ಭಾರತದಲ್ಲಿ ಗುಲಾಮಗಿರಿಗೆ ಜಾಗವಿಲ್ಲ
ದಶಕಗಳ ಹಿಂದೆ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷವು, ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವೆಂದೇ ಹೆಸರುವಾಸಿಯಾಗಿತ್ತು. ಕಾಂಗ್ರೆಸ್ ನ ವಂಶಪಾರಂಪರ್ಯದಿಂದ ಹಿಡಿದು, ಬಿಜೆಪಿಯ ಸಿದ್ಧಾಂತ, ಇತರೆ ಪ್ರಾದೇಶಿಕ ಪಕ್ಷಗಳಲ್ಲಿನ ವಂಶಾಡಳಿತಕ್ಕಿಂತ ಭಿನ್ನವೆಂದೇ ಹೇಳಿಕೊಂಡು ಜನರ ಮುಂದೆ ಹೋಗಿ ಈ ನಿಟ್ಟಿನಲ್ಲಿ ಯಶಸ್ಸು ಕಂಡಿತ್ತು. ಆದರೆ, ಈಗ ಈ ಪಕ್ಷದಲ್ಲೂ ಗುಲಾಮಗಿರಿಯ ನಿದರ್ಶನಗಳು ಕಾಣಿಸುತ್ತಿದ್ದು, ಉಳೀದ ಪಕ್ಷಗಳ ಜತೆಗೆ ತಾನೂ ಒಂದು ಎಂಬುದನ್ನು ಸಾಬೀತು ಮಾಡಿದೆ.
ದೆಹಲಿಗೆ ಮುಖ್ಯಮಂತ್ರಿಯಾಗಿ ನೇಮಕವಾಗಿರುವ ಅತಿಶಿ ಅವರ ಖಾಲಿ ಕುರ್ಚಿಯ ನಿದರ್ಶನ ಒಂದು ರೀತಿ ಗುಲಾಮಗಿರಿ ಪದ್ಧತಿಯ ಅನುಕರಣೀಯವಾಗಿದೆ. ಸೋಮವಾರವಷ್ಟೇ ಸಿ ಎಂ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿರುವ ಅತಿಶಿ, ಮಾಜಿ ಸಿ ಎಂ ಕೇಜ್ರಿವಾಲ್ ಕುಳಿತುಕೊಳ್ಳುತ್ತಿದ್ದ ಸಿ ಎಂ ಕುರ್ಚಿಯನ್ನು ಖಾಲಿ ಬಿಟ್ಟು ಪಕ್ಕದಲ್ಲೇ ಬೇರೊಂದು ಕುರ್ಚಿ ತರಿಸಿಕೊಂಡು ಕುಳಿತಿದ್ದಾರೆ. ಈ ಮೂಲಕ ಸಿಎಂ ಹುದ್ದೆಗೆ ಅಗೌರವ ತೋರಿದ್ದಾರೆ. ವಿಚಿತ್ರವೆಂದರೆ, ಸಿಎಂ ಕುರ್ಚಿ ಎಂಬುದು ಒಬ್ಬ ವ್ಯಕ್ತಿಯ ಅಥವಾ ಪಕ್ಷದ್ದಲ್ಲ. ಜತೆಗೆ ಆ ಹುದ್ದೆಯಿಂದ ಇಳಿದ ಮೇಲೆ ಅದನ್ನು ಮನೆಗೆ ತೆಗೆದುಕೊಂಡು ಹೋಗಲೂ ಸಾಧ್ಯವಿಲ್ಲ. ಅದು ಪ್ರಜಾಪ್ರಭುತ್ವದ ಅನುಸಾರವಾಗಿ ನೀಡಲಾಗುವ, ಕುಳಿತುಕೊಳ್ಳಲು ಇರುವ ಒಂದು ಕುರ್ಚಿ ಮಾತ್ರ. ಇದು ಕೇಜ್ರಿವಾಲ್ ಅವರಿಗೇ ಸಲ್ಲಬೇಕು, ಮುಂದೆ ಬಂದು ಅವರೇ ಕುಳಿತುಕೊಳ್ಳಲಿ ಎಂದು ಹೇಳಲು ಪ್ರಜಾಪ್ರಭುತ್ವ ರಾಜಾಡಳಿತವಲ್ಲ.
ಈ ವಿಚಾರದಲ್ಲಿ ಅತಿಶಿ ಅವರು ಬುದ್ಧಿವಂತಿಕೆ ತೋರಿ, ರಾಮ ಮತ್ತು ಭರತನ ಪ್ರಸಂಗವನ್ನೂ ಉದಾಹರಣೆಯಾಗಿ ನೀಡಿದ್ದಾರೆ. ಶ್ರೀರಾಮಚಂದ್ರ ವನವಾಸಕ್ಕೆ ತೆರಳಿದ್ದಾಗ, ತಮ್ಮ ಭರತನು ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಆಳ್ವಿಕೆ ನಡೆಸಿದ್ದರು. ಈಗ ಅದೇ ರೀತಿ ನಾನು ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಅಧಿಕಾರ ನಡೆಸುತ್ತೇನೆ. ಹೀಗಾಗಿ ಸಿ ಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದಿದ್ದಾರೆ.
ಆದರೆ ಅತಿಶಿ ಅವರು ಒಂದು ಸಂಗತಿಯನ್ನು ಮನಗಂಡಿಲ್ಲ ಎಂದೇ ತೋರುತ್ತದೆ. ನಮ್ಮ ರಾಜಕಾರಣವು ಪ್ರಜೆಗಳಿಂದ ಆರಿಸಿ ಬರುವ ಪ್ರಜಾಪ್ರಭುತ್ವವೇ ಹೊರತು ರಾಜ ಪ್ರಭುತ್ವವಲ್ಲ. ಇಲ್ಲಿ ಯಾರೂ ಶ್ರೀರಾಮರಿಲ್ಲ, ಭರತನೂ ಇಲ್ಲ. ಪ್ರಸ್ತುತದಲ್ಲಿ ಈ ಪ್ರಸಂಗವನ್ನು ಉದಾಹರಣೆಯಾಗಿ ನೀಡುವುದು ಖಂಡಿತ ಶೋಭೆ ತರುವಂತದ್ದಲ್ಲ. ಇದಕ್ಕೆ ಕಾರಣಗಲೂ ಇವೆ. ಅಂದು ಶ್ರೀರಾಮನು ಬಿಟ್ಟು ಹೋಗಿದ್ದು ತಂದೆಯಿಂದ ತನಗೆ ಬಂದಿದ್ದ ಅಧಿಕಾರವನ್ನು.
ಹೀಗಾಗಿಯೇ ತಮ್ಮ ಭರತ ಅಣ್ಣನ ಸಿಂಹಾಸನದ ಮೇಲೆ ಕುಳಿತುಕೊಳ್ಳಲ್ಲ ಎಂದಿದ್ದನು. ಆದರೆ, ಈಗ ದೆಹಲಿ ಸಿ ಎಂ ಕುರ್ಚಿ ಯಾರ ಉತ್ತರಾಧಿಕಾರದಿಂದ ಬಂದದ್ದಲ್ಲ. ಇದು ಯಾರ ತಂದೆಯ ಅಧಿಕಾರವೂ ಅಲ್ಲ. ಪ್ರಜೆಗಳೇ ನೀಡಿರುವ ಗೌರವವಷ್ಟೇ. ಇದನ್ನು ಅಷ್ಟೇ ಗೌರವದಿಂದ ನೋಡಿಕೊಳ್ಳಬೇಕು. ಇಲ್ಲಿ ಯಾವುದೇ ಕಾರಣಕ್ಕೂ ಗುಲಾಮಗಿರಿಯ ಪ್ರದರ್ಶನ ಮಾಡಬಾರದು. ಇಂಥ ಸನ್ನಿವೇಶವನ್ನು ಹಿಂದೆ ತಮಿಳುನಾಡಿನಲ್ಲಿ ಜಯಲಲಿತಾ ಆಳ್ವಿಕೆಯಲ್ಲಿ ಕಾಣುತ್ತಿದ್ದೆವು. ಈಗ ಆಧುನಿಕ ಕಾಲದ ಪಕ್ಷವೆಂದು ಪ್ರಸಿದ್ಧಿ ಪಡೆದಿರುವ ಆಪ್ ಮಾಡಿರುವುದು ವಿಷಾದನೀಯವೇ ಸರಿ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೫-೦೯-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ