ಭಾರತದಲ್ಲೊಂದು ವಾಲು ಗೋಪುರ - ರತ್ನೇಶ್ವರ ಮಂದಿರ

ಭಾರತದಲ್ಲೊಂದು ವಾಲು ಗೋಪುರ - ರತ್ನೇಶ್ವರ ಮಂದಿರ

ವಿಶ್ವದ ಅದ್ಭುತಗಳಲ್ಲೊಂದಾದ ಇಟಲಿಯ ಪೀಸಾ ವಾಲು ಗೋಪುರ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ಭಾರತದಲ್ಲೂ ಒಂದು ವಾಲು ಗೋಪುರವಿರುವುದು ನಿಮಗೆ ಗೊತ್ತೇ? ಈ ವಾಲು ಗೋಪುರ ಇರುವುದು ಉತ್ತರ ಪ್ರದೇಶದ ವಾರಣಾಸಿಯಲ್ಲಿ. ಇಲ್ಲಿರುವ ರತ್ನೇಶ್ವರ ಮಹಾದೇವ ಮಂದಿರದ ಗೋಪುರವು ವಾಲಿಕೊಂಡಿದೆ. ಇಟಲಿಯ ಪೀಸಾ ಗೋಪುರವು ೪ ಡಿಗ್ರಿ ವಾಲಿಕೊಂಡಿದ್ದರೆ, ರತ್ನೇಶ್ವರ ಮಂದಿರದ ಗೋಪುರವು ೯ ಡಿಗ್ರಿಯವರೆಗೆ ವಾಲಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಆದರೆ ಪಿಸಾ ಗೋಪುರವು ರತ್ನೇಶ್ವರ ಮಂದಿರದ ಗೋಪುರಕ್ಕಿಂತ ದೊಡ್ಡದಾಗಿರುವುದರಿಂದ ಬಹಳ ಖ್ಯಾತಿ ಪಡೆದಿದೆ. 

ಇಟಲಿಯಲ್ಲಿರುವ ಪೀಸಾ ಗೋಪುರ (Leaning Tower of Pisa) ಕ್ರಿ.ಶ. ೧೧೭೩ರಲ್ಲಿ ಕಟ್ಟಲಾಯಿತು ಎಂದು ಪುರಾತತ್ವ ಇಲಾಖೆಯವರು ಹೇಳುತ್ತಾರೆ. ಕಟ್ಟಿದ ಬಳಿಕ ಅದರ ಒಂದು ಬದಿ ಭೂಮಿಯೊಳಗೆ ಕುಸಿದು ವಾಲತೊಡಗಿತು. ಆದರೆ ವಾಲುವಿಕೆಯು ಕಟ್ಟಡಕ್ಕೆ ಹಾನಿ ಮಾಡದೇ ಸುಮಾರು ೪ ಡಿಗ್ರಿಯವರೆಗೆ ವಾಲಿ ಹಾಗೆಯೇ ನಿಂತಿದೆ. ಈಗಂತೂ ಹಲವರು ಶತಮಾನಗಳಿಂದ ಅದು ಬಲಿಷ್ಟವಾಗಿ ನಿಂತಿದೆ. 

ರತ್ನೇಶ್ವರ ಮಂದಿರದ ಬಗ್ಗೆ ಭಾರತೀಯ ಇತಿಹಾಸದಲ್ಲಿ ಹಲವಾರು ಕತೆಗಳು ಸಿಗುತ್ತವೆ. ಇದನ್ನು ಯಾರು?, ಯಾವಾಗ? ನಿರ್ಮಿಸಿದರು ಎನ್ನುವ ಬಗ್ಗೆ ಖಚಿತವಾದ ಮಾಹಿತಿಗಳು ಸಿಗುವುದಿಲ್ಲ. ಆದರೂ ಮಂದಿರದ ಗೋಪುರ ವಾಲಿಕೊಂಡಿರುವುದು ಮಾತ್ರ ಐತಿಹಾಸಿಕ ಸತ್ಯ. ವಾರಣಾಸಿಯಲ್ಲಿರುವ ಬಹುತೇಕ ದೇವಸ್ಥಾನಗಳಂತೆಯೇ ಈ ದೇವಾಲಯವೂ ಗಂಗಾ ನದಿಯದ ತಟದಲ್ಲಿದೆ. ವರ್ಷದಲ್ಲಿ ಬಹುಪಾಲು ಈ ದೇವಸ್ಥಾನ ನೀರಿನಲ್ಲಿ ಮುಳುಗಡೆಯಾಗಿಯೇ ಇರುತ್ತದೆ. ಬೇಸಗೆಯ ತಿಂಗಳುಗಳಲ್ಲಿ ಮಾತ್ರ ಈ ದೇವಸ್ಥಾನವನ್ನು ಪೂರ್ತಿಯಾಗಿ ದರ್ಶನ ಮಾಡಬಹುದು. ಇದು ಶಿವನ ದೇವಸ್ಥಾನ. ಆದುದರಿಂದ ಇದನ್ನು ರತ್ನೇಶ್ವರ ಮಹಾದೇವ ಮಂದಿರ ಎಂದು ಕರೆಯುತ್ತಾರೆ. ಗಂಗಾ ನದಿಯ ನೀರಿನ ಮಟ್ಟಕ್ಕೆ ಸಮನಾಗಿ ಮಂದಿರ ನಿರ್ಮಾಣವಾಗಿರುವುದರಿಂದ ವರ್ಷದ ಬಹುತೇಕ ಸಮಯ ಗರ್ಭಗುಡಿ ನೀರಿನ ಅಡಿಯಲ್ಲೇ ಇರುತ್ತದೆ.

ಮಂದಿರವನ್ನು ಯಾರು ನಿರ್ಮಿಸಿದರು ಎಂಬುವುದರ ಬಗ್ಗೆ ನಾನಾ ಕಥೆಗಳು ಪ್ರಚಲಿತದಲ್ಲಿವೆ. ಒಂದು ಕತೆಯ ಪ್ರಕಾರ ೫೦೦ ವರ್ಷಗಳ ಹಿಂದೆ ಆ ಭಾಗವನ್ನು ಆಳುತ್ತಿದ್ದ ರಾಜಾ ಮಾನ್ ಸಿಂಗ್ ಅವರ ಅಜ್ಞಾತ ಕೆಲಸದಾಳು ಅವನ ತಾಯಿಯಾದ ರತ್ನಾ ಬಾಯಿಯವರ ನೆನಪಿಗಾಗಿ ಈ ಮಂದಿರ ಕಟ್ಟಿಸಿದನಂತೆ. ಮಂದಿರ ಕಟ್ಟಿಸಿದ ಬಳಿಕ ಆ ಕೆಲಸದಾಳು ಎಲ್ಲರ ಬಳಿಯೂ ‘ದೇವಸ್ಥಾನ ನಿರ್ಮಾಣ ಮಾಡಿ ನಾನು ನನ್ನ ಅಮ್ಮನ ಋಣ ಸಂದಾಯ ಮಾಡಿದೆ' ಎಂದು ಹೆಮ್ಮೆಯಿಂದ ಹೇಳಿಕೊಂಡು ಬರುತ್ತಿದ್ದನಂತೆ. ಆದರೆ ತಾಯಿಯ ಋಣವನ್ನು ಯಾರಿಗೂ ತೀರಿಸಲು ಸಾಧ್ಯವಿಲ್ಲ ಎಂಬ ಒಂದು ಮಾತಿದೆ. ಆ ಕಾರಣದಿಂದ ಮಂದಿರವು ಒಂದು ಬದಿ ವಾಲತೊಡಗಿತು. ಅವನ ಅಹಂಕಾರವೂ ಕಮ್ಮಿ ಆಯಿತಂತೆ. ಆ ಘಟನೆಯಿಂದ ಈ ದೇಗುಲವನ್ನು ‘ಮಾತೃ-ಋಣ'(ತಾಯಿಯ ಋಣ) ಮಹಾದೇವ ಮಂದಿರ ಎಂದು ಕರೆಯುತ್ತಾರೆ.

ಇನ್ನೊಂದು ಕತೆಯ ಪ್ರಕಾರ ಈ ದೇಗುಲವನ್ನು ಇಂದೋರ್ ನ ಮಹಾರಾಣಿ ಅಹಲ್ಯಾ ಬಾಯಿಯವರ ಕೆಲಸದಾಳಾದ ರತ್ನಾ ಬಾಯಿ ಕಟ್ಟಿಸಿದಳಂತೆ. ದೇವಸ್ಥಾನವನ್ನು ಕಟ್ಟಿಸಿದ ಬಳಿಕ ರತ್ನಾ ಬಾಯಿಗೆ ತನ್ನ ಕಾರ್ಯದ ಬಗ್ಗೆ ಹೆಮ್ಮೆಯಾಗಿ ಅವಳಲ್ಲಿ ಅಹಂಕಾರ ಜಾಗೃತವಾಯಿತು. ಆ ಕಾರಣದಿಂದ ಅವಳು ಆ ಮಂದಿಕ್ಕೆ ತನ್ನದೇ ಹೆಸರಾದ ‘ರತ್ನೇಶ್ವರ ಮಂದಿರ’ ಎಂದು  ಹೆಸರಿಸಿದಳು. ಅವಳ ಅಹಂಕಾರ ಮತ್ತು ಆ ದೇಗುಲಕ್ಕೆ ಅವಳದ್ದೇ ಹೆಸರು ಇರಿಸಿದ ಸುದ್ದಿ ತಿಳಿದ ಮಹಾರಾಣಿ ಅಹಲ್ಯಾ ಬಾಯಿ ಕೋಪಿತಳಾಗಿ ದೇವಾಲಯವು ವಾಲಿ ಹೋಗಲಿ ಎಂದು ಶಾಪ ನೀಡಿದಳಂತೆ. ಆ ಕಾರಣದಿಂದ ಗೋಪುರ ವಾಲಿಹೋಯಿತಂತೆ. ಕೆಲವರ ಪ್ರಕಾರ ಗ್ವಾಲಿಯರ್ ಸಂಸ್ಥಾನದ ರಾಣಿ ಬೈಜಾ ಬಾಯಿ ಈ ಮಂದಿರವನ್ನು ಕಟ್ಟಿಸಿದಳು ಎಂದೂ ಹೇಳುತ್ತಾರೆ.

ಈ ಮೇಲಿನ ಎಲ್ಲಾ ಕತೆಗಳನ್ನು ಬದಿಗಿರಿಸಿ ಕಂದಾಯ ಇಲಾಖೆಯವರ ಬಳಿ ಲಭ್ಯವಿರುವ ದಾಖಲೆಗಳನ್ನು ಗಮನಿಸಿದರೆ ಈ ಮಂದಿರವು ೧೯ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ತಿಳಿದು ಬರುತ್ತದೆ. ೧೮೨೫-೩೦ರ ಸಮಯದಲ್ಲಿ ಈ ಮಂದಿರವನ್ನು ಕಟ್ಟಲಾಗಿದೆ ಎಂದು ಈ ದಾಖಲೆಗಳು ಹೇಳುತ್ತವೆ. ಜಿಲ್ಲಾ ಸಾಂಸ್ಕೃತಿಕ ಕಮಿಟಿಯ ಡಾ. ರಮೇಶ್ ವರ್ಮಾ ಇವರ ಪ್ರಕಾರ ಈ ದೇವಾಲಯವನ್ನು ೧೮೫೭ರಲ್ಲಿ ಅಮೇಠಿಯ ರಾಜಮನೆತನದವರು ಕಟ್ಟಿಸಿದ್ದಾರಂತೆ. ಬನಾರಸ್ ಮಿಂಟ್ ನಲ್ಲಿನ ಮೌಲ್ಯ ಮಾಪನ ಇಲಾಖೆಯ ಜೇಮ್ಸ್ ಪ್ರಿನ್ಸೆಪ್ ಅವರು ಈ ದೇವಾಲಯವು ೧೮೨೦-೩೦ರ ಸಮಯದಲ್ಲಿ ಕಟ್ಟಲಾಗಿದೆ ಎಂದು ಪ್ರತಿಪಾದಿಸುತ್ತಾರೆ. ಆ ಸಮಯ ಗರ್ಭಗುಡಿಯಲ್ಲಿರುವ ದೇವರನ್ನು ಪೂಜೆ ಮಾಡಲು ಪುರೋಹಿತರು ನೀರಿಗೆ ಧುಮುಕಿ ಈಜಿಕೊಂಡು ಹೋಗಿ ಪೂಜೆಯನ್ನು ಸಲ್ಲಿಸುತ್ತಿದ್ದರಂತೆ.

ಒಂದು ದೇವಾಲಯಕ್ಕೆ ಇಷ್ಟೊಂದು ಕತೆಗಳು ಇರುವುದು ಬಹುಷಃ ಅಪರೂಪವೇ ಸರಿ ಅಲ್ಲವೇ? ಈ ದೇವಾಲಯವು ಮಣಿಕರ್ನಿಕ ಘಾಟ್ ನಲ್ಲಿರುವ ತಾರಕೇಶ್ವರ ಮಹದೇವ ಮಂದಿರದ ಎದುರುಗಡೆ ಇದೆ. ಆ ಪ್ರದೇಶದಲ್ಲಿ ಹಲವಾರು ಸಣ್ಣ ಮಂದಿರಗಳೂ ಇವೆ. ಮುಂದಿನ ಬಾರಿ ನೀವು ವಾರಣಾಸಿಗೆ ಭೇಟಿ ಇತ್ತರೆ ಈ ರತ್ನೇಶ್ವರ ವಾಲು ದೇವಾಲಯವನ್ನು ಅವಶ್ಯಕವಾಗಿ ನೋಡಿಕೊಂಡು ಬನ್ನಿರಿ.   

ಚಿತ್ರ ಕೃಪೆ: ಅಂತರ್ಜಾಲ ತಾಣ