ಭಾರತದ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆಯೇ?

ಭಾರತದ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆಯೇ?

ಹೌದು, ಭಾರತದ ಸಂವಿಧಾನವನ್ನು ಬರೆಯಲು ಯಾವುದೇ ಮುದ್ರಣ ಸಾಧನವನ್ನು ಬಳಸದೆ ಇಡೀಯಾಗಿ ಕೈಯಲ್ಲಿ ಬರೆಯಲಾಗಿದೆ. ದೆಹಲಿಯ ನಿವಾಸಿ ಪ್ರೇಮ್ ಬಿಹಾರಿ ನಾರಾಯಣ ರೈಜಾಡಾ ಅವರು ಸಂವಿಧಾನದ ಈ ಬೃಹತ್ ಪುಸ್ತಕವನ್ನು ಇಟಾಲಿಕ್ ಶೈಲಿಯಲ್ಲಿ ಇಡೀಯಾಗಿ ತಮ್ಮ ಕೈಗಳಿಂದ ಬರೆದಿದ್ದಾರೆ.

ಪ್ರೇಮ್ ಬಿಹಾರಿ ಆ ಕಾಲದ ಪ್ರಸಿದ್ಧ ಕ್ಯಾಲಿಗ್ರಫಿ ಬರಹಗಾರರಾಗಿದ್ದರು. ಅವರು ದೆಹಲಿಯ ಹೆಸರಾಂತ ಕೈಬರಹ ಸಂಶೋಧಕರ ಕುಟುಂಬದಲ್ಲಿ 16 ಡಿಸೆಂಬರ್ 1901 ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಅವರು ತಮ್ಮ ಅಜ್ಜ ರಾಮ್ ಪ್ರಸಾದ್ ಸಕ್ಸೇನಾ ಮತ್ತು ಚಿಕ್ಕಪ್ಪ ಚತುರ್ ಬಿಹಾರಿ ನಾರಾಯಣ್ ಸಕ್ಸೇನಾರ ನಿಗರಾಣಿಯಲ್ಲಿ ಬೆಳೆದರು. ಅವರ ಅಜ್ಜ ರಾಮ್ ಪ್ರಸಾದ್ ಒಬ್ಬ ಪ್ರಸಿದ್ಧ ಕ್ಯಾಲಿಗ್ರಾಫರ್ ಆಗಿದ್ದರು. ಅವರು ಪರ್ಷಿಯನ್ ಮತ್ತು ಇಂಗ್ಲಿಷ್ ಭಾಷಾ ಪಂಡಿತರಾಗಿದ್ದರು. ಅವರು ಇಂಗ್ಲಿಷ್ ಸರ್ಕಾರದ ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಪರ್ಷಿಯನ್ ಭಾಷೆಯನ್ನು ಕಲಿಸುತ್ತಿದ್ದರು.

ಅವರ ಅಜ್ಜ ಚಿಕ್ಕಂದಿನಿಂದಲೂ ಪ್ರೇಮ್ ಬಿಹಾರಿಗೆ ತಮ್ಮ ಸುಂದರವಾದ ಕೈಬರಹದ ಮೂಲಕ ಕ್ಯಾಲಿಗ್ರಫಿ ಕಲೆಯನ್ನು ಕಲಿಸುತ್ತಿದ್ದರು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಪ್ರೇಮ್ ಬಿಹಾರಿ ತನ್ನ ಅಜ್ಜನಿಂದ ಕಲಿತ ಕ್ಯಾಲಿಗ್ರಫಿ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ಕ್ರಮೇಣ ಅವರ ಹೆಸರು ಸುಂದರವಾದ ಕೈಬರಹಕ್ಕೆ ಜನಪ್ರಿಯವಾಗ ಹತ್ತಿತು. 

ನಮ್ಮ ಭಾರತದ ಸಂವಿಧಾನದ ಕರಡು ಪ್ರತಿ ಮುದ್ರಣಕ್ಕೆ ಸಿದ್ಧವಾದಾಗ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಪ್ರೇಮ್ ಬಿಹಾರಿ ಅವರನ್ನು ಕರೆಸಿದ್ದರು. ನೆಹರೂ ಅವರು ಸಂವಿಧಾನವನ್ನು ಮುದ್ರಣದ ಬದಲು ಇಟಾಲಿಕ್ ಅಕ್ಷರಗಳಲ್ಲಿ ಕೈಬರಹದ ಕ್ಯಾಲಿಗ್ರಫಿಯಲ್ಲಿ ಬರೆಸಲು ಬಯಸಿದ್ದರು.ಅದಕ್ಕಾಗಿಯೇ ಅವರು ಪ್ರೇಮ್ ಬಿಹಾರಿ ಅವರನ್ನು ಸಂಪರ್ಕಿಸಿ ಸಂವಿಧಾನವನ್ನು ಇಟಾಲಿಕ್ ಶೈಲಿಯಲ್ಲಿ ಕೈಬರಹ ಮಾಡಲು ಮನವಿ ಮಾಡಿದರು ಮತ್ತು ಅದಕ್ಕೆ ಎಷ್ಟು ಶುಲ್ಕವನ್ನು ತೆಗೆದುಕೊಳ್ಳುತ್ತೀರಿ ? ಎಂದು ಕೇಳಿದರು.

ಪ್ರೇಮ್ ಬಿಹಾರಿ ನೆಹರೂಜಿಗೆ “ಒಂದು ಪೈಸೆಯೂ ತೆಗೆದುಕೊಳ್ಳುವುದಿಲ್ಲ, ದೇವರ ದಯೆಯಿಂದ ನಾನು ಎಲ್ಲವನ್ನು ಪಡೆದುಕೊಂಡಿದ್ದೇನೆ ಮತ್ತು ನನ್ನ ಜೀವನದಲ್ಲಿ ನಾನು ಸಾಕಷ್ಟು ಸಂತೋಷವಾಗಿದ್ದೇನೆ" ಎಂದು ಉತ್ತರಿಸಿದರು. ಆದರೆ ಅವರು ನೆಹರೂಜಿಯವರಲ್ಲಿ ಒಂದು ವಿನಂತಿಯನ್ನು ಮಾಡಿದರು: "ಸಂವಿಧಾನದ ಪ್ರತಿ ಪುಟದಲ್ಲಿ ನನ್ನ ಹೆಸರನ್ನು ಮತ್ತು ಕೊನೆಯ ಪುಟದಲ್ಲಿ ನನ್ನ ಹೆಸರಿನ ಜೊತೆಗೆ ನನ್ನ ಅಜ್ಜನ ಹೆಸರನ್ನು ಬರೆಯಲು ಅನುಮತಿಸಿ" ಎಂದು ಕೇಳಿಕೊಂಡರು. ನೆಹರೂ ಅವರು ಅವರ ಮನವಿಗೆ ಒಪ್ಪಿಗೆಯಿತ್ತರು. ಈ ಸಂವಿಧಾನವನ್ನು ಬರೆಯಲು ಅವರಿಗೆ ಒಂದು ಮನೆಯನ್ನು ನೀಡಲಾಯಿತು. ಅಲ್ಲಿಯೇ ಕುಳಿತು ಪ್ರೇಮ್‌ಜೀ ಅವರು ಇಡೀ ಸಂವಿಧಾನದ ಹಸ್ತಪ್ರತಿಯನ್ನು ಬರೆದರು.

ಬರೆಯಲು ಪ್ರಾರಂಭಿಸುವ ಮೊದಲು, ಪ್ರೇಮ್ ಬಿಹಾರಿ ನಾರಾಯಣ್ ಅವರು ನೆಹರೂ ಅವರ ಆದೇಶದ ಮೇರೆಗೆ ಅಂದಿನ ಭಾರತದ ರಾಷ್ಟ್ರಪತಿ ಶ್ರೀ ರಾಜೇಂದ್ರ ಪ್ರಸಾದ್ ಅವರೊಂದಿಗೆ 29 ನವೆಂಬರ್ 1949 ರಂದು ಶಾಂತಿನಿಕೇತನಕ್ಕೆ ಬಂದರು. ಅವರು ಪ್ರಸಿದ್ಧ ವರ್ಣಚಿತ್ರಕಾರ ನಂದಲಾಲ್ ಬಸು ಅವರೊಂದಿಗೆ ಚರ್ಚಿಸಿದರು ಮತ್ತು ಪ್ರೇಮ್ ಬಿಹಾರಿ ಅವರು ಯಾವ ಭಾಗವನ್ನು ಬರೆಯಬೇಕು ಮತ್ತು ಉಳಿದ ಭಾಗವನ್ನು ನಂದಲಾಲ್ ಬಸು ಅವರು ಅಲಂಕರಿಸಬೇಕು ಎನ್ನುವುದು ನಿರ್ಧರಿಸಲಾಯಿತು.

ನಂದಲಾಲ್ ಬಸು ಮತ್ತು ಶಾಂತಿನಿಕೇತನದ ಅವರ ಕೆಲವು ವಿದ್ಯಾರ್ಥಿಗಳು ನಿಷ್ಪಾಪ ಚಿತ್ರಣದಿಂದ ಸಂವಿಧಾನ ಗ್ರಂಥವನ್ನು ಅಲಂಕರಿಸಿದರು. ಮೊಹೆಂಜೋದಾರೋ ಮುದ್ರೆಗಳು, ರಾಮಾಯಣ, ಮಹಾಭಾರತ, ಗೌತಮ ಬುದ್ಧನ ಜೀವನ, ಅಶೋಕ ಚಕ್ರವರ್ತಿಯಿಂದ ಬೌದ್ಧ ಧರ್ಮದ ಪ್ರಚಾರ, ವಿಕ್ರಮಾದಿತ್ಯ, ಚಕ್ರವರ್ತಿ ಅಕ್ಬರ್ ಮತ್ತು ಮೊಘಲ್ ಸಾಮ್ರಾಜ್ಯದ ಕುರಿತ ಚಿತ್ರಗಳು ಸಂವಿಧಾನದ ಗ್ರಂಥ ಸೇರಿದವು.

ಭಾರತೀಯ ಸಂವಿಧಾನವನ್ನು ಬರೆಯಲು ಪ್ರೇಮ್ ಬಿಹಾರಿ ಅವರಿಗೆ 432 ಪೆನ್ ಹೋಲ್ಡರ್‌ಗಳ ಅಗತ್ಯವಿತ್ತು ಮತ್ತು ಅವರು ನಿಬ್ ಸಂಖ್ಯೆ 303 ಅನ್ನು ಬಳಸಿದರು. ನಿಬ್‌ಗಳನ್ನು ಇಂಗ್ಲೆಂಡ್ ಮತ್ತು ಜೆಕೊಸ್ಲೊವಾಕಿಯಾದಿಂದ ತರಿಸಲಾಗಿತ್ತು. ಅವರು ಇಡೀ ಸಂವಿಧಾನದ ಹಸ್ತಪ್ರತಿಯನ್ನು ಆರು ತಿಂಗಳುಗಳ ಕಾಲ ಭಾರತದ ಸಂವಿಧಾನ ಭವನದ ಕೊಠಡಿಯಲ್ಲಿ ಬರೆದರು. ಸಂವಿಧಾನವನ್ನು ಬರೆಯಲು 251 ಪುಟಗಳ ಪರ್ಚಮೆಂಟ್ ಕಾಗದವನ್ನು ಬಳಸಿದರು. ಸಂವಿಧಾನದ ಗ್ರಂಥದ ತೂಕ 3 ಕೆಜಿ 650 ಗ್ರಾಂ ಆಗಿದ್ದು ಅದು 22 ಅಂಗುಲ ಉದ್ದ ಮತ್ತು 16 ಅಂಗುಲ ಅಗಲವಿದೆ.

ಪ್ರೇಮ್ ಬಿಹಾರಿ ಅವರು ಫೆಬ್ರವರಿ 17, 1986 ರಂದು ನಿಧನರಾದರು.

(ಸಂಗ್ರಹಿಸಲಾಗಿದೆ)

ಚಿತ್ರ ಕೃಪೆ: ಇಂಟರ್ನೆಟ್ ತಾಣ