ಭಾರತದ ಗುಕೇಶ್ ದೊಮ್ಮರಾಜು ಜಾಗತಿಕ ಚದುರಂಗ ಚಾಂಪಿಯನ್

ಭಾರತೀಯರಿಗೆ ಮತ್ತೊಂದು ಸಂಭ್ರಮ: ಭಾರತದ ಗುಕೇಶ್ ದೊಮ್ಮರಾಜು ನಿನ್ನೆ (12-12-2024) ಜಾಗತಿಕ ಚದುರಂಗ ಚಾಂಪಿಯನ್ ಪಟ್ಟವೇರಿದರು. ಅವರು 18ನೇ ವಯಸ್ಸಿನಲ್ಲೇ ಇದನ್ನು ಸಾಧಿಸುವ ಮೂಲಕ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಜಾಗತಿಕ ಚದುರಂಗ ಚಾಂಪಿಯನ್ ಎಂಬ ಸಾಧನೆ ಮಾಡಿದ್ದಂತೂ ರೋಚಕ!
ಈ ಹಿಂದಿನ ಜಾಗತಿಕ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ನಿನ್ನೆ ಜರಗಿದ 14ನೇ ಹಾಗೂ ಕೊನೆಯ ಪಂದ್ಯದಲ್ಲಿ ಸೋಲಿಸಿ 18ನೇ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅಂತಿಮವಾಗಿ, ಸಿಂಗಾಪುರದಲ್ಲಿ ಜರಗಿದ 14 ಪಂದ್ಯಗಳ ಜಾಗತಿಕ ಚಾಂಪಿಯನ್ಷಿಪ್-ನಲ್ಲಿ ಡಿಂಗ್ ಲಿರೆನ್ ಅವರ 6.5 ಅಂಕಗಳ ವಿರುದ್ಧ 7.5 ಅಂಕ ಗಳಿಸಿ, ಅಮೋಘ ಗೆಲುವು ಸಾಧಿಸಿದರು. ಅವರು ಗಳಿಸಿದ ಬಹುಮಾನದ ಮೊತ್ತ ರೂ.11.03 ಕೋಟಿ.
ಈ ಮೂಲಕ, ಚದುರಂಗದ ತವರೂರಾದ ಭಾರತ ಜಾಗತಿಕ ಚದುರಂಗ ಚಾಂಪಿಯನ್ ಪಟ್ಟವನ್ನು 11 ವರುಷಗಳ ಬಳಿಕ ಮರಳಿ ಪಡೆದಿದೆ. ವಿಶ್ವನಾಥನ್ ಆನಂದ್ 2013ರಲ್ಲಿ ಮ್ಯಾಗ್ನಸ್ ಕಾರ್ಲ್-ಸೆನ್ ವಿರುದ್ಧ ಸೋತಾಗ ಭಾರತ ಈ ಪಟ್ಟ ಕಳೆದುಕೊಂಡಿತ್ತು.
ವಿಶ್ವನಾಥನ್ ಆನಂದ್ ಐದು ಬಾರಿ (2000-2002, 2007, 2008, 2010 ಮತ್ತು 2012ರಲ್ಲಿ) ಚದುರಂಗದ ವಿಶ್ವ ಚಾಂಪಿಯನ್ ಆಗುವ ಮೂಲಕ ಚದುರಂಗದ ಜಾಗತಿಕ ಸ್ಪರ್ಧಾ ಕ್ಷೇತ್ರದಲ್ಲಿ ಭಾರತದ ಪಾರಮ್ಯವನ್ನು ಎತ್ತಿ ಹಿಡಿದಿದ್ದರು. ಅವರನ್ನು ಗುಕೇಶ್ ತಮ್ಮ “ಸ್ಫೂರ್ತಿ ಹಾಗೂ ಮಾದರಿ ವ್ಯಕ್ತಿ” ಎಂದು ಹೆಸರಿಸಿದ್ದಾರೆ. ವಿಶ್ವನಾಥನ್ ಆನಂದ್ ಇಸವಿ 2000ದಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಸಾಧನೆ ಮಾಡಿದ್ದರೆ, ಗುಕೇಶ್ ತಮ್ಮ 18ನೇ ವಯಸ್ಸಿಗೆ ಅದನ್ನು ಸಾಧಿಸಿರುವುದು ವಿಶೇಷ.
“ಗುಕೇಶ್ ಈ ವಿಜಯದ ಮೂಲಕ ಚದುರಂಗದ ಚರಿತ್ರೆಯಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಉಳಿಸಿದ್ದಾರೆ ಮಾತ್ರವಲ್ಲ ಮಿಲಿಯಗಟ್ಟಲೆ ಯುವಜನರನ್ನು ದೊಡ್ಡ ಕನಸು ಕಾಣಲು ಮತ್ತು ಶ್ರೇಷ್ಠತೆಯ ಬೆನ್ನಟ್ಟಲು ಪ್ರೇರೇಪಿಸಿದ್ದಾರೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುಕೇಶರನ್ನು ಅಭಿನಂದಿಸಿದರು.
ಗುಕೇಶರ ತಂದೆ ಡಾ. ರಜನಿಕಾಂತ್ ಇ-ಎನ್-ಟಿ ಸರ್ಜನ್. ತಾಯಿ ಡಾ. ಪದ್ಮಾ ಮೈಕ್ರೋ ಬಯೋಲಾಜಿಸ್ಟ್. 29 ಮೇ 2006ರಂದು ತಮಿಳ್ನಾಡಿನ ಚೆನ್ನೈಯಲ್ಲಿ ಜನಿಸಿದ ಗುಕೇಶ್ ಅಲ್ಲೇ ಬೆಳೆದವರು. ಆಂಧ್ರಪ್ರದೇಶದ ಗೋದಾವರಿ ಪ್ರದೇಶ ಅವರ ಕುಟುಂಬದ ಮೂಲವಾಗಿದ್ದು, ಅವರ ಮಾತೃಭಾಷೆ ತೆಲುಗು. ಏಳನೇ ವಯಸ್ಸಿನಲ್ಲೇ ಚದುರಂಗ ಆಡಲು ಶುರು ಮಾಡಿದ ಗುಕೇಶರಿಗೆ ಅವರ ಹೆತ್ತವರು ಸಂಪೂರ್ಣ ಪ್ರೋತ್ಸಾಹ ನೀಡಿದ್ದರಿಂದ ಅವರೀಗ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಿದೆ. ಅವರ ತಂದೆಯಂತೂ ವೈದ್ಯ ವೃತ್ತಿಯನ್ನೇ ಬದಿಗಿಟ್ಟು, ಜಗತ್ತಿನ ಹಲವೆಡೆಗಳಲ್ಲಿ ಚದುರಂಗದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಮಗನೊಂದಿಗೆ ಪ್ರಯಾಣಿಸುತ್ತಾ ಆತನಿಗೆ ಸಹಕರಿಸುತ್ತಿದ್ದಾರೆ. 2019ರಲ್ಲಿ (12 ವರುಷ 7 ತಿಂಗಳು 17 ದಿನ ವಯಸ್ಸಿನಲ್ಲಿ) ಗ್ರಾಂಡ್ ಮಾಸ್ಟರ್ ಪಟ್ಟವೇರಿದ್ದ ಗುಕೇಶ್ ಆ ಸಾಧನೆ ಮಾಡಿದ ಜಗತ್ತಿನ 2ನೇ ಅತ್ಯಂತ ಕಿರಿಯ ಎಂಬುದು ಅವರ ಹೆಗ್ಗಳಿಕೆ.
ಗುಕೇಶ್ ಮತ್ತು ಡಿಂಗ್ ಲಿರೆನ್ - ಇವರಿಬ್ಬರ ಜಾಗತಿಕ ಚದುರಂಗದ ಪಂದ್ಯಾಟವನ್ನು ಚೆಸ್.ಕಾಮ್ ಪೊರ್ಟಲಿನಲ್ಲಿ 190 ದಶಲಕ್ಷ ಜನರು ವೀಕ್ಷಿಸಿದ್ದಾರೆ. 2020ಕ್ಕೆ ಹೋಲಿಸಿದಾಗ ವೀಕ್ಷಕರ ಸಂಖ್ಯೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಚದುರಂಗದ ಜನಪ್ರಿಯತೆಯನ್ನು ತೋರಿಸುತ್ತದೆ.
ಭಾರತದಲ್ಲಿಯೂ ಚದುರಂಗದ ಜನಪ್ರಿಯತೆ ಹೆಚ್ಚುತ್ತಿದ್ದು, ಇದರಲ್ಲಿ ವಿಶ್ವನಾಥನ್ ಆನಂದ್ ಅವರ ಪಾತ್ರ ಪ್ರಧಾನ. ಚೆನ್ನೈಯಲ್ಲಿ “ವೆಸ್ಟ್ ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿ” ಸ್ಥಾಪಿಸಿ, ಸಾವಿರಾರು ಯುವಜನರಿಗೆ ಚದುರಂಗದ ತರಬೇತಿ ನೀಡುತ್ತಿರುವ ಅವರ ಕೊಡುಗೆಗೆ ಬೆಲೆ ಕಟ್ಟಲಾಗದು. ಜೊತೆಗೆ, ಚದುರಂಗ ಒಂದು ವೃತ್ತಿಪರ ಕ್ರೀಡೆ (ಕ್ರಿಕೆಟಿನಂತೆ) ಆಗಲು ಸಾಧ್ಯ ಎಂಬುದನ್ನು ಭಾರತೀಯರಿಗೆ ತೋರಿಸಿಕೊಟ್ಟವರು ವಿಶ್ವನಾಥನ್ ಆನಂದ್.
ಭಾರತದಲ್ಲಿ ಈಗ ಜಾಗತಿಕ ಮಟ್ಟದ ಚದುರಂಗದ ಆಟಗಾರರ ದೊಡ್ಡ ಪಡೆಯೇ ಇದೆ. ಭಾರತದ ಗ್ರಾಂಡ್ ಮಾಸ್ಟರುಗಳ ಸಂಖ್ಯೆ 85 ಮತ್ತು ಅಂತರಾಷ್ಟ್ರೀಯ ಮಾಸ್ಟರುಗಳ ಸಂಖ್ಯೆ 124. ಹಾಗಾಗಿಯೇ ಸಪ್ಟಂಬರ್ 2024ರಲ್ಲಿ ಹಂಗೇರಿಯ ಬುಡಾಪೆಸ್ಟಿನಲ್ಲಿ ಜರಗಿದ 45ನೇ ಚೆಸ್ ಒಲಿಂಪಿಯಾಡಿನಲ್ಲಿ ಪ್ರಪ್ರಥಮ ಬಾರಿಗೆ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಸ್ವರ್ಣ ಪದಕ ಗೆದ್ದು ಇತಿಹಾಸ ಬರೆದಿದ್ದವು. ಇದೀಗ ಗುಕೇಶ್ ದೊಮ್ಮರಾಜು ಚದುರಂಗದ ಜಾಗತಿಕ ಚಾಂಪಿಯನ್ ಆಗುವ ಮೂಲಕ ಚದುರಂಗದ ತವರೂರು ಭಾರತ ಚದುರಂಗದಲ್ಲಿ ತನ್ನ ತಾಕತ್ತನ್ನು ಜಗತ್ತಿಗೆ ಇನ್ನೊಮ್ಮೆ ಸಾರಿದೆ.
ಫೋಟೋ: ವಿಶ್ವ ಚೆಸ್ ಚಾಂಪಿಯನ್ ಆದ ಕ್ಷಣದಲ್ಲಿ ಕೈಗಳನ್ನೆತ್ತಿ ಸಂಭ್ರಮಿಸಿದ ಗುಕೇಶ್ ಡಿ.