ಭಾರತದ ಅಪರೂಪದ ಸಸ್ಯಚಿತ್ರಗಳ ಪುಸ್ತಕ
ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಆಡಳಿತ ನಡೆಸುತ್ತಿದ್ದಾಗ ಆ ಕಂಪೆನಿಯ ಕೆಲವು ಶಸ್ತ್ರವೈದ್ಯರು ಇಲ್ಲಿನ ಪ್ರಾಕೃತಿಕ ಸಂಪತ್ತಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದರು. ಸಸ್ಯಶಾಸ್ತ್ರದಲ್ಲಿಯೂ ಪರಿಣತಿ ಹೊಂದಿದ್ದ ಅವರು ಇಲ್ಲಿನ ವೈವಿಧ್ಯಮಯ ಸಸ್ಯಗಳ ದಾಖಲೀಕರಣ ಮಾಡಿದರು.
ಆ ಅಧ್ಯಯನದ ಅವಧಿಯಲ್ಲಿ ಸಾವಿರಾರು ಸಸ್ಯ-ಮಾದರಿಗಳನ್ನು ಸಂಗ್ರಹಿಸಲಾಯಿತು. ಅಂತಿಮವಾಗಿ ಅವನ್ನು ಜಗತ್ತಿನ ಮುಖ್ಯ ಸಸ್ಯಶಾಸ್ತ್ರೀಯ ಉದ್ಯಾನಗಳಲ್ಲಿ ರಕ್ಷಿಸಿಡಲಾಯಿತು: ರಾಯಲ್ ಬೊಟಾನಿಕ್ ಗಾರ್ಡನ್ ಎಡಿನಬರ್ಗ್; ರಾಯಲ್ ಬೊಟಾನಿಕ್ ಗಾರ್ಡನ್ ಕ್ಯೂ; ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ, ಲಂಡನ್; ಬ್ರಿಟಿಷ್ ಲೈಬ್ರೆರಿ; ಲಿನ್ನೀಯನ್ ಸೊಸೈಟಿ ಆಫ್ ಲಂಡನ್ ಇತ್ಯಾದಿ.
ಸಸ್ಯಶಾಸ್ತ್ರಜ್ನರು ತಮ್ಮ ಅಧ್ಯಯನಕ್ಕಾಗಿ ಒಣಗಿದ ಸಸ್ಯಗಳ ಮಾದರಿಗಳನ್ನು ಬಳಸುತ್ತಾರೆ. ಆದರೆ, ಕೀಟಗಳು ಮತ್ತು ಬೂಷ್ಟಿನಿಂದಾಗಿ ಅವು ಹಾಳಾಗುವ ಅಪಾಯ ಇದ್ದೇ ಇದೆ. ಅದಕ್ಕಾಗಿ ಸಸ್ಯಶಾಸ್ತ್ರಜ್ನರು ಸಸ್ಯಗಳ ಚಿತ್ರಗಳನ್ನೂ ರೇಖಾ ಚಿತ್ರಗಳನ್ನೂ ರಚಿಸುವುದು ವಾಡಿಕೆ. ಸಸ್ಯಗಳ ಮೂಲ ಬಣ್ಣ, ವಿಶೇಷತೆಗಳು, ಸಸ್ಯದ ಬೆಳವಣಿಗೆಯ ವಿವಿಧ ಹಂತಗಳು (ಬೀಜ, ಹೂ, ಕಾಯಿ, ಹಣ್ಣು) ಮತ್ತು ಸಸ್ಯಗಳ ಭಾಗಗಳನ್ನು ಒಂದೇ ಚಿತ್ರದಲ್ಲಿ ತೋರಿಸಲು ಸಾಧ್ಯ.
ರಾಯಲ್ ಬೊಟಾನಿಕ್ ಗಾರ್ಡನ್ ಎಡಿನ್ಬರ್ಗಿನಲ್ಲಿದ್ದ ಭಾರತದ ಸಸ್ಯಗಳ ಚಿತ್ರಗಳ ಸಂಗ್ರಹದಿಂದ ಆಯ್ದ ಚಿತ್ರಗಳನ್ನು ಇತ್ತೀಚೆಗೆ “ಬೊಟಾನಿಕಲ್ ಆರ್ಟ್ ಫ್ರಮ್ ಇಂಡಿಯಾ” ಎಂಬ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. “ಸಾವಿರಾರು ಸಸ್ಯಗಳ ಚಿತ್ರಗಳಿಂದ ಯಾವುದನ್ನು ಈ ಪುಸ್ತಕಕ್ಕಾಗಿ ಆಯ್ಕೆ ಮಾಡಬೇಕು ಎಂಬುದೇ ದೊಡ್ಡ ಸವಾಲಾಗಿತ್ತು. ಕೊನೆಗೆ, ಆಸಕ್ತಿ ಕೆರಳಿಸುವ, ಎದ್ದು ಕಾಣುವ ಮತ್ತು ಕುತೂಹಲದಾಯಕ ಹಿನ್ನೆಲೆಯ ಚಿತ್ರಗಳನ್ನು ಆಯ್ಕೆ ಮಾಡಿದೆವು” ಎನ್ನುತ್ತಾರೆ ಪುಸ್ತಕದ ಲೇಖಕ ಹಾಗೂ ಆ ಗಾರ್ಡನಿನ ಸಸ್ಯವರ್ಗೀಕರಣ ಶಾಸ್ತ್ರಜ್ನ ಮತ್ತು ಸಂರಕ್ಷಕ ಹೆನ್ರಿ ಜೆ. ನೊಲ್ಟೈ.
ಎಡಿನ್ಬರ್ಗಿನ ಬೊಟಾನಿಕ್ ಗಾರ್ಡನಿನ ಚಿತ್ರಗಳ ಸಂಗ್ರಹ ಬೆಳೆಯಲು ಕಾರಣ ಹಲವಾರು ದಾನಿಗಳು ಚಿತ್ರಗಳನ್ನು ದಾನ ಮಾಡಿದ್ದು. ಇದರಲ್ಲಿ ದಕ್ಷಿಣ ಭಾರತದ ಸಸ್ಯಗಳ ಚಿತ್ರಗಳೇ ಅಧಿಕ ಎಂಬುದು ಸಂತೋಷದ ವಿಷಯ. ಈ ಹೊಸ ಪುಸ್ತಕದಲ್ಲಿರುವ ಬಹಳ ಹಳೆಯ ಚಿತ್ರಗಳನ್ನು ಬರೆಸಿದವರು ಜೇಮ್ಸ್ ಕೆರ್ರ್. ಅವರು ೧೭೭೨ರಲ್ಲಿ ಕೊಲ್ಕತಾದಲ್ಲಿ ಸಹಾಯಕ ಶಸ್ತ್ರವೈದ್ಯ ಆಗಿದ್ದರು. ಅವರು ಬರೆಸಿದ ಒಂದು ಚಿತ್ರ ಕೊಡರಿಯೊಕಾಲಿಕ್ಸ್ ಮೊಟೊರಿಯಸ್ ಸಸ್ಯದ್ದು. ಅಲ್ಲಿನ ಆಡುಭಾಷೆಯಲ್ಲಿ ಇದರ ಹೆಸರು ಬುರ್ರಮ್ ಚುನ್ಡಲ್ಲಿ ಅಂದರೆ ಚಲಿಸುವ ಸಸ್ಯ ಎಂದರ್ಥ. ಇದು ಸುಮಾರು ೬೦ ಸೆಮೀ ಎತ್ತರಕ್ಕೆ ಬೆಳೆಯುವ ಸಣ್ಣ ಪೊದೆ. ತೇವಭರಿತ ಕಾಡುಗಳಲ್ಲಿ ಮತ್ತು ನದಿದಡಗಳ ಒದ್ದೆ ಮಣ್ಣಿನಲ್ಲಿ ಬೆಳೆಯುವ ಸಸ್ಯ. ಈ ಸಸ್ಯದ ಎಲೆಗಳು ನಾಚಿಕೆಮುಳ್ಳಿನ (ಮುಟ್ಟಿದರೆ ಮುನಿ ಸಸ್ಯ) ಎಲೆಗಳಂತೆಯೇ ಮುಟ್ಟಿದಾಗ ಮುದುಡುತ್ತವೆ. ಈ ಸಸ್ಯವನ್ನು ಇನ್ನೂ ಸಮಗ್ರವಾಗಿ ಅಧ್ಯಯನ ಮಾಡಿಲ್ಲ. ಇತ್ತೀಚೆಗಿನ ಅಧ್ಯಯನಗಳ ಪ್ರಕಾರ ಇದರ ಬೇರುಗಳು ಸಕ್ಕರೆಕಾಯಿಲೆ ಚಿಕಿತ್ಸೆಗೆ ಸಹಕಾರಿ. ಈ ಸಸ್ಯದ ಸುಂದರ ಚಿತ್ರ ಬಿಡಿಸಿದ ಕಲಾವಿದನ ಹೆಸರು ಗೊತ್ತಿಲ್ಲ.
ಭಾರತದ ಸಸ್ಯಗಳ ಅದ್ಭುತ ಚಿತ್ರಗಳನ್ನು ಬಿಡಿಸಿದ ಪ್ರತಿಭಾವಂತ ಕಲಾವಿದರ ಹೆಸರು ಹಲವಾರು ಚಿತ್ರಗಳಲ್ಲಿ ದಾಖಲಾಗಿಲ್ಲ ಎಂಬುದು ಬೇಸರದ ವಿಷಯ. ಬ್ರಿಟಿಷ್ ಶಸ್ತ್ರವೈದ್ಯರಿಗೆ ಆಗಿನ ಕಾಲದಲ್ಲಿ ಈ ಕಲಾವಿದರ ಸೇವೆ ಸುಲಭವಾಗಿ ಸಿಗುತ್ತಿತ್ತು. ೧೮ನೇ ಶತಮಾನದ ಕೊನೆಯಲ್ಲಿ, ಮೊಘಲ್ ಶೈಲಿಯ ಕಿರುಚಿತ್ರ ರಚನಾಕಲೆಯಲ್ಲಿ ತರಬೇತಾದ ಈ ಚಿತ್ರಕಲಾವಿದರಿಗೆ ರಾಜಾಶ್ರಯ ತಪ್ಪಿತು. ಹೊಸ ದೊರೆಗಳಾದ ಬ್ರಿಟಿಷ್ ಅಧಿಕಾರಿಗಳಿಗೆ ಬೇಕಾದ ಸಸ್ಯಗಳು, ಪ್ರಾಣಿಗಳು, ಉಡುಪುಗಳು, ವಾಸ್ತುಶಿಲ್ಪದ ಚಿತ್ರಗಳನ್ನು ಬಿಡಿಸಲು ಅವರು ತಯಾರಾದರು. ಕೊಲ್ಕತಾದ ಮತ್ತು ಉತ್ತರಪ್ರದೇಶದ ಷಹರಾನಪುರದ ಉದ್ಯಾನಗಳಲ್ಲಿ ಅನೇಕ ಸಸ್ಯಚಿತ್ರಕಲಾಕಾರರನ್ನು ಚಿತ್ರ ಬರೆಯಲು ನೇಮಿಸಿಕೊಳ್ಳಲಾಯಿತು ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ದಕ್ಷಿಣ ಭಾರತದಲ್ಲಿ ಮೊಘಲ್ ಶೈಲಿಯ ಕಿರುಚಿತ್ರ ರಚನಾಕಲೆಯಲ್ಲಿ ತರಬೇತಾದವರು ಇರಲಿಲ್ಲ. ಹಾಗಾಗಿ, ಇಲ್ಲಿ ಗಂಧದ ಮೂರ್ತಿ ಕೆತ್ತುವ ಗುಡಿಗಾರರನ್ನು ಮತ್ತು ಚರ್ಮದ ವಸ್ತು ತಯಾರಿಸುವ ಕುಶಲಕರ್ಮಿಗಳನ್ನು ಬ್ರಿಟಿಷ್ ಶಸ್ತ್ರವೈದ್ಯರು ನೇಮಿಸಿಕೊಂಡರು; ಇವರೂ ಸಸ್ಯಗಳ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸಿದರು.
ಭಾರತದ ಸಸ್ಯಗಳ ಈ ಚಿತ್ರಗಳಿಗೆ ವಿಶೇಷ ವಿನ್ಯಾಸವಿದೆ: ಗಾಢ ಬಣ್ಣಗಳ ಮೂಲಕ ಸಸ್ಯಗಳ ಎಲೆ ಹಾಗೂ ಇತರ ಭಾಗಗಳನ್ನು, ವಿವರಗಳು ಎದ್ದು ಕಾಣುವಂತೆ ಅವರು ಚಿತ್ರಿಸುತ್ತಿದ್ದರು. ಚಿತ್ರ ಬರೆಯಲು ಮರಗಳ ಅಂಟಿನ ಜೊತೆ ಅಪಾರದರ್ಶಕ ಪೈಂಟುಗಳ ಬಳಕೆ. ಎಲ್ಲ ಚಿತ್ರಗಳಲ್ಲಿಯೂ ಸಸ್ಯದ ವಿಶೇಷತೆಗಳು ಎದ್ದು ಕಾಣುವುದು ಗಮನಾರ್ಹ.
ಆದರೆ, ಕೆಲವೇ ಚಿತ್ರಕಲಾಕಾರರ ಹೆಸರುಗಳನ್ನು ಚಿತ್ರಗಳಲ್ಲಿ ದಾಖಲಿಸಲಾಗಿದೆ. ರುಂಗಯ್ಯ ಮತ್ತು ಗೋವಿಂದೂ ಅವರಲ್ಲಿ ಪ್ರಮುಖರು. ಇವರನ್ನು ಚಿತ್ರ ಬರೆಯಲು ನೇಮಿಸಿಕೊಂಡದ್ದು ರೊಬರ್ಟ್ ವಿಟ್; ೧೮೧೯ರಲ್ಲಿ ಮದ್ರಾಸ್ ಮೆಡಿಕಲ್ ಸರ್ವಿಸಿನಲ್ಲಿ ಸಹಾಯಕ ಶಸ್ತ್ರವೈದ್ಯ ಆಗಿದ್ದವರು. ಇವರ ಬಳಿ ಇದ್ದ ಸಸ್ಯಚಿತ್ರಗಳ ಸಂಖ್ಯೆ ೨,೦೦೦. ಗೋವಿಂದೂ ೧,೦೦೦ ಸಸ್ಯಚಿತ್ರಗಳನ್ನು ಬಿಡಿಸಿದ ಕಲಾವಿದ; ಒಂದು ಆರ್ಕಿಡಿಗೆ ಗೋವಿಂದೂ ಹೆಸರು ನೀಡಿದ್ದಾರೆ ರೊಬರ್ಟ್. ಅನಂತರ ಎಚ್. ಫ್ರಾನ್ಸಿಸ್ ಮತ್ತು ಕ್ಲಾರ್ಕ್ ಕ್ಲೆಗೊರ್ನ್ ೧೮೪೨ರಲ್ಲಿ ಮದ್ರಾಸ್ ಮೆಡಿಕಲ್ ಸರ್ವಿಸ್ ಸೇರಿದಾಗ, ಗೋವಿಂದೂ ಅವರಿಗಾಗಿ ಸಸ್ಯಚಿತ್ರಗಳನ್ನು ಚಿತ್ರಿಸಿದರು. ರುಂಗಯ್ಯ ಮತ್ತು ಗೋವಿಂದೂ ತೆಲುಗು ಮಾತನಾಡುತ್ತಿದ್ದರು ಎಂಬುದರ ಹೊರತಾಗಿ ಅವರ ಬಗ್ಗೆ ಬೇರೆ ವಿವರಗಳು ತಿಳಿದಿಲ್ಲ.
ರಾಯಲ್ ಬೊಟಾನಿಕ್ ಗಾರ್ಡನ್ ಎಡಿನ್ಬರ್ಗಿನಲ್ಲಿ ಸುಮಾರು ೩,೦೦೦ ಭಾರತೀಯ ಸಸ್ಯಗಳ ಮೂಲ ಚಿತ್ರಗಳಿವೆ; ಇವುಗಳ ಸಾವಿರಾರು ಜಲವರ್ಣ ಪ್ರತಿಗಳೂ ಇವೆ. ವಿದ್ಯುನ್ಮಾನ ದತ್ತಾಂಶ ಸಂಗ್ರಹದ ಮೂಲಕ, ಈ ಎಲ್ಲ ಚಿತ್ರಗಳನ್ನು ದಾಖಲಿಸಿ, ವಿಶ್ಲೇಷಿಸಿ, ಹೋಲಿಸಿ ಸಂಶೋಧನೆ ನಡೆಸಲು ಸಾಧ್ಯವಿದೆ. ಈ ಅಪರೂಪದ ಪುಸ್ತಕದ ಪ್ರಕಟಣೆ, ಜಗತ್ತಿಗೆ ಭಾರತದ ಸಸ್ಯಸಂಪತ್ತನ್ನು ಪರಿಚಯಿಸುವ ಪ್ರಶಂಸಾರ್ಹ ಪ್ರಯತ್ನ.
ಚಿತ್ರ ಕೃಪೆ: ಡೌನ್ ಟು ಅರ್ತ್ ಪಾಕ್ಷಿಕ