ಭಾರತದ ಬಾರ್ಲಿಗೆ ಜಪಾನಿ ಕಂಪೆನಿಯ ಪೇಟೆಂಟ್

ಭಾರತದ ಬಾರ್ಲಿಗೆ ಜಪಾನಿ ಕಂಪೆನಿಯ ಪೇಟೆಂಟ್

ಜಗತ್ತಿನ ಅತಿ ದೊಡ್ಡ ಮೂರು ಬಿಯರ್ ಉತ್ಪಾದಕ ಕಂಪೆನಿಗಳಲ್ಲಿ ಒಂದಾದ ಜಪಾನಿನ ಸಪ್ಪೊರೊ ಕಂಪೆನಿ ಲಾಭ ಬಾಚಿಕೊಳ್ಳುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ?
ಹಾಗೆ ಲಾಭ ಮಾಡಿಕೊಳ್ಳಲು ಅದು ಬಳಸುತ್ತಿರುವುದು ಭಾರತದ ಬಾರ್ಲಿಯನ್ನು – ಉತ್ತರಪ್ರದೇಶದ ಪೂರ್ವ ಗಡಿಯಲ್ಲಿರುವ ಬಲ್ಲಿಯಾ ಜಿಲ್ಲೆಯ ಸಣ್ಣರೈತರು ಸುಮಾರು ಒಂದು ನೂರು ವರುಷಗಳಿಂದ ಬೆಳೆಸಿ, ಸುಧಾರಿಸಿ, ಕಾಪಾಡಿದ ಬಾರ್ಲಿಯನ್ನು. ಆದರೆ ಒಂದು ಶತಮಾನಕ್ಕಿಂತ ಅಧಿಕ ಅವಧಿಯಲ್ಲಿ ಆ ಬಾರ್ಲಿ ತಳಿಯನ್ನು ಜೋಪಾನವಾಗಿ ರಕ್ಷಿಸಿದ ಸಣ್ಣರೈತರಿಗೆ ಇದಕ್ಕಾಗಿ ಕಿಂಚಿತ್ ರಾಯಧನ ಪಾವತಿಯಾಗಿಲ್ಲ. ಅದು ಹಾಗಿರಲಿ, ಇದೀಗ ಆ ಬಾರ್ಲಿ ತಳಿಯು ಸಪ್ಪೊರೊ ಕಂಪೆನಿಯ ಬೌದ್ಧಿಕ ಸೊತ್ತಾಗಿದೆ!
ಮಾದಕ ಪೇಯ ಬಿಯರಿನ ಮಾಲ್ಟಿಂಗ್ ಗುಣಮಟ್ಟವನ್ನು ಹೆಚ್ಚಿಸಿ, ಅದರ “ಬಳಸಲು ಯೋಗ್ಯ ಅವಧಿ” (ಶೆಲ್ಫ್ ಲೈಫ್)ಯನ್ನು ಹೆಚ್ಚಿಸುವ ಜೀನಿಗೆ ಸಪ್ಪೊರೋ ಕಂಪೆನಿಯು ಪೇಟೆಂಟ್ ಪಡೆದುಕೊಂಡಿದೆ. ಜಾಗತಿಕ ದೈತ್ಯ ಧಾನ್ಯ ಕಂಪೆನಿ ಕಾರ್ಗಿಲ್ ಮತ್ತು ಕೆನಡಾದ ಸಾಸ್ಕತಚೆವಾನ್ ವಿಶ್ವವಿದ್ಯಾಲಯದ ಜೊತೆಯಲ್ಲಿ ಸಪ್ಪೊರೊ ಕಂಪೆನಿ ಕೆಲಸ ಮಾಡುತ್ತಿದೆಯೆಂದು ತಿಳಿದು ಬಂದಿದೆ – ಆ ಜೀನ್ ಒಳಗೊಂಡ ಖಾಸಗಿ ಮಾಲೀಕತ್ವದ ಬಾರ್ಲಿ ತಳಿಗಳನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ.
ಪೊಲಾರ್ ಸ್ಟಾರ್ ಎಂಬ ಹೆಸರಿನ ಆ ತಳಿಯನ್ನು ಸಪ್ಪೊರೊ ಕಂಪೆನಿಯ ಬಿಯರ್ ಉತ್ಪಾದಕ ಘಟಕಗಳಿಗಾಗಿ ಕೆನಡಾದಲ್ಲಿ ಬೆಳೆಯಲಾಗುತ್ತಿದೆ. ಬೃಹತ್ ಕಂಪೆನಿಗಳು ಜೈವಿಕ ಸಂಪನ್ಮೂಲಗಳ ಅನ್ಯಾಯದ ಬಳಕೆ ಮಾಡುವುದದ ಬಗ್ಗೆ ಸಂಶೋಧನೆ ನಡೆಸುವ ಎಡ್ವರ್ಡ್ ಹ್ಯಾಮ್ಮೊಂಡ್ ಎಂಬ ಪರಿಣತರು ಈ ಪ್ರಕರಣದ ಬಗ್ಗೆ ತಿಳಿಸಿದ ಅಭಿಪ್ರಾಯ ಹೀಗಿದೆ: ಬಿಯರ್ ಉತ್ಪಾದಕರ ಅಚ್ಚುಮೆಚ್ಚಿನ ಈ ಜೀನ್ ಬೆಳಕಿಗೆ ಬಂದದ್ದು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ರೈತರ ಮತ್ತು ಸರಕಾರಿ ಸಂಸ್ಥೆಗಳ ವಿಜ್ನಾನಿಗಳ ಪ್ರಯತ್ನದಿಂದಾಗಿ.
ಪೆಬ್ರವರಿ ೩ರಿಂದ ಫೆಬ್ರವರಿ೭, ೨೦೧೪ರ ತನಕ “ಜಾಗತಿಕ ಬೌದ್ಧಿಕ ಸೊತ್ತಿನ ಸಂಸ್ಥೆ”ಯ ಬೌದ್ಧಿಕ ಸೊತ್ತು ಮತ್ತು ಜೈವಿಕ ಸಂಪನ್ಮೂಲಗಳ ಅಂತರ-ಸರಕಾರಿ ಸಮಿತಿಯ ಸಭೆಯಲ್ಲಿ ಮಂಡಿಸಿದ ಪ್ರಬಂಧದಲ್ಲಿ, ಹ್ಯಾಮ್ಮೊಂಡ್ ಅವರು ಈ ವಿಷಯ ಬರೆದಿದ್ದಾರೆ: ತನ್ನ ಪೇಟೆಂಟಿನ ಅರ್ಜಿಯ ಹಕ್ಕುಸಾಧನೆಯಲ್ಲಿ ಸಪ್ಪೊರೊ ಕಂಪೆನಿಯು ಬಲ್ಲಿಯಾದ ಬಾರ್ಲಿಯ ಬಗ್ಗೆ ಉಲ್ಲೇಖಿಸಿಲ್ಲ. ಆದರೆ, ಉತ್ತರಪ್ರದೇಶದಲ್ಲಿ ತಲೆತಲಾಂತರದಿಂದ ಬಾರ್ಲಿ ಬೆಳೆಯುವ ಈ ಜಿಲ್ಲೆಯ ತಳಿಗಳಿಂದಲೇ ಆ ಜೀನ್ ಪಡೆಯಲಾಯಿತು ಎಂಬ ಬಗ್ಗೆ ಅನುಮಾನವೇ ಇಲ್ಲ.
ಆ ಜೀನ್ ಬಿಯರ್ ಉತ್ಪಾದಕರಿಗೆ ಬಹಳ ಮುಖ್ಯ. ಅದಕ್ಕೆ ಕಾರಣ: ಬಾರ್ಲಿಯ ಬಹುಪಾಲು ತಳಿಗಳಲ್ಲಿ ಲಿಪೊಗ್ಸೈಜಿನೇಸ್-೧ ಅಥವಾ ಎಲ್ಒಎಕ್ಸ್-೧ ಎಂಬ ಕಿಣ್ವ ಇದೆ. ಇದರಿಂದಾಗಿ ಬಿಯರ್ ಕುಡಿದವರಿಗೆ ಮರುದಿನವೂ ಅಮಲು (ಹ್ಯಾಂಗ್ ಓವರ್) ಇರುತ್ತದೆ. ದೀರ್ಘ ಕಾಲ ಬಿಯರ್ ಶೇಖರಿಸಿಟ್ಟರೆ ಅದರ ರುಚಿ ಸಪ್ಪೆಯಾಗಲು ಇದೇ ಎಲ್ಒಎಕ್ಸ್-೧ ಕಾರಣ. ಆದರೆ, ಭಾರತ ಮೂಲದ ತಳಿಗಳಲ್ಲಿ ಎಲ್ಒಎಕ್ಸ್-೧ ಕಿಣ್ವದ ಜೀನ್ ಇಲ್ಲ. ಇದರಿಂದಾಗಿಯೇ ಬಿಯರಿನ ಮಾಲ್ಟಿಂಗ್ ಗುಣಮಟ್ಟ ಉತ್ತಮ ಹಾಗೂ ಶೆಲ್ಫ್ ಲೈಫ್ ಜಾಸ್ತಿ ಆಗುತ್ತದೆ.
ಜೀನ್ ಬ್ಯಾಂಕುಗಳ ಸ್ಯಾಂಪಲುಗಳಲ್ಲಿ ಕಡಿಮೆ ಎಲ್ಒಎಕ್ಸ್ ತಳಿಗಾಗಿ ಸಪ್ಪೊರೊ ಕಂಪೆನಿ ಹುಡುಕಾಡಿತ್ತು. ಆಗ ಎಲ್ಒಎಕ್ಸ್ ಇಲ್ಲದಿರುವ ಈ ತಳಿ ಪತ್ತೆಯಾಯಿತು. ಅನಂತರ ಜಪಾನಿನ ಒಕಾಯಾಮಾ ವಿಶ್ವವಿದ್ಯಾಲಯದಲ್ಲಿದ್ದ ಭಾರತೀಯ ಬಾರ್ಲಿ ಬೀಜಗಳಿಂದ ಈ ಅತ್ಯುತ್ತಮ ತಳಿಯನ್ನು ಸಪ್ಪೊರೊ ಕಂಪೆನಿ ಆಯ್ಕೆ ಮಾಡಿತು. ಆದರೆ ಜೀನ್ ಬ್ಯಾಂಕಿನಲ್ಲಿ ಈ ತಳಿಯ ಗುರುತಿನ ಸಂಖ್ಯೆ ಒಯುಐ೦೦೩ ಅಥವಾ ಎಸ್ಬಿಒಯು೩ ಎಂದಷ್ಟೇ ದಾಖಲಾಗಿದೆ. ಹಾಗಿರುವಾಗ, ಜಪಾನಿನ ಬಿಯರ್, ಕೆನಡಾದ ಒಪ್ಪಂದ ಕೃಷಿ ಮತ್ತು ಜಾಗತಿಕ ಬೀಜ ವ್ಯಾಪಾರದ ಈ ಜಾಲದಲ್ಲಿ ಬಲ್ಲಿಯಾ ಜಿಲ್ಲೆಯ ರೈತರ ಪರಿಶ್ರಮ ಹೇಗೆ ಕಂಡು ಬರುತ್ತದೆ?
ಈ ಪ್ರಶ್ನೆಯನ್ನು ಉತ್ತರಿಸಬೇಕಾದರೆ ಚರಿತ್ರೆಯ ಪುಟಗಳನ್ನು ತಿರುವಬೇಕು. ಉತ್ತರಪ್ರದೇಶದ ರೈತರ ಬಾರ್ಲಿ ತಳಿಗಳನ್ನು ಅಧ್ಯಯನ ಮಾಡಿದ್ದ ಭಾರತದ ತಳಿ ವಿಜ್ನಾನಿಗಳು ೨೦ನೇ ಶತಮಾನದ ಮಧ್ಯಭಾಗದಲ್ಲಿ ಕೆಲವು ತಳಿಗಳನ್ನು ಆಯ್ಕೆ ಮಾಡಿದ್ದರು. ಎಲ್ಒಎಕ್ಸ್ ಜೀನ್ ಇಲ್ಲದ ತಳಿಯ ಮೂಲ ಅದರಲ್ಲಿದೆ ಎಂದು ಅಮೇರಿಕಾದ ಎಡ್ವರ್ಡ್ ಹ್ಯಾಮ್ಮೊಂಡ್ ಪತ್ತೆ ಮಾಡಿದ್ದಾರೆ. ತಮ್ಮ ವೈಜ್ನಾನಿಕ ಮಾಹಿತಿ ಪ್ರಕಟಣೆಗಳಲ್ಲಿ ಸಪ್ಪೊರೊ ಕಂಪೆನಿಯ ವಿಜ್ನಾನಿಗಳು ಆ ಜೀನಿನ ಮೂಲ ಭಾರತೀಯ ತಳಿ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎನ್ನುತ್ತಾರೆ ಹ್ಯಾಮ್ಮೊಂಡ್.
ಉತ್ತರಪ್ರದೇಶದಲ್ಲಿ ಬಾರ್ಲಿ ತಳಿಗಳನ್ನು ಸುಧಾರಿಸುವ ಒಂದು ಸಂಶೋಧನಾ ಕಾರ್ಯಕ್ರಮ ೧೯೧೬ರಲ್ಲೇ ಆರಂಭವಾಗಿತ್ತು. ಸ್ಥಳೀಯ ಬಾರ್ಲಿ ತಳಿಗಳಿಂದ ಉತ್ತಮ ತಳಿಗಳನ್ನು ಆಯುವ ಮೂಲಕ ಸುಧಾರಿತ ತಳಿಗಳನ್ನು ಅಭಿವೃದ್ಧಿ ಪಡಿಸುವುದು ಅದರ ಉದ್ದೇಶವಾಗಿತ್ತು (ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತೀಯ ಬಾರ್ಲಿ ತಳಿಗಳ ಸಂಶೋಧನೆ ಬಗ್ಗೆ ೧೯೮೧ರಲ್ಲಿ ಮಂಡಿಸಲಾದ ವೈಜ್ನಾನಿಕ ಪ್ರಬಂಧದಲ್ಲಿ ಈ ಮಾಹಿತಿ ಇದೆ.) ಆ ಸಂಶೋಧನಾ ಕಾರ್ಯಕ್ರಮದ ಫಲ: ಉತ್ತಮ ಮಾಲ್ಟಿಂಗ್ ಗುಣಮಟ್ಟದ ಬಾರ್ಲಿ ತಳಿಗಳನ್ನು ಗುರುತಿಸಿದ್ದು. ಇವನ್ನು ಬಿತ್ತನೆಗಾಗಿ ೧೯೫೬ರಲ್ಲೇ ಶಿಫಾರಸ್ ಮಾಡಲಾಗಿತ್ತು.
ಮುಂದೆ ನಡೆದದ್ದೆಲ್ಲ ವ್ಯಥೆಯ ಕತೆ: ಆ ತಳಿಗಳನ್ನು ಹಲವಾರು ದೇಶಗಳಿಗೆ ಪುಕ್ಕಟೆಯಾಗಿ ಒದಗಿಸಲಾಯಿತು. ಯಾಕೆಂದರೆ, ಆಗ ಜೈವಿಕ ವಸ್ತುಗಳ ಬೌದ್ಧಿಕ ಸೊತ್ತು ಹಕ್ಕು ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಸುಮಾರು ೩೦ ವರುಷಗಳ ಮುಂಚೆ, ಸಸ್ಯ ಜೈವಿಕ ಸಂಪನ್ಮೂಲಗಳು ಮಾನವ ಜನಾಂಗದ ಸೊತ್ತು ಎಂದೇ ಭಾವಿಸಲಾಗಿತ್ತು. ಹೀಗೆ ಕೈಬದಲಾದ ಬೀಜ ಹಾಗೂ ಸಸ್ಯಗಳು ಸಂಶೋಧನೆ ಮತ್ತು ತಳಿಶಾಸ್ತ್ರದ ಮೂಲಕ ಇಡೀ ಮಾನವ ಜನಾಂಗದ ಒಳಿತಿಗಾಗಿ ಬಳಕೆಯಾಗುತ್ತವೆ ಎಂದು ನಂಬಲಾಗಿತ್ತು.
ಆದರೆ, ಕಳೆದ ೩೦ ವರುಷಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈ ಅವಧಿಯಲ್ಲಿ ವಿಕಾಸಶೀಲ ದೇಶಗಳಿಗೆ ಒಂದು ವಿಷಯ ಸ್ಪಷ್ಟವಾಗಿದೆ: ಮಾನವ ಜನಾಂಗದ ಸೊತ್ತು ಎಂಬುದು ತೀರಾ ಬಾಲಿಶ ಕಲ್ಪನೆ. ಯಾಕೆಂದರೆ, ಮುಂದುವರಿದ ದೇಶಗಳು ಮತ್ತು ಅಲ್ಲಿನ ಕಂಪೆನಿಗಳು, ಈ ವಿಕಾಸಶೀಲ ದೇಶಗಳ ಪ್ರಾಕೃತಿಕ ಸಂಪತ್ತನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳ ತೊಡಗಿದವು. ಹಾಗೆ ಮಾಡುವಾಗ, ಆ ಬಳಕೆಗಾಗಿ ಒಪ್ಪಿಗೆಯನ್ನು ಪಡೆಯುತ್ತಿರಲಿಲ್ಲ. ಮಾತ್ರವಲ್ಲ, ಆ ಪ್ರಾಕೃತಿಕ ಸೊತ್ತುಗಳ ಮಾಲೀಕರಿಗೆ ಕಿಂಚಿತ್ ಪರಿಹಾರವನ್ನೂ ಪಾವತಿಸುತ್ತಿರಲಿಲ್ಲ.
ಇಂತಹ ಶೋಷಣೆ ತಡೆಗಟ್ಟಲಿಕ್ಕಾಗಿ ೨೦೦೧ರಲ್ಲಿ ಜ್ಯಾರಿಯಾದ ಮೊದಲ ಒಪ್ಪಂದ: ಆಹಾರ ಮತ್ತು ಕೃಷಿಗಾಗಿ ಸಸ್ಯ ಜೈವಿಕ ಸಂಪನ್ಮೂಲಗಳ ಅಂತರಾಷ್ಟ್ರೀಯ ಒಪ್ಪಂದ. ಆದರೆ, ಸಪ್ಪೊರೊ ಕಂಪೆನಿಯು ಜಪಾನಿನ ಒಂದು ಜೀನ್ ಬ್ಯಾಂಕಿನಿಂದ ಬಲ್ಲಿಯಾದ ಬಾರ್ಲಿಯ ತಳಿ ಪಡೆದಾಗ, ಜಪಾನ್ ದೇಶವು ಆ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ.
ಈಗ, ಸಪ್ಪೊರೊ ಕಂಪೆನಿಯು ಆ ಜೀನ್ ಮತ್ತು ಅದರ ಬಳಕೆಗಳಿಗೆ ಪೇಟೆಂಟ್ ಪಡೆಯುತ್ತಿದೆ. ಭಾರತ ಅಥವಾ ಬಲ್ಲಿಯಾದ ರೈತರು ಈಗೇನು ಮಾಡಲು ಸಾಧ್ಯ? ಏನೂ ಮಾಡುವಂತಿಲ್ಲ. ಈ ಪ್ರಕರಣದಿಂದ, ಜೈವಿಕ ವೈವಿಧ್ಯದ ರಕ್ಷಣೆಗಾಗಿ ಮಾಡಿರುವ ಅಂತರಾಷ್ಟ್ರೀಯ ಒಪ್ಪಂದಗಳ ಮಿತಿಗಳು ಹಾಗೂ ದುರ್ಬಲತೆಗಳು, ಈಗಲಾದರೂ ನಮಗೆ ಅರ್ಥವಾಗಬೇಕು.
ಚಿತ್ರ ಕೃಪೆ: ವಿಕಿಮೀಡಿಯಾ