ಭಾರತಕ್ಕೆ ಸವಾಲಾದ ಅಫ್ಘಾನಿಸ್ತಾನದ ಚೀನಾ ಕಾರಿಡಾರ್ !
ಚೀನಾದ ಬೆಲ್ಟ್ ಆಂಡ್ ರೋಡ್ ಉಪಕ್ರಮದ ಪ್ರಮುಖ ಯೋಜನೆಯಾದ ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ (ಸಿ ಪಿ ಇ ಸಿ) ಭಾರತವು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಈ ಯೋಜನೆಯನ್ನು ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ವಿಸ್ತರಿಸಲು ಈಗ ಉಭಯ ದೇಶಗಳು ಮುಂದಾಗಿರುವುದು ಭಾರತದ ಆರ್ಥಿಕ ಹಾಗೂ ಭದ್ರತೆ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ. ತಾಲಿಬಾನ್ ನ ಉನ್ನತ ರಾಜತಾಂತ್ರಿಕ ಅಮೀರ್ ಖಾನ್ ಮುತ್ತಕಿ ಅವರು ಇಸ್ಲಾಮಾಬಾದ್ ನಲ್ಲಿ ಚೀನಾ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಈ ಕುರಿತು ಒಪ್ಪಂದಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಷರತ್ತುಗಳನ್ನು ಪೂರೈಸಲು ವಿಫಲವಾದ ಕಾರಣಕ್ಕಾಗಿ ೬ ಶತಕೋಟಿ ಡಾಲರ್ ( ೪೯,೦೩೮ ಕೋಟಿ ರೂಪಾಯಿ) ಸಾಲದ ನೆರವು ನೀಡುವುದರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಿಂದೆ ಸರಿಯುವ ಮೂಲಕ ಪಾಕಿಸ್ತಾನಕ್ಕೆ ಆರ್ಥಿಕ ಮರ್ಮಾಘಾತವನ್ನೇ ನೀಡಿದೆ. ಅಚ್ಚರಿಯ ಸಂಗತಿಯೆಂದರೆ, ಪಾಕಿಸ್ತಾನವು ಈ ಸಾಲ ಪಡೆಯುತ್ತಿರುವುದು ಈ ಹಿಂದಿನ ಸಾಲದ ಬಾಕಿ ತೀರಿಸುವುದಕ್ಕಾಗಿ. ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದರೂ ಪಾಕಿಸ್ತಾನವು ಭಾರತ ವಿಷಯದಲ್ಲಿ ಹಳೆಯ ಚಾಳಿ ಬಿಟ್ಟಿಲ್ಲ. ಭಾರತದೊಂದಿಗೆ ಗಡಿ ತಂಟೆಕೋರ ಚೀನಾ ಜತೆ ಕೈಜೋಡಿಸಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವ ಧೋರಣೆಯನ್ನೇ ಮುಂದುವರೆಸಿದೆ. ಪಾಕಿಸ್ತಾನ ಪ್ರವಾಸದಲ್ಲಿರುವ ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಅವರು ವಿಶ್ವಸಂಸ್ಥೆ ನಿರ್ಣಯದಂತೆ ಕಾಶ್ಮೀರ ವಿವಾದ ಬಗೆಹರಿಯಬೇಕೆಂದು ಹೇಳಿಕೆ ನೀಡಿರುವುದು ಭಾರತದ ನಿಲುವಿಗೆ ವಿರುದ್ಧವಾಗಿದೆ. ಕಾಶ್ಮೀರ ವಿಚಾರ ಭಾರತ ಮತ್ತು ಪಾಕ್ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ವಿಶ್ವಸಂಸ್ಥೆ ಸೇರಿದಂತೆ ಯಾವುದೇ ಮೂರನೆಯವರ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಭಾರತ ಪ್ರತಿಪಾದಿಸಿಕೊಂಡು ಬಂದಿದೆ. ಇದಲ್ಲದೆ, ಚೀನಾದ ನೆರವಿನಿಂದ ಪಾಕಿಸ್ತಾನದಲ್ಲಿ ರೂಪಿಸಲಾಗುತ್ತಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯು (ಸಿ ಪಿ ಇ ಸಿ) ಭಾರತ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಿದೆ.
ಸಿ ಪಿ ಇ ಸಿ ಜಾರಿಗೊಳಿಸಲು ೨೦೧೫ರಲ್ಲೇ ಒಪ್ಪಂದಕ್ಕೆ ಬರಲಾಗಿದೆ. ರಸ್ತೆ, ಬಂದರು, ವಿಮಾನ ನಿಲ್ದಾಣ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿ, ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುವ ಉದ್ದೇಶ ಇದೆ ಎಂದು ಹೇಳಲಾಗಿದ್ದರೂ ಸಾಲದಲ್ಲಿ ಸಿಲುಕಿರುವ ಪಾಕಿಸ್ತಾನವು ಈ ಯೋಜನೆಯಿಂದ ಇನ್ನಷ್ಟು ಸಾಲದಲ್ಲಿ ಮುಳುಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಭೂಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮೂಲಕ ಈ ಯೋಜನೆಯು ಹಾದುಹೋಗುತ್ತದೆ. ಹೀಗಾಗಿ, ಭಾರತದಲ್ಲಿ ಎರಡು ದಿನಗಳ ಹಿಂದೆ ಜರುಗಿದ ಶಾಂಘೈ ಸಹಕಾರ ಸಂಘಟನೆ (ಎಸ್ ಸಿ ಒ) ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಿ ಪಿ ಇ ಸಿ ಯ ಸಿಂಧುತ್ವವನ್ನು ಪ್ರಶ್ನಿಸಿದ್ದು, ಇದು ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಎಂದು ನೇರವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಪಾಕ್ ಹಾಗೂ ಚೀನಾ ವಿದೇಶಾಂಗ ಸಚಿವರು ಈ ಯೋಜನೆಯನ್ನು ಅಫ್ಘಾನಿಸ್ತಾನದಲ್ಲಿ ವಿಸ್ತರಿಸಲು ನಿರ್ಧರಿಸಿದ್ದು, ತಾಲಿಬಾನ್ ಕೂಡ ಇದಕ್ಕೆ ಒಪ್ಪಿದೆ. ಗಡಿ ತಂಟೆಕೋರ ರಾಷ್ಟ್ರಗಳೆರಡೂ ಕೈಜೋಡಿಸಿರುವುದು, ಪಿಒಕೆಯಲ್ಲಿ ಸಿ ಪಿ ಇ ಸಿ ನಿರ್ಮಿಸಲು ಹಾಗೂ ಅದನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಮುಂದಾಗಿರುವುದು ಆರ್ಥಿಕ ಹಾಗೂ ಭದ್ರತೆ ದೃಷ್ಟಿಯಿಂದ ಕಳವಳದ ವಿಷಯವಾಗಿದ್ದು, ಈ ಸವಾಲನ್ನು ಭಾರತ ಬಹು ಎಚ್ಚರಿಕೆಯಿಂದ ನಿಭಾಯಿಸಬೇಕಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೮-೦೫-೨೦೨೩