೆ ಆರಿಸಿಕೊಳ್ಳುವಲ್ಲಿ ಅವನ ಚಾತುರ್ಯವನ್ನು ಕಡೆಗಣಿಸುವಂತಿಲ್ಲ.
ಅದೆ ಲಹರಿಯಲಿ ಭಾನುಮತಿಯೂ ಅಷ್ಟೆ. ಹಮ್ಮು ಅಹಂಮಿನ ಸಾಕಾರ ರೂಪಾದವನನ್ನು ಬಗ್ಗಿಸಿ ನಿಭಾಯಿಸಬೇಕೆಂದರೆ ಮೊದಲು ಅವನ ಅಹಂ ಅನ್ನು ತೃಪ್ತಿ ಪಡಿಸಬೇಕೆಂದು ಚೆನ್ನಾಗಿ ಅರಿತಿರುವ ಜಾಣೆ. ಅದಕ್ಕೆ ಬಲು ಮುಖ್ಯ ಆಯುಧವೆಂದರೆ ತನ್ನ ಮೋಹಕ ರೂಪ ಲಾವಣ್ಯಗಳನ್ನು ಮೀರಿಸಿದ ಶರಣಾಗತ ಭಾವ ಎಂದೂ ಅವಳಿಗೆ ಗೊತ್ತು. ಅವನನ್ನು ಗೆಲಿಸುವಲ್ಲಿ, ಗೆದ್ದ ಭಾವದಲ್ಲಿ ತೇಲಿಸುವಲ್ಲಿಯೆ ಅವಳ ವಿಜಯ ಅಡಗಿರುವ ಸೂಕ್ಷ್ಮ ಸತ್ಯ ಅವಳಿಗೆ ಚೆನ್ನಾಗಿ ಮನವರಿಕೆಯಾಗಿರಬೇಕು.. ತಾನು ಸೋತಷ್ಟು ಅವನ ಹಮ್ಮು, ಅಹಂನ ತೃಪ್ತಿಯಾಗುತ್ತದೆ; ಆ ತೃಪ್ತಿಯೆ ಅವಳ ಸೋಲನ್ನು ಗೆಲುವಿನತ್ತ ನಿಭಾಯಿಸುವ ಅಂತಃಶಕ್ತಿಯಾಗುತ್ತದೆ ಎಂದು ಚೆನ್ನಾಗಿ ಬಲ್ಲಳು. ಅದರಿಂದಲೆ ಏನೊ , ರಾಣಿವಾಸದಲ್ಲೂ ಅವಳ ಸದ್ದು ಅಷ್ಟಾಗಿ ಕೇಳಿಸುವುದಿಲ್ಲ. ಒಂದು ರೀತಿ ಮೌನ ಸಾಧನೆಯಲ್ಲಿ ಪತಿಯ ಗರ್ವ ಭಾಂಡವನ್ನು ನಿಭಾಯಿಸಿ ಇಬ್ಬರೂ ಗೆಲುವಿನತ್ತ ನಡೆಯುವಂತೆ ಮಾಡುವ ಅವಳ ಪ್ರಯತ್ನ ಎದ್ದು ಕಾಣುವುದಿಲ್ಲ - ಪ್ರಾಯಶಃ ಉದ್ದೇಶಪೂರ್ವಕವಾಗಿ. ಯಾಕೆಂದರೆ ಎದ್ದು ಕಾಣುವಂತೆ ಮಾಡುವವಳ ಗುಣ ದುರ್ಯೋಧನನಿಗೆ ಹಿಡಿಸದ ತುತ್ತು. ಅವನಿಗೆ ಅವನ ನೆರಳಡಿ ತಲೆ ತಗ್ಗಿಸಿ ನಡೆವ ವ್ಯಕ್ತಿತ್ವವಾಗಿ ಇರಬೇಕೆ ಹೊರತು ಅಧಿಕಾರ ತೋರಿಸೊ, ಚಲಾಯಿಸೊ ಸದ್ದು ಗದ್ದಲದ ವ್ಯಕ್ತಿತ್ವವಲ್ಲ. ಅದನ್ನರಿತು ಅದಕ್ಕೆ ತಕ್ಕಹಾಗೆ ಪಾತ್ರ ನಿರ್ವಹಿಸಿದ ಚತುರೆ ಭಾನುಮತಿ.
ಚತುಷ್ಟಯ ಮನೆಯಾಚೆ, ಅದ್ವಿತೀಯ ಜೋಡಿ ಒಳಗೆ
ಕಾರ್ಯತಂತ್ರ ಚರ್ಚೆ ಮನನಾ ಮನ ಮಂತ್ರಿಣಿ ಕೆಳೆಗೆ
ಪ್ರೀತಿಯ್ಹುಟ್ಟದೆ ರಸಿಕ ವೀರಗೆ, ಸರಿಸಮ ಸ್ತರ ವನಿತೆ
ಅಚಲ ನಿಷ್ಠೆ ನಂಬಿಕೆ ಸತಿ ಭಾಗ್ಯವೆ ಹೆಣ್ಣಾಗಿ ಬಂದಂತೆ ||
ಅಕ್ಕರೆ ಮಾಮನ ಸಕ್ಕರೆ ಮಾತಿದ್ದರು ಮನಕೆ ಪ್ರಿಯ
ಮಂತ್ರಾಲೋಚನೆ ವಯಸಿನ ಗೆಳೆಯನಿದ್ದು ಸಹಾಯ
ಸೋದರಿಕೇ ಭಕ್ತಿ ವಾತ್ಸಲ್ಯವಿದ್ದರು ಕೋಟೆಯ ದಾಯ
ಮನದಂತರಂಗ ವೀಣೆ ನುಡಿಸುವಳ ಸೂಕ್ತ ಉಪಾಯ ||
ಕೊನೆಗೀ ಪ್ರಾಣ ಸಖ - ಪ್ರಾಣ ಸಖಿ ಸಖ್ಯದ ಪಕ್ವತೆ ಮುಟ್ಟಿದ ಪ್ರಬುದ್ದತೆಯಾದರೂ ಎಂತದ್ದಿರಬೇಕು? ಹೊರಗಿನ ಕೂಟ ಕುಶಲತೆಯೆಲ್ಲ ಚತುಷ್ಟಯದೊಂದಿಗೆ ನಡೆಸಿ ನಿರ್ಧಾರಕ್ಕೆ ಬಂದರೂ, ಅದರ ಸಾಧಕ ಭಾದಕ ಸಾಧ್ಯಾಸಾಧ್ಯತೆಗಳನೆಲ್ಲ ಒರೆಗ್ಹಚ್ಚಿ ನೋಡುವವರೊಬ್ಬರಿರಬೇಕಲ್ಲ? ಅದನ್ನು ಚತುಷ್ಟಯ ಗುಂಪಿನ ಮನನೋಯದ ಹಾಗೆ ಗುಟ್ಟಿನ ಸ್ತರದಲಿ ಮಾಡಬೇಕು, ಯಾವುದೆ ಪೂರ್ವಾಗ್ರಹಪೀಡಿತ ಮನೋಭಾವನೆಯಿರದೆ. ಅಂತಹ ಕೆಳೆಯಾಗಿ ಸತಿಯೆ ಇದ್ದುಬಿಟ್ಟರೆ ಅದಕಿಂತ ಬೇರೆ ಭಾಗ್ಯವುಂಟೆ? ಹಾಗೆ ತನ್ನೊಡನೆ ಚರ್ಚಿಸಿ, ಸರಿ ತಪ್ಪುಗಳ ತುಲನೆ ಮಾಡಿ ನಿರ್ಧಾರ ಕೈಗೊಳ್ಳುವವನ ಮೇಲೆ ಅವಳಿಗೂ ಅಮಿತಾಮಿತ ಪ್ರೀತಿ , ವಿಶ್ವಾಸ ಬರದೆ ಇದ್ದೀತೆ ? ಅದು ಹಾಗೆ ಮುಂದುವರೆದಾಗ ಪರಸ್ಪರರಲ್ಲಿ ಅದೆಂತಹ ನಂಬಿಕೆ, ನಿಷ್ಠೆ ಹುಟ್ಟಿಸಬಲ್ಲದು? ಈ ವನಿತೆ ಬರಿ ಸಾಮಾನ್ಯ ಸತಿಯಲ್ಲ, ತನ್ನ ಸ್ತರಕ್ಕೆ ಸಮನಾಗಿ ಸ್ಪಂದಿಸಬಲ್ಲ ಸರಿಸಮಾನ ಹೆಣ್ಣೆಂದು ಅರಿವಾದಾಗ ನಲ್ಮೆಯ ಒಲುಮೆ ಎದೆಯೊಳಗೆ ಹಿಗ್ಗಿ ಹೂವಾಗಿ - ತನ್ನ ಸೌಭಾಗ್ಯವೆ ಹೆಣ್ಣಿನ ರೂಪಾಗಿ ಬಂತೆಂದು ಖುಷಿ ಪಟ್ಟರೆ ಅದರಲ್ಲಿ ಅಚ್ಚರಿಯೇನು ಬಂತು ?
ಹೇಳಿದ್ದನ್ನು ತಲೆಯ ಮೇಲ್ಹೊತ್ತಿ ಮಾಡುವ ಆಜ್ಞಾಧಾರಕ ಸೋದರನಿದ್ದೂ, ಸದಾ ಹಿತವನ್ನೆ ಚಿಂತಿಸುವ ಬಂಧು ಶಕುನಿ ಮಾಮನಿದ್ದು, ಜೀವಕ್ಕೆ ಜೀವ ಕೊಡಬಲ್ಲ ಅಂತರಂಗದ ಮಿತ್ರನ ಗಳಸ್ಯ ಕಂಠಸ್ಯ ಗೆಳೆತನವಿದ್ದೂ , ಮನದಂತರಾಳದಲ್ಲಿ ವೀಣೆ ನುಡಿಸುವವಳೊಬ್ಬಳ ಸಲಹೆ, ಅನಿಸಿಕೆ, ಅಭಿಪ್ರಾಯವಿರದಿದ್ದರೆ ಅದೊಂದು ರೀತಿಯ ಭಾವನಾತ್ಮಕ ಅಪೂರ್ಣತಾ ಭಾವ ತಟ್ಟದೆ ಬಿಟ್ಟೀತೆ? ಆ ಭಾವ ಶೂನ್ಯತೆಯ ಕೊರತೆಯಾಗದಂತೆ ಚಾಕಚಕ್ಯತೆಯಿಂದ ಪತಿಯ ಬೌದ್ದಿಕ, ಮಾನಸಿಕ, ಸಂದೇಹಾತ್ಮಕ ಸ್ಪಂದನಗಳಿಗೆಲ್ಲ ದನಿಯಾಗಿ, ಮಾರ್ದನಿಯಾಗಿ, ವಕಾಲತ್ತಿನ ವಕೀಲೆಯಾಗಿ, ನ್ಯಾಯಾಧೀಶಳಾಗಿ - ಹೀಗೆ ಬಗೆ ಬಗೆಯ ರೂಪಾವತಾರ ತೊಟ್ಟು ಅವನಲ್ಲಿ ಸ್ಪಷ್ಟತೆಯ ರೂಪ ಮೂಡುವಂತೆ ಮಾಡಲು ಹೆಣಗಿ ಸಹಕರಿಸಿದವಳು. ಅಂತಹವಳ ಮೇಲೆ ದುರ್ಯೋಧನನಂತ ದುರ್ಯೋಧನನೂ ಅಪರಿಮಿತ ಪ್ರೀತಿಗೆ ಶರಣಾಗಿ ಹೆಮ್ಮೆ ಪಡಲಾರನೆ?
ಪಂಚವರ್ಣದ ಗಿಳಿಯಂತವಳೆ ಚತುಷ್ಟಯಕೆ ಪಂಚಮ
ಪಂಚಪ್ರಾಣ ಪ್ರಿಯತಮನಚಲ ನಂಬಿಕೆಗೆ ಪಾತ್ರಳಮ್ಮ
ಶಕುನಿ ಮೈದುನರಲ್ಲ ಸುಯೋಧನನಷ್ಟೆ ಸಲಿಗೆ ಕರ್ಣ
ಸರಸಮಯ ಮಾತಿನ ಜತೆ ಪಗಡೆಯಾಡುವ ಕಾರಣ ||
ಕೆಳೆಯೆಂದರೆ ಕೆಳೆ ಕರ್ಣ ದುರ್ಯೋಧನ ಅಭಿಮಾನ
ಕೀಳ್ಗರೆಯಲೆ ಬಿಡದೆ ಪಟ್ಟ ಕಟ್ಟಿದ ಸ್ನೇಹ ಸ್ವಾಭಿಮಾನ
ನೆಚ್ಚಿನ ಬಂಟನ ಮೇಲ್ನಂಬಿಕೆ ಕೆಚ್ಚಿನ ಅಂತರಂಗ ಮಿತ್ರ
ಸತಿಯೊಡನಾಟದಲಿರಲಿ ಅನುಮಾನಿಸ ತಿಲಮಾತ್ರ ||
ಹೀಗೆ ಸುಯೋಧನನ ಅಂತರಂಗದ ರಾಣಿಯಾದವಳಿಗೆ ಕೌರವೇಶನಲ್ಲಿ ವಿಶೇಷ ಆದರ, ಗೌರವ ಮಮತೆ ಇರದೆ ಇದ್ದೀತೆ? ಒಲವೊಂದು ಮಾತ್ರವಲ್ಲದೆ ಈ ಬೌದ್ಧಿಕ ಸಾಂಗತ್ಯವೂ ಅವರಿಬ್ಬರನ್ನು ಕಟ್ಟಿಡುವಲ್ಲಿ ಮಹತ್ವದ ಪಾತ್ರ ವಹಿಸಿರಬೇಕು. ಹೀಗಾಗಿ ದುರ್ಯೋಧನನ ಪಾಲಿಗೆ ಈ ಪಂಚರಂಗದರಗಿಣಿ ಚತುಷ್ಟಯದಲೊಬ್ಬಳಲ್ಲವಾದರೂ ಅಷ್ಟೆ ಮಹತ್ವವುಳ್ಳ ಪಂಚಮ ಸ್ಥಾನವನ್ನಾಕ್ರಮಿಸಿದವಳು. ಕೌರವೇಶನ ಹೃದಯ ಸಿಂಹಾಸನದಲ್ಲಿ ಆಪ್ತ ಸ್ಥಾನ ಸಿಕ್ಕ ಮೇಲೆ ಅವನ ಬಳಗವೆಲ್ಲವೂ ಅವಳಿಗೆ ಆಪ್ತವೇ ತಾನೆ? ಅಂತೆಯೆ ಚತುಷ್ಟಯದ ಗುಂಪಿನೆಲ್ಲರೂ ಅವಳಿಗೆ ಹತ್ತಿರದವರಾದಂತೆ ಲೆಕ್ಕವಿದ್ದರೂ, ಜಾಣೆ ಭಾನುಮತಿ ಯಾರಾರ ಹತ್ತಿರ ಹೇಗಿರಬೇಕೆಂದು, ಎಷ್ಟು ಹತ್ತಿರ - ಎಷ್ಟು ದೂರವಿರಬೇಕೆಂದು ಬಲ್ಲ ಸೂಕ್ಷ್ಮಜ್ಞೆ. ಹೀಗಾಗಿ ಶಕುನಿಯಲ್ಲಿ ಹಿರಿಯನಿಗಿರಬೇಕಾದ ಗೌರವ, ಆದರಗಳಿದ್ದರೆ, ದುಶ್ಯಾಸನನಲ್ಲಿನ ಸಲಿಗೆಯೂ ಮೈದುನ ಸಲಿಗೆಯ ಪರಿಧಿಯೊಳಗೆ ಇರುವ ಹಿತಮಿತವಾದ ಭಾಂಧವ್ಯ. ಆದರೆ ಅದೆ ಕರ್ಣನಲ್ಲಿ ಮಾತ್ರ ಅವಳಿಗೂ ವಿಶೇಷ ಸಲಿಗೆ. ಪತಿಯಲಿರುವ ನಿಷ್ಠೆ, ಸ್ನೇಹ, ನಂಬಿಕೆ, ವಿಶ್ವಾಸಗಳ ಪ್ರಖರತೆ ಅದೆಷ್ಟು ತೀವ್ರವೆಂದರೆ, ಕೌರವೇಶನು ಅವನಲಿಟ್ಟಿರುವ ಅದೆ ಸಲಿಗೆಯ ಮಟ್ಟವನ್ನು ತಾನೂ ಇಟ್ಟುಕೊಂಡು ವ್ಯವಹರಿಸುವಷ್ಟು. ಆ ಸಲಿಗೆ ವಿಶ್ವಾಸಗಳೆ ಅವಳನ್ನು ಕರ್ಣನೊಂದಿಗೆ ಪಗಡೆಯಾಡಿಸುವ ಮಟ್ಟಿಗೆ ನಿರಾಳವಾಗಿಸುತ್ತದೆ.
ದೂಷಣೆಗೊಳಗಾಗಿ ಅಪಮಾನಕ್ಕೀಡಾದವನಿಗೆ ಗೌರವಾಧಿಕಾರ ಕೊಟ್ಟ ಗೆಳೆಯನ ಕುರಿತು ಕರ್ಣನಿಗೂ ಅಷ್ಟೆ ಅಭಿಮಾನ, ಭಕ್ತಿ. ತನ್ನ ಸ್ಥಾನಮಾನಕ್ಕೊಸ್ಕರವೆ ಅಂಗರಾಜ್ಯಾಭಿಷೇಕ ಮಾಡಿಸಿದ ಗೆಳೆಯನಲಿಟ್ಟ ಅಸೀಮ ವಿಶ್ವಾಸವನ್ನೆ ಅವನ ಪತ್ನಿ ರಾಣಿ ಭಾನುಮತಿಯಲ್ಲಿಯು ತೋರುತ್ತಾನೆ, ಕೌರವೇಶನ ಮೇಲಿರುವ ಅಂತರಾಳದ ಕೃತಜ್ಞತೆಯನ್ನು ಆ ರೀತಿಯೂ ಪ್ರದರ್ಶಿಸುವ ಸಲುವಾಗಿ. ಇನ್ನು ದುರ್ಯೋಧನನೇನು ಕಮ್ಮಿಯೆ? ತನ್ನ ಆತ್ಮಸಖನ ಮೇಲೂ ಅಪಾರ ನಂಬಿಕೆ, ವಿಶ್ವಾಸ ಇಟ್ಟಿರುವಾತ. ತನ್ನ ಪ್ರೀತಿಯ ಸತಿಯೊಡನೆ ಕರ್ಣ ಸಲಿಗೆಯಿಂದೊಡನಾಡಿದರೂ ಅನುಮಾನಿಸದ ಉದಾತ್ತ ಚಿತ್ತ. ಒಟ್ಟಾರೆ ಈ ಮೂವರ ಸ್ನೇಹ ಸಂಗಮದ ಚಿತ್ರಣ ಆದರ್ಶ ಸಖ್ಯಕ್ಕೊಂದು ಸುಂದರ ಭಾಷ್ಯ. ಆದರೆ ಸಾರ್ವತ್ರಿಕ ಪ್ರದರ್ಶನದ ಮಟ್ಟಿಗೆ ಹೇಳುವುದಾದರೆ ಮೂವರೂ ತಮ್ಮ ಮಿತಿಯಳತೆಯನ್ನು ಸೂಕ್ತವಾಗಿ ಕಾದುಕೊಂಡವರೆ. ಹೊರಗಿನ ಪ್ರಪಂಚಕ್ಕೆ ಕರ್ಣ ದುರ್ಯೋಧನರ ಜೋಡಿಯಷ್ಟೆ ಆದರ್ಶ ರೂಪಲ್ಲಿ ಪ್ರಚಲಿತ. ಭಾನುಮತಿಯ ಜತೆಗಿನ ಇಬ್ಬರ ಭಾಂಧವ್ಯವೇನಿದ್ದರೂ ಖಾಸಗಿ ಮಟ್ಟದಲಷ್ಟೆ ಪ್ರಚುರ - ಅದೂ ಅತಿ ಹತ್ತಿರದವರಲ್ಲಿ ಮಾತ್ರ.
ಒಂದೊಮ್ಮೆ ಕಾರ್ಯನಿರತ ಸುತ್ತಾಟದೆ ಸುಯೋಧನ
ರಾಜಧಾನಿ ಬಿಟ್ಟಾ ಗಳಿಗೆ, ದಿನ ವಾರ ಕಾಲ ಪಯಣ
ಕೂತು ಕೂತೆ ಬೇಸರ ರಾಣಿ ಭಾನುಮತಿ ಅಂತಃಪುರ
ತೊಟ್ಟಳು ನಲ್ಲನಿತ್ತ ಸುಂದರ ಮಣಿಹಾರದ ಮೇಲ್ವಸ್ತ್ರ ||
ಪ್ರೀತಿಯ ಕಾಣಿಕೆ ಸೊಗ ವಸ್ತ್ರ ಚಿತ್ತಾರದಲೆ ಕುಸುರಿ
ನಾಲ್ಕು ತುದಿಯುದ್ದಕೆ ಅಮೂಲ್ಯ ಮಣಿಗಳ ಲಹರಿ
ಗಲಿಗಲಿರೆನುವ ಸದ್ದು ಜರುಗಿದಾಗ ಮೈಮೇಲ್ಹೊದ್ದು
ಮಿರಮಿರ ಮಿಂಚುವ ಕನ್ನಡಿ ತುಣುಕುಗಳ ಸರಹದ್ದು ||
ಈ ಮೂವರ ಅಪರೂಪದ ಭಾಂಧವ್ಯದ ಸಾಕ್ಷಿಗೇನೊ ಎಂಬಂತೆ ಒಂದು ಸುಂದರ ಪ್ರಹಸನ ಕಥನವೊಂದು ಪ್ರಚಲಿತವಿದೆ. ಈ ಮೂವರು ಅದೆಷ್ಟು ಮನೋಹರ ಸಾಂಗತ್ಯದ ಮಧುರ ಭಾಂಧವ್ಯದಲ್ಲಿ ಸಿಲುಕಿಕೊಂಡಿದ್ದರೆನ್ನುವುದನ್ನು ತುಂಬಾ ಸೊಗಸಾಗಿ ವಿವರಿಸುವ ಪ್ರಸಂಗ. ಈ ಪ್ರಸಂಗದ ಮೂಲ ಕಥಾನಕದ ಹಂದರ ತೀರಾ ತೆಳುವಾದರೂ, ರಂಜನೆಯ ಮತ್ತು ಸ್ಪಷ್ಟ ಹಿನ್ನಲೆಯ ದೃಷ್ಟಿಯಿಂದ ನನ್ನ ಕಲ್ಪನೆಯ ತುಣುಕನ್ನು ಸೇರಿಸಿ ವಿಸ್ತಾರಗೊಳಿಸಿದ್ದೇನೆ. ಅದರಿಂದ ಪ್ರಸಂಗದ ಒಟ್ಟಾರೆ ಸೌಂದರ್ಯಕ್ಕೆ ಯಾವುದೆ ಭಂಗ ಬರುವುದಿಲ್ಲವಾದ ಕಾರಣ, ಆ ವಿವರಣೆಗಳು ಒಟ್ಟಾರೆ ಸ್ಥೂಲಾಂತರ್ಯದ ಮಿತಿಯೊಳಗೆ ವರ್ಣಿತವಾಗಿದೆಯೆಂದು ನನ್ನ ಅನಿಸಿಕೆ. ಕಥಾನಕದ ಹಿನ್ನಲೆಯಾಗಿ ರಾಜಕಾರ್ಯ ನಿಮಿತ್ತ ಬಿಡುವಿಲ್ಲದ ಕಾರ್ಯಬಾಹುಳ್ಯದಲ್ಲಿ ಸುತ್ತಾಡಬೇಕಾಗಿರುವ ಸುಯೋಧನನ ಅನಿವಾರ್ಯತೆಯನ್ನು ಬಳಸಿಕೊಂಡಿದ್ದೇನೆ. ರಾಜನೆಂದ ಮೇಲೆ ರಾಜಕಾರ್ಯವನ್ನು ಬೇಡವೆನ್ನಲಾದೀತೆ? ಅದರಲ್ಲೂ ಚಕ್ರಾಧಿಪತಿಯಾದವನ ಕಾರ್ಯ ಬಾಹುಳ್ಯ ಹೀಗೆ ಎಂದು ಹೇಳಲೆಂತು? ಕೆಲವೊಮ್ಮೆ ಒಂದೆರಡು ದಿನ ಹೋಗಬೇಕಾದರೆ, ಮತ್ತೆ ಕೆಲವೊಮ್ಮೆ ವಾರಗಟ್ಟಲೆಯೂ ಹೋಗಬೇಕಾದುಂಟು. ಇನ್ನು ಯುದ್ಧ, ಕದನಗಳಂತ ಸಂಧರ್ಭಗಳಾದರೆ ತಿಂಗಳುಗಳಾದರೂ ಆದೀತೆ. ಆದರೆ ಆಗ ಅವನೊಬ್ಬನೆ ಹೊರಡುವುದಿಲ್ಲ - ಕರ್ಣ, ದುಶ್ಯಾಸನಾದಿಗಳೆಲ್ಲ ವೀರರ ಪಡೆಯೆ ಹೊರಡುತ್ತದೆ. ಮಿಕ್ಕ ಸಂಧರ್ಭಗಳಲ್ಲಿ ಎಲ್ಲರ ಅಗತ್ಯವಿರುವುದಿಲ್ಲ. ಕೆಲವೊಮ್ಮೆ ಯಾರಿಗಾದರೂ ವಹಿಸಿಬಿಟ್ಟು ಕೆಲಸ ಮಾಡಿಸಿದರೆ, ತೀರಾ ಮುಖ್ಯವಾದ ಕೆಲಸಕ್ಕೆ ತಾನೆ ಹೊರಡಬೇಕಾಗುತ್ತದೆ, ಕೌರವೇಶ.
ಹೀಗೊಮ್ಮೆ ಹೊರಟಿದ್ದ ಹೊತ್ತು - ಕೌರವೇಶನಿಲ್ಲದೆ ಭಾನುಮತಿಗೆ ತುಂಬಾ ಬೇಸರ. ವಾರಗಟ್ಟಲೆ ಕಳೆದು ಹೋಗಿದೆ ಪತಿರಾಯ ಹೋಗಿ. ಇನ್ನು ವಾಪಸ್ಸು ಬಂದಿಲ್ಲ, ಯಾವಾಗ ಬರುವನೆಂದು ಖಚಿತ ಮಾಹಿತಿಯೂ ಇಲ್ಲ. ಆ ಗಳಿಗೆಯಲ್ಲಿ ಅವನು ಉಡುಗೊರೆಯಾಗಿತ್ತಿದ್ದ ಅಂಚಿನಲ್ಲಿ ಸುಂದರವಾದ ಮಣಿಗಳಿಂದ ಅಲಂಕರಿಸಲ್ಪಟ್ಟ ಮೇಲ್ವಸ್ತ್ರವೊಂದನ್ನು ಹೊದ್ದುಕೊಂಡು ಅದನ್ನೆ ನೋಡುತ್ತ ಇನಿಯನನ್ನು ನೆನೆಯುತ್ತಾ ಕೂತಿರುತ್ತಾಳೆ, ಆ ವಸ್ತ್ರದ ಗಾಜಿನ ಕಿರುಗನ್ನಡಿಯಲ್ಲೂ ಅವನ ಪ್ರತಿಬಿಂಬವನ್ನೆ ಕಾಣುತ್ತ. ಆ ಸುಂದರ ಕುಸುರಿಯ ವಸ್ತ್ರದ ಪ್ರತಿ ಕೌಶಲ್ಯ, ಚೆಲುವು ಅವಳಿಗೆ ಇನ್ನೂ ಬಾರದಿಹ ನಲ್ಲನ ನೆನಪಾಗಿಸಿದರೆ ಮತ್ತೊಂದೆಡೆ ಅವನೊಲುಮೆಯಿಂದ ತಂದಿತ್ತ ಆ ಕಾಣಿಕೆ ಅವನ ಪ್ರೀತಿ, ನಲುಮೆಯ ಪ್ರತೀಕವಾಗಿ ಮನದಲಿ ನವಿರಾದ ಮೃದುಲ ಭಾವ ತರಂಗಗಳನ್ನೆಬ್ಬಿಸುತ್ತದೆ. ಅದನ್ನು ನೋಡುತ್ತಲೆ ಮೈ ಮರೆತು ಕುಳಿತುಬಿಡುತ್ತಾಳೆ ರಾಣಿ ಭಾನುಮತಿ.
ನೇವರಿಸಿ ಆಪ್ಯಾಯತೆಯಿಂದ ನವಿರ ಸ್ಪರ್ಶದಪ್ಪುಗೆ
ಪತಿರಾಯನೆ ಎದೆಗೂಡಲಿ ಕೂತಂತನಿಸೊ ಸೊಬಗೆ
ವಸ್ತ್ರದ ಚಿತ್ತಾರದ ತುಂಬುಗನ್ನಡಿಯಲವನದೆ ಬಿಂಬ
ದಿನ ವಾರ ರಾಜಕಾರ್ಯದಲಿ ಸಿಕ್ಕುವುದೆ ದುರ್ಲಬ ||
ಅಂತಾಗಿ ಅಳಿಸಲಾಗದ ಬೇಸರ ಆಕಳಿಸಿದ ಹೊತ್ತ
ಬಾಗಿಲ ಸದ್ದಾಯಿತು ಆಪ್ತಮಿತ್ರ ಅಂಗರಾಜ ನಗುತ
ಅಪ್ಪಣೆ ಕಾಯದೆಲೆ, ಕಾಲಿಡಲನುಮತಿ ಕರ್ಣನಿಗಷ್ಟೆ
ಪತಿಯ ಸ್ನೇಹ ಪ್ರೇಮದಲಿಟ್ಟಾ ಅತೀವ ನಂಬಿಕೆ ನಿಷ್ಟೆ ||
ಆದರೂ ಈಚೆಗೇಕೊ ಬಿಡುವಿಲ್ಲದ ಹಾಗೆ ವ್ಯವಹಾರನಿರತನಾಗಿಹ ಸುಯೋಧನ ಅವಳೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲವೆಂಬ ಕಳವಳ, ಬೇಸರ ಎರಡೂ ಕಾಡಿವೆ ಭಾನುಮತಿಯನ್ನು. ಆ ವಸ್ತ್ರವನ್ನು ಹೊದ್ದಾಗ ಅವನನ್ನೆ ಅಪ್ಪಿಹಿಡಿದ ಅನುಭೂತಿಯಲಿದ್ದರೂ ಯಾಕೊ ಅಂದಿನ ಬೇಸರವನ್ನು ತೊಡೆದು ಹಾಕಲಾಗುತ್ತಿಲ್ಲದ ಹೊತ್ತಲ್ಲಿ ಅಲ್ಲಿಗೆ ಬರುತ್ತಾನೆ ಪತಿಯ ಆತ್ಮೀಯ ಗೆಳೆಯ ರಾಧೇಯ. ಅವನೊಬ್ಬನಿಗೆ ಮಾತ್ರವೆ ರಾಣಿವಾಸಕ್ಕಾದರೂ ಹೊತ್ತು ಗೊತ್ತಿನ ಪರಿವೆಯಿಲ್ಲದೆ ಯಾವಾಗ ಬೇಕೆಂದರೆ ಆವಾಗ ಬಂದು ಹೋಗುವ ಪರವಾನಗಿ...ಪರಸ್ಪರ ಅಷ್ತು ಸಲಿಗೆ ವಿಶ್ವಾಸ. ಅಂದೂ ಕೂಡ ಹಾಗೆಯೆ ಬಂದವನ ಕಣ್ಣಿಗೆ ಅವಳ ಮನದ ಖೇದ, ಕ್ಲೇಶ, ಬೇಸರಗಳೆಲ್ಲದರ ಸಮ್ಮಿಳಿತ ಭಾವ ಮುಖದಲ್ಲೆ ಪ್ರತಿಫಲಿತವಾದಂತೆ ಕಂಡು ಬರುತ್ತದೆ.
ಭಾನುಮತಿ ಬೇಸರವೇನೊ ಕಂಡಿದೆ ಮೊಗ ನಿಜವೆ ?
ಬಡಿದೆಬ್ಬಿಸಲು ಉಲ್ಲಾಸ ಆಡೋಣವೆ ಪಗಡೆ ನಾವೆ?
ಖಡಾ ಖಂಡಿತ ಈ ದಿನ ಗೆಲ್ಲುವವನು ನಾನೆ ಖಚಿತ
ಭಯಾ ಭೀತಿಯಿದ್ದರೆ ಆಡದೆ ದೂರವುಳಿವುದುಚಿತ ! ||
ರೊಚ್ಚೆಬ್ಬಿಸಿದ ಮಾತಿಗೆ ರಮಣಿ ಕೆರಳಿದಳು ಬೆಚ್ಚುತ
ಬೇಸರವೆಲ್ಲ ಮಾಯ ಗೆಲ್ಲುವ ಛಲ ಹಂಬಲ ಕುಣಿತ
ಬಾಗಿಲೆದುರೆ ಕೂತಳೆ ಹಾಸು ಹಾಸಿ ಕಾಯ್ಗಳ ಚೆಲ್ಲಿ
ಎದುರಲೆ ಆಸೀನ ಕರ್ಣ ಬಾಗಿಲು ಬೆನ್ನಲಿ ತೆರೆದಲ್ಲಿ ||
ಇಲ್ಲೆ ನೋಡಿ ಸೊಗಸಿನ ಪರಿ. ಆತ್ಮೀಯ ಗೆಳೆಯ ಊರಲಿಲ್ಲದ ಹೊತ್ತಲಿ ಅವನ ಪ್ರಿಯಸತಿ ಬೇಸರದಿಂದಿರುವ ಸಂದರ್ಭವನ್ನು ಗಮನಿಸಿದವ ಮೊದಲು ಅವಳನ್ನು ಆ ವಾತಾವರಣದಿಂದ ಮುಕ್ತವಾಗಿಸಿ ತುಸು ಹಗುರ ಉಲ್ಲಾಸದ ಲಹರಿಗೆ ತರಲು ಹವಣಿಸುತ್ತಾನೆ. ಆದರೆ ಅದಕ್ಕೆ ಹಿಡಿಯುವ ದಾರಿ ಮಾತ್ರ ತುಸು ವ್ಯತ್ಯಾಸದ್ದು - ಕುಸಿದ ಮನಸಿಗೆ ಬರಿ ಒಣ ನಾಟಕೀಯ ಮಾತುಗಳಿಂದ ಸಮಾಧಾನವಾಗದು ಎಂದವನಿಗೂ ಗೊತ್ತು. ಅದರಲ್ಲೂ ಭಾನುಮತಿಯಂತಹ ಬುದ್ಧಿಮತಿಯನ್ನು ಬರಿಯ ಒಣ ಹೊಗಳಿಕೆಯಂತಹ ಉಪಚಾರದ ಮಾತುಗಳಿಂದ ಪ್ರೇರೇಪಣೆಗೊಳಿಸಲು ಅಸಾಧ್ಯ ಎನ್ನುವುದನ್ನು ಅನುಭವದಿಂದಲೆ ಬಲ್ಲವನವ. ಅದಕ್ಕೆಂದೆ ಬಳಸು ದಾರಿ ಹಿಡಿಯುತ್ತ ಪಗಡೆಯಾಟದ ಪಂಥಕ್ಕೆ ಆಹ್ವಾನಿಸುತ್ತಾನೆ. ಜತೆಗೆ ಎಂದಿನಂತೆ ತಾನೆ ಗೆಲ್ಲುವುದು ಖಚಿತವಾದ ಕಾರಣ ಸೋಲಿನಾಟ ಆಡಲಿಚ್ಚೆಯಿರದಿದ್ದರೆ ಆಡದಿರುವುದೆ ಕ್ಷೇಮ ಎಂದೂ ಛೇಡಿಸುತ್ತಾನೆ.
ಬೇಸರದ ನಿರ್ಗಮನಕೆ ಯಾವುದಾದರೂ ದಾರಿ ಹುಡುಕುತ್ತಿದ್ದವಳಿಗೆ ಈ ಪಂಥ ರೊಚ್ಚಿಗೆಬ್ಬಿಸುತ್ತದೆ. ಅದೇನು ಕೌರವೇಶನಿಲ್ಲದ ರೊಚ್ಚೊ ಅಥವಾ ಅವಳ ಅಭಿಮಾನವನ್ನು ಕೆಣಕಿದ ಪರಿಗೆ ಪ್ರತಿಕ್ರಿಯೆಯೊ ಅಥವಾ ಅದೆಲ್ಲವನ್ನು ಮೀರಿದ ಅನ್ಯಮನಸ್ಕತೆಯ ಪ್ರತಿಕ್ರಿಯೆಯೊ - ಪಗಡೆಯ ಹಾಸು, ಕಾಯಿಗಳನ್ನು ಸಿದ್ದಪಡಿಸಿ ಬಾಗಿಲಿಗೆದುರಾಗಿ ಮುಖ ಮಾಡಿಕೊಂಡು ಕೂತೆ ಬಿಡುತ್ತಾಳೆ ಆಟಕ್ಕೆ ಸಿದ್ದಳಾಗಿ. ಅದನ್ನು ಕಂಡು ತುಟಿಯಂಚಿನಲ್ಲೆ ನಗುತ್ತ ಕರ್ಣನೂ ಎದುರಿನ ಆಸನದಲ್ಲಿ ಕೂರುತ್ತಾನೆ ಬಾಗಿಲಿಗೆ ಬೆನ್ನು ಹಾಕಿಕೊಂಡು. ಸರಿ, ಆಟದ ಸುತ್ತು ಆರಂಭವಾಗಿಬಿಡುತ್ತದೆ ಗಂಭೀರ ಏಕಾಗ್ರತೆಯಲ್ಲಿ..
ಆರಂಭವಾಯಿತು ಕದನ ದಾಳಗಳುರುಳಿಸಿ ಯುದ್ಧ
ಕಾಯ್ಗಳ ಹಣ್ಣಾಗಿಸುತೆಲ್ಲ ಪರಸ್ಪರ ಕಾದಾಡಿ ಬದ್ಧ
ಆಟಗಳುರುಳಿದವೆ ಸಮನೆ ಯಾಕೊ ಗೆಲ್ಲುವನವನೆ
ಒಂದಾದರು ಗೆದ್ದವನನು ಸೋಲಿಸಲೆ ರಾಣಿ ತಪನೆ ||
ಬಿರುಸಿನಲಿ ನಡೆದ ಆಟ ನಡೆಗಳೆಲ್ಲ ಚಟಪಟ ಚಟ
ಗೆಲುವ ಮೇಲ್ಗೆಲುವಿಗೆ ಉಬ್ಬುತ ವನಿತೆಗಣಕಿಸುತಾ
ಗೆಲ್ಲಲು ಬಿಡದೆ ಏಕಾಗ್ರ ಚಿತ್ತ ಚಡಪಡಿಸಿದ ಚದುರೆ
ಗೆಲ್ಲದೆ ಬಿಡೆನೆಂದ ಛಲ ಕರ್ಣ ಮಹಾರಥಿ ಕುದುರೆ ||
ಆಟವೇನೊ ಆರಂಭವಾಯಿತು ಗಂಭೀರ ಶ್ರದ್ದೆಯಲ್ಲಿ, ಅದೇನು ಆಟವೊ ಕದನವೊ ಎನ್ನುವಷ್ಟರ ಮಟ್ಟಿಗೆ. ದಾಳಗಳನ್ನು ಚೆಲ್ಲಿ ಕಾಯಿಗಳನ್ನು ಹಣ್ಣಾಗಿಸುತ ಗೆಲ್ಲಲೆಬೇಕೆಂಬ ಹವಣಿಕೆಯಲ್ಲಿ ಇಬ್ಬರೂ ಮನದಲ್ಲೆ ಕಾದುತ್ತಿದ್ದರೂ, ಯಾಕೊ ಜಯಲಕ್ಷ್ಮಿ ಮಾತ್ರ ಕರ್ಣನ ಪಾಲಿಗೆ. ಪ್ರತಿ ಆಟದಲ್ಲೂ ಗೆಲುವು ಸಾಧಿಸುತಿದ್ದವನನ್ನು ಕಂಡು ಮತ್ತಷ್ಟು ರೊಚ್ಚಿಗೆದ್ದವಳನ್ನು, ಮತ್ತಷ್ಟು ಛೇಡಿಸಿ ಕೆಣಕುತ್ತಾನೆ ಸೂತಪುತ್ರ. ಆ ಮೂಲಕವೆ ಅವಳ ಬೇಸರದ ಅನುಭೂತಿಯನ್ನು ಅವಳಿಗರಿವಿಲ್ಲದ ಹಾಗೆ ಆಟದಲ್ಲಿ ಗೆಲ್ಲಬಯಸುವ ಛಲವಾಗಿ ಮಾರ್ಪಾಡಿಸಿಬಿಡುತ್ತಾನೆ. ಅವಳೊ ಛಲದಂಕಮಲ್ಲನ ಹೆಣ್ಣು ; ಛಲದಲ್ಲಿ ಅವಿನಿಗೇನು ಕಡಿಮೆ ಎನ್ನುವ ಭಾವದಲ್ಲೆ ಮುನ್ನುಗ್ಗಿ ಕಾಯಿ ನಡೆಸುತ್ತಾಳೆ - ಹೇಗಾದರೂ ಕನಿಷ್ಟ ಒಂದಾದರೂ ಆಟದಲ್ಲಿ ಅವನನ್ನು ಸೋಲಿಸಿ ಗೆಲುವು ಸಾಧಿಸಬೇಕೆನ್ನುವ ಹಠದಲ್ಲಿ. ಆದರೇಕೊ ಜಯಲಕ್ಷ್ಮಿ ಅಂದು ಕರ್ಣನ ಮೇಲೆ ಹೆಚ್ಚು ಕೃಪೆ ತೋರಿದಂತೆ ಕಾಣಿಸಿ ಅವಳ ಚಡಪಡಿಕೆಯನ್ನು ಹೆಚ್ಚಿಸುತ್ತಿದ್ದರೆ, ಸೋಲದೆ ಗೆದ್ದೆ ತೀರಬೇಕೆಂಬ ಛಲದ ಕರ್ಣನೂ ಅಷ್ಟೆ ತದೇಕಚಿತ್ತದಿಂದ , ಏಕಾಗ್ರತೆಯಿಂದ ಆಟದಲ್ಲೆ ಪೂರ್ಣ ಮಗ್ನನಾಗಿ ತನ್ನನ್ನೆ ಮರೆತವನಂತೆ ಕೂತಿದ್ದಾನೆ. ಆ ಮಗ್ನತೆ ಇಬ್ಬರಲ್ಲೂ ಅದೆಷ್ಟು ತೀವ್ರವಾಗಿದೆಯೆಂದರೆ ಅವರ ಆಟದ ನಡುವೆ ಅದೇ ತಾನೆ ಕೆಲಸ ಮುಗಿಸಿ ಊರಿಗೆ ಹಿಂದಿರುಗಿದ ದುರ್ಯೋಧನ ಬಾಗಿಲಿಗೊರಗಿಕೊಂಡು ಅವರಾಟದ ಏಕಾಗ್ರತೆಗೆ ಭಂಗ ಬರದ ರೀತಿಯಲ್ಲಿ ಸದ್ದು ಮಾಡದೆ ನಿಂತುಕೊಂಡಿರುವುದೂ ಗಮನಕ್ಕೆ ಬರುವುದಿಲ್ಲ !
ತನ್ಮಯಳೆ ಬಾಗಿ ಗದ್ದಕೆ ಮೊಣಕೈಯಾನಿಸಿ ಶ್ರದ್ಧೆ
ಗಮನಿಸಲಿಲ್ಲ ಬಾಗಿಲಿಗೊರಗಿ ನಿಂತಿದ್ದ ಪತಿ ಸದ್ದೆ
ತಟ್ಟನೆ ತಲೆಯೆತ್ತಿ ನೋಡಲೆ ಕಾಣಿಸಿ ಯಜಮಾನ
ಬೆಚ್ಚಿ ಮೇಲೆದ್ದು ನಿಂತಳೆ ಯಾಕಿರಲಿಲ್ಲವೊ ಗಮನ ||
ಗೆಲುವ ಹೊಸ್ತಿಲಲಿರುವಾಗ ಎದ್ದು ಹೊರಟ ಹೆಣ್ಣು
ಸೋಲುವ ಭೀತಿಗೆ ಬಿಟ್ಟು ಓಡಿರುವಳು ಆಟವನ್ನು
'ಇದು ಮೋಸ ಇದು ಮೋಸ' ಎಂದವನ ಕರವೆ
ತಡೆಯಲವಳ ಸರಿದು ಹಿಡಿದಿತ್ತೆ ಮೇಲ್ವಸ್ತ್ರದರಿವೆ ||
ತನ್ಮಯತೆಯಿಂದ ಗದ್ದಕ್ಕೆ ಮೊಣಕೈಯಾನಿಸಿ ಆಟದಲ್ಲಿ ತಲ್ಲೀನಳಾಗಿ ಬಾಗಿಲಿಗೆದುರಾಗಿ ಕೂತ ಭಾನುಮತಿಯೆ ಆಕಸ್ಮಾತ್ ತಲೆಯೆತ್ತಿದಾಗ ಮೊದಲು ಗಮನಿಸಿದ್ದು ಯಾರೊ ಬಾಗಿಲಿನಲ್ಲಿ ಬಂದು ನಿಂತ ಹಾಗಿದೆಯಲ್ಲ ಎಂದು. ಆದರೆ ತನ್ನ ಆಟದ ತಲ್ಲೀನತೆಯ ಪರಿವೇಷದಿಂದ ಹೊರಬಂದು ಅಲ್ಲಿ ನಿಂತಿರುವವ ತಾನು ಎದುರು ನೋಡುತ್ತಿದ್ದ ತನ್ನ ಪತಿ ಕೌರವೇಶನೆ ಎಂದರಿವಾಗಲಿಕ್ಕೆ ಅವಳಿಗೆ ಒಂದರೆಗಳಿಗೆ ಹಿಡಿಯುತ್ತದೆ. ಆ ಅರಿವಿನ ಪ್ರಜ್ಞೆ ತಕ್ಷಣದ ಉನ್ಮೇಷವನ್ನು ದಾಟಿ ಅಂತರಾಳಕ್ಕಿಳಿದು ಅವಳ ಬಾಹ್ಯ ಪ್ರಜ್ಞೆಯನ್ನು ಬಡಿದೆಬ್ಬಿಸಿದಾಗ ದಿಗ್ಭ್ರಮೆಯಾದವಳಂತೆ ತಡಬಡಾಯಿಸಿಕೊಂಡು ಮೇಲೆದ್ದು ನಿಲ್ಲುತ್ತಾಳೆ. ಆದರೆ ಬಾಗಿಲಿಗೆ ಬೆನ್ನು ಮಾಡಿ ತಲೆ ತಗ್ಗಿಸಿ ಪಗಡೆಯ ಹಾಸನ್ನೆ ದಿಟ್ಟಿಸಿ ಕುಳಿತ ಕರ್ಣನಿಗೆ ಇದಾವುದರ ಅರಿವಿರುವುದಿಲ್ಲ. ಗೆಳೆಯ ವಾಪಸ್ಸು ಬಂದ ಅರಿವಿಲ್ಲದೆ ಇನ್ನೇನು ಈ ಆಟವನ್ನು ಗೆದ್ದುಬಿಡುವೆನೆಂಬ ಭಾವದ ಹುರುಪಿನಲಿದ್ದವನಿಗೆ ಇದ್ದಕ್ಕಿದ್ದಂತೆ ಎದ್ದುನಿಂತ ಭಾನುಮತಿಯನ್ನು ಕಂಡಾಗ ಮೊದಲು ಉದಿಸಿದ ಭಾವ - ಈ ಬಾರಿಯೂ ಸೋಲುತ್ತೇನೆಂದು ಖಚಿತವಾದ ಕಾರಣ ಅವಳು ನಡುವೆಯೆ ಆಟ ಬಿಟ್ಟು ಎದ್ದು ಹೋಗುತ್ತಿದ್ದಾಳೆಂಬುದು. ಆ ಆಲೋಚನೆಯ ಜಾಡಿನಲ್ಲೆ ಆವೇಶಕ್ಕೊಳಗಾದವನಂತೆ 'ಇದು ಮೋಸ, ಇದು ಮೋಸ..' ಎನ್ನುತ ಅವಳನ್ನು ತಡೆಯಲು ಯತ್ನಿಸುತ್ತ ಕೈ ಚಾಚುತ್ತಾನೆ. ಅವಳು ಎದ್ದು ನಿಲ್ಲಲು ಹವಣಿಸಿದ ಗಳಿಗೆ, ಮತ್ತದನ್ನು ಗಮನಿಸಿ ತಡೆಯಲೆತ್ನಿಸಿದ ಹೊತ್ತು ಸಮೀಕರಿಸಿ ಕರ್ಣನ ಕೈಗೆ ಅವಳು ಹೊದ್ದಿದ್ದ ದುರ್ಯೋಧನನ ಪ್ರೀತಿಯ ಕಾಣಿಕೆಯಾದ ಆ ಮೇಲ್ವಸ್ತ್ರದ ತುದಿ ಸಿಕ್ಕಿಬಿಡುತ್ತದೆ. ಅದೆ ಹೊತ್ತಿಗೆ ಕರ್ಣನೇಕೆ ತಡೆಯಲೆತ್ನಿಸುತ್ತಿರುವ ಎಂದರಿಯಲಾಗದೆ ಹೌಹಾರಿದವಳಂತೆ ಪಕ್ಕಕ್ಕೆ ಸರಿದ ಭಾನುಮತಿಯ ಪ್ರತಿಕ್ರಿಯೆಯಿಂದಾಗಿ ಅವಳು ಹೊದ್ದಿದ್ದ ಆ ಸುಂದರ ಮಣಿಮಾಲೆ ಪೋಣಿಸಿದ ನಯವಾದ ಮೇಲು ವಸ್ತ್ರ ಅವಳ ಹೆಗಲಿಂದ ಜಾರಿ ಚೆಲ್ಲಿ ನೆಲದ ಪಾಲಾಗಿಬಿಡುತ್ತದೆ...!
ಹಿಡಿದ ರಭಸವೊ ತಡೆಯಲ್ಹವಣಿಸಿದ ಆತುರವೊ
ಜಾರಿತು ಮೇಲ್ವಸ್ತ್ರ ತುದಿ ಒರಟಾಟ ಕಂಡ ನೆಲವೊ
ಸಡಿಲದೆ ಹರವಿದ್ದ ಸುಂದರ ನವಿರ ಕುಸುರಿ ಜಾರಿ
ನೆಲ ಪಾಲಾಗುತ ಚೆಲ್ಲಾಡಿತೆ ಮಣಿಗಣ ಕಳಚಿ ಸಿರಿ ||
ನೆಲದ ಮೇಲಿನ ವಸ್ತ್ರ ಚೆಲ್ಲಾಪಿಲ್ಲಿ ಹರಡಿದ ಸೂತ್ರ
ಲಲನೆಯ ಮುಖದಲಿ ಗಾಬರಿ ಆತಂಕದೆಳೆ ಮಾತ್ರ
ಎಲ್ಲೊ ಏನೊ ತಪ್ಪಾಗಿದೆ ಅರಿವಾಯ್ತೆ ಸೇನಾನಿ ಬಗೆ
ನಿಲ್ಲಿಸಿ ತಿರುಗಿದ ಹಿಂದೆ ಬೆನ್ನಲ್ಲಿ ಕಂಡ ಮಿತ್ರನ ನಗೆ ||
ಕೆಳಗೆ ಬಿದ್ದ ರಭಸಕ್ಕೆ ವಸ್ತ್ರದ ಅಂಚಿಗೆ ಸಾಲುಗಟ್ಟಿದ ಹರಳು, ಮಣಿಗಳೆಲ್ಲ ಕಳಚಿ ದಿಕ್ಕಾಪಾಲಾಗಿ ಹೋಗುತ್ತವೆ; ಅದನ್ನು ಪೋಣಿಸಿ ಹಿಡಿದಿದ್ದ ದಾರ ತುಂಡಾಗುತ್ತಿದ್ದಂತೆ ಒಂದರ ಹಿಂದೆ ಒಂದಾಗಿ ಬಂಧನದಲ್ಲಿದ್ದ ಮಣಿಗಳೆಲ್ಲ ಜಾರಿ ಎಲ್ಲೆಡೆ ಉರುಳಿಕೊಂಡು ಹೋಗಿ ಕೆಲವು ಕೌರವೇಶನ ಕಾಲ ಬಳಿಯೂ ಬೀಳುತ್ತವೆ. ನಡೆಯುತ್ತಿರುವುದನೆಲ್ಲ ಅವಾಕ್ಕಾಗಿ ನೋಡುತ್ತಿರುವ ಭಾನುಮತಿಯ ದಿಗ್ಬ್ರಾಂತ ಮುಖವನ್ನು ನೋಡುತ್ತಿದ್ದಂತೆ ರಾಧೇಯನಿಗು ಎಲ್ಲೊ ಏನೊ ತಪ್ಪು ನಡೆದಿದೆಯೆಂಬ ಸುಳಿವು ಸಿಕ್ಕಿ, ಏನಾಗಿದೆಯೆಂದರಿಯಲು ನಿಧಾನವಾಗಿ ತಲೆ ತಿರುಗಿಸಿ ಅವಳು ದಿಟ್ಟಿಸುತ್ತಿದ್ದ ಕಡೆಗೆ ನೋಡುತ್ತಾನೆ. ಆಗ ಬಾಗಿಲ ಕಟ್ಟಿನಲ್ಲಿ ನಗುತ್ತ ನಿಂತಿರುವ ದುರ್ಯೋಧನನ ಮುಖ ಕಾಣಿಸುತ್ತದೆ.
ಕಳವಳ ಕಸಿವಿಸಿ ತಪ್ಪಿತಸ್ತ ಭಾವ ಮೇಳೈಸೊಮ್ಮೆಗೆ
ಬಾಯಿಂದ ಮಾತೊರಡದೆ ನಿಂತ, ಗರಬಡಿದ ಹಾಗೆ
ತಪ್ಪೇನ ಮಾಡಿರದಿದ್ದೂ ತಪ್ಪು ತಿಳಿದನೇನೊ ಗೆಳೆಯ
ಸಲಿಗೆಯ ದುರುಪಯೋಗವೆಂದುಕೊಂಡನೆಂಬ ಭಯ ||
ಚಣಕಾಲ ಮೌನ ಮಾತಿಲ್ಲದೆ ಸ್ತಬ್ದ ಮೂವರಲು ಘನ
ಚೆಲ್ಲಿ ಹರಡಿದ ಮಣಿ ಹರಳಷ್ಟೆ ಉರುಳಾಡುತ ಚರಣ
ಹತ್ತಾರು ಹರಳೆ ಜಾರಿ ಮುತ್ತಿಕ್ಕೆ ಸುಯೋಧನ ಪಾದ
ಏನು ಗತಿ ಕಾದಿದೆಯೆಂದೆ ಹೆದರಿದ ಮನ ಶಿಕ್ಷೆಗೆ ಸಿದ್ದ ||
ಆ ಹೊತ್ತಲಿ ಮೂವರಲುಂಟಾಗಿರಬಹುದಾದ ವಿಚಿತ್ರ ಭಾವನೆಗಳ ಸಂಘರ್ಷ ಬರಿ ಮಾತಿನಲ್ಲಿ ಪೂರ್ತಿಯಾಗಿ ಕಟ್ಟಿಕೊಡಲು ಅಸಾಧ್ಯವೆಂದೆ ಹೇಳಬೇಕು. ಅನಿರೀಕ್ಷಿತವಾಗಿ ಅಚ್ಚರಿಪಡಿಸುವ ಕಾತರದಲ್ಲಿ ಬಂದ ಕೌರವ ಆ ಹೊತ್ತಿಗೆ ಸರಿಯಾಗಿ ಕಂಡಿರಬಹುದಾದ ದೃಶ್ಯ ಭಾನುಮತಿಯ ಮೇಲುವಸ್ತ್ರವನ್ನು ಹಿಡಿದಿರುವ ಗೆಳೆಯನ ಕೈ ಮತ್ತಲ್ಲಿಂದ ಕೆಳಗೆ ಜಾರಿ ಬೀಳುತ್ತಿರುವ ವಸ್ತ್ರದ ಚಿತ್ರ; ಮತ್ತದನ್ನು ಬಿಡಿಸಿಕೊಳ್ಳಲು ಹವಣಿಸಿದ ಭಾನುಮತಿಯ ಯತ್ನವನ್ನು ಸಮೀಕರಿಸಿದರೆ, ಆಗ ತಾನೆ ಬಂದ ಪತಿಯೊಬ್ಬನ ಮನದಲ್ಲಿ ಏನೆಲ್ಲಾ ಊಹಾತ್ಮಕ ಉತ್ಕರ್ಷಗಳನ್ನು ಹುಟ್ಟಿಸಬಹುದು? ಮೊದಲೆ ವಾರಗಟ್ಟಲೆ ಹೊರಗಿದ್ದು ಬಂದವ, ಗೆಳೆಯನೆ ಆದರೂ ಅನ್ಯ ಪುರುಷನೊಬ್ಬನ ಸಾಂಗತ್ಯದಲಿ ಸಲಿಗೆಯಿಂದಿರುವ ದೃಶ್ಯ ಏನೆಲ್ಲಾ ಕಸಿವಿಸಿಯನ್ನುಂಟು ಮಾಡಬಹುದು? ಇನ್ನು ಭಾನುಮತಿಗೊ ಮೊದಲೆ ಗರ್ವಿಷ್ಠನಾದ ತನ್ನ ಪ್ರಿಯಕರ ತಮ್ಮನ್ನು ಕಂಡಾಗಿನ ಸ್ಥಿತಿಯಲ್ಲಿ ಏನೆಂದುಕೊಂಡನೊ? ಯಾವ ರೀತಿ ತಪ್ಪು ತಿಳಿದುಕೊಂಡನೊ ಎನ್ನುವ ಕಸಿವಿಸಿ, ಆತಂಕ. ಕರ್ಣನಿಗಾದರೂ ಅಷ್ಟೆ; ತನಗಿತ್ತ ಸಲಿಗೆಯ ಗಡಿ ಮೀರಿ ಅತಿರೇಖದಿಂದ ವರ್ತಿಸಿ ತನ್ನ ಲೋಕ ವಿಖ್ಯಾತ ಸಖ್ಯಕ್ಕು ಮತ್ತು ಭಾನುಮತಿಯ ಹೆಸರಿಗೂ ಸಂಚಕಾರ ತರುವಂತಹ ಕಾರ್ಯವೆಸಗಿದನೆ? ಎಂದು ಅಳುಕು, ತಪ್ಪಿತಸ್ಥ ಭಾವನೆ, ಕಸಿವಿಸಿ. ಉದ್ದೇಶವೇನೆ ಆಗಿದ್ದರೂ ರಾಜಪತ್ನಿಯ ಜತೆಗಿನ ಆ ನಡತೆಯನ್ನು ಯಾವ ಗಂಡ ತಾನೆ ಸಹಿಸಬಲ್ಕ? ಇನ್ನು ಮುಗಿಯಿತು.. ಇಷ್ಟು ದಿನದ ಸಖ್ಯದ ಋಣ ಹರಿದಂತೆಯೆ.. ಈ ತಪ್ಪಿಗೆ ಇನ್ನೇನು ಘೋರ ಶಿಕ್ಷೆ ಕಾದಿದೆಯೊ ಏನೊ...ಪಾಪ ಏನೂ ಅರಿಯದೆ ತನ್ನಿಂದಾಗಿ ಇದರಲ್ಲಿ ಸಿಲುಕಿದ ಭಾನುಮತಿಯ ಗತಿಯೇನಾಗುವುದೊ ಎಂಬ ಹತಾಶೆ, ಭೀತಿ ಸೂತ ಪುತ್ರನನ್ನು ಆ ಗಳಿಗೆಯಲ್ಲಿ ಮುತ್ತಿ, ಹಿಡಿಯಷ್ಟಾಗಿಸಿ ತಲೆ ತಗ್ಗಿಸಿ ನಿಲ್ಲುವಂತೆ ಮಾಡಿಬಿಟ್ಟಿತ್ತು.
ಮೌನ ಮುರಿದವ ಕೊನೆಗೆ ಮಾತಾಡಿ ದುರ್ಯೋಧನ
ಬಾಗಿ ಹೆಕ್ಕಿ ಕಾಲಡಿ ಹರಳ ದಿಟ್ಟಿಸಿ ನೋಡಿ ಅರೆ ಕ್ಷಣ
'ಬರಿ ಹೆಕ್ಕಿ ಕೊಟ್ಟರೆ ಸಾಕೆ, ಪೋಣಿಸಿಯು ಕೊಡಬೇಕೆ ?'
ಎಂದ ಮಾತಿಗೆ ದಿಗ್ಭ್ರಮೆ ನಿರಾಳ ತಿಳಿಯಾಯ್ತೆ ಕ್ಷಣಕೆ ||
ಸಲಿಗೆಯ ದುರುಪಯೋಗಕೆ ಏನು ಶಿಕ್ಷೆ ಕಾದಿದೆಯೊ ಎಂಬ ಆತಂಕದಲ್ಲೆ ಮೂವರ ನಡುವೆ ಚಣಕಾಲ ಮೌನ ಹಾಸಿಕೊಂಡು ಬಿದ್ದಿರುತ್ತದೆ. ಯಾರಿಗೆ ಏನು ಮಾತಾಡಬೇಕೆಂದೆ ಗೊತ್ತಾಗದ ವಿಚಿತ್ರ ಪರಿಸ್ಥಿತಿ. ಪ್ರತಿಮೆಗಳಂತೆ ನಿಂತಲ್ಲೆ ನಿಂತ ಹೊತ್ತಿನಲ್ಲಿ ಕೊನೆಗೆ ಮೌನ ಮುರಿಯುವವನು ದುರ್ಯೋಧನನೆ. ಕೆಳಗೆ ಬಗ್ಗಿ ಕಾಲಡಿ ಬಿದ್ದ ಮಣಿಗಳನ್ನು ಹೆಕ್ಕಿಕೊಳ್ಳುತ್ತ - 'ಬರಿ ಹೆಕ್ಕಿಕೊಟ್ಟರೆ ಸಾಕೆ? ವಸ್ತ್ರಕೆ ಪೋಣಿಸಿಯೂ ಕೊಡಬೇಕೆ?' ಎಂದು ಕೇಳುತ್ತಾನೆ!
ಒಂದರೆಗಳಿಗೆ ಏನು ಬರುವುದೊ ಅವನ ಬಾಯಿಂದ ಎಂಬ ಕಾತರದಿಂದ ಕಾಯುತ್ತಿದ್ದವರಿಬ್ಬರಿಗೂ ಅಚ್ಚರಿ! ಅರೆ ಗಳಿಗೆಯ ನಂತರ ಅವನ ವಾತಾವರಣ ತಿಳಿಯಾಗಿಸುವ ಮಾತೆಂದು ಅರಿತು ನಿರಾಳವಾಗಿ ಹೊರಬಿದ್ದ ಸಮಾಧಾನದ ನಿಟ್ಟುಸಿರು. ಬಹುಶಃ ಆ ಹೊತ್ತಿನಲ್ಲಿ ಬೇರಾವುದೆ ಮಾತಾಡಿದ್ದರೂ ಈ ಮಾತಿನಷ್ಟು ಸೂಕ್ತವಾಗಿರುತಿರಲಿಲ್ಲವೊ ಏನೊ? ಅಲ್ಲಿ ಹರಡಿಕೊಂಡು ಬಿದ್ದಿದ್ದ ಮೌನ ಆತಂಕಕ್ಕೆ ಮತ್ತಾವ ರೀತಿಯಲ್ಲೂ ಇಷ್ಟು ಸರಳ ಸಮಾಧಾನ ಹೇಳಿ ಸಂಧರ್ಭ ತಿಳಿಯಾಗಿಸಲು ಸಾಧ್ಯವಿರಲಿಲ್ಲ. ಅಲ್ಲಿ ನಡೆದ ಆಕಸ್ಮಿಕವನ್ನು ಅದೊಂದು ಘಟನೆಯೆ ಅಲ್ಲವೆಂಬಂತೆ ನಿರ್ಲಕ್ಷಿಸಿ, ಇಬ್ಬರಲ್ಲೂ ಒಂದೆ ಬಾರಿಗೆ ಅವರಲ್ಲಿರಬಹುದಾದ ತಪ್ಪಿತಸ್ಥ ಭಾವನೆಯನ್ನು ಹೋಗಲಾಡಿಸಿ ಏನೂ ನಡೆದೆ ಇಲ್ಲವೆಂಬಂತೆ ನಿಭಾಯಿಸಿದ ಪರಿ ದುರ್ಯೋಧನನ ಪಕ್ವತೆ, ಪ್ರಬುದ್ಧತೆ, ಸೂಕ್ಷ್ಮಜ್ಞತೆಗೆ ಸಾಕ್ಷಿಯಾದಷ್ಟೆ ಅವರು ಮೂವರಲ್ಲಿರಬಹುದಾದ ಅನ್ಯೋನ್ಯತೆಯ ಮಟ್ಟಕ್ಕೂ ಕುರುಹಾಗಿಬಿಡುತ್ತದೆ. ಆ ಒಂದು ವಾಕ್ಯದಿಂದಲೆ ಅವರೆಲ್ಲಾ ಪ್ರಶ್ನೆ, ಆತಂಕಗಳನ್ನು ಒಂದೆ ಬಾರಿಗೆ ಉತ್ತರಿಸಿ ನಿಶ್ಚಿಂತರಾಗುವಂತೆ ಮಾಡಿದ ನಾಯಕತ್ವದ ಗುಣ ಸುಯೋಧನನ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯೂ ಹೌದು.
ಕ್ಷುಲ್ಲಕನಲ್ಲ ಕೌರವೇಶ ಅರಿವಾಯ್ತು ಸತಿ ಗೆಳೆಯರಿಗೆ
ಕೋಪಗೊಳದೆ ತಿಳಿಗೊಳಿಸಿದ ಸಹನೆ ಸನ್ನಿವೇಶ ಬಗೆ
ಅರಿವಾಯ್ತು ಉದಾತ್ತ ಗುಣ ಇಟ್ಟ ನಂಬಿಕೆ ಅಗಣಿತ
ಪ್ರಿಯಸತಿ ಪ್ರೀತಿ ಕೆಳೆಯ ನೀತಿ ಸಂಶಯಿಸದ ದಿಟ್ಟ ||
ಅದಕಲ್ಲವೆ ಜೀವದ ಗೆಳೆಯ ಹಂಗು ತೊರೆದೆ ಕಾದ
ದೂಷಿಸಿದರು ಜಗವೆ ಜತೆಯಲ್ಲೆ ಭಾನುಮತಿ ಸದಾ
ಛಲ ತತ್ವಕೆ ಕಾದವನ ಸರಿ ತಪ್ಪುಗಳೇನಿದ್ದರು ಸತ್ಯ
ನಂಬಿದವರ ನಂಬಿ ದಾರಿ ಮುನ್ನಡೆಸಿದ ರೀತಿ ಮುಖ್ಯ ||
ಈ ಪ್ರಸಂಗದ ಮುಖೇನ ಭಾನುಮತಿ ಕರ್ಣರಿಬ್ಬರಿಗೂ ಅರಿವಾಗಿರಬೇಕು ಕೌರವೇಶನ ಉದಾತ್ತ ಗುಣ. ತಮ್ಮ ಅನ್ಯೋನ್ಯ ಸಖ್ಯದ ಪಾವಿತ್ರತೆ, ಶುದ್ದತೆಗಳನ್ನು ಸಂಶಯಿಸುವಷ್ಟು ಕ್ಷುಲ್ಲಕನಲ್ಲವೆಂದು ತೋರಿಸುತ್ತಲೆ ಪತ್ನಿ ಮತ್ತು ಗೆಳೆಯರಿಬ್ಬರಲ್ಲೂ ತಾನಿಟ್ಟಿರುವ ನಂಬಿಕೆ, ವಿಶ್ವಾಸಗಳನ್ನು ಪ್ರದರ್ಶಿಸುತ್ತಾನೆ. ಅವರೆಡೆಗೆ ಅನುಮಾನಿಸದ ಉದಾತ್ತತೆಯನ್ನು ತೋರಿಸುತ್ತಾನೆ. ಇದರಿಂದಾಗಿಯೆ ಅವನು ಯಾವ ನಿರ್ಧಾರವಮ್ನೆ ಕೈಗೊಂಡರೂ, ಯಾವ ಹೆಜ್ಜೆಯಿಕ್ಕಲು ನಿರ್ಧರಿಸಿದರೂ ಸತಿಯಾಗಿ ಭಾನುಮತಿಯಾಗಲಿ, ಗೆಳೆಯನಾಗಿ ಕರ್ಣನಾಗಲಿ ಸದಾ ಬೆಂಗಾವಲಾಗಿ ಬೆಂಬಲಿಸಿದರೆ ಹೊರತು ವಿರೋಧಿಸಿ ಧೃತಿಗೆಡಿಸಲಿಲ್ಲ. ಕರ್ಣನಂತೂ ಕೊನೆಗಳಿಗೆಯಲಿ ಜೀವ ತೆರುವವರೆಗೂ ತನ್ನ ಮಿತ್ರತ್ವದ ಸಿದ್ದಾಂತಕ್ಜೆ ಕಟ್ಟು ಬಿದ್ದು ತನ್ನ ಪಾಲಿನ ಕರ್ತವ್ಯ ನಿಭಾಯಿಸಿದ. ದುರ್ಯೋಧನನ ಚಿತ್ರಣ ಸಹ ಖಳನಾಯಕನ ಮೂಸೆಯಲ್ಲೆ ವ್ಯಕ್ತವಾದರೂ, ನಂಬಿದವರನ್ನು ಕೈಬಿಡದೆ ಕಡೆವರೆಗೂ ಜತೆಗೆ ನಡೆಸಿದ ಶ್ರೇಷ್ಠ ನಾಯಕತ್ವದ ಗುಣ ಒಂದು ಉದಾತ್ತ ಮಾದರಿಯೂ ಹೌದು.
ಇಲ್ಲಿ ಮತ್ತೆ ಭಾನುಮತಿಯ ಪಾತ್ರಕ್ಕೆ ಬಂದರೆ, ಎಲ್ಲೂ ಹೆಸರಿಸದಿದ್ದರೂ, ಎತ್ತಿ ತೋರಿಸದಿದ್ದರೂ ಕೌರವೇಶ ಗಳಿಸಿದ ಯಶಸ್ಸು ವಿಜಯಗಳ ಹಿಂದೆ ನೆಮ್ಮದಿಯ ಸಂಸಾರದ ಹಿನ್ನಲೆ ಬಲು ಮಹತ್ತರ ಪಾತ್ರ ವಹಿಸಿದ್ದಿರಬೇಕು. ಅವನ ವೈಯಕ್ತಿಕ ಸುಖ, ಐಷಾರಮಗಳಲ್ಲಾವ ಕೊರತೆಯೂ ಆಗದಂತೆ ನೋಡಿಕೊಂಡು ಅವನ ಆತ್ಮ ಸಖಿಯಾಗಿ, ಕಾರ್ಯೇಷು ದಾಸಿ ಕರಣೇಷು ಮಂತ್ರಿ, ಶಯನೇಷು ವೇಶ್ಯೆಯಾಗಿ ಭಾನುಮತಿ ಸಂತೃಪ್ತ ಭೂಮಿಕೆ ನಿಭಾಯಿಸಿರದಿದ್ದರೆ ದುರ್ಯೋಧನನಂತಹ ದುರ್ಯೋಧನನು ಬಾಹ್ಯ ವ್ಯವಹಾರಗಳಲ್ಲಿ ಅಷ್ಟರ ಮಟ್ಟಿಗೆ ಯಶಸ್ಸು ಗಳಿಸುವುದು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಪ್ರಚಾರಕ್ಕೆಡೆಗೊಡದ ನೇಪಥ್ಯದಲ್ಲಿನ ಗೌಣ ಪಾತ್ರದಲ್ಲೆ ನಿಭಾಯಿಸಿ ಯಶಸ್ವಿಯಾದ ಚತುರಮತಿ ಭಾನುಮತಿ. ಅಂತಿಮವಾಗಿ ನಡೆದ ಘೋರ ಸಂಗ್ರಾಮದಲ್ಲಿ ಸೋಲಪ್ಪಬೇಕಾಗಿ ಬಂದರು ಅಲ್ಲಿಯತನಕದ ಜೀವನವನ್ನು ನೋಡಿದರೆ ಪಾಂಡವರಿಗಿಂತಲು ಹೆಚ್ಚು ಅಧಿಕಾರ ಸುಖ ಸಂತೋಷಗಳಿಂದ ವೈಭವದಲ್ಲಿ ಹೆಚ್ಚು ಕಾಲ ಮೆರೆದವನು ಕೌರವೇಶನೆ. ಹೀಗಾಗಿ ಆ ಯಶಸ್ಸಿನ ಹಿನ್ನಲೆ ಸಂಗೀತವಾಗಿ, ಬುದ್ದಿಮತ್ತೆಯ ಒಂದು ಪಾಲಾಗಿ ಗುಣವತಿ, ಸುಶೀಲೆ ಭಾನುಮತಿಯ ಪಾತ್ರವೂ ಅನುಪಮವಾದದ್ದೆ.
ಹೀಗಾಗಿ ದುರ್ಯೋಧನನ ಜೀವನ ಕಾಂಡದಲ್ಲಿ ಅವಳು ನಿರ್ವಹಿಸಿದ ಭೂಮಿಕೆಯ ಮೆಚ್ಚುಗೆಯ ಕುರುಹಾಗಿ 'ಭಾನುಮತಿ ನೀ ಸುಮತಿ' ಎಂದು ಕರೆಯಲೇನು ಅಡ್ಡಿಯಿಲ್ಲವೆಂದು ಧಾರಾಳವಾಗಿ ಹೇಳಬಹುದು !
------------------------------------------------------------------------------------
ನಾಗೇಶ ಮೈಸೂರು, ೨೮. ಫೆಬ್ರವರಿ. ೨೦೧೪, ಸಿಂಗಪುರ
-------------------------------------------------------------------------------------
ಬರಹಕೆ ಮೂಲ ಸ್ಪೂರ್ತಿ: ಸಂಪದಿಗ ಗೆಳೆಯ ಶ್ರೀ ಸಪ್ತಗಿರಿಯವರ ಪ್ರೇರಣೆ ಮತ್ತು ಅವರಿತ್ತ ವಿಕಿ ಲಿಂಕ್ನಿನಲ್ಲಿದ್ದ ಪುಟ್ಟ ವಿವರಣೆ
(Basic story idea inspiration from Sri Saptagiri (Sampada) and the wiki link provided by him: http://en.wikipedia.org/wiki/Duryodhana)
ಭಾನುಮತಿ ಚಿತ್ರದ ಮೂಲ / ಚಿತ್ರದ ಕೃತಜ್ಞತೆ :Bhanumati's Picture source / picture courtesy from the website: http://mahabore.wordpress.com/2013/12/23/bhanumathi-the-forgotten-wife/)
ಅಡಿ ಟಿಪ್ಪಣಿ: ಬರಿಯ ಕಾವ್ಯದ ಅಸ್ವಾದನೆಗಾಗಿ ಪದ್ಯಗಳನ್ನೆಲ್ಲ ಒಂದೆಡೆ ಸಂಗ್ರಹಿಸಿ ಪುನರಾವರ್ತಿಸಿದ್ದೇನೆ :
ಭಾನುಮತಿ ನೀ ಸುಮತಿ
_______________________________
ಪ್ರಾಗ್ಜ್ಯೋತಿಷ ಪುರದರಸು ಭಗದತ್ತನ ಕುವರಿ ಕುಶಲೆ
ಏಕಚಕ್ರಾಧಿಪತ್ಯ ಭೂಪಾಲನೊಡತಿಯಾಗಲ್ಹವಣಿಸಲೆ
ಭಾನುಮತಿ ಭೂಲೋಕ ರತಿ ದುರ್ಯೋಧನನ ಪಾಲೆ
ಛಲದಂಕಮಲ್ಲನ್ಹಮ್ಮು ಪೊಗರಿನ ಮನವ ಗೆದ್ದ ಬಾಲೆ || ೦೧ ||
ದುಷ್ಠ ಚತುಷ್ಟಯ ಕೂಟದ ನಾಯಕನೆಂದು ತಿಳಿದೂ
ಸೂಕ್ಷ್ಮವನರಿತ ಜಾಣೆ, ಚಕ್ರಾಧಿಪತಿಯಾಗಿಸೆ ಸನ್ನದ್ಧು
ಕುಟಿಲವೊ ಜಟಿಲವೊ ಮನೆವಾರ್ತೆಗವ ಮಹಾರಾಣಿ
ಕಾತರಿಸಿ ವರಿಸಿದಳಲ್ಲ ಮಹಾತ್ವಾಕಾಂಕ್ಷಿಯ ರಮಣಿ || ೦೨ ||
ಬಲ್ಲನೆ ಸುಯೋಧನ ಸರಿ ವಲ್ಲಭೆಯಿರದಿರೆ ದುಸ್ತರ
ಮಂಚ ಮನೆ ನೆಮ್ಮದಿಯಿರದೆ ಮನದಾಶೆ ಸಂಚಕಾರ
ಅವಳೊಬ್ಬಳಿರೆ ಬೆನ್ನಾಗಿಹ ಮಹತಿ ಹಿನ್ನಲೆ ಸುಸೂತ್ರ
ನಿರಾಳ ಸಂತೃಪ್ತಮನ ಮುನ್ನುಗ್ಗೆ ಆತ್ಮವಿಶ್ವಾಸ ಪ್ರಖರ || ೦೩ ||
ಎಲ್ಲೂ ಕೇಳದು ಕೊಂಕು ಬರಿ ರಾಣಿವಾಸದ ಹೊರತು
ನಿಭಾಯಿಸಿರಬೇಕು ಸೂಕ್ಷ್ಮ ಜಾಣ್ಮೆ ಸಂಧರ್ಭವನರಿತು
ಗರ್ವದ ಭಾಂಡದ ಪತಿಯ ಸೋತು ಗೆದ್ದ ಚಾಕಚಕ್ಯತೆ
ಗೆಲಿಸುತವನ ಸಂಭ್ರಮಿಸೆ ಬಿಟ್ಟು ಮನ ಗೆದ್ದ ಅರ್ಹತೆ || ೦೪ ||
ಚತುಷ್ಟಯ ಮನೆಯಾಚೆ, ಅದ್ವಿತೀಯ ಜೋಡಿ ಒಳಗೆ
ಕಾರ್ಯತಂತ್ರ ಚರ್ಚೆ ಮನನಾ ಮನ ಮಂತ್ರಿಣಿ ಕೆಳೆಗೆ
ಪ್ರೀತಿಯ್ಹುಟ್ಟದೆ ರಸಿಕ ವೀರಗೆ, ಸರಿಸಮ ಸ್ತರ ವನಿತೆ
ಅಚಲ ನಿಷ್ಠೆ ನಂಬಿಕೆ ಸತಿ ಭಾಗ್ಯವೆ ಹೆಣ್ಣಾಗಿ ಬಂದಂತೆ || ೦೫ ||
ಅಕ್ಕರೆ ಮಾಮನ ಸಕ್ಕರೆ ಮಾತಿದ್ದರು ಮನಕೆ ಪ್ರಿಯ
ಮಂತ್ರಾಲೋಚನೆ ವಯಸಿನ ಗೆಳೆಯನಿದ್ದು ಸಹಾಯ
ಸೋದರಿಕೇ ಭಕ್ತಿ ವಾತ್ಸಲ್ಯವಿದ್ದರು ಕೋಟೆಯ ದಾಯ
ಮನದಂತರಂಗ ವೀಣೆ ನುಡಿಸುವಳ ಸೂಕ್ತ ಉಪಾಯ || ೦೬ ||
ಪಂಚವರ್ಣದ ಗಿಳಿಯಂತವಳೆ ಚತುಷ್ಟಯಕೆ ಪಂಚಮ
ಪಂಚಪ್ರಾಣ ಪ್ರಿಯತಮನಚಲ ನಂಬಿಕೆಗೆ ಪಾತ್ರಳಮ್ಮ
ಶಕುನಿ ಮೈದುನರಲ್ಲ ಸುಯೋಧನನಷ್ಟೆ ಸಲಿಗೆ ಕರ್ಣ
ಸರಸಮಯ ಮಾತಿನ ಜತೆ ಪಗಡೆಯಾಡುವ ಕಾರಣ || ೦೭ ||
ಕೆಳೆಯೆಂದರೆ ಕೆಳೆ ಕರ್ಣ ದುರ್ಯೋಧನ ಅಭಿಮಾನ
ಕೀಳ್ಗರೆಯಲೆ ಬಿಡದೆ ಪಟ್ಟ ಕಟ್ಟಿದ ಸ್ನೇಹ ಸ್ವಾಭಿಮಾನ
ನೆಚ್ಚಿನ ಬಂಟನ ಮೇಲ್ನಂಬಿಕೆ ಕೆಚ್ಚಿನ ಅಂತರಂಗ ಮಿತ್ರ
ಸತಿಯೊಡನಾಟದಲಿರಲಿ ಅನುಮಾನಿಸ ತಿಲಮಾತ್ರ || ೦೮ ||
ಒಂದೊಮ್ಮೆ ಕಾರ್ಯನಿರತ ಸುತ್ತಾಟದೆ ಸುಯೋಧನ
ರಾಜಧಾನಿ ಬಿಟ್ಟಾ ಗಳಿಗೆ, ದಿನ ವಾರ ಕಾಲ ಪಯಣ
ಕೂತು ಕೂತೆ ಬೇಸರ ರಾಣಿ ಭಾನುಮತಿ ಅಂತಃಪುರ
ತೊಟ್ಟಳು ನಲ್ಲನಿತ್ತ ಸುಂದರ ಮಣಿಹಾರದ ಮೇಲ್ವಸ್ತ್ರ || ೦೯ ||
ಪ್ರೀತಿಯ ಕಾಣಿಕೆ ಸೊಗ ವಸ್ತ್ರ ಚಿತ್ತಾರದಲೆ ಕುಸುರಿ
ನಾಲ್ಕು ತುದಿಯುದ್ದಕೆ ಅಮೂಲ್ಯ ಮಣಿಗಳ ಲಹರಿ
ಗಲಿಗಲಿರೆನುವ ಸದ್ದು ಜರುಗಿದಾಗ ಮೈಮೇಲ್ಹೊದ್ದು
ಮಿರಮಿರ ಮಿಂಚುವ ಕನ್ನಡಿ ತುಣುಕುಗಳ ಸರಹದ್ದು || ೧೦ ||
ನೇವರಿಸಿ ಆಪ್ಯಾಯತೆಯಿಂದ ನವಿರ ಸ್ಪರ್ಶದಪ್ಪುಗೆ
ಪತಿರಾಯನೆ ಎದೆಗೂಡಲಿ ಕೂತಂತನಿಸೊ ಸೊಬಗೆ
ವಸ್ತ್ರದ ಚಿತ್ತಾರದ ತುಂಬುಗನ್ನಡಿಯಲವನದೆ ಬಿಂಬ
ದಿನ ವಾರ ರಾಜಕಾರ್ಯದಲಿ ಸಿಕ್ಕುವುದೆ ದುರ್ಲಬ || ೧೧ ||
ಅಂತಾಗಿ ಅಳಿಸಲಾಗದ ಬೇಸರ ಆಕಳಿಸಿದ ಹೊತ್ತ
ಬಾಗಿಲ ಸದ್ದಾಯಿತು ಆಪ್ತಮಿತ್ರ ಅಂಗರಾಜ ನಗುತ
ಅಪ್ಪಣೆ ಕಾಯದೆಲೆ, ಕಾಲಿಡಲನುಮತಿ ಕರ್ಣನಿಗಷ್ಟೆ
ಪತಿಯ ಸ್ನೇಹ ಪ್ರೇಮದಲಿಟ್ಟಾ ಅತೀವ ನಂಬಿಕೆ ನಿಷ್ಟೆ || ೧೨ ||
ಭಾನುಮತಿ ಬೇಸರವೇನೊ ಕಂಡಿದೆ ಮೊಗ ನಿಜವೆ ?
ಬಡಿದೆಬ್ಬಿಸಲು ಉಲ್ಲಾಸ ಆಡೋಣವೆ ಪಗಡೆ ನಾವೆ?
ಖಡಾ ಖಂಡಿತ ಈ ದಿನ ಗೆಲ್ಲುವವನು ನಾನೆ ಖಚಿತ
ಭಯಾ ಭೀತಿಯಿದ್ದರೆ ಆಡದೆ ದೂರವುಳಿವುದುಚಿತ ! || ೧೩ ||
ರೊಚ್ಚೆಬ್ಬಿಸಿದ ಮಾತಿಗೆ ರಮಣಿ ಕೆರಳಿದಳು ಬೆಚ್ಚುತ
ಬೇಸರವೆಲ್ಲ ಮಾಯ ಗೆಲ್ಲುವ ಛಲ ಹಂಬಲ ಕುಣಿತ
ಬಾಗಿಲೆದುರೆ ಕೂತಳೆ ಹಾಸು ಹಾಸಿ ಕಾಯ್ಗಳ ಚೆಲ್ಲಿ
ಎದುರಲೆ ಆಸೀನ ಕರ್ಣ ಬಾಗಿಲು ಬೆನ್ನಲಿ ತೆರೆದಲ್ಲಿ || ೧೪ ||
ಆರಂಭವಾಯಿತು ಕದನ ದಾಳಗಳುರುಳಿಸಿ ಯುದ್ಧ
ಕಾಯ್ಗಳ ಚಚ್ಚುತ ಕೊಲ್ಲುತ ಪರಸ್ಪರ ಕಾದಾಡಿ ಬದ್ಧ
ಆಟಗಳುರುಳಿದವೆ ಸಮನೆ ಯಾಕೊ ಗೆಲ್ಲುವನವನೆ
ಒಂದಾದರು ಗೆದ್ದವನನು ಸೋಲಿಸಲೆ ರಾಣಿ ತಪನೆ || ೧೫ ||
ಬಿರುಸಿನಲಿ ನಡೆದ ಆಟ ನಡೆಗಳೆಲ್ಲ ಚಟಪಟ ಚಟ
ಗೆಲುವ ಮೇಲ್ಗೆಲುವಿಗೆ ಉಬ್ಬುತ ವನಿತೆಗಣಕಿಸುತಾ
ಗೆಲ್ಲಲು ಬಿಡದೆ ಏಕಾಗ್ರ ಚಿತ್ತ ಚಡಪಡಿಸಿದ ಚದುರೆ
ಗೆಲ್ಲದೆ ಬಿಡೆನೆಂದ ಛಲ ಕರ್ಣ ಮಹಾರಥಿ ಕುದುರೆ || ೧೬ ||
ತನ್ಮಯಳೆ ಬಾಗಿ ಗದ್ದಕೆ ಮೊಣಕೈಯಾನಿಸಿ ಶ್ರದ್ಧೆ
ಗಮನಿಸಲಿಲ್ಲ ಬಾಗಿಲಿಗೊರಗಿ ನಿಂತಿದ್ದ ಪತಿ ಸದ್ದೆ
ತಟ್ಟನೆ ತಲೆಯೆತ್ತಿ ನೋಡಲೆ ಕಾಣಿಸಿ ಯಜಮಾನ
ಬೆಚ್ಚಿ ಮೇಲೆದ್ದು ನಿಂತಳೆ ಯಾಕಿರಲಿಲ್ಲವೊ ಗಮನ || ೧೭ ||
ಗೆಲುವ ಹೊಸ್ತಿಲಲಿರುವಾಗ ಎದ್ದು ಹೊರಟ ಹೆಣ್ಣು
ಸೋಲುವ ಭೀತಿಗೆ ಬಿಟ್ಟು ಓಡಿರುವಳು ಆಟವನ್ನು
'ಇದು ಮೋಸ ಇದು ಮೋಸ' ಎಂದವನ ಕರವೆ
ತಡೆಯಲವಳ ಸರಿದು ಹಿಡಿದಿತ್ತೆ ಮೇಲ್ವಸ್ತ್ರದರಿವೆ || ೧೮ ||
ಹಿಡಿದ ರಭಸವೊ ತಡೆಯಲ್ಹವಣಿಸಿದ ಆತುರವೊ
ಜಾರಿತು ಮೇಲ್ವಸ್ತ್ರ ತುದಿ ಒರಟಾಟ ಕಂಡ ನೆಲವೊ
ಸಡಿಲದೆ ಹರವಿದ್ದ ಸುಂದರ ನವಿರ ಕುಸುರಿ ಜಾರಿ
ನೆಲ ಪಾಲಾಗುತ ಚೆಲ್ಲಾಡಿತೆ ಮಣಿಗಣ ಕಳಚಿ ಸಿರಿ || ೧೯ ||
ನೆಲದ ಮೇಲಿನ ವಸ್ತ್ರ ಚೆಲ್ಲಾಪಿಲ್ಲಿ ಹರಡಿದ ಸೂತ್ರ
ಲಲನೆಯ ಮುಖದಲಿ ಗಾಬರಿ ಆತಂಕದೆಳೆ ಮಾತ್ರ
ಎಲ್ಲೊ ಏನೊ ತಪ್ಪಾಗಿದೆ ಅರಿವಾಯ್ತೆ ಸೇನಾನಿ ಬಗೆ
ನಿಲ್ಲಿಸಿ ತಿರುಗಿದ ಹಿಂದೆ ಬೆನ್ನಲ್ಲಿ ಕಂಡ ಮಿತ್ರನ ನಗೆ || ೨೦ ||
ಕಳವಳ ಕಸಿವಿಸಿ ತಪ್ಪಿತಸ್ತ ಭಾವ ಮೇಳೈಸೊಮ್ಮೆಗೆ
ಬಾಯಿಂದ ಮಾತೊರಡದೆ ನಿಂತ, ಗರಬಡಿದ ಹಾಗೆ
ತಪ್ಪೇನ ಮಾಡಿರದಿದ್ದೂ ತಪ್ಪು ತಿಳಿದನೇನೊ ಗೆಳೆಯ
ಸಲಿಗೆಯ ದುರುಪಯೋಗವೆಂದುಕೊಂಡನೆಂಬ ಭಯ || ೨೧ ||
ಚಣಕಾಲ ಮೌನ ಮಾತಿಲ್ಲದೆ ಸ್ತಬ್ದ ಮೂವರಲು ಘನ
ಚೆಲ್ಲಿ ಹರಡಿದ ಮಣಿ ಹರಳಷ್ಟೆ ಉರುಳಾಡುತ ಚರಣ
ಹತ್ತಾರು ಹರಳೆ ಜಾರಿ ಮುತ್ತಿಕ್ಕೆ ಸುಯೋಧನ ಪಾದ
ಏನು ಗತಿ ಕಾದಿದೆಯೆಂದೆ ಹೆದರಿದ ಮನ ಶಿಕ್ಷೆಗೆ ಸಿದ್ದ || ೨೨ ||
ಮೌನ ಮುರಿದವ ಕೊನೆಗೆ ಮಾತಾಡಿ ದುರ್ಯೋಧನ
ಬಾಗಿ ಹೆಕ್ಕಿ ಕಾಲಡಿ ಹರಳ ದಿಟ್ಟಿಸಿ ನೋಡಿ ಅರೆ ಕ್ಷಣ
'ಬರಿ ಹೆಕ್ಕಿ ಕೊಟ್ಟರೆ ಸಾಕೆ, ಪೋಣಿಸಿಯು ಕೊಡಬೇಕೆ ?'
ಎಂದ ಮಾತಿಗೆ ದಿಗ್ಭ್ರಮೆ ನಿರಾಳ ತಿಳಿಯಾಯ್ತೆ ಕ್ಷಣಕೆ || ೨೩ ||
ಕ್ಷುಲ್ಲಕನಲ್ಲ ಕೌರವೇಶ ಅರಿವಾಯ್ತು ಸತಿ ಗೆಳೆಯರಿಗೆ
ಕೋಪಗೊಳದೆ ತಿಳಿಗೊಳಿಸಿದ ಸಹನೆ ಸನ್ನಿವೇಶ ಬಗೆ
ಅರಿವಾಯ್ತು ಉದಾತ್ತ ಗುಣ ಇಟ್ಟ ನಂಬಿಕೆ ಅಗಣಿತ
ಪ್ರಿಯಸತಿ ಪ್ರೀತಿ ಕೆಳೆಯ ನೀತಿ ಸಂಶಯಿಸದ ದಿಟ್ಟ || ೨೪ ||
ಅದಕಲ್ಲವೆ ಜೀವದ ಗೆಳೆಯ ಹಂಗು ತೊರೆದೆ ಕಾದ
ದೂಷಿಸಿದರು ಜಗವೆ ಜತೆಯಲ್ಲೆ ಭಾನುಮತಿ ಸದಾ
ಛಲ ತತ್ವಕೆ ಕಾದವನ ಸರಿ ತಪ್ಪುಗಳೇನಿದ್ದರು ಸತ್ಯ
ನಂಬಿದವರ ನಂಬಿ ದಾರಿ ಮುನ್ನಡೆಸಿದ ರೀತಿ ಮುಖ್ಯ || ೨೫ ||
------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------
Comments
ಉ: ಭಾನುಮತಿ ನೀ ಸುಮತಿ..
ಎಲೆ ಮರೆಯ ಹೂವುಗಳನ್ನು ಕೇಳುವವರಾರು? ಕೀಳುವವರೇ ಎಲ್ಲಾ! ಭಾನುಮತಿಯ ಪರಿಚಯ ಒಂದು ಉತ್ತಮ ಪ್ರಯತ್ನ, ಯಶಸ್ವಿ ಪ್ರಯತ್ನ.
In reply to ಉ: ಭಾನುಮತಿ ನೀ ಸುಮತಿ.. by kavinagaraj
ಉ: ಭಾನುಮತಿ ನೀ ಸುಮತಿ..
ಕವಿಗಳೆ ನಮಸ್ಕಾರ. ಭಾನುಮತಿಯ ಎಲೆ ಮರೆಯ ಪಾತ್ರದ ಕುರಿತು ಬರೆಯಲು ಪ್ರೇರಣೆ ಸಿಕ್ಕಿದ್ದು ಮಂಡೋದರಿಯ ಕುರಿತು ಬರೆಯುವಾಗ ಅದನ್ನು ಓದಿ, ಭಾನುಮತಿಯ ಈ ಪ್ರಸಂಗದ ಲಿಂಕು ಕೊಟ್ಟ 'ಸಪ್ತಗಿರಿ ವಾಸಿ' ಯವರಿಂದಾಗಿ. ಹೀಗಾಗಿ ಇದೊಂದು ರೀತಿ 'ಕೇಳುಗರ (ಓದುಗರ) ಕೋರಿಕೆ'ಯ ಮಾದರಿಯಲ್ಲಿ ಹುಟ್ಟಿದ ಬರಹ. ಅದಕ್ಕೆ ಸಪ್ತಗಿರಿಗಳಿಗೊಂದು ನಮಸ್ಕಾರ ಸಲ್ಲಬೇಕು :-)
ನಿಮ್ಮ ಮಾತು ನಿಜ. ಹಲವಾರು ಎಲೆಮರೆಯ ಪಾತ್ರಗಳಲ್ಲಿ ಭಾನುಮತಿಯು ಒಂದು. ನನಗನಿಸುವಂತೆ ಯಾರು ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಾರೊ ಅಂತಹವರ ಸಾಧನೆಗಳೂ ಗೌಣವಾಗಿಬಿಡುತ್ತವೆ. ಅಂತಹ ಪಾತ್ರ ಚಿತ್ರಣವು ತುಸು ಕಠಿಣವೆ - ಸರಿಯಾದ ಮೂಲ ಮಾಹಿತಿ ಸರಕು ಸಿಗುವುದಿಲ್ಲ. ಇಲ್ಲೂ ಸ್ಚಲ್ಪ ಊಹೆಯನ್ನು , ಕಲ್ಪನೆಯನ್ನು ಬೆರೆಸಿಯೆ ಕಟ್ಟಬೇಕಾಯ್ತು ಕಥೆಯನ್ನ :-)
-ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು