ಭಾರತದ ಕಠಿನ ನಿಲುವಿಗೆ ಕೊನೆಗೂ ಶರಣಾದ ಚೀನ

ಭಾರತದ ಕಠಿನ ನಿಲುವಿಗೆ ಕೊನೆಗೂ ಶರಣಾದ ಚೀನ

ವಾಸ್ತವಿಕ ನಿಯಂತ್ರಣ ರೇಖೆಯ ಗಡಿಭಾಗದ ಪ್ರದೇಶಗಳಲ್ಲಿ ಕಳೆದೆರಡು ವರ್ಷಗಳಿಂದ ಬೀಡು ಬಿಡುವ ಮೂಲಕ ಭಾರತದ ಭದ್ರತೆಗೆ ಭೀತಿಯನ್ನುಂಟು ಮಾಡಿದ್ದ ಚೀನಾ ಸೇನೆ ಕೊನೆಗೂ ಕೊಟ್ಟ ಮಾತಿನಂತೆ ಹಿಂದಕ್ಕೆ ಸರಿದಿದೆ. ಭಾರತದ ಪಾಲಿಗೆ ಇದು ನಿರ್ಣಾಯಕ ಬೆಳವಣಿಗೆ ಎಂದೇ ಬಿಂಬಿಸಲಾಗಿದೆ.

೨೦೨೦ರ ಜೂನ್ ನಲ್ಲಿ ಗಾಲ್ವಾನ್ ನಲ್ಲಿ ಚೀನ ಸೇನೆ ಎಲ್ ಎ ಸಿ ಯನ್ನು ದಾಟಿ ಭಾರತದ ಭೂಭಾಗದೊಳಗೆ ಅತಿಕ್ರಮಣ ಮಾಡಿ ಸೇನಾ ಶಿಬಿರಗಳನ್ನು ಸ್ಥಾಪಿಸುವ ಮೂಲಕ ಭಾರತದ ಭದ್ರತೆಗೆ ಅಪಾಯ ತಂದೊಡ್ಡಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕಾರ್ಯಾಚರಣೆ ನಡೆಸಿ ಚೀನಿ ಯೋಧರನ್ನು ಹಿಮ್ಮೆಟ್ಟಿಸಿದ್ದರು. ಇದಾದ ಬಳಿಕ ಎಲ್ ಎ ಸಿಯಿಂದ ಚೀನ ತನ್ನ ಸೇನಾ ಪಡೆಗಳನ್ನು ನಿಯೋಜಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೂಡ ತನ್ನ ಭೂಭಾಗದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಪಡೆಗಳನ್ನು ನಿಯೋಜಿಸಿದ್ದೇ ಅಲ್ಲದೆ ಗಸ್ತನ್ನು ಹೆಚ್ಚಿಸಿತ್ತು. 

ಈ ಎಲ್ಲ ಬೆಳವಣಿಗೆಗಳು ಲಡಾಖ್ ಭಾಗದಲ್ಲಿ ಸಂಘರ್ಷದ ವಾತಾವರಣ ನಿರ್ಮಿಸಿದ್ದೇ ಅಲ್ಲದೆ ಉಭಯ ದೇಶಗಳ ನಡುವೆ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಇದರ ನಡುವೆ ಭಾರತವು ಚೀನದೊಂದಿಗೆ ವ್ಯವಹಾರಗಳನ್ನು ಕಡಿಮೆಗೊಳಿಸಿ ಹಲವು ನಿಷೇಧಗಳನ್ನು ಹೇರುವ ಮೂಲಕವೂ ಆರ್ಥಿಕ ಏಟು ನೀಡಿತ್ತು.

ಆನಂತರದ ಬೆಳವಣಿಗೆಗಳಲ್ಲಿ ಸೇನಾ ವಾಪಸಾತಿ ಸಂಬಂಧ ಹಲವಾರು ಬಾರಿ ಭಾರತ ಮತ್ತು ಚೀನದ ಸೇನಾ ಪಡೆಗಳ ಅಧಿಕಾರಿಗಳ ಮಟ್ಟದಲ್ಲಿ ನಡೆದ ಮಾತುಕತೆಯ ವೇಳೆ ಸಹಮತ ವ್ಯಕ್ತವಾಗಿದ್ದರೂ ಚೀನ ತನ್ನ ಸೇನೆಯನ್ನು ವಾಪಾಸು ಕರೆಸಿಕೊಳ್ಳಲು ಮೀನಮೇಷ ಎಣಿಸುತ್ತಲೇ ಬಂದಿತ್ತು.

ಚೀನದ ಈ ಬಿಗಿಪಟ್ಟಿಗೆ ಪ್ರಬಲವಾಗಿಯೇ ಪ್ರತಿತಂತ್ರ ಹೂಡಿದ ಭಾರತೀಯ ಸೇನೆ ಕೂಡ ತನ್ನ ಸೇನಾಪಡೆಗಳನ್ನು ಎಲ್ ಎ ಸಿ ವ್ಯಾಪ್ತಿಯ ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿರಿಸಿತ್ತಲ್ಲದೆ ನಿರಂತರವಾಗಿ ಗಸ್ತು ಕಾರ್ಯವನ್ನು ನಡೆಸುತ್ತಲೇ ಬಂದಿತ್ತು. ಕೊನೆಗೂ ಮಣಿದಿರುವ ಚೀನ, ಪೂರ್ವ ಲಡಾಕ್ ನ ಗೋಗ್ರಾ-ಹಾಟ್ ಸ್ಟ್ರಿಂಗ್ಸ್ ನಲ್ಲಿ ನಿಯೋಜಿಸಿದ್ದ ತನ್ನ ಸೇನಾ ಪಡೆಯನ್ನು ವಾಪಾಸು ಕರೆಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ  ಈ ಭಾಗದಲ್ಲಿ ಚೀನ ನಿರ್ಮಿಸಿದ್ದ ಸೇನಾ ನೆಲೆಗಳು, ಕಟ್ಟಡಗಳನ್ನು  ಕೂಡ ತೆರವುಗೊಳಿಸಿದೆ. ಎಲ್ ಎ ಸಿಯಲ್ಲಿದ್ದ ಈ ಬೆಳವಣಿಗೆ ಆ ಪ್ರದೇಶದಲ್ಲಿನ ಸ್ಥಳೀಯರನ್ನು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಎಲ್ ಎ ಸಿ ವಿಚಾರದಲ್ಲಿ ಸುಖಾಸುಮ್ಮನೆ ತಗಾದೆ ತೆಗೆಯುತ್ತಲೇ ಬಂದಿದ್ದ ಚೀನದ ಪಾಲಿಗೆ ಈ ಬೆಳವಣಿಗೆ ಒಂದಿಷ್ಟು ಹಿನ್ನಡೆಯೇ ಸರಿ. ಅಷ್ಟು ಮಾತ್ರವಲ್ಲದೆ ಚೀನದ ವಿಸ್ತರಣಾವಾದಕ್ಕೆ ಬಲುದೊಡ್ಡ ಹೊಡೆತ ಬಿದ್ದಂತಾಗಿದೆ. ತನ್ನ ಭೂಪ್ರದೇಶವನ್ನು ದಾಟಿ ಎಲ್ ಎ ಸಿಯಲ್ಲಿರುವ ಮಾನವ ರಹಿತ ಪ್ರದೇಶವನ್ನು ಕಬಳಿಸುವ ಸಂಚು ರೂಪಿಸಿ ತನ್ನ ಸೇನೆಯನ್ನು ಗಡಿಯತ್ತ ರವಾನಿಸಿದ್ದ ಚೀನಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ಹಿಂದೆ ಸರಿಯುವಂತೆ ಮಾಡಿತ್ತು. ಅಲ್ಲದೆ ಚೀನವು ಗಡಿಯಿಂದ ಸೇನಾ ವಾಪಸಾತಿ ವಿಚಾರದಲ್ಲಿಯೂ ಬಿಗು ನಿಲುವು ತಾಳುವ ಮೂಲಕ ಪರೋಕ್ಷವಾಗಿ ಭಾರತೀಯ ಸೇನೆಯ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸುತ್ತಲೇ ಬಂದಿತು. ಆದರೆ ಭಾರತ ಕಠಿನ ನಿಲುವು ತಾಳುವ ಮೂಲಕ ಚೀನ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಅನಿವಾರ್ಯ ಸೃಷ್ಟಿಸಿತ್ತು. 

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೯-೦೯-೨೦೨೨

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ