"ಭಾರ"

"ಭಾರ"

ಬರಹ


"ಭಾರ"

ಭಾಗ-೧
       ಅಂದು ಜುಲೈ ೨೦,  ಪುಟ್ಟ ಆರ್ಯನ ಹುಟ್ಟುಹಬ್ಬ. ಅವನು ಅಂಜಲಿಯ ಒಬ್ಬನೇ ಮಗ, ಆರನೆಯ ತರಗತಿಯಲ್ಲಿ ಓದುತ್ತಿರುವನು. ಅಂಜಲಿಯ ಗಂಡ ಸಮರ್ಥ, ಸಾಧಾರಣ ಕೃಷಿಕನಾದರೂ, ಅಳೆದು ಸುರಿದು ಸಾಕಷ್ಟು ಡೊನೇಷನ್ ತೆತ್ತು ಮಗನನ್ನು ಒಂದು ಪ್ರತಿಷ್ಠಿತ ಶಾಲೆಗೆ ಸೇರಿಸಿದ್ದನು. ತರಾತುರಿಯಿಂದ ಬೆಳಿಗ್ಗೆ ಆರು ಘಂಟೆಗೆ ಎದ್ದವಳೇ ಅಂಜಲಿ, ಖುಷಿಯಿಂದ ಹುಟ್ಟುಹಬ್ಬದ ಶುಭಾಶಯವನ್ನು ಹೇಳುತ್ತಾ, ಮಗನನ್ನು ಎಬ್ಬಿಸಿದಳು. ತನ್ನ ಹುಟ್ಟುಹಬ್ಬದ ಸಂತಸ ಆರ್ಯನ ಮುಖದಲ್ಲಿ ಎದ್ದು ಕಾಣುತ್ತಿದ್ದರೂ, ಅಳುತ್ತಾ, ರಾಗ ಹಾಡುತ್ತಾ, ಅವನು ಹಾಸಿಗೆ ಬಿಟ್ಟು ಏಳಲು ಒಪ್ಪದಾದನು. ಅಂಜಲಿ ಅವನನ್ನು ಮತ್ತೆ ಛೇಡಿಸಿದಾಗ, ಅವನ ಕಣ್ಣುಗಳು ನೀರು ತುಂಬಿ ಕೊಳದಂತಾದವು. " ಯಾಕೋ ಕಂದಾ? ಇವತ್ತು ನಿನ್ನ ಬರ್ತ್ಡೇ. ಹಾಗಿದ್ದೂ ಅಳುತ್ತಿದ್ದೀಯಾ? ಬೇಗ ರೆಡಿಯಾಗು. ಹೊಸ ಡ್ರೆಸ್ ಹಾಕಿಕೊಡು ನಿನ್ನ ಫ಼್ರೆಂಡ್ಸ್ ಗೆಲ್ಲಾ ಚಾಕ್ಲೇಟ್ ಕೊಡಬೇಕಲ್ಲಾ ? ನನಗೂ ಆಫೀಸಿಗೆ ಹೊತ್ತಾಗುತ್ತದೆ " ಎಂದು ಹೇಳುತ್ತಾ ಅವನನ್ನು ಅಂಜಲಿ ಸಮಾಧಾನ ಪಡಿಸತೊಡಗಿದಳು. ಆದರೆ ಅವನ ಅಳು ಇನ್ನೂ ಜೋರಾಯಿತು. "ಅಮ್ಮಾ, ನಾನು ಇವತ್ತು ಸ್ಕೂಲಿಗೆ ಹೋಗುವುದಿಲ್ಲ, ಇನ್ನು ಮುಂದೆ ಯಾವತ್ತೂ ಆ ಸ್ಕೂಲಿಗಲ್ಲಾ, ಬೇರೆ ಯಾವ ಸ್ಕೂಲಿಗೂ ಹೋಗುವುದಿಲ್ಲಾ" ಎಂದೆಲ್ಲಾ ಬಡಬಡಿಸುತ್ತಾ ಆರ್ಯ ಬಿಕ್ಕಳಿಸತೊಡಗಿದನು. ಇವರಿಬ್ಬರ ಗಲಾಟೆ ಕೇಳಿ ಹಲ್ಲುಜ್ಜುತ್ತಿದ್ದ ಸಮರ್ಥ ಧಾವಿಸಿ ಬಂದು ಇಬ್ಬರಿಗೂ ಗದರಿಸಿದನು. ಬೆಳಗಿನ ಈ ರಾಮಾಯಣಕ್ಕೆ ಕಾರಣವೇನೆಂದು ಸಮರ್ಥ ಕೇಳಲು, ಆರ್ಯನ ಕೂಗಾಟ ಇನ್ನೂ ಜೋರಾಯಿತು. ಹೊರಗೆ ತೋಟದಲ್ಲಿ ಹಸುವಿಗೆ ಹುಲ್ಲು ತಿನ್ನಿಸುತ್ತಿದ್ದ ರಾಮರಾಯರು ಒಳಗೆ ಓಡೋಡಿ ಬಂದರು.

       ಎರಡು ವರ್ಷಗಳ ಹಿಂದೆ ತಮ್ಮ ಪತ್ನಿ ಶಾಂತಿಯನ್ನು ಸಕ್ಕರೆಕಾಯಿಲೆಯಿಂದಾಗಿ ಕಳೆದು ಕೊಂಡಿದ್ದ ಅವರಿಗೆ ಮೊಮ್ಮಗ ಆರ್ಯನೇ ಜೀವದ ಆಸರೆ. ಅವನೇ ಅವರ ಇಳಿವಯಸ್ಸು ಅರುವತ್ತೈದಕ್ಕೆ ಬದುಕುವ ಆಸೆ ತುಂಬುವ ಚಿಲುಮೆಯಾಗಿದ್ದನು. ಸರಕಾರಿ ಪ್ರೈಮರಿ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ರಾಮರಾಯರು ನಿವೃತ್ತಿಯಾಗಿದ್ದರು. ಪಟ್ಟಣದ ಸಹವಾಸ ಬೇಡವೆಂದು, ಅತ್ತಿಬೆಲೆ ಸಮೀಪದ ಕಾತೂರು ಎಂಬ ಹಳ್ಳಿಯಲ್ಲಿ, ಕೃಷಿಕರಾಗಿ ಜೀವನೋಪಾಯ ಮಾಡುತ್ತಿದ್ದರು. ತಮ್ಮ ಮಗ ಸಮರ್ಥನನ್ನು ಕೃಷಿ ಪದವೀಧರನನ್ನಾಗಿ ಅವರು ಓದಿಸಿದ್ದರು. ಸಮರ್ಥ(ನನ್ನ ಹೀರೊ ಆರ್ಯನ ಅಪ್ಪ), ತಂದೆಗೆ ತಕ್ಕ ಮಗ, ಯಾವುದೇ ಏರಿಳಿತಗಳಿಲ್ಲದ, ಲೋಭಿಯಲ್ಲದ, ತೂಕದ ವ್ಯಕ್ತಿತ್ವ ಅವನದು. ಒಳ್ಳೆಯ ಕೃಷಿಕನಾದ ಮಿತಭಾಷಿ, ಬುದ್ಧಿವಂತ ಸಮರ್ಥನೆಂದರೆ  ಸುತ್ತುಮುತ್ತಲಿನ ಹಳ್ಳಿಜನರಿಗೆಲ್ಲಾ ಬಲು ಇಷ್ಟ. ಆಂಜಲಿ, ಆರ್ಯನ ಅಮ್ಮ, ಓದಿನಲ್ಲಿ ಬಲು ಜಾಣೆ, ಸಹೃದಯಿ, ಪಟ್ಟಣದಲ್ಲಿ ಹುಟ್ಟಿ ಬೆಳೆದಾಕೆ, ಹಳ್ಳಿಯ ಪರಿಸರಕ್ಕೂ ಹೊಂದಿಕೊಂಡಾಕೆ. ಫ್ಯಾಷನ್ ಡಿಸೈನಿಂಗ್ ಕೋರ್ಸ್ ನಲ್ಲಿ ಪದವಿ ಗಳಿಸಿ ಕಾತೂರು ಸಮೀಪವೇ ಸಿದ್ಧ ಉಡುಪುಗಳನ್ನು ತಯಾರಿಸುವ ಒಂದು ಕಾರ್ಖಾನೆಯಲ್ಲಿ ಮೇಲ್ವಿಚಾರಕಳಾಗಿ ಅವಳು ಕೆಲಸ ಮಾಡುತ್ತಿದ್ದಳು. ಹೀಗೆ ಅವರದೊಂದು ವಿದ್ಯಾವಂತ ಸಹೃದಯಿ ಕುಟುಂಬ.

       ಆರ್ಯನ ಗಲಾಟೆ ಕೇಳಿ ಮನೆಯೊಳಗೆ ಏದುಸಿರಿನಿಂದ ಓಡಿಬಂದ ರಾಮರಾಯರು "ಇವತ್ತು ನನ್ನ ಹುಟ್ಟಿದಹಬ್ಬ, ನೀನು ವಿಷ್ ಮಾಡಿಲ್ಲ" ಎಂಬ ತಮಾಷೆ ಮಾತು ಹೇಳುತ್ತಾ ಅವನ ಮನ ಬದಲಾಯಿಸಲು ಪ್ರಯತ್ನಿಸಿದರು. ಅದಕ್ಕೂ ಆರ್ಯ ಜಗ್ಗದಿದ್ದಾಗ, ಅವರು ಅಂಜಲಿಯನ್ನು ಪಕ್ಕಕ್ಕೆ ಕರೆದು ಮೆಲುದನಿಯಲ್ಲಿ, "ಅವನನ್ನು ಇವತ್ತು ಸ್ಕೂಲಿಗೆ ಕಳುಹಿಸಬೇಡ ಅಂಜು. ಫ್ಯಾಕ್ಟರಿಯಲ್ಲಿ ಇವತ್ತು ಜಾಸ್ತಿ ಕೆಲಸ ಇಲ್ಲದಿದ್ದರೆ, ನೀನೂ ರಜೆ ಹಾಕು. ಇಂದು ಪುಟ್ಟನಿಗೆ ಏನೋ ಬೇಸರವಾಗಿರಬೇಕು" ಎಂದರು. "ಆಯ್ತು ಅಪ್ಪ, ಮ್ಯಾನೇಜರಿಗೆ ಫೋನ್ ಮಾಡಿ ಕೇಳುತ್ತೇನೆ" ಎಂದು ಅಂಜಲಿ ಒಪ್ಪಿಕೊಂಡಳು. ಆ ಕ್ಷಣಕ್ಕೆ ಮಾವನ ಒತ್ತಾಯಕ್ಕೆ ಕಟ್ಟುಬಿದ್ದು ಒಪ್ಪಿಕೊಂಡರೂ,  ಅಂಜಲಿಯ ಮನಸ್ಸು ಬೇರೆ ಏನೋ ವಿಷಯಗಳನ್ನು ತಾಳೆ ಹಾಕುತ್ತಿತ್ತು. ಪ್ರಿಕೆಜಿಕ್ಲಾಸ್ ನಿಂದಲೂ ಆರ್ಯ ಒಂದು ದಿನವೂ ಸ್ಕೂಲಿಗೆ ಹೋಗುವುದಿಲ್ಲವೆಂದು ಅತ್ತಿರಲಿಲ್ಲ.  ಚಿಕ್ಕಮಕ್ಕಳಾದರೆ ಸ್ಕೂಲಿನ ಬಿಗುವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಪಡುವುದು ಸಹಜ. ಆದರೆ ಆರ್ಯನಿಗೆ ಈಗ ಹನ್ನೊಂದು ವರ್ಷ. "ಏನೋ ತೊಂದರೆ ಆಗಿದೆ. ಕ್ಲಾಸಿನಲ್ಲಿ ಗಲಾಟೆ ಮಾಡಿಕೊಂಡಿದ್ದು ನಮಗೆ ಹೇಳಲು ಭಯ ಪಡುತ್ತಿದ್ದಾನೆ. ಕ್ಲಾಸ್-ಟೀಚರ್ ಹತ್ತಿರ ಹೋಗಿ ವಿಚಾರಿಸಲು ಸಮರ್ಥನಿಗೆ ಹೇಳಬೇಕು", ಅಂದುಕೊಂಡಳು ಅಂಜಲಿ.  ಗಂಡನ ಬಳಿ ತನ್ನ ಯೋಚನಾಸರಣಿಯ ಇದೇ ಮಾತುಗಳನ್ನು ಅವಳು ಪುನರುಚ್ಚರಿಸಿದಾಗ, ಸಮರ್ಥ ಮತ್ತೇ ಅವಳನ್ನೇ ಗದರಿದ. "ಇಷ್ಟು ಚಿಕ್ಕ ವಿಷಯವನ್ನು ನೀವಿಬ್ಬರೂ ಮಾವ ಸೊಸೆ ಸೇರಿಕೊಂಡು ದೊಡ್ದದು ಮಾಡುತ್ತಿದ್ದೀರಿ. ಹಾಗೆಲ್ಲಾ ಏನೂ ಆಗಿರುವುದಿಲ್ಲ. ಇವತ್ತು ಬಿಡು ಪುಟ್ಟನನ್ನು. ನಾಳೆ ಬೆಳಿಗ್ಗೆ ಅವನೇ ಎದ್ದು ರೆಡಿಯಾಗಿ ಸ್ಕೂಲಿಗೆ ಹೋಗುತ್ತಾನೆ, ನೋಡ್ತಾ ಇರು" ಎಂದು ಅವಳಿಗೆ ಸಮರ್ಥ ಉಪದೇಶಿಸಿದ.

       ಅಂತೂ ಇಂತೂ ಇವತ್ತು ಸ್ಕೂಲಿಗೆ ಹೋಗಲು ಇಲ್ಲವೆಂದು ತಿಳಿದಾಗ ಆರ್ಯ ಬಲೂನಿನಂತೆ ಉಬ್ಬಿ ಖುಷಿಯಾದ. "ಅಮ್ಮ, ಅಮ್ಮ, ಇವತ್ತು ಗುಲಾಬ್ ಜಾಮೂನು ಮಾಡಿಕೊಡು, ಪ್ಲೀಸ್... ಪ್ಲೀಸ್..... ಅಮ್ಮಾ... ಪ್ಲೀಸ್" ಎಂದೆಲ್ಲಾ ಅಂಜಲಿಯನ್ನು ಪೀಡಿಸತೊಡಗಿದ ಆರ್ಯ. "ಬೆಳಿಗ್ಗೆನೇ ಬಾಯಿ-ಬೊಂಬಾಯಿ ಮಾಡಿ ಅಳುತ್ತಿದ್ದ ಆಸಾಮಿ ಇದೇನಾ?" ಅಂದುಕೊಂಡು ಅವಳು ನಸುನಕ್ಕಳು. ಆ ದಿನ ಮನೆಯಲ್ಲೇ ಇದ್ದ ಅಂಜಲಿ, ಆರ್ಯನ ವರ್ತನೆಯನ್ನು ಗಮನಿಸುತ್ತಲೇ ಇದ್ದಳು. ಮಧ್ಯಾಹ್ನ ೨.೨೦ರ ಸಮಯದಲ್ಲಿ, ನಿಕ್ ಛಾನೆಲ್ ನಲ್ಲಿ ಪ್ರಸಾರವಾಗುವ "ಮುನ್ನಭಾಯಿ ಶೋ" ಎಂಬ ಮಂಗ-ಕೋತಿಗಳ ಕಾಮಿಡಿಶೋ ನೋಡುತ್ತಾ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದ ಆರ್ಯನನ್ನು ಮೆಲ್ಲನೇ ಅವಳು ಮಾತಿಗೆಳೆದಳು. ಟೀವಿಯಲ್ಲೇ ಮುಳುಗಿದ್ದ ಆರ್ಯ, ಅಮ್ಮನ ಧ್ವನಿ ಕೇಳಿ, ಅದೂ ಸ್ಕೂಲಿನ ವಿಷಯ ಕೇಳಿ ಮುಖ ಕಹಿ ತಿಂದಂತೆ ಮಾಡಿದನು. ಮತ್ತೆ ಮಂಕಾದ ಅವನನ್ನು ಗಮನಿಸಿದ ಅಂಜಲಿ, ಅವನ ಪಕ್ಕದಲ್ಲಿ ಬಂದು ಕುಳಿತು, ಅವನ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡಳು. "ಯಾಕೋ ಪುಟ್ಟಾ? ನಿನಗೆ ಆ ಸ್ಕೂಲು, ನಿನ್ನ ಫ್ರೆಂಡ್ಸ್ ಎಲ್ಲಾ ಇಷ್ಟವಿಲ್ಲವಾ? ಏನಾದರೂ ತೊಂದರೆಯೇ? ಇಷ್ಟು ದಿನಗಳಿಂದ ಸಂತೋಷವಾಗಿಯೇ ಇದ್ದೆಯಲ್ಲಾ? ಯಾಕೋ, ಕಾರಣವೇನೆಂದು ಅಮ್ಮನ ಹತ್ತಿರವೂ ಹೇಳೋಲ್ಲವಾ?" ಎಂದೆಲ್ಲಾ ತನಿಖೆಯ ಪ್ರಶ್ನೆಗಳ ಸುರುಮಳೆಯನ್ನೇ ಅಂಜಲಿ, ಅವನ ಮೇಲೆ ಸುರಿಸತೊಡಗಿದಳು. ಪುಟ್ಟ ಆರ್ಯ ಅಮ್ಮನ ಬೆಣ್ಣೆಯ ಸವಿಮಾತಿಗೆ ಕರಗಿ ತುಂಬಿದ ಕಣ್ಣೀರಿನಿಂದ ತನ್ನ ಘಾಸಿಗೊಂಡ ಮನದ ಎಳೆಗಳನ್ನು ಒಂದೊಂದಾಗಿಯೇ ಬಿಚ್ಚತೊಡಗಿದ. ಅವನು ಹೇಳುತ್ತಿದ್ದ ವಿಷಯಗಳನ್ನು ಕೇಳಿ, ಅಂಜಲಿಯ ಎದೆ ಮೇಲೆ ಭಾರದ ಕಲ್ಲು ಎತ್ತಿ ಹಾಕಿದಂತಾಯಿತು.

       ಆರ್ಯ ಓದುತ್ತಿದ್ದ ಶಾಲೆಗೆ ಸುತ್ತುಮುತ್ತಲಿನ ಹಲವಾರು ಸಿರಿವಂತರ ಮಕ್ಕಳೂ ಬರುತ್ತಿದ್ದರು. ಬಹಳ ಡೊನೇಷನ್ ಹಾವಳಿ. ಪುಂಡು ಪೋಕರಿಗಳ ತೊಂದರೆಯೇನೂ ಇರಲಿಲ್ಲ. ಆದರೆ, ನಮ್ಮ ದೊಡ್ಡ ಪಟ್ಟಣಗಳ ಶಾಲೆಗಳಂತೆ, ಕೂತಿದ್ದಕ್ಕೆ ನಿಂತಿದ್ದಕ್ಕೆ ಬಹಳ ಹಣ ಖರ್ಚು ಮಾಡಬೇಕಾಗಿತ್ತು. ಇದುವರೆಗೆ ದುಡ್ಡಿನ ಖರ್ಚು ಹೆಚ್ಚು ಎನ್ನುವ ವಿಷಯವೊಂದು ಬಿಟ್ಟರೆ, ಅಧ್ಯಾಪಕವರ್ಗದವರೂ ಬಹಳ ಚೆನ್ನಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದರು. ಇವೆಲ್ಲವೂ ಅಂಜಲಿಗೆ ಗೊತ್ತಿದ್ದ ವಿಷಯಗಳೇ. ಆದರೆ ಆರ್ಯ ಆರನೇ ತರಗತಿಗೆ ಹೋಗುವಷ್ಟರಲ್ಲಿ ಆ ಶಾಲೆಯ ಮ್ಯಾನೇಜ್ಮೆಂಟ್ ಬದಲಾಗಿತ್ತು. ಹೊಸ ಅಧ್ಯಾಪಕರೂ, ಅದೂ ಕೋ-ಎಜುಕೇಶನ್ ಇದ್ದುದ್ದರಿಂದ, ಹೊಸತಾಗಿ ೮ ಅಧ್ಯಾಪಕಿಯರೇ ಬಂದಿದ್ದರು. ಅವರು ಬಂದಿದ್ದೇ ಮಕ್ಕಳ ಮುಂದಿನ ಸಮಸ್ಯೆಗಳಿಗೆ ಕಾರಣವಾಗಿದೆ. ಹೊಸಬರ ಮತ್ತು ಹಳೆ ಅಧ್ಯಾಪಕಿಯರ ನಡುವಿನ ತಿಕ್ಕಾಟಗಳು ಜಾಸ್ತಿಯಾಗಿ, ಅವು ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆಗಳನ್ನು ಕೊಡುವ ಮಟ್ಟಕ್ಕೆ ಬೆಳೆದಿವೆ. ಆರ್ಯನ ತರಗತಿಗೆ, ನಾಲ್ಕು ಪಠ್ಯವಿಷಯಗಳನ್ನು ಹಳೆಯ ಅಧ್ಯಾಪಕಿಯರೂ, ಮಿಕ್ಕಿದ ಎಂಟು ಪಠ್ಯಗಳನ್ನು ಹೊಸ ಅಧ್ಯಾಪಕಿಯರೂ ಹೇಳಿಕೊಡುತ್ತಿದ್ದರು. ಒಂದು ವೇಳೆ ಮಕ್ಕಳು ಹೊಸ ಟೀಚರುಗಳ ಹತ್ತಿರ ನಿಕಟವಾಗಿರುವುದನ್ನು ಕಂಡರೆ ಹಳಬರ ನೆತ್ತಿ ಬಿಸಿಯಗಿ, ಅದರ ಫಲ ಮಕ್ಕಳು ತೆರುತ್ತಿದ್ದರು. ಹೀನಾಮಾನವಾದ ಬೈಗುಳಗಳು, ದಿಢೀರನೆ ಪ್ರತ್ಯಕ್ಷವಾಗುವ ಟೆಸ್ಟ್, ಬಿಸಿಲಿನಲ್ಲಿ ಮಣಗಟ್ಟಲೆ ತೂಕದ ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಆಟದ ಬಯಲಿಗೆ ಕಡಿಮೆಯೆಂದರೂ ಐದು ಸುತ್ತು ಹಾಕಬೇಕೆನ್ನುವುದು, ಒಂಟಿಕಾಲಿನಲ್ಲಿ ನಿಲ್ಲುವ ಶಿಕ್ಷೆಗಳು ಹೀಗೆ ಒಂದಲ್ಲ, ಎರಡಲ್ಲ ಬಗೆಬಗೆಯದು. ದಿಢೀರ್ ಪ್ರತ್ಯಕ್ಷವಾದ ಟೆಸ್ಟ್ ನಲ್ಲಿ, ಒಂದು ವೇಳೆ ಕಡಿಮೆ ಅಂಕಗಳು ಬಂದರೆ, ಕಪಾಳಮೋಕ್ಷ ಮಕ್ಕಳಿಗೆ. ಇವೆಲ್ಲವುಗಳ ಜೊತೆಗೆ ರಾಶಿ ಹೋಂವರ್ಕ್ ಒತ್ತಡ, ಮಕ್ಕಳು ಮನೆಯಲ್ಲೂ ಹೇಳಲಾಗದೆ ಸೋತು ಹೈರಾಣಾವಾಗಿದ್ದವು.

       ಬರೀ ಹಳೆ ಅಧ್ಯಾಪಕರು ಮಾತ್ರ ಮಕ್ಕಳಿಗೆ ಕಾಟ ಕೊಡುತ್ತಿದ್ದರೆಂದು ತಿಳಿಯಬೇಡಿ. ಅದರಲ್ಲೂ ಹೊಸ ಕೆಲವು ಅಧ್ಯಾಪಕಿಯರ ಶಿಕ್ಷಾಪರಿಯೇ ಬೇರೆ ತರಹದಿತ್ತು. ಸಮಾಜದ ಅಧ್ಯಾಪಕಿ, ಪಾಠಗಳನ್ನು ಮಾತ್ರ ಓದುತ್ತಿದ್ದು, ಆಮೇಲೆ ಕ್ಲಾಸಿನಲ್ಲಿ ಮಕ್ಕಳ ಮುಂದೆಯಾಗಲಿ, ಸ್ಟಾಫ಼್-ರೂಂನಲ್ಲಾಗಲಿ ಮೊಬೈಲ್ ಫೋನ್ ಹಿಡಿದುಕೊಂಡು ಎಸ್ಸೆಮ್ಮೆಸ್ ಅಥವಾ ಕಾಡುಹರಟೆ.  ಮಕ್ಕಳಿಗೆ ಅವರು, ತಾನು ಮಾಡಿದ ಪಾಠಗಳಿಗೆ ನೋಟ್ಸ್ ಕೊಡುತ್ತಿರಲಿಲ್ಲ. ಮಕ್ಕಳೇ ಹುಡುಕಿ ಬರೆಯಬೇಕು, ಪರವಾಗಿಲ್ಲ ಹೋಗಲಿ ಸ್ಪೂನ್-ಫೀಡಿಗಿಂತ ಮಕ್ಕಳೇ ಉತ್ತರ ಹುಡುಕಿ ಬರೆಯುವುದು ಒಳ್ಳೆಯ ಅಭ್ಯಾಸವೆಂದರೆ, ಅಕಸ್ಮಾತಾಗಿ ತಪ್ಪು ಬರೆದರೆ ಮಕ್ಕಳ ಮೈಯೆಲ್ಲಾ ಪುಡಿ ಆ ದಿನ. ತಪ್ಪು ಉತ್ತರ ಬರೆದ ಮಕ್ಕಳನ್ನು ಶಿಕ್ಷಿಸುವುದು ಮಾತ್ರವಲ್ಲ ಇಡಿ ಕ್ಲಾಸಿನ ಮಕ್ಕಳಲ್ಲಿ ಒಬ್ಬರನ್ನೂ ಬಿಡದೆ ಎಲ್ಲರ ಮೈಮೂಳೆ ಮುರಿಯುತ್ತಿದ್ದರು. ಇನ್ನು ವಿಜ್ಞಾನದ ಅಧ್ಯಾಪಕಿಯ ಕಥೆ ಬೇರೆಯೇ ತರಹದ್ದು. ಕ್ಲಾಸಿನ ಒಳಗೆ ಬರುತ್ತಿದ್ದಂತೆಯೇ ಯಾವ ಮಕ್ಕಳಾದರೂ ಪಿಸುಮಾತಿನಲ್ಲಿಯಾದರೂ ಮಾತನಾಡಿದ್ದು ಅವರಿಗೆ ಕೇಳಿದರೆ, ಇಡೀ ತರಗತಿಯ ಮಕ್ಕಳು, ವಿಜ್ಞಾನದ ಅವಧಿ ಮುಗಿಯುವ ತನಕ ಒಂಟಿಕಾಲಿನಲ್ಲಿ ಬೆಂಚುಗಳ ಮೇಲೆ ನಿಲ್ಲಬೇಕಾಗುತ್ತಿತ್ತು. ಗಣಿತದ ಅಧ್ಯಾಪಕಿಯ ಕಥೆ ಕೇಳಲು ಇನ್ನೂ ಸೊಗಸು. ತರಗತಿ ಪ್ರಾರಂಭಿಸುತ್ತಿದ್ದಂತೆಯೇ, ಅವರ ಮಾತು ಶುರುವಾಗುತ್ತಿದ್ದುದು ಹೀಗೆ, "ಚಿಲ್ಡ್ರನ್, ನಂಗೆ ಇವತ್ತು ಮನೆಯಲ್ಲಿ ತುಂಬಾ ಟೆನ್ಶನ್. ಪಾಠ ಮಾಡಲು ನಂಗೆ ಮೂಡಿಲ್ಲ. ಒಂದಿಷ್ಟು ಮ್ಯಾತ್ಸ್-ಪ್ರಾಬ್ಲೆಂಸ್ ನಿಮಗೆ ಕೊಡುತ್ತೇನೆ, ನೀವೇ ಸಾಲ್ವ್ ಮಾಡಿ. ನಿಮಗೇನೂ ಅಡಿಷನ್, ಸಬ್ಟ್ರಾಕ್ಷನ್ , ಮಲ್ಟಿಪ್ಲಿಕೇಷನ್ ಮತ್ತು ಡಿವಿಷನ್ ಹೊಸತೇನೂ ಅಲ್ಲವಲ್ಲ".........!!!!!!!!!. ಇಷ್ಟೆಲ್ಲಾ ಸ್ಕೂಲ್ ಪುರಾಣ ಹೇಳಿ ಮಾತು ನಿಲ್ಲಿಸಿ, ಆರ್ಯ ದೀನಭಾವದಿಂದ ಅಮ್ಮನೆಡೆಗೆ ನೋಡಿದ. ಅವನ ಕಣ್ಣುಗಳ ಹೊಳಪೇ ಮಾಯವಾಗಿತ್ತು.

       " ಮ್ಯಾತ್ಸಿನಲ್ಲಿ ಎಲ್ಲಾ ಪ್ರಾಬ್ಲೆಂಸ್ ಒಂದೇ ತರಹ ಇರುವುದಿಲ್ಲವಲ್ಲಾ? ಗೊತ್ತಾಗಲಿಲ್ಲ ಮ್ಯಾಮ್, ನೀವೇ ಹೇಳಿಕೊಡಿ ಎಂದು ಕೇಳಬಹುದಿತ್ತಲ್ಲಾ ಪುಟ್ಟ" ಎನ್ನುತ್ತಾ ಅಂಜಲಿ ಮರುನುಡಿದಳು. ಆಗ ಆರ್ಯ "ಅಷ್ಟು ಹೇಳಿದರೆ ಸಾಕು, ಮ್ಯಾತ್ಸ್ ಹೇಳಿಕೊಡುತ್ತಾರೆ ಅಂದುಕೊಂಡಷ್ಟು ಸುಲಭ ಅಲ್ಲ ಅಮ್ಮ, ಆ ಮ್ಯಾಮ್ ತನ್ನ ಕೈಯಲ್ಲಿರುವ ಡಸ್ಟರಿನಿಂದಲೇ ನಮಗೆ ಹೊಡೆಯುತ್ತಾರಮ್ಮ" ಎನ್ನುತ್ತಾ ಜೋರಾಗಿ ಅತ್ತುಬಿಟ್ಟ. ಅವನನ್ನು ಮೃದುವಾಗಿ ಗದರುತ್ತಾ ಅಂಜಲಿ, "ಕಂದಾ, ಸ್ಕೂಲ್ ಶುರುವಾಗಿ ಆರು ತಿಂಗಳುಗಳು ಕಳೆದರೂ, ದಿನಾ ಇಷ್ಟೆಲ್ಲಾ ಹಿಂಸೆ, ಕಷ್ಟ ಅನುಭವಿಸುತ್ತಿದ್ದರೂ, ಯಾಕೋ ನನ್ನ ರಾಜಾ, ನನ್ನ ಹತ್ತಿರ ಹೇಳಲಿಲ್ಲ. ನಿಮ್ಮ ಶಾಲೆಯಲ್ಲಿ ಹೀಗೆಲ್ಲಾ ನಡೆಯುತ್ತಿದೆ ಎಂಬುದು ಮೊದಲೇ ಗೊತ್ತಾಗಿದ್ದರೆ, ನಿಮ್ಮ ಆಡ್ಮಿನಿಷ್ಟ್ರೇಟಿವ್ ಆಫೀಸರ ಬಳಿ ನಾನು ಮಾತನಾಡಿ, ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೆನಲ್ಲಾ? ಯಾಕೋ ಕಂದಾ ನನ್ನ ಹತ್ತಿರ ಇಷ್ಟು ತಿಂಗಳು ಇವೆಲ್ಲವನ್ನು ಮುಚ್ಚಿಟ್ಟೆ?" ಎಂದು ತಡಬಡಾಯಿಸಿ ಸಾವರಿಸಿಕೊಂಡು ತನ್ನ ಅಳುವನ್ನು ನುಂಗಿಕೊಂಡು ಆರ್ಯನನ್ನು ವಿಚಾರಿಸತೊಡಗಿದಳು. ಅದಕ್ಕೂ ಪುಟ್ಟನ ಉತ್ತರ ಸಿದ್ಧವಾಗಿತ್ತು. "ಅಮ್ಮಾ, ಒಂದು ವಾರದ ಹಿಂದೆ ಸುಹಾಸ್ ಮತ್ತು ಸುಮಾರು ಒಂದು ತಿಂಗಳಿನ ಹಿಂದೆ ರಾಗಿಣಿಯ ಪೇರೆಂಟ್ಸ್ ಬಂದು ಕಂಪ್ಲೇಂಟ್ ಮಾಡಿದ್ದರು. ಆಗಲೇ ನಾನೂ ನಿಮ್ಮ ಬಳಿ ಇವೆಲ್ಲವನ್ನು ಹೇಳಬೇಕೆಂದುಕೊಂಡೆ. ಆದರೆ ಅದಾದ ಮೇಲೆ ಟೀಚರ್ಸ್ ಇನ್ನೂ ಹೆಚ್ಚಿನ ಪನಿಶ್ಮೆಂಟ್ ಕೊಡುತ್ತಿದ್ದಾರೆ. ಅದಕ್ಕೆ ನಾನು ನಿಮಗೆ ಇವತ್ತಿನಿಂದ ಆ ಸ್ಕೂಲಿಗಲ್ಲ, ಬೇರೆ ಯಾವ ಸ್ಕೂಲಿಗೂ ಹೋಗುವುದಿಲ್ಲವೆಂದು ಹೇಳಿದ್ದು", ಹೀಗೆ ಹೇಳಿ ಆರ್ಯ ತನ್ನ ಮಾತುಗಳನ್ನು ನಿಲ್ಲಿಸಿದ. ಅವನ ಮಾತುಗಳನ್ನು ಕೇಳಿ ಅಂಜಲಿಯ ಮನ ಕುದಿಯತೊಡಗಿತು. ಈ ಸಮಸ್ಯೆಗೆ ತಾನೇ ಪರಿಹಾರ ಹುಡುಕಬೇಕೆಂದು ಅವಳು ಆ ಕ್ಷಣದಿಂದಲೇ ನಿರ್ಧರಿಸಿದಳು.

       ಸೂಕ್ತಿ: ಹೇಳಿ, ಸ್ನೇಹಿತರೇ, ನಮ್ಮ ನಿಮ್ಮ ಮನೆಗಳಲ್ಲಿಯೂ, ನಮ್ಮ ಬಳಗದಲ್ಲಿಯೂ, ಮುಗ್ಧ ಆರ್ಯನಂಥಾ ಪುಟ್ಟ ಮಕ್ಕಳಿದ್ದಾರೆ. ಆಧುನಿಕ ವಿದ್ಯಾಭ್ಯಾಸದ ಹೆಸರಿನಲ್ಲಿ ನಮ್ಮ  ಈ ಪುಟ್ಟ ಹೂವುಗಳು, ದಿನನಿತ್ಯ ಕೆಜಿಗಟ್ಟಲೇ ಪುಸ್ತಕಗಳ ಭಾರ ಹೊರುವುದರಿಂದ ಹಿಡಿದು, ಹೋಂವರ್ಕ್ಸ್, ಪರೀಕ್ಷೆಗಳ ಒತ್ತಡ, ಪ್ರಾಜೆಕ್ಟ್ ಕೆಲಸಗಳ ಕಿರಿಕಿರಿ ಹೀಗೆ, (ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲಕ್ಕಿಂತ ದೊಡ್ಡದಾದೀತು, ಕಂಪ್ಲೇಂಟುಗಳ ಪಟ್ಟಿ), ಅನೇಕ ರೀತಿಯ ಹಿಂಸೆಗಳನ್ನು, ಗೋಳುಗಳನ್ನು ಅನುಭವಿಸುತ್ತವೆ. ನೀವೆಲ್ಲಾ ನೋಡಿಯೂ ಕಣ್ಣು ಮುಚ್ಚಿ ಕುಳಿತಿದ್ದೀರಾ? ಒಂದು ಕ್ಷಣ ಆ ಮಕ್ಕಳ ಜಾಗದಲ್ಲಿ ನಿಂತು, ನೀವೆಲ್ಲಾ ಆಲೋಚಿಸಿದರೆ, ಆ ಮಕ್ಕಳು ಅನುಭವಿಸುತ್ತಿರುವ ಯಮಯಾತನೆಗಳ ಘೋರ ಅನುಭವ ನಿಮಗೂ ಆಗುತ್ತದೆ. ಎಷ್ಟೋ ಹೆತ್ತವರ ಬಾಯಲ್ಲಿ ಅನೇಕಸಲ ನಾನೇ ಈ ಮಾತುಗಳನ್ನು ಕೇಳಿದ್ದೇನೆ, ಅದೇನೆಂದರೆ, "ಅಯ್ಯೋ, ನಮ್ಮ ಮಕ್ಕಳು ಓದುತ್ತಿರುವ ಸ್ಕೂಲಿನಲ್ಲಿ ಯಾವಾಗಲೂ ಪ್ರಾಬ್ಲೆಂಸ್ ಜಾಸ್ತಿ, ಹೋಂವರ್ಕ್ ಜಾಸ್ತಿ. ಕಂಪ್ಲೇಂಟ್ ಮಾಡಿದರೆ ಮಕ್ಕಳನ್ನು ಮುಂದೆ ಸುಮ್ಮನೇ ಹಗೆ ಹಿಡಿತಾರೆ, ಏನು ಮಾಡಬೇಕೆಂದು ತಿಳಿಯುತ್ತಿಲ್ಲ". ಆಗ ಅಲ್ಲಿರುವ ಇನ್ನೊಬ್ಬರು ಅತೀ ಬುದ್ಧಿವಂತರಂತೆ ಹೇಳುತ್ತಾರೆ, "ನೋಡಿ, ನೀವು ಈಗ ಯಾವುದೇ ದೊಡ್ಡ, ಒಳ್ಳೆಯ ಸ್ಕೂಲುಗಳಿಗೆ ಹೋಗಿ, ಎಲ್ಲಾ ಕಡೆಯೂ ಒಂದೇ ಪ್ರಾಬ್ಲೆಂ. ಇದೇ ಪ್ರಾಬ್ಲೆಂ". ಸ್ನೇಹಿತರೇ, ಇಂಥಾ ಹೆತ್ತವರಿಗೆ ನೀವೆಲ್ಲಾ ಏನೆನ್ನ ಬಯಸುತ್ತೀರಾ? ಅಂಜಲಿಯ ಜಾಗದಲ್ಲಿ ನೀವಿದ್ದರೆ ಏನು ಕ್ರಮ ಕೈಗೊಳ್ಳುತ್ತಿದ್ದೀರಿ? ನಾವು, ನೀವೆಲ್ಲಾ ಶಾಲೆಗೆ ಹೋಗಲೇ ಇಲ್ಲವೇ? ಒಳ್ಳೆಯ ಶಿಕ್ಷಣ ಪಡೆಯಲೇ ಇಲ್ಲವೇ? ಕನ್ನಡ ಮಾಧ್ಯಮದಲ್ಲಿ, ಸರಕಾರಿ ಶಾಲೆಗಳಲ್ಲಿ ಓದಿಯೂ ಮರ್ಯಾದೆಯ ಬಾಳು ಸಾಗಿಸುತ್ತಿಲ್ಲವೇ? ಯಾರ ತಪ್ಪಿಗೆ, ಯಾವ ತಪ್ಪಿಗೆ ನಮ್ಮ ಮಕ್ಕಳು ಆಧುನಿಕ ಶಿಕ್ಷಣದ ಹೆಸರಿನಲ್ಲಿ ಇಷ್ಟೆಲ್ಲಾ ಶಿಕ್ಷೆ ಅನುಭವಿಸಬೇಕಾಗಿದೆ? ನೀವೇ ಹೇಳಿ. ನನ್ನ ಈ ಕಥೆಯ ಉಳಿದ ಎರಡನೆಯ ಭಾಗವನ್ನು, ನನ್ನ ಯೋಚನೆಯ ಕ್ಲೈಮ್ಯಾಕ್ಸನ್ನು ಮತ್ತೆ ಒಂದು ವಾರದ ನಂತರ ನಿಮಗೆ ತಿಳಿಸುತ್ತೇನೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತೇನೆ.
ಧನ್ಯವಾದಗಳು,
ಶಮ್ಮಿ.