ಭಾರತದ ಅಪ್ರತಿಮ ಸಾಧನೆ: ೧೦೦ ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿಕೆ

ಭಾರತದ ಅಪ್ರತಿಮ ಸಾಧನೆ: ೧೦೦ ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿಕೆ

ಭಾರತದ ೨೧ ಅಕ್ಟೋಬರ್ ೨೦೨೧ರ ಸಾಧನೆಗೆ ಜಗತ್ತಿನಲ್ಲಿ ಸಾಟಿಯೇ ಇಲ್ಲ - ಕೇವಲ ಒಂಭತ್ತು ತಿಂಗಳುಗಳಲ್ಲಿ ಒಂದು ನೂರು ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿದ್ದು. ಇಂತಹ ಅಗಾಧ ಕಾಯಕವನ್ನು ಯಾವುದೇ ದೇಶ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಅದಕ್ಕಾಗಿಯೇ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದು, “ಈ ಮಹಾನ್ ಸಾಧನೆ ಭಾರತದ ಸಂಘಟಿತ ಪ್ರಯತ್ನದ ತಾಕತ್ತನ್ನು ತೋರಿಸುತ್ತದೆ.”

ಇದರ ಇಮ್ಮಡಿ ಸಂಖ್ಯೆಯ ವ್ಯಾಕ್ಸೀನುಗಳನ್ನು ತನ್ನ ಪ್ರಜೆಗಳಿಗೆ ಚೀನಾ ನೀಡಿದೆ. ಆದರೆ, ಚೀನಾ ದೇಶ ೨೦೨೦ರ ಜೂನ್ ತಿಂಗಳಿನಲ್ಲೇ ವ್ಯಾಕ್ಸೀನ್ ನೀಡಲು ಆರಂಭಿಸಿತ್ತು (ಆ ವ್ಯಾಕ್ಸೀನುಗಳ ಮೂರನೆಯ ಹಂತದ ಪ್ರಯೋಗಗಳನ್ನು ನಡೆಸುವುದಕ್ಕಿಂತ ಮುಂಚೆಯೇ)

ಆದರೆ, ಭಾರತವು ಕೊರೋನಾ ವ್ಯಾಕ್ಸೀನ್ ನೀಡಲು ಆರಂಭಿಸಿದ್ದು, ಈ ವರುಷದ (೨೦೨೧) ಜನವರಿಯಲ್ಲಿ - ಕೆಲವೇ ಲಕ್ಷ ವ್ಯಾಕ್ಸೀನುಗಳ ದೈನಿಕ ಪೂರೈಕೆಯೊಂದಿಗೆ. ಆಗ, ಯುಎಸ್‌ಎ ದೇಶ, ವ್ಯಾಕ್ಸೀನುಗಳ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುವುದಕ್ಕೆ ನಿಷೇಧ ಹೇರಿದ್ದರಿಂದಾಗಿ ಪರಿಸ್ಥಿತಿ ಬಿಗಡಾಯಿಸಿತ್ತು.

ಕೊರೋನಾ ವೈರಸ್ ಧಾಳಿಯ ಎರಡನೇ ಅಲೆಯ ಅವಧಿಯಲ್ಲಿ, ವ್ಯಾಕ್ಸೀನುಗಳ ಕೊರತೆ ಭಾರತವನ್ನು ತೀವ್ರವಾಗಿ ಬಾಧಿಸಿತು.  ಯಾವ ದೇಶವೂ ಅಂತಹ ಹಾಹಾಕಾರ ಅನುಭವಿಸಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ - ಬೇಕೆಂದಾಗೆಲ್ಲ ನಮ್ಮ ದೇಶದಲ್ಲಿ ಈಗ ವ್ಯಾಕ್ಸೀನ್ ಸಿಗುತ್ತಿದೆ ಎನ್ನಬಹುದು. ಯಾಕೆಂದರೆ, ದಿನಕ್ಕೆ ೫೦ - ೬೦ ಲಕ್ಷ ಜನರಿಗೆ ವ್ಯಾಕ್ಸೀನ್ ಚುಚ್ಚಲಾಗುತ್ತಿದೆ.

ಇದನ್ನು ಸಂಭ್ರಮಿಸೋಣ. ಯಾಕೆಂದರೆ, ಭಾರತದಲ್ಲಿ ಶೇಕಡಾ ೭೫ರಷ್ಟು ವಯಸ್ಕರಿಗೆ ವ್ಯಾಕ್ಸೀನಿನ ಒಂದು ಡೋಸ್ ನೀಡಲಾಗಿದೆ. ಜೊತೆಗೆ, ನೆನಪಿಡೋಣ: ಕೋರೋನಾ ವೈರಸ್ ಧಾಳಿಯನ್ನು ನಿಯಂತ್ರಿಸಬೇಕಾದರೆ, ನಮ್ಮ ದೇಶದ ಒಟ್ಟು ಜನಸಂಖ್ಯೆ ಸುಮಾರು ೧೩೭ ಕೋಟಿಯಲ್ಲಿ, ವಯಸ್ಕರಾದ ೯೪ ಕೋಟಿ ಜನರಿಗೆ ವ್ಯಾಕ್ಸೀನ್ ನೀಡಬೇಕಾಗಿದ್ದು, ಆ ಗುರಿ ಇನ್ನೂ ದೂರವಿದೆ. ಜೊತೆಗೆ, ೧೮ ವರುಷ ತುಂಬದ ಯುವಜನರಿಗೆ ಈಗಷ್ಟೇ ವ್ಯಾಕ್ಸೀನ್ ನೀಡಲು ಆರಂಭಿಸಲಾಗಿದೆ.

ಅದಲ್ಲದೆ, ಮುಂದಿನ ವರುಷ ಭಾರತೀಯರಿಗೆ ಬೂಸ್ಟರ್ ಡೋಸ್ ಕೊಡಬೇಕಾದ ಅನಿವಾರ್ಯತೆ ಉಂಟಾದೀತು. ಯಾಕೆಂದರೆ, ಈಗಿನ ವೇಗದಲ್ಲೇ ವ್ಯಾಕ್ಸೀನ್ ನೀಡುತ್ತಾ ಸಾಗಿದರೆ, ಶೇಕಡಾ ೭೦-೮೦ರಷ್ಟು ವಯಸ್ಕ ಪ್ರಜೆಗಳಿಗೆ ವರ್ಷಾಂತ್ಯದಲ್ಲಿ ವ್ಯಾಕ್ಸೀನ್ ನೀಡುವ ಕಾಯಕ ಮುಗಿಯಬಹುದು. ಆ ಹೊತ್ತಿಗೆ, ಈ ವರುಷ ಜನವರಿ - ಫೆಬ್ರವರಿಯಲ್ಲಿ ವ್ಯಾಕ್ಸೀನ್ ಪಡೆದವರ ಸೋಂಕು ನಿರೋಧ ಶಕ್ತಿ ಕಡಿಮೆಯಾದೀತು. ಹಾಗೇನಾದರೂ ಆದರೆ, ಮುಂದಿನ ವರುಷ ಪ್ರತಿಯೊಬ್ಬರಿಗೂ ಪುನಃ ವ್ಯಾಕ್ಸೀನ್ ನೀಡಬೇಕಾದೀತು.

ಅದೇನಿದ್ದರೂ, ಸರಕಾರಗಳು ಮತ್ತು ಜನರು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು: ಕೋವಿಡ್-೧೯ ವೈರಸಿನ ವಿರುದ್ಧದ ಯುದ್ಧದಲ್ಲಿ ವ್ಯಾಕ್ಸೀನ್ ಎಂಬುದು ಒಂದು ಆಯುಧ ಮಾತ್ರ. ಇತರ ಆಯುಧಗಳನ್ನು ಜನರು ಬಳಸುತ್ತಲೇ ಇರಬೇಕು: ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಮತ್ತು ಸ್ವಚ್ಛತೆ ಕಾಪಾಡುವುದು. ಇವನ್ನು ಜನರು ನಿರ್ಲಕ್ಷಿಸಿದರೆ, ಈ ವರೆಗಿನ ಸಾಧನೆಯಿಂದ ದಕ್ಕಿದ ಪ್ರಯೋಜನವೆಲ್ಲವೂ ಮಣ್ಣು ಪಾಲಾದೀತು. ಇಂತಹ ಅನಾಹುತ ಹಲವಾರು ದೇಶಗಳಲ್ಲಿ ಈಗಾಗಲೇ ಘಟಿಸಿದೆ; ಇತ್ತೀಚೆಗಿನ ಉದಾಹರಣೆ ಚೀನಾ ದೇಶ.

ಭಾರತದಲ್ಲಿ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ೨೦೨೧ರ ಜನವರಿ ಕೊನೆ ಮತ್ತು ಫೆಬ್ರವರಿ ಆರಂಭದಲ್ಲಿ ಇದ್ದಂತಿದೆ. ಯಾಕೆಂದರೆ, ಕಳೆದ ನಾಲ್ಕು ತಿಂಗಳಿನಿಂದಲೂ ದೈನಿಕ ಸೋಂಕು ಪೀಡಿತರ ಸಂಖ್ಯೆ ೨೦,೦೦೦ಕ್ಕಿಂತ ಕಡಿಮೆಯಿದೆ. ಆದರೆ, ಆಗಿನ ಮತ್ತು ಈಗಿನ ಪರಿಸ್ಥಿತಿಗಳಿಗೆ ಒಂದು ಪ್ರಮುಖ ವ್ಯತ್ಯಾಸವಿದೆ. ಅದೇನೆಂದರೆ, ವೈರಸ್ ಧಾಳಿಯ ಎರಡನೇ ಅಲೆಯಲ್ಲಿ, ಕೋಟಿಗಟ್ಟಲೆ ಜನರಿಗೆ ಸೋಂಕು ತಗಲಿ, ಅವರಲ್ಲಿ ವೈರಸಿನ ಪ್ರತಿರೋಧ ಶಕ್ತಿ ಮೂಡಿದೆ.

ಅಂತೂ, ಈ ಪ್ರಚಂಡ ವೈರಸಿನ ವಿರುದ್ಧದ ಯುದ್ಧದಲ್ಲಿ ಗೆಲ್ಲಬೇಕಾದರೆ, ವ್ಯಾಕ್ಸೀನ್ ಸದ್ಬಳಕೆ ಮತ್ತು ಆರೋಗ್ಯ ರಕ್ಷಣೆ ಬಗ್ಗೆ ಜನರಲ್ಲಿ ನಿರಂತರ ಎಚ್ಚರದ ವರ್ತನೆ ಅತ್ಯಗತ್ಯ.

ಫೋಟೋ: ಕೊರೋನಾ ವ್ಯಾಕ್ಸೀನ್ ಚುಚ್ಚುವಿಕೆ ….. ಕೃಪೆ: ಲೈವ್ ಮಿಂಟ್.ಕೋಮ್