ಭಾರತದ ಮೇಲೆ ಮತ್ತೊಮ್ಮೆ ಕುಲಾಂತರಿ ಬೆಳೆಗಳ ಗುಮ್ಮ

ಭಾರತದ ಮೇಲೆ ಮತ್ತೊಮ್ಮೆ ಕುಲಾಂತರಿ ಬೆಳೆಗಳ ಗುಮ್ಮ

ಕುಲಾಂತರಿ ಬೆಳೆಗಳ ವಿರುದ್ದ ಭಾರತದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಕಾನೂನು ಸಂಘರ್ಷಗಳು ನಡೆದ ಇತಿಹಾಸವೇ ಇದೆ. ಕುಲಾಂತರಿ ಬದನೆಕಾಯಿಯನ್ನು ದೇಶಕ್ಕೆ ಪರಿಚಯಿಸುವುದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ೨೦೧೦ಲ್ಲಿ ಕೇಂದ್ರ ಸರ್ಕಾರವೇ ಅದಕ್ಕೆ ತಡೆಯೊಡ್ಡಿತ್ತು. ತದನಂತರದಲ್ಲಿ ಕಾನೂನು ಸಮರದ ಕಾರಣದಿಂದಾಗಿ ಕುಲಾಂತರಿ ಸಾಸಿವೆಯ ಪರಿಚಯಕ್ಕೂ ಬ್ರೇಕ್ ಬಿದ್ದಿತ್ತು. ಇದೀಗ ಭಾರತ- ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಮಹೂರ್ತ ಕೂಡಿಬರುತ್ತಿದೆ ಎನ್ನುತ್ತಿರುವಾಗಲೇ, ಮತ್ತೊಮ್ಮೆ ಕುಲಾಂತರಿ ಗುಮ್ಮ ದೇಶದ ರೈತಾಪಿ ವರ್ಗವನ್ನು ಕಾಡಲು ಆರಂಭಿಸಿದೆ. ವ್ಯಾಪಾರ ಒಪ್ಪಂದದ ಭಾಗವಾಗಿ ಕೈಗಾರಿಕಾ ಕ್ಷೇತ್ರದ ವಿಚಾರಗಳಲ್ಲಿ ಎರಡೂ ದೇಶಗಳ ನಡುವೆ ಒಮ್ಮತವೇನೋ ಮೂಡಿದೆ. ಆದರೆ ಕುಲಾಂತರಿ ಬೆಳೆಗಳನ್ನು ಒಳಗೊಂಡ ಕೃಷಿ ಉತ್ಪನ್ನಗಳ ಕುರಿತು ಉಭಯ ದೇಶಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಅಮೆರಿಕ ಮೂಲದ ಕೆಲವು ಮಾಧ್ಯಮ ಸಂಸ್ಥೆಗಳು ಭಾರತವು ಒತ್ತಡಕ್ಕೆ ಮಣಿದು ಕೆಲವೊಂದು ಕುಲಾಂತರಿ ಬೆಳೆಗಳಿಗೆ ಅನುಮತಿ ನೀಡಬಹುದು ಎಂದು ವರದಿ ಮಾಡುತ್ತಿವೆ. ಇದು ಭಾರತದ ಕೃಷಿ ವಲಯದಲ್ಲಿ ಆತಂಕ ಸೃಷ್ಟಿಗೆ ಕಾರಣವಾಗುತ್ತಿದೆ. ಅದು ಸಹಜ ಕೂಡ.

ಅಮೆರಿಕ ಹಾಗೂ ಭಾರತದ ಕೃಷಿ ವ್ಯವಸ್ಥೆಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಭಾರತದ ರೈತರ ಸರಾಸರಿ ಹಿಡುವಳಿ ಪ್ರಮಾಣ ಎರಡೂವರೆ ಎಕರೆ. ಆದರೆ ಅಮೆರಿಕದಲ್ಲಿ ನೂರಾರು ಎಕರೆಯಷ್ಟಿದೆ. ಭಾರತದಲ್ಲಿ ಯಂತ್ರೋಪಕರಣಗಳ ಬಳಕೆ ವ್ಯಾಪಕವಾಗಿಲ್ಲ. ಅಮೆರಿಕದಲ್ಲಿ ಯಂತ್ರೋಪಕರಣ, ತಂತ್ರ ಜ್ಞಾನ, ಕೃತಕ ಬುದ್ದಿಮತ್ತೆ ಕೃಷಿ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿದೆ. ಭಾರತದಲ್ಲಿ ಕೃಷಿ ಕ್ಷೇತ್ರದಿಂದ ಜಿಡಿಪಿಗೆ ಶೇ.೧೬ರಷ್ಟು ಕೊಡುಗೆ ಇದ್ದರೂ, ೧೪೦ ಕೋಟಿ ಜನಸಂಖ್ಯೆ ಪೈಕಿ ಆ ಕ್ಷೇತ್ರದ ಅರ್ಧದಷ್ಟು ಜನರಿಗೆ ಉದ್ಯೋಗ ಕೊಟ್ಟಿದೆ. ಕುಲಾಂತರಿ ಆಹಾರ ಉತ್ಪನ್ನಗಳಿಗೆ ಭಾರತದಲ್ಲಿ ಸದ್ಯ ಅವಕಾಶವಿಲ್ಲ. ಕುಲಾಂತರಿ ಬೆಳೆಗಳು ಬಂದರೆ ಭಾರತದ ಬೀಜ ಸಂಸ್ಕೃತಿಯನ್ನೇ ನುಂಗಿ ನೀರು ಕುಡಿಯಲಿದೆ ಎಂಬ ಆತಂಕ ಮೊದಲಿನಿಂದಲೂ ಇದೆ.

ಹೀಗಾಗಿ ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಧಾವಂತದಲ್ಲಿ ಅತಿ ಹೆಚ್ಚು ಜನರ ಜೀವನಾಧಾರವಾಗಿರುವ ಕೃಷಿಗೆ ಸಂಬಂಧಿಸಿದಂತೆ ಆತುರದ ಕ್ರಮ ಸಲ್ಲದು. ಕುಲಾಂತರಿ ತಳಿ, ಅದರಿಂದ ದೇಶದ ಸಣ್ಣ ರೈತರ ಮೇಲಾಗುವ ಪರಿಣಾಮಗಳ ಕುರಿತು ಚರ್ಚೆ, ಅಧ್ಯಯನ ಸಮಾಲೋಚನೆ ನಡೆಯಬೇಕಿದೆ. ಏನೇ ಹೆಜ್ಜೆ ಇಡುವ ಮೊದಲು ರೈತರ ಕಳವಳವನ್ನೂ ಆಲಿಸಬೇಕಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೫-೦೭-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ