ಭಾರತದ ಜಿ೨೦ ಅಧ್ಯಕ್ಷತೆಯ ಮೇಲೆ ವಿಶ್ವಕ್ಕೆ ಅಪಾರ ನಿರೀಕ್ಷೆ
ಜಗತ್ತಿನ ಪ್ರಮುಖ ೨೦ ರಾಷ್ಟ್ರಗಳು ಹಾಗೂ ಯುರೋಪಿಯನ್ ಒಕ್ಕೂಟವನ್ನು ಸದಸ್ಯರನ್ನಾಗಿ ಹೊಂದಿರುವ ಜಿ೨೦ ಸಮೂಹಕ್ಕೆ ಭಾರತದ ಒಂದು ವರ್ಷದ ಅವಧಿಯ ಅಧ್ಯಕ್ಷತೆ ಡಿಸೆಂಬರ್ ೧ ರಿಂದ ಆರಂಭಗೊಂಡಿದೆ. ವಸುದೈವ ಕುಟುಂಬಕಂ ಎಂಬ ಭಾರತದ ಪ್ರಾಚೀನ ಮೌಲ್ಯವನ್ನು ಈ ಅವಧಿಯಲ್ಲಿ ಸಾಕಾರಗೊಳಿಸಿ ತೋರಿಸುವ ನೀಲನಕ್ಷೆಯನ್ನು ಭಾರತ ಈಗಾಗಲೇ ಜಗತ್ತಿನ ಮುಂದಿಟ್ಟಿದೆ. ಸಂಪತ್ತಿನ ಅಸಮಾನ ಹಂಚಿಕೆ, ಬಡತನ, ನಿರುದ್ಯೋಗ, ಅಭಿವೃದ್ಧಿಯಲ್ಲಿ ಹಿಂದುಳಿಯುವಿಕೆ, ಹಸಿವು, ಔಷಧ ಹಾಗೂ ಲಸಿಕೆಗಳ ಕೊರತೆ, ಮೂಲಸೌಕರ್ಯಗಳ ಕೊರತೆ, ಪರಸ್ಪರ ವಿಶ್ವಾಸದ ಕೊರತೆ, ಮೈಮನಸ್ಸುಗಳು, ಅಶಾಂತಿ ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಜಗತ್ತು ಭಾರತದ ಜಿ೨೦ ಅಧ್ಯಕ್ಷತೆಯ ಅವಧಿಯನ್ನು ಅಪಾರ ನಿರೀಕ್ಷೆಗಳೊಂದಿಗೆ ಎದುರುನೋಡುತ್ತಿದೆ. 'ನಮ್ಮ ಮುಂದಿರುವುದು ಸಂಘರ್ಷದ ಯುಗವಲ್ಲ, ಸಾಮರಸ್ಯದ ಯುಗ. ಭಾರತವು ತನ್ನ ಜಿ.೨೦ ಅಧ್ಯಕ್ಷತೆಯ ಅವಧಿಯನ್ನು ಉಪಶಮನದ, ಸಾಮರಸ್ಯದ ಮತ್ತು ಭರವಸೆಯ ಅವಧಿಯನ್ನಾಗಿ ಮಾಡಲು ಶ್ರಮಿಸಲಿದೆ. ಮಾನವ ಕೇಂದ್ರಿತ ಜಾಗತೀಕರಣದ ಹೊಸ ಮಾದರಿಯನ್ನು ರೂಪಿಸಲು ನಾವೆಲ್ಲ ಒಟ್ಟಾಗಿ ಶ್ರಮಿಸೋಣ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಜಿ.೨೦ ಸಮೂಹದಲ್ಲಿರುವ ಬಲಾಡ್ಯ ದೇಶಗಳಿಂದ ಈ ಸಮೂಹದಲ್ಲಿ ಸೇರಿಲ್ಲದ ಬಡ ಹಾಗೂ ಹಿಂದುಳಿದ ದೇಶಗಳಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದೆ. ಎಲ್ಲರನ್ನೂ ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಭಾರತ ಹೇಳಿರುವುದರಿಂದ ಈ ಅವಧಿಯು ಹಿಂದಿನ ಎಲ್ಲಾ ೧೭ ಅಧ್ಯಕ್ಷತೆಗಳಿಗಿಂತ ವಿಭಿನ್ನವಾಗಿರುವ ನಿರೀಕ್ಷೆಯನ್ನು ಬಿತ್ತಿದೆ.
ಬೇರೆ ಬೇರೆ ರೀತಿಯ ಜಾಗತಿಕ ಒಕ್ಕೂಟಗಳಲ್ಲಿ ಅತ್ಯಂತ ಬಲಾಡ್ಯ ಒಕ್ಕೂಟವೆಂದರೆ ಜಿ೨೦. ಇದು ಕೇವಲ ತನ್ನ ಸದಸ್ಯ ರಾಷ್ಟ್ರಗಳ ಅಭಿವೃದ್ಧಿ ಹಾಗೂ ಸಮಸ್ಯೆಗಳ ಇತ್ಯರ್ಥಕ್ಕೆ ಮಾತ್ರ ಶ್ರಮಿಸುವುದಿಲ್ಲ. ಬದಲಿಗೆ ನಾನಾ ಕಾರಣಗಳಿಂದ. ಹಿಂದುಳಿದಿರುವ ಬಡ ದೇಶಗಳಿಗೂ ನೆರವು ನೀಡುವ ಉದ್ದೇಶ ಹೊಂದಿದೆ. ಆದರೆ, ಈ ಉದ್ದೇಶ ಜಿ೨೦ ಸ್ಥಾಪನೆಯಾದ ೧೯೯೯ ರಿಂದ ಈವರೆಗೂ ಈಡೇರಿಲ್ಲ. ಪ್ರತಿವರ್ಷ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ಹಾಗೂ ಕೆಲ ಆರ್ಥಿಕ ಮತ್ತು ವ್ಯಾಪಾರಿ ಹೊಂದಾಣಿಕೆಯ ಉಪಕ್ರಮಗಳಿಗೆ ಮಾತ್ರ ಜಿ೨೦ ಸದಸ್ಯರು ಸೀಮಿತರಾಗುತ್ತಿದ್ದರು. ಇದನ್ನು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಿ, ಹವಾಮಾನ ಬದಲಾವಣೆಯ ಸಮಸ್ಯೆಗೆ ಕಡಿವಾಣ ಹಾಕಿ, ಸಮೂಹದ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಭಾರತವು ಶ್ರಮಿಸಬೇಕಿದೆ. ಅದರಲ್ಲೇ ಜಗತ್ತಿನ ಒಳಿತು ಅಡಗಿದೆ.
ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೦೨-೧೨-೨೦೧೨
ಚಿತ್ರ ಕೃಪೆ: ಅಂತರ್ಜಾಲ ತಾಣ