ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದು ಹೆಚ್ಚು ಅಪಾಯಕಾರಿ?

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದು ಹೆಚ್ಚು ಅಪಾಯಕಾರಿ?

ಭ್ರಷ್ಟಾಚಾರವೋ, ವಂಶಾಡಳಿತವೋ, ಜಾತಿ ವ್ಯವಸ್ಥೆಯೋ, ಕೋಮು ದ್ರುವೀಕರಣವೋ, ಹಣ ಬಲವೋ, ತೋಳ್ಬಲವೋ, ಭಾಷಾ ಪ್ರಾಬಲ್ಯವೋ, ಜನಾಂಗೀಯ ವಿಭಜನೆಯೋ ಅಥವಾ ಸರ್ವಾಧಿಕಾರವೋ?

ಮೊದಲನೆಯದಾಗಿ, ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಮಗ್ರ ಚಿಂತನೆಯ ಅವಶ್ಯಕತೆ ಇರುತ್ತದೆ. ಸಂಕುಚಿತ ಮನೋಭಾವ ಯಾವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಬಿಡುವುದಿಲ್ಲ. ಎರಡನೆಯದಾಗಿ, ನಮ್ಮ ಅಂತರ್ಯದಲ್ಲಿ ದ್ವೇಷ ಅಸೂಯೆ ಕೋಪ ಮುಂತಾದ ಭಾವನೆಗಳಿಗಿಂತ ಪ್ರೀತಿ ಸಹನೆ ಕರುಣೆ ಕ್ಷಮಾಗುಣ ರೀತಿಯ ಮನೋಭಾವಗಳು ಹೆಚ್ಚು ಮೇಲುಗೈ ಪಡೆದಿರುವುದು ವಿಷಯ ಗ್ರಹಿಕೆಗೆ ಪ್ರಾಥಮಿಕ ಅವಶ್ಯಕತೆ ಆಗಿರುತ್ತದೆ..

ಯಾವುದೋ ಒಂದು ಸಿದ್ಧಾಂತಕ್ಕೆ ನಾವು ಅಡಿಯಾಳಾಗಿದ್ದರೆ ಅಥವಾ ಬಂಧಿಯಾಗಿದ್ದರೆ ಅಥವಾ ಗುಲಾಮರಾಗಿದ್ದರೆ ಅಥವಾ ಅಂದಭಕ್ತರಾಗಿದ್ದರೆ ಸೈದ್ಧಾಂತಿಕ ಸ್ಪಷ್ಟತೆ ಬರುವುದೇ ಇಲ್ಲ. ಆರ್ ಎಸ್ ಎಸ್ ನ ಹಿಂದುತ್ವವಾದಿಗಳಾಗಲಿ, ಕಮ್ಯುನಿಸ್ಟ್ ಸಿದ್ಧಾಂತಿಗಳಾಗಲಿ, ಮುಸ್ಲಿಂ ಮೂಲಭೂತವಾದಿಗಳಾಲಿ, ಕ್ರಿಶ್ಚಿಯನ್ ಧರ್ಮಾಂಧರಾಗಲಿ, ಗಾಂಧಿ ಅಂಬೇಡ್ಕರ್ ಬಸವಣ್ಣ ಶಂಕರಾಚಾರ್ಯ ಮುಂತಾದ ಯಾರದೇ ತತ್ವಗಳಾಗಲಿ, ಒಳ ಮನಸ್ಸಿನಲ್ಲಿ ಶುದ್ಧತೆ ಇಲ್ಲದಿದ್ದರೆ ಅದನ್ನು ಸರಿಯಾಗಿ ಗ್ರಹಿಸಲು ಸಾಧ್ಯವೇ ಇಲ್ಲ. ಕೇವಲ ವಾದ ಮಂಡನೆಯಲ್ಲಿ ಒಂದಷ್ಟು ಮೇಲುಗೈ ಸಾಧಿಸಬಹುದಷ್ಟೇ.

ತಮ್ಮ ಸೈದ್ಧಾಂತಿಕ ನಿಲುವುಗಳ ಬಗ್ಗೆ ತುಂಬಾ ಕಠೋರ ನಿಲುವುಗಳು ಹಾಗೂ ವಿರೋಧಿ ವಿಚಾರಗಳ ಬಗ್ಗೆ ಅತ್ಯಂತ ದ್ವೇಷ  ವಿಷಯವನ್ನು ವಾಸ್ತವ ನೆಲೆಯಲ್ಲಿ ಗ್ರಹಿಸಲು ಸಾಧ್ಯವಾಗದೇ ಇರುವುದಕ್ಕೆ ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಜಾಪ್ರಭುತ್ವ 75 ವರ್ಷಗಳ ನಂತರದಲ್ಲಿ ಸಾಗುತ್ತಿರುವ ದಿಕ್ಕನ್ನು ವಿವೇಚನೆಯಿಂದ ವಿಶ್ಲೇಷಿಸಬೇಕಾಗುತ್ತದೆ.

ಎಲ್ಲಾ ಏಳುಬೀಳುಗಳ ನಡುವೆಯೂ ದೊಡ್ಡ ಮಟ್ಟದ ಯಶಸ್ಸಾಗಲಿ ಅಥವಾ ವಿಫಲವಾಗಲಿ ಆಗದೆ ಸಮಾಧಾನಕರವಾಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸಾಗುತ್ತಿದೆ. ಆದರೆ ಪ್ರಜಾಪ್ರಭುತ್ವದ ಅಪಾಯಗಳ ಬಗ್ಗೆ ಮಾತನಾಡುವಾಗ ಎದುರಾದ ಆತಂಕದ ಕ್ಷಣಗಳು ಇಂದಿರಾ ಗಾಂಧಿ ಮತ್ತು ಈಗಿನ ನರೇಂದ್ರ ಮೋದಿ ಅವರ ಕಾಲಘಟ್ಟದಲ್ಲಿ ಸ್ವಲ್ಪ ಎದ್ದು ಕಾಣುತ್ತದೆ. ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ ಮತ್ತು ಆಗಿನ ರಾಜ್ಯ ಸರ್ಕಾರಗಳ ವಜಾ, ತನ್ನ ವಿರೋಧಿಗಳನ್ನು ಮಣಿಸಲು ಕೇಂದ್ರದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದು, ಜನರ ಭಾವನೆಗಳ ಮೇಲೆ ಒಂದಷ್ಟು ಪ್ರಭಾವ ಬೀರಿ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದ್ದು ಕಾಣುತ್ತೇವೆ.

ಆಗಿನ್ನೂ ಜಾಗತೀಕರಣದ ಪ್ರಭಾವ ಭಾರತದ ಮೇಲೆ ಆಗಿರಲಿಲ್ಲ. ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯು ಇರಲಿಲ್ಲ. ಅಕ್ಷರಸ್ಥರ ಪ್ರಮಾಣವು ಹೆಚ್ಚಾಗಿರಲಿಲ್ಲ. ಆದರೆ ಈಗ ಕಳೆದ ಹತ್ತು ವರ್ಷಗಳಲ್ಲಿ ಆಧುನಿಕ ತಂತ್ರಜ್ಞಾನದ ಎಲ್ಲಾ ಪ್ರಯೋಗಗಳು ನಡೆದಿರುವಾಗ, ಭಾರತದ ಪ್ರಜಾಪ್ರಭುತ್ವ ಮೌಲ್ಯಗಳ ಕುಸಿತ ಹೇಗೆ ಆಗುತ್ತಿದೆ ಎಂಬುದನ್ನು ವಿವೇಚಿಸುವ ಮತ್ತು ವಿಶ್ಲೇಷಿಸುವ ಕಾಲ ಬಂದಿದೆ.

ಈ ವಿಶ್ಲೇಷಣೆಯನ್ನು ಒಪ್ಪದೇ ಇರುವ ಜನರು ಕೂಡ ನಮ್ಮವರೇ. ಅವರ ಅಭಿಪ್ರಾಯಗಳು, ಅನಿಸಿಕೆಗಳು, ಆತಂಕಗಳನ್ನು ಸಹ ಗೌರವಿಸುತ್ತಾ, ಏಕೆಂದರೆ ಇಂದಿನ ಸಾಮಾಜಿಕ ರಾಜಕೀಯ ವ್ಯವಸ್ಥೆಯಲ್ಲಿ ಸತ್ಯದ ಹುಡುಕಾಟ ಅಷ್ಟು ಸುಲಭವಲ್ಲ. ಸಂಬಂಧಗಳನ್ನು ಉಳಿಸಿಕೊಂಡು ನೇರವಾಗಿ ವಿಷಯಗಳನ್ನು ಪ್ರಸ್ತಾಪ ಮಾಡುವುದು ಸಹ ತುಂಬಾ ಕಷ್ಟವಾಗಿದೆ. ಆದರೂ  ಅಭಿಪ್ರಾಯವನ್ನು ಹಂಚಿಕೊಳ್ಳುವುದು  ನಮ್ಮ ಕರ್ತವ್ಯ. ಭಿನ್ನ ಧ್ವನಿಗಳು ಸಹ ಸದಾ ಜೀವಂತವಾಗಿರಬೇಕು. ಅದೇ ಪ್ರಜಾಪ್ರಭುತ್ವದ ಬಹು ಮುಖ್ಯ ಲಕ್ಷಣ.

ಮೇಲೆ ಹೇಳಿದ ಎಲ್ಲವೂ ಅಪಾಯಕಾರಿಯೇ. ಆದರೆ ಎಲ್ಲಕ್ಕಿಂತ ಅತ್ಯಂತ ಅಪಾಯಕಾರಿ ಸರ್ವಾಧಿಕಾರಿ ಧೋರಣೆ. ಈ ಸರ್ವಾಧಿಕಾರಿ ಧೋರಣೆಯಲ್ಲಿ ವಂಶಾಡಳಿತ, ಭ್ರಷ್ಟಾಚಾರ, ಕೋಮು ದ್ರುವೀಕರಣ, ಹಣಬಲ, ತೋಳ್ಬಲ, ಜಾತಿ, ಧರ್ಮ ಎಲ್ಲವೂ ಒಳಗೊಂಡಿರುತ್ತದೆ. ಈ ಸರ್ವಾಧಿಕಾರ ಮೊದಲು ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ವಾಸ್ತವದಿಂದ ಅವರನ್ನು ದೂರಸರಿಸುತ್ತದೆ. ಸೈನ್ಯ ಪೊಲೀಸ್ ವ್ಯವಸ್ಥೆಯನ್ನು ಹೆಚ್ಚು ಬಲಿಷ್ಠ ಗೊಳಿಸುತ್ತದೆ. ಆರ್ಥಿಕ ವಿಷಯಗಳಲ್ಲಿ ಕಾರ್ಪೊರೇಟ್ ಸಂಸ್ಕೃತಿಯನ್ನು ಬಲಪಡಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಹೇರುತ್ತದೆ. ಸರ್ಕಾರಿ ನಿಯಮಗಳನ್ನೇ ತನಗೆ ಅನುಕೂಲವಾಗುವಂತೆ ಮಾರ್ಪಾಡಿಸುತ್ತದೆ. ಜನರನ್ನು ಪರೋಕ್ಷವಾಗಿ ಹೆದರಿಸುತ್ತದೆ.

ತನಗಾಗದವರ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ಜೈಲಿಗೆ ಹಾಕುತ್ತದೆ. ಚೀನಾದ ಸರ್ಕಾರವಿರಲಿ, ರಷ್ಯಾದಲ್ಲಿ ಆಗಲಿ, ಉತ್ತರ ಕೊರಿಯಾವೇ ಆಗಿರಲಿ, ಇರಾನ್ ಆಗಿರಲಿ, ಆಫ್ಘಾನಿಸ್ತಾನ ಆಗಿರಲಿ, ಇಲ್ಲೆಲ್ಲಾ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಕಷ್ಟವಾಗಿದೆ. ಆದರೆ ಭಾರತದಲ್ಲಿ ಆ ರೀತಿಯ ವಾತಾವರಣ ಇಲ್ಲದಿದ್ದರೂ ಭಾರತದ ಮಣ್ಣಿಗೆ ಈಗಿನ ಕೆಲವು ಧೋರಣೆಗಳು ಖಂಡಿತವಾಗಿಯೂ ಸರ್ವಾಧಿಕಾರಿ ಆಡಳಿತದ ಪ್ರಾರಂಭಿಕ ಲಕ್ಷಣಗಳು ಎಂದು ನಿಸ್ಸಂದೇಹವಾಗಿ ಹೇಳಬಹುದು.

ಇಂದಿರಾ ಗಾಂಧಿ ಕಾಲದಂತೆ ಸರ್ಕಾರಗಳನ್ನು ನೇರವಾಗಿ ವಜಾ ಮಾಡದಿದ್ದರೂ ಶಾಸಕರನ್ನು ಬೆದರಿಸುವ ಮೂಲಕ, ಹಣಕಾಸಿನ ಆಮಿಷ ಒಡ್ಡುವ ಮೂಲಕ, ಅಧಿಕಾರ ಮೋಹದ ಬಲೆಯಲ್ಲಿ ಸಿಲುಕಿಸುವ ಮೂಲಕ, ಒಟ್ಟಿನಲ್ಲಿ ನಾನಾ ರೀತಿಯಲ್ಲಿ ಸರ್ಕಾರಗಳನ್ನು ಬೀಳಿಸಿ ತಮ್ಮ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸುತ್ತಿರುವುದು ನಾವೆಲ್ಲರೂ ಗಮನಿಸಿರುತ್ತೇವೆ. ಹಾಗೆಯೇ ಎಂದೂ ಇಲ್ಲದಂತೆ ಸರ್ಕಾರ ಸಿಬಿಐ, ಈಡಿ, ತೆರಿಗೆ ಇಲಾಖೆಗಳನ್ನು ಸಹ ಕೆಲವೇ ನಿರ್ಧಿಷ್ಟ ಜನರ ಮೇಲೆ ದಾಳಿ ಮಾಡಲು ಕಳುಹಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇತ್ತೀಚೆಗೆ ಬಹಿರಂಗಗೊಂಡ ಚುನಾವಣಾ ಬಾಂಡ್ ವಿಷಯದಲ್ಲಿ ಸಹ ಅಕ್ರಮವನ್ನೇ ಸಕ್ರಮಗೊಳಿಸುವ ಆರ್ಥಿಕ ವ್ಯವಹಾರಗಳನ್ನು ಇಡೀ ದೇಶ ಗಮನಿಸಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಒಂದು ಹಂತದಲ್ಲಿ ನಿಯಂತ್ರಿಸುವ ಕೆಲಸವೂ ಆಗುತ್ತಿದೆ ಎಂದು ಕೆಲವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಹೇಳಿದ್ದರು. ಹಾಗೆಯೇ ಈಗ ದೇಶದ ಆರು ನೂರಕ್ಕೂ ಹೆಚ್ಚು ವಕೀಲರು ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿರುವುದು ಒಂದು ಸಾಕ್ಷಿಯಾಗಿದೆ.

ಹಾಗೆಯೇ ಪ್ರಜಾಪ್ರಭುತ್ವದ ಕಾವಲುಗಾರರಾಗಬೇಕಿದ್ದ ಮಾಧ್ಯಮ ಲೋಕವೂ ಸಹ ಎಲ್ಲ ವಿವೇಚನೆಯನ್ನು, ತನ್ನ ಕರ್ತವ್ಯವನ್ನು, ಜವಾಬ್ದಾರಿಯನ್ನು, ಪ್ರಾಮಾಣಿಕತೆಯನ್ನು, ಮರೆತು ಆಡಳಿತದ ಜನಪ್ರಿಯತೆಯ ಹಿಂದೆ ಸೇರಿ ಸರ್ಕಾರದ ತಪ್ಪುಗಳನ್ನು ಧೈರ್ಯವಾಗಿ, ನಿಷ್ಪಕ್ಷಪಾತವಾಗಿ ಹೇಳುವುದನ್ನೇ ನಿಲ್ಲಿಸಿವೆ. ಚುನಾವಣಾ ಆಯೋಗವನ್ನು ಸಹ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕೆಲಸವು ಆಗುತ್ತಿದೆ. 

ಈ ಚುನಾವಣಾ ಸಂದರ್ಭದಲ್ಲಿ, ದೇಶದ ಇರುವುದರಲ್ಲಿ ಪ್ರಾಮಾಣಿಕ ಮುಖ್ಯಮಂತ್ರಿ ಮತ್ತು ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಒಂದಷ್ಟು ಪ್ರಯೋಗಾತ್ಮಕ ಒಳ್ಳೆಯ ಕೆಲಸಗಳನ್ನು ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಿರುವುದು ಅಂತಹ ಉತ್ತಮ ನಡೆಯಲ್ಲ. ಹಾಗೆಯೇ ದೇಶದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಐಟಿ ಇಲಾಖೆ ಅವರ ಬ್ಯಾಂಕ್ ಅಕೌಂಟ್ ಗಳನ್ನು ಈ ಸಂದರ್ಭದಲ್ಲಿ ನಿಷೇಧಿಸಿರುವುದು ಯುದ್ಧಕ್ಕೆ ಮೊದಲೇ ಶತ್ರುಗಳನ್ನು ಕಟ್ಟಿ ಹಾಕಿದಂತಾಗುತ್ತದೆ. ಕಾಂಗ್ರೆಸ್ ತನ್ನ ಲೆಕ್ಕಪತ್ರದಲ್ಲಿ ತಪ್ಪು ಮಾಡಿದ್ದರೆ ಅದಕ್ಕೆ ವಿಧಿಸಿರುವ ದಂಡವನ್ನು ಕಾಂಗ್ರೆಸ್ ಆಸ್ತಿಯಲ್ಲಿ ವಶಪಡಿಸಿಕೊಳ್ಳುವ ಸಾಧ್ಯತೆಯಿದ್ದರೂ, ಚುನಾವಣಾ ಸಂದರ್ಭದಲ್ಲಿ ಇಡೀ ಅಕೌಂಟ್ ನಿಷೇಧಿಸುವುದು ಸಹ ಸರ್ವಾಧಿಕಾರಿ ಧೋರಣೆಯನ್ನದೇ ವಿಧಿ ಇಲ್ಲ.

ನ್ಯಾಯಾಧೀಶರ ವರ್ಗಾವಣೆ ವಿಷಯದಲ್ಲೂ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಅನೇಕ ಕಾರ್ಪೊರೇಟ್ ಸಂಸ್ಥೆಗಳು ಸಹ ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡು ಮುನ್ನಡೆಯುತ್ತಿವೆ. ದೇಶದ ಅತ್ಯಂತ ಪ್ರಖ್ಯಾತ ಸಾಧಕರು ಸಹ ಸರ್ಕಾರ ಬೀಸಿದ ಪ್ರಶಸ್ತಿ, ಸನ್ಮಾನಗಳ ಬಲೆಯೊಳಗೆ ಸಿಲುಕಿರುವುದು ಸಹ ಗಮನಿಸುತ್ತಿದ್ದೇವೆ. ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಜಕ್ಕೂ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಸ್ವಲ್ಪಮಟ್ಟಿಗೆ ಬಹಿರಂಗವಾಗಿಯೇ ಕಾಣಿಸುತ್ತಿದೆ. ಇಲ್ಲಿ ಧರ್ಮದ ಆಧಾರದ ಮೇಲೆ ಅಥವಾ ಆರ್ಥಿಕ ಅಭಿವೃದ್ಧಿಯ ಆಧಾರದ ಮೇಲೆ ಅಥವಾ ಭದ್ರತೆಯ ಆಧಾರದ ಮೇಲೆ ವ್ಯಕ್ತಿ ಒಂದು ಪಕ್ಷವನ್ನು ಬೆಂಬಲಿಸುವುದು ಬೇರೆ. ಆದರೆ ಅದೇ ಸರ್ವಾಧಿಕಾರವಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನು ಗಮನಿಸದಿದ್ದರೆ ಮುಂದೆ ನಾವು ಪಶ್ಚಾತಾಪ ಪಡಬೇಕಾಗುತ್ತದೆ. ಹಿಂದೆ ನಡೆದ ಅನೇಕ ತಪ್ಪುಗಳನ್ನೇ ಉದಾಹರಣೆ ಕೊಡುತ್ತಾ ಹೀಗೆ  ಮುಂದೆ ತಪ್ಪುಗಳನ್ನು ಮಾಡುವುದಕ್ಕೆ ಅದು ಸಮರ್ಥನೆಯಾಗಬಾರದು.

ಚುನಾವಣೆಯಲ್ಲಿ ಯಾರೋ ಒಬ್ಬರು ಗೆಲ್ಲುತ್ತಾರೆ, ಮತ್ತೊಬ್ಬರು ಸೋಲುತ್ತಾರೆ. ಇಬ್ಬರೂ ನಮ್ಮವರೇ. ಆದರೆ ಕೆಲವು ಅಪಾಯಕಾರಿ ತಪ್ಪುಗಳನ್ನೇ ಮುಂದೆ ಮಾಡುತ್ತಾ ಅತ್ಯಂತ ಆಘಾತಕಾರಿ ಅಪಾಯವನ್ನು ನಿರ್ಲಕ್ಷಿಸುವುದು ಭವಿಷ್ಯದಲ್ಲಿ ತುಂಬಾ ಕೆಟ್ಟ ಅನುಭವವಾಗಬಹುದು. ಇದು ಯಾವುದೋ ಒಂದು ಪಕ್ಷದ ಪರವಾದ ಅಥವಾ ವಿರುದ್ದವಾದ ಅಭಿಪ್ರಾಯ ಎಂದು ಆರೋಪಿಸಬಹುದು. ಆ ಸ್ವಾತಂತ್ರ್ಯ ನಿಮಗಿದೆ. ಆದರೆ ಅದನ್ನು ಮೀರಿ ದಯವಿಟ್ಟು ದೇಶ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹಿತದೃಷ್ಟಿಯಿಂದ ಈ ವಿಷಯವನ್ನು ಪರಿಶೀಲಿಸುವುದು ಆರೋಗ್ಯಕರ ನಿಲುವಾಗಿರುತ್ತದೆ.

-ವಿವೇಕಾನಂದ. ಎಚ್. ಕೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ