ಭಾರತದ ಸ್ವಾತಂತ್ಯೋತ್ಸವವನ್ನು ಸ್ವಾಗತಿಸುತ್ತಾ...
2021 ರ ಆಗಸ್ಟ್ 16 ರ ಈ ಕ್ಷಣದಲ್ಲಿ ನಿಂತು ನಮ್ಮ ನಮ್ಮ ಮಾನಸಿಕ ಸ್ಥಿತಿಗಳನ್ನು ಒಮ್ಮೆ ಅವಲೋಕನ ಮಾಡಿಕೊಳ್ಳೋಣ.... ನಾವೆಲ್ಲ ಎಷ್ಟೊಂದು ಸಿನಿಕರಾಗಿದ್ದೇವೆ ಗೊತ್ತೆ? ಹೊಸ ಹೊಸ ನಾಯಕತ್ವಕ್ಕೆ ಎಷ್ಟೊಂದು ಹಪಹಪಿಸುತ್ತಿದ್ದೇವೆ ತಿಳಿದಿದೆಯೇ? ಇವನೊಬ್ಬ ಬಂದ - ಅವನೊಬ್ಬ ಬಂದ - ಅಲ್ಲೊಬ್ಬ ಉದಯಿಸಿದ - ಇಲ್ಲೊಬ್ಬ ಸೃಷ್ಟಿಯಾದ....
ಓ ಬದಲಾವಣೆ ಸಾಧ್ಯವಾಗಬಹುದು - ನಮ್ಮ ಬದುಕು ಉತ್ತಮವಾಗಬಹುದು - ಒಂದಷ್ಟು ನೆಮ್ಮದಿ ಪಡೆಯಬಹುದು.... ಹೀಗೆ..ಸಾಗುತ್ತದೆ. ಆದರೆ, ಸ್ವಲ್ಪ ದಿನಗಳ ನಂತರ........
ಇಲ್ಲಾ, ಇವನೂ ಪ್ರಯೋಜನವಿಲ್ಲ, ಎಲ್ಲರಂತೆ ಇವನೂ ಹಣ ಅಧಿಕಾರ ಪ್ರಚಾರದ ಗುಂಗಿನಲ್ಲಿದ್ದಾನೆ. ಅವನನ್ನು ಟೀಕಿಸುವ ಇವನಾದರೂ ಉತ್ತಮನೇ? ಇಲ್ಲ ಅಧಿಕಾರ ಸಿಕ್ಕ ತಕ್ಷಣ ಅವನೂ ಅದೇ. ಒಟ್ಟಿನಲ್ಲಿ ನಮ್ಮ ಪರಿಸ್ಥಿತಿ ಇಷ್ಟೆ.
ಇದ್ದದ್ದನ್ನು ಒಪ್ಪಿಕೊಳ್ಳಿ - ಬಂದದ್ದನ್ನು ಸ್ವೀಕರಿಸಿ. ಅದೇ ಉತ್ತಮ ಮಾರ್ಗ. ಏಕೆಂದರೆ, ಭಗವದ್ಗೀತೆ - ಖುರಾನ್ - ಬೈಬಲ್ ಗಳು ಇದನ್ನೇ ಹೇಳಿರುವುದು. ಅದು ಬಿಟ್ಟು ಯೋಚಿಸಿದಲ್ಲಿ ನಿಮ್ಮ ಬದುಕು ನರಕವೆಂಬುದು ಖಚಿತ. ಇಲ್ಲಿಗೆ ಭಾರತೀಯನ ಯೋಚನಾ ಶಕ್ತಿ ನಿಂತಿದೆ.
***
ಛೇ, ಛೇ, ಇಷ್ಟೊಂದು ವಿವೇಚನಾರಹಿತ ಮೂರ್ಖರೇ ನಾವು. ಸ್ವಂತಿಕೆ - ಸ್ವಾಭಿಮಾನ - ಆತ್ಮವಿಶ್ವಾಸ - ಬುದ್ಧಿಮತ್ತೆ ನಮಗಿಲ್ಲವೇ ? ಹುಟ್ಟಿನಿಂದಲೇ ಇನ್ನೊಂದು ಪೂರ್ವ ನಿರ್ಧಾರಿತ ವಾದದ ಗುಲಾಮರೇ ? ಖಂಡಿತ ಇಲ್ಲ. ಪ್ರತಿ ಜೀವಿಯಲ್ಲೂ ಹೊಸದೊಂದು ಚಿಂತನಾಶಕ್ತಿ ಸದಾ ಹರಿಯುತ್ತಿರುತ್ತದೆ. ಜೊತೆಗೆ "Necessity is the mother of all invention." ಹೌದು, ಈಗ ಆ ಅವಶ್ಯಕತೆ ತುಂಬಾ ಇದೆ.
ಭಾರತೀಯ ಸಮಾಜದಲ್ಲಿ ನಾಯಕ ಎಂದರೆ ಯಾರು ? ಇತಿಹಾಸವನ್ನೊಮ್ಮೆ ಅವಲೋಕಿಸೋಣವೇ ? ಮುಖ್ಯವಾಗಿ ನಾಯಕ ಎಂದರೆ, ಆತ ಜನರನ್ನು ಪ್ರೀತಿಸಬೇಕು, ಇಡೀ ವ್ಯವಸ್ಥೆಯನ್ನು ಕೂಲಂಕಷವಾಗಿ ಅರಿತಿರಬೇಕು, ಕಟ್ಟ ಕಡೆಯ ಭಿಕ್ಷುಕನಿಂದ ಸಿಂಹಾಸನದವರೆಗೆ ಎಲ್ಲರನ್ನೂ ಅರ್ಥಮಾಡಿಕೊಂಡಿರಬೇಕು, ಹಣ ಅಧಿಕಾರ ಅಂತಸ್ತು ಪ್ರಚಾರ ಪ್ರಲೋಭನೆಗಳ ದಾಸನಾಗಿರಬಾರದು, ಇಡೀ ಸಮಾಜ ಮತ್ತು ಬದುಕಿನ ಸಾರ್ಥಕತೆಯ ಸೂಕ್ಷ್ಮ ದೃಷ್ಟಿಕೋನ ಹೊಂದಿರಬೇಕು, ತನ್ನ ಚಿಂತನೆಗಳಿಂದ ಇಡೀ ಸಮಾಜವನ್ನು ವಾಸ್ತವ ನೆಲೆಯಲ್ಲಿ ಪ್ರಚೋದಿಸುವಂತಿರಬೇಕು...ಇತ್ಯಾದಿ, ಇತ್ಯಾದಿ...
ಆ ದೃಷ್ಟಿಕೋನದಿಂದ ಮತ್ತು ನನ್ನ ಅರಿವಿನ ಮಿತಿಯಲ್ಲಿ ನೋಡುವುದಾದರೆ, ಗೌತಮ ಬುದ್ಧನಾದ ಸಿದ್ದಾರ್ಥನೇ ನಮ್ಮ ಸಮಾಜದ ಮೊದಲ ನಾಯಕ. ತನ್ನ ಇಡೀ ಬದುಕನ್ನು ತನ್ನ ಸಹ ಜೀವಿಗಳ ನೋವು ಕಡಿಮೆ ಮಾಡಲು ಸತ್ಯ ಮತ್ತು ವಾಸ್ತವದ ಹುಡುಕಾಟದಲ್ಲಿ ಸವೆಸಿ ಜ್ಞಾನೋದಯ ಹೊಂದಿ ಭಾರತೀಯ ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯ ಹುಳುಕುಗಳನ್ನು ಪತ್ತೆ ಹಚ್ಚಿ ಒಂದಷ್ಟು ನೆಮ್ಮದಿಯ ಬದುಕನ್ನು ನೀಡಿದ.
ನಂತರ ಹಲವು ಶತಮಾನಗಳ ಬಳಿಕ ಕನ್ನಡದ ನೆಲದಲ್ಲಿ ಬಸವೇಶ್ವರನೆಂಬ ದಾರ್ಶನಿಕನ ನಿಜ ನಾಯಕತ್ವ ದೊರೆಯಿತು. ನಮ್ಮ ಸಮಾಜದ ಅಸಮಾನತೆಯ ಸಂಪೂರ್ಣ ತಿಳುವಳಿಕೆ ಇದ್ದ ಬಸವ ಇಡೀ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿ ಮಾನವ ಸಮಾಜ ಸದಾ ಆದರ್ಶವೆಂದು ಬಯಸುವ ಸಮಾನತೆಯನ್ನು ಸ್ಥಾಪಿಸಲು ನಾಯಕತ್ವ ವಹಿಸಿದ.
ಮತ್ತೆ ಕೆಲವು ಶತಮಾನಗಳ ನಂತರ ಸ್ವಾಮಿ ವಿವೇಕಾನಂದನೆಂಬ ವೈಚಾರಿಕ ಪ್ರಜ್ಞೆಯ ಆಧ್ಯಾತ್ಮಿಕ ಗುರುವೊಬ್ಬ ಭಾರತದ ನಿಜ ನಾಯಕನಾಗಿ ಹೊರಹೊಮ್ಮಿದ. ವಿಶ್ವ ಭೂಪಟದಲ್ಲಿ ಭಾರತದ ಸಾಂಸ್ಕೃತಿಕ ಮಹತ್ವವನ್ನು ಎತ್ತಿಹಿಡಿದದ್ದು ಮಾತ್ರವಲ್ಲದೆ ಭಾರತದ ಜಡ್ಡುಗಟ್ಟಿದ ವ್ಯವಸ್ಥೆಗೆ ಕಾಯಕಲ್ಪ ನೀಡುವ ನೈಜ ನಾಯಕತ್ವ ನೀಡಿದನು.
ಮುಂದೆ ಪರಿಸ್ಥಿತಿಯ ಒತ್ತಡದಿಂದ ವಿದೇಶಿಯರ ದಾಸ್ಯದಿಂದ ಮುಕ್ತರಾಗಲು ಭಾರತೀಯ ಸಮಾಜ ದಾರಿ ಹುಡುಕುತ್ತಿದ್ದಾಗ ಮೂಡಿಬಂದ ನಾಯಕನೇ ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ಮಹಾತ್ಮ. ಬಹುಶಃ ಭಾರತದ ಇತಿಹಾಸದಲ್ಲಿ ಸೃಷ್ಟಿಯಾದ ಮತ್ತು ಇಡೀ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ ಹಾಗೂ ಅತಿಹೆಚ್ಚು ಜನರಿಂದ ಪ್ರೀತಿಸಲ್ಪಟ್ಟ ನಾಯಕ ಈತನೇ. ಹೋರಾಟ ಮಾತ್ರವಲ್ಲದೆ ಹಿಂದಿನಿಂದಲೂ ಭಾರತದ ಪ್ರಮುಖ ಧ್ಯೇಯವಾದ ಸತ್ಯ ಅಹಿಂಸೆ ಸತ್ಯಾಗ್ರಹ ಎಂಬ ಅಸ್ತ್ರಗಳಿಗೆ ಸಾಣೆ ಹಿಡಿದ ನಾಯಕತ್ವ ಈ ಗಾಂಧಿಯದು.
ಗಾಂಧಿಯ ನಂತರ ಭಾರತ ಕಂಡ ನಾಯಕತ್ವ ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಎಂಬ ಬಾಬಾ ಸಾಹೇಬನದು. ಈ ಕ್ಷಣಕ್ಕೆ ಕೇವಲ ದಲಿತರ ನಾಯಕನಾಗಿ ಮೀಸಲಾತಿಯ ಸೃಷ್ಟಿಕರ್ತನಾಗಿ ಕಾಣಲ್ಪಡುತ್ತಿರುವ ಅಂಬೇಡ್ಕರ್ ಇಡೀ ಭಾರತೀಯ ಇತಿಹಾಸದಲ್ಲಿ ಅಧ್ಯಯನ - ಗ್ರಹಿಕೆ - ಪರಿಣಾಮ ಮತ್ತು ಫಲಿತಾಂಶಗಳ ದೃಷ್ಟಿಯಿಂದ ನಿಜ ನಾಯಕನಾಗಿ ಹೊಮ್ಮಿದ ಶ್ರೇಷ್ಠ ಚಿಂತಕ. ಈ ಕ್ಣಣಕ್ಕೂ ತನ್ನ ವಾಸ್ತವಿಕ ಚಿಂತನೆಗಳಿಂದ ಭಾರತೀಯ ಸಮಾಜವನ್ನು ಬದಲಾವಣೆಯತ್ತ ನಡೆಸುತ್ತಿರುವ ನಾಯಕ. ಇವರಲ್ಲದೆ ಆಯಾ ಕಾಲಕ್ಕೆ ಮೂಡಿಬಂದ...
ಮನುಸ್ಮೃತಿಯ ಮನುವಿನಿಂದ ಸದ್ಯದ ಪ್ರಧಾನಿ ನರೇಂದ್ರ ಮೋದಿಯವರೆಗೆ, ಚಂದ್ರಗುಪ್ತ ಮೌರ್ಯ - ಅಶೋಕನಿಂದ ಹಿಡಿದು ಅಣ್ಣಾ ಹಜಾರೆ - ಅರವಿಂದ್ ಕೇಜ್ರೀವಾಲ್ ವರೆಗೆ, ಅನೇಕ ಪಂಡಿತ ಆಚಾರ್ಯ ದಾಸರಿಂದ ಹಿಡಿದು ಬಾಬಾ ರಾಮ್‌ದೇವ್ ವರೆಗೆ, ವೈಚಾರಿಕ ಚಿಂತನೆಯ ವ್ಯವಸ್ಥೆಯ ಬಂಡಾಯಗಾರರಿಂದ ಹಿಡಿದು..ಪುಲೆ ಪೆರಿಯಾರ್ ಲೋಹಿಯಾ ಜೆಪಿವರೆಗೂ ಅನೇಕ ನಾಯಕತ್ವಗಳು ಬಂದಿವೆ. ಆದರೆ ಯಾವುವೂ ಅಷ್ಟೊಂದು ಯಶಸ್ವಿಯಾಗಿಲ್ಲ ಮತ್ತು ಸಾಮಾನ್ಯರ ಬದುಕು ಇಂದಿಗೂ ಹಸನಾಗಿಲ್ಲ.
ಕೇವಲ ಬುದ್ಧ, ಬಸವ, ವಿವೇಕ, ಗಾಂಧಿ, ಅಂಬೇಡ್ಕರ್ ಮಾತ್ರ ಒಂದಷ್ಟು ಯಶಸ್ಸು ಕಂಡರು. ಏಕೆಂದರೆ ಅವರು ವ್ಯವಸ್ಥೆಯನ್ನು ಸರಿಪಡಿಸಲು ಮನುಷ್ಯನ ಈ ಮಣ್ಣಿನ ಮೂಲಭೂತ ಗುಣಗಳನ್ನು ಅರಿತು ಮಾನಸಿಕ ಬದಲಾವಣೆಗೆ ಶ್ರಮಿಸಿದರು. ಉಳಿದವರು ವ್ಯವಸ್ಥೆಯ ಭಾಗವಾಗದೇ ಸಣ್ಣ ಪ್ರಮಾಣದ ಅಥವಾ ಆಡಳಿತಾತ್ಮಕ ಬದಲಾವಣೆಗೆ ಮತ್ತೆ ಕೆಲವರು ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಮತ್ತೆ ಹಲವರು ಸ್ವತಃ ಅತ್ಯುತ್ತಮ ಚಿಂತಕರಾದರೂ ಅದನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದರು.
ಇಂತಹ ಬೃಹತ್ ವಿಭಿನ್ನ ವೈವಿಧ್ಯಮಯ ಸಮಾಜದಲ್ಲಿ ನಾಯಕತ್ವ ವಹಿಸಲು ಎಷ್ಟೊಂದು ಸಾಮರ್ಥ್ಯ ಬೇಕು ಯೋಚಿಸಿ. ಎಷ್ಟೊಂದು ಪ್ರೀತಿ ಬೇಕು ಯೋಚಿಸಿ. ಎಷ್ಟೊಂದು ಅಧ್ಯಯನ ಬೇಕು ಯೋಚಿಸಿ. ಎಷ್ಟೊಂದು ತಾಳ್ಮೆ ಬೇಕು ಯೋಚಿಸಿ. ಎಷ್ಟೊಂದು ಪ್ರಾಮಾಣಿಕತೆ ಬೇಕು ಯೋಚಿಸಿ.
ಕೇವಲ ಸಿನಿಮಾ ಸಾಹಿತ್ಯ ವ್ಯಾಪಾರ ಆಧ್ಯಾತ್ಮ ಮಾತಿನ ಕಲೆಗಾರಿಕೆ ರಾಜಕೀಯ ಜಾತಿ ಧರ್ಮ ಭಾಷೆ ಹಣಗಳಿಂದ ಗಳಿಸಿದ ಪ್ರಖ್ಯಾತಿ. ಟಿವಿ ಪತ್ರಿಕೆ Social media ಅಭಿಮಾನಿಗಳು ಹಿಂಬಾಲಕರಿಂದ ಗಳಿಸಿದ ಜನಪ್ರಿಯತೆಯನ್ನು ಮಾನದಂಡವಾಗಿಟ್ಟುಕೊಂಡು ಕೇವಲ ಆಡಳಿತಾತ್ಮಕ ಸುಧಾರಣೆಗೆ ಪ್ರಯತ್ನಿಸಿದರೆ, ಅನ್ನಭಾಗ್ಯ - ಕ್ಷೀರಭಾಗ್ಯ - Note ban - Beef ban ಸ್ಮಾರ್ಟ್ ಸಿಟಿ ಯೋಜನೆಗಳನ್ನು ರೂಪಿಸಿದರೆ ಸಮಾಜ ಬದಲಾಯಿಸಲು ಸಾಧ್ಯವೇ...ಜೀವನಮಟ್ಟ ಸುಧಾರಿಸಲು ಸಾಧ್ಯವೇ?
ನಿಜ ನಾಯಕನಾದವನು ಚಿಂತನಶೀಲ ಕ್ರಿಯಾಶೀಲ ಪ್ರಕೃತಿಯ ಮಡಿಲಿನ ಪ್ರಬುದ್ಧ ವ್ಯಕ್ತಿತ್ಬದ ಮನಸ್ಸುಗಳನ್ನು ರೂಪಿಸಿದರೆ ಮಾತ್ರ ನಾಗರಿಕ ಸಮಾಜ ನಿರ್ಮಾಣವಾಗಬಲ್ಲದು. ಕೇವಲ ಕೆಟ್ಟವರನ್ನು ದುಷ್ಟರನ್ನು ಶಿಕ್ಷಿಸುವ ಆಡಳಿತಾತ್ಮಕ ವ್ಯವಸ್ಥೆಯಾಗದೆ ಒಳ್ಳೆಯ ಮನಸ್ಥಿತಿಯ ವ್ಯಕ್ತಿತ್ಬದ ವ್ಯವಸ್ಥೆ ರೂಪಿಸಿದರೆ ಕೆಟ್ಟವರೂ ಸಹ ಒಳ್ಳೆಯವರಾಗುವ ಎಲ್ಲಾ ಸಾಧ್ಯತೆಯೂ ಇದೆ. ಅದನ್ನೇ ಬುದ್ಧ ಬಸವ ವಿವೇಕ ಗಾಂಧಿ ಅಂಬೇಡ್ಕರ್ ಮಾಡಿದ್ದು...
( ಕ್ಷಮಿಸಿ, ಸ್ವಾತಂತ್ಯೋತ್ಸವದ ಸಂದರ್ಭದಲ್ಲಿ ಇದು ಅವಶ್ಯವೆನಿಸಿತು ಮತ್ತು ಎಲ್ಲಾ ಮಹನೀಯರನ್ನು ಉದ್ದೇಶಪೂರ್ವಕವಾಗಿಯೇ ಏಕವಚನದಲ್ಲಿ ಕರೆದಿದ್ದೇನೆ. ಏಕೆಂದರೆ ಅವರನ್ನು ದೇವರು ಮಾಡದೆ ನಮ್ಮ ನಿಮ್ಮಂತ ಸಾಮಾನ್ಯ ಮನುಷ್ಯರು ಮತ್ತು ನಮ್ಮ ಸ್ನೇಹಿತರಷ್ಟೇ ಹತ್ತಿರದವರು ಎಂದು ಭಾವಿಸಲು ಸಹಕಾರಿಯಾಗಲಿ ಎಂದು...... )
- 288 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿಯೇ ಭಾರತ ಸ್ವಾತಂತ್ರ್ಯದ 75 ನೇ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿತು.ಇಂದು 16/8/2021 ಸೋಮವಾರ 289 ನೆಯ ದಿನ ನಮ್ಮ ಕಾಲ್ನಡಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಿಂದ ಸುಮಾರು 23 ಕಿಲೋಮೀಟರ್ ದೂರದ ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮ ತಲುಪಲಿದೆ.ನಾಳೆ 17/8/2021 ಮಂಗಳವಾರ 290 ನೆಯ ದಿನ ಅಲ್ಲಿಂದ ಮತ್ತೆ ಮಡಿಕೇರಿ ಮಾರ್ಗದಲ್ಲಿ ಸುಮಾರು 15 ಕಿಲೋಮೀಟರ್ ಸಂಚರಿಸಿ ಕೊಡಗು ಜಿಲ್ಲೆಯ ಮತ್ತೊಂದು ಗ್ರಾಮದತ್ತಾ, ನಂತರ ಮಡಿಕೇರಿ ತಾಲ್ಲೂಕಿನತ್ತಾ...ಮುಂದೆ ವಿರಾಜಪೇಟೆ.....
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ಕೃಪೆ