ಭಾರತದ ಹೆಮ್ಮೆಯ ಪ್ರತೀಕವಾದ ಹೊಸ ಸಂಸತ್ ಭವನ

ಭಾರತದ ಹೆಮ್ಮೆಯ ಪ್ರತೀಕವಾದ ಹೊಸ ಸಂಸತ್ ಭವನ

ಜಗತ್ತಿನ ಮೊದಲ ಸಂಸತ್ತು: 12ನೇ ಶತಮಾನದಲ್ಲಿ ಈ ಕನ್ನಡ ನಾಡು ಜಗಜ್ಯೋತಿ ಬಸವಣ್ಣರಿಗೆ ಜನ್ಮ ನೀಡಿತ್ತು. ವಚನದ ಅದ್ಭುತ ಯುಗದ ಆರಂಭ ಅದು. ಆಗಲೇ ಪ್ರಜಾಪ್ರಭುತ್ವದ ಕಲ್ಪನೆ ಮೊಳಕೆಯುಡೆದು ನಿಂತದ್ದು. ಅದೇ ಸಮಯಕ್ಕೆ ಜಗತ್ತು ರಾಜರ ಆಳ್ವಿಕೆಯಲ್ಲಿ ಮಗ್ನವಾದಾಗ ಪ್ರಜೆಗಳೇ ಪ್ರಭುಗಳು ಎನ್ನುವ ಕಲ್ಪನೆ ಅಂಕುರಿಸಿದ್ದು. ರಾಜ್ಯ ವಿಸ್ತರಣೆಯ ಮದ ಏರಿದ ಕಾಲಘಟ್ಟದಲ್ಲಿ. ಈ ಮಣ್ಣಿನಲ್ಲಿ ಜ್ಞಾನ ಪಸರಿಸಲು ಅನುಭವ ಮಂಟಪವೆಂಬ ಜಗತ್ತಿನ ಮೊದಲ ಸಂಸತ್ ಭವನ ಕನ್ನಡ ಭೂಮಿ ಕಲ್ಯಾಣದಲ್ಲಿ ತಲೆಯೆತ್ತಿ ನಿಂತಿತ್ತು. ಅನೇಕ ಶರಣರು ನಾಡಿನ ಮೂಲೆ ಮೂಲೆಯಿಂದ ಇಲ್ಲಿಗೆ ಸಾಗರೋಪಾದಿಯಲ್ಲಿ ಬರುತ್ತಿದ್ದರು. ಅದೊಂದು ದಿವ್ಯ ಜ್ಞಾನ ಮಂದಿರವೇ ಆಗಿತ್ತು. ಅಲ್ಲಿನ ವಾದ ಪ್ರತಿವಾದಗಳು ಬಹು ಪ್ರಬುದ್ಧವಾಗಿ ಜ್ಞಾನದ ಪರಮಾವಧಿ ಎನ್ನುವಂತೆ ನಡೆಯುತ್ತಿದ್ದವು. ಅಧ್ಯಕ್ಷರಾಗಿ ಅಲ್ಲಮ ಪ್ರಭುದೇವರು ಅನೇಕ ಪ್ರಸಂಗಗಳನ್ನ ಸೃಷ್ಟಿಸಿ ಯಾರ ಬುದ್ದಿಗೂ ನಿಲುಕದಂತಹ ಶ್ರೇಷ್ಠತೆಯ ಕಡೆಗೆ ಸಭಾ ಗೌರವವನ್ನು ಕೊಂಡೊಯ್ಯುತ್ತಿದ್ದರು. ಇವತ್ತಿಗೂ ಅನೇಕ ಪಂಡಿತರಿಗೆ ಅಲ್ಲಮರ ವಚನಗಳ ಆಳ ಅಗಲ ತಿಳಿಯಲು ಸಾಧ್ಯವಾಗುತ್ತಿಲ್ಲ. ಅಲ್ಲಿ ಶರಣ ಶರಣೆಯರಿಗೆ ಸಮಾನವಾದ ಗೌರವವಿತ್ತು, ಜಾತಿಯೆಂಬ ಪದ ಅನುಭವ ಮಂಟಪದ ಪಕ್ಕವು ಸುಳಿಯುತ್ತಿರಲಿಲ್ಲ. ಆ ಶರಣರ ಸಂಗವನ್ನು ನಾಶ ಮಾಡಬೇಕೆಂದು ಹೊಂಚು  ಹಾಕುತ್ತಿರುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು, ಕಲ್ಯಾಣದೊಳಗೊಂದು ಕ್ರಾಂತಿ ಮಾಡಿ ಶರಣರು ದಿಕ್ಕಾ ಪಾಲಾಗುವಂತೆ ಮಾಡುವುದರಲ್ಲಿ ಅವರು ಕ್ಷಣಿಕ ಯಶಸ್ಸನ್ನು ಗಳಿಸಿದರು,ಆ ಮೂರ್ಖರಿಗೇನು ಗೊತ್ತು ಆ ಶರಣರ ವಚನಗಳು ಈ ನಾಡನ್ನ ಸದಾಕಾಲ ಆಳುತ್ತವೆ ಎಂದು. ಇಂದು ಆ ಶರಣರು ಬದುಕಿಲ್ಲ ಆದರೆ ಪ್ರತಿಯೊಬ್ಬನ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.ಸಾಹಿತ್ಯದ ಕೃತಿಗಳಲ್ಲಿ  ರಾರಾಜಿಸುತ್ತಿರುವರು. ಅದಕ್ಕೆ ಹೇಳೋದು ಚಾಡಿ ಹೇಳುವುದಕ್ಕಿಂತ ನಾಲ್ಕು ಒಳ್ಳೆಯ ನುಡಿಗಳನ್ನು ಹೇಳಬೇಕೆಂದು. ಇನ್ನೊಬ್ಬರ ಸಾಧನೆ ನೋಡಿ ಅಸೂಯ ಪಡುವುದಕ್ಕಿಂತ ಅವರು ನಮ್ಮವರೇ ಎಂದು ಆನಂದ ಪಡಬೇಕು,ಕಾಲು ಎಳೆಯುವ ಜನರ ಮಧ್ಯೆ ತೋಷಿತರನ್ನು  ಕೈಹಿಡಿದು ಮೇಲೆತ್ತಬೇಕೆಂದು. ನಮಗೆ ಅನಿಸುತ್ತದೆ ಆರಂಭದಲ್ಲಿ ದುಷ್ಟರ ಕೈ ಮೇಲಾಗುತ್ತಿದೆ ಎಂದು.ಆದರೆ ಇತಿಹಾಸದ ಪುಟ ತೆಗೆದು ನೋಡಿದರೆ ಆ ಭ್ರಷ್ಟರು ಮೊದಲು ಗೆದ್ದು ನಂತರ ಸೋತು ಸತ್ತಿರುತ್ತಾರೆ.ಒಳ್ಳೆಯತನ ಮೊದಲು ಸೋತು ಈ ಭೂಮಿ ಅಸ್ತಿತ್ವದಲ್ಲಿರುವರಿಗೂ ಗೆಲ್ಲುತ್ತಲೇ ಹೋಗುತ್ತದೆ.

ರಾಜಕೀಯ ಭಾರತದ ಸಂಸತ್ತು: 1921 ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭಗೊಂಡು, 1927ರಲ್ಲಿ ಉದ್ಘಾಟನೆಗೊಂಡ ವಾಸ್ತುಶಿಲ್ಪಿ  ಲೂಟಿಯನ್ಸ್ ಹಾಗೂ ಹರ್ಬರ್ಟ್ ಬೇಕರ್ ಮಾರ್ಗದರ್ಶನದಲ್ಲಿ ನಿರ್ಮಿಸಲಾದ  ರಾಜಕೀಯ ಭಾರತದ ಸಂಸತ್ ಭವನ ಜನ್ಮ ತಾಳಿತು.ಇದು ಭಾರತದ ಮೊದಲ ಸಂಸತ್ತು ಅಲ್ಲ ಏಕೆಂದರೆ ಮೊದಲ ಸಂಸತ್ತು ಹುಟ್ಟಿದ್ದು ಈ ಕನ್ನಡ ಮಣ್ಣಿನ ಶರಣರ ನಾಡಿನಲ್ಲಿ.ಇದು ರಾಜಕೀಯ ಭಾರತದ ಮೊದಲ ಸಂಸತ್ತು ಅಷ್ಟೇ. 1911ರಲ್ಲಿ ಕೊಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ ಈ ಕಟ್ಟಡ ತಲೆ ಎತ್ತಿ ನಿಂತಿತ್ತು. ಬ್ರಿಟಿಷರು ಭಾರತಕ್ಕೆ ಸ್ವತಂತ್ರ ನೀಡಿದ ಮೇಲೆ ಡಾ. ಬಾಬಾ ಸಾಹೇಬ್ ಅಂಬೇಡ್ಕರರ ಅಗಾಧವಾದ ಜ್ಞಾನದಿಂದ ಈ ದೇಶಕ್ಕೆ ಅತ್ಯಮೂಲ್ಯವಾದ ಸಂವಿಧಾನ ಲಭಿಸಿತ್ತು.ಅದು 1950ರ ಕಾಲಘಟ್ಟ. ಅದರ ನೆಲೆಗಟ್ಟಿನಲ್ಲೇ ಈ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದು ಬ್ರಿಟಿಷರು ಕಟ್ಟಿದ ಆ ಕಟ್ಟಡವನ್ನೇ ಸಂಸತ್ ಭವನವನ್ನಾಗಿ ನಾವು ಅಂಗೀಕರಿಸಿದೆವು. ನಮ್ಮಿಂದಲೇ ಆಯ್ಕೆಯಾದ ಮಹಾನುಬಾವರೂ ಕಾಯ್ದೆ ಕಾನೂನು ತಿದ್ದುಪಡಿಗಳನ್ನ ರೂಪಿಸುವುದು ಆ ಭವನದಲ್ಲೇ. ರಾಷ್ಟ್ರದ ಬಗ್ಗೆ ಚರ್ಚಿಸುತ್ತಾರೆ ಎಂದರೆ ಒಬ್ಬರ ಮಾತು ಮತ್ತೊಬ್ಬರು ಕೇಳದಂತೆ ಬೀದಿ ನಾಯಿಗಳು ಕಚ್ಚಾಡುವಂತೆ ಕಚ್ಚಾಡುವುದು ಸಹ ಅದೇ ಭವನದಲ್ಲಿ. ಕೆಟ್ಟ ಕೆಟ್ಟ ಪದ ಬಳಕೆಯಿಂದ ಅದರ ಘನತೆ ಗೌರವವನ್ನೇ ಹಾಳು ಮಾಡುತ್ತಾರೆ. ಹೆಸರಿಗೆ ಮಾತ್ರ ಅದು ಪ್ರಜಾಪ್ರಭುತ್ವದ ದೇಗುಲ.

ಹೊಸ ಕಟ್ಟಡದ ಸಂಸತ್ ಭವನ: ದಿನಗಳು ಕಳೆದಂತೆ ಸಮಾಜ ಹೊಸತನವನ್ನು ಬಯಸುತ್ತದೆ, ಬೇಡಿಕೆಗಳು ಹೆಚ್ಚಾಗುತ್ತವೆ, ಹಾಗೆ ಶತಮಾನದ ಹಿಂದೆ ನಿರ್ಮಾಣಗೊಂಡ ಸಂಸತ್ ಕಟ್ಟಡವು ಅನೇಕ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ, ಅದಕ್ಕಾಗಿ ಭಾರತದಲ್ಲಿ ಇಂದು ಹೊಸ ಸಂಸತ್ ಭವನ ಉದ್ಘಾಟನೆಗೆ ಸಿದ್ಧಗೊಂಡು ನಿಂತಿದೆ. 2020 ಡಿಸೆಂಬರ್ 10ರಂದು ಪ್ರಧಾನಿಯವರು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಎರಡುವರೆ ವರ್ಷದಲ್ಲೇ ಯೋಗ್ಯ ಕಟ್ಟಡ ನಿರ್ಮಾಣಗೊಂಡದ್ದು ಖುಷಿಯ ವಿಚಾರ. ಅದೇ ರೀತಿ ಸಾರ್ವಜನಿಕರು ಬಳಸುವ ಎಲ್ಲ ಕಾಮಗಾರಿಗಳಿಗೂ ಇದೇ ವೇಗವನ್ನ ನೀಡಿದರೆ ಬಹಳ ಒಳಿತು.ಈ ಸುಂದರ ಭವನ ಅನೇಕ ವಿಶೇಷತೆಗಳಿಂದ ಕೂಡಿದೆ, ಮೇ 28ರಂದು ಪ್ರಧಾನ ಮಂತ್ರಿಯಿಂದ ಉದ್ಘಾಟನೆಗೊಂಡಿದೆ. ವಿರೋಧ ಪಕ್ಷಗಳು ರಾಷ್ಟ್ರಪತಿಯಿಂದ ಉದ್ಘಾಟಿಸಬೇಕೆಂದು ಆರೋಪಿಸಿ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿದವು. ಭಾರತದ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪಗಳು ಏನು ಹೊಸದಲ್ಲ. ಯಾರಾದರೂ ಉದ್ಘಾಟಿಸಲಿ ಬಿಡಿ ನಮಗೇನಾಗಬೇಕು. ಜಗತ್ತಿನ ಎದುರು ಭಾರತದ ಸೌಂದರ್ಯ ಹೆಚ್ಚಾದರಷ್ಟೇ ಸಾಕಲ್ಲವೇ ನಮಗೆ.

ರಾಜದಂಡ (ಸೆಂಗೋಲ್): ಹಿಂದೆ ರಾಜ್ಯ ಮಹಾರಾಜರು ತಮ್ಮ ನಂತರದ ಉತ್ತರಾಧಿಕಾರಿಗಳಿಗೆ ರಾಜದಂಡವನ್ನು ನೀಡುವುದರ ಮೂಲಕ ಅಧಿಕಾರ ಹಸ್ತಾಂತರಿಸುವುದನ್ನು ನಾವುಗಳು ಸಿನಿಮಾಗಳಲ್ಲಿ ನೋಡಿದ್ದೇವೆ. ಇತಿಹಾಸದ ಪುಟಗಳಿಂದ ತಿಳಿದುಕೊಂಡಿದ್ದೇವೆ. ಇಂದು ಪೊಲೀಸ್ ಅಧಿಕಾರಿಗಳು ಸಹ ತಮ್ಮ ನಂತರ ಬರುವ ಅಧಿಕಾರಿಗೆ ಬ್ಯಾಟನ್ ನೀಡುವುದರ ಮೂಲಕ ಅಧಿಕಾರ ಹಸ್ತಾಂತರಿಸುತ್ತಾರೆ. ಹಾಗೆ ಚೋಳರ ಆಡಳಿತದಲ್ಲಿಯೂ ಸೆಂಗೋಲ್ ಎಂಬ ರಾಜದಂಡವನ್ನು ನೀಡುವುದರ ಮೂಲಕ ತಮ್ಮ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತಿದ್ದರು. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಸಾಂಪ್ರದಾಯಿಕವಾಗಿ ಅಧಿಕಾರ ಹಸ್ತಾಂತರಿಸುವಾಗ ಮೌಂಟ್ ಬ್ಯಾಟನ್ ನೆಹರು ಅವರಿಗೆ ಒಂದು ಚಿನ್ನದ ಸೆಂಗೋಲ್ ನೀಡಿದನು. ಹಿಂದಿನ ಕಾಲದಲ್ಲಿ ರಾಜರು ತಮ್ಮ ಸಿಂಹಾಸನದ ಬಳಿ ರಾಜ್ಯದಂಡವನ್ನ ಇರಿಸಿಕೊಂಡಿರುತ್ತಿದ್ದರು, ತಾವು ತೀರ್ಪು ನೀಡುವಾಗ ಆ ರಾಜದಂಡ ತಮ್ಮನ್ನು ಎಚ್ಚರಿಸಿ ಪ್ರಜೆಗಳಿಗೆ ಹಿತಕರವಾಗುವಂತೆ ತೀರ್ಪು ನೀಡುವಂತೆ ಅವರನ್ನು ಪ್ರೇರೇಪಿಸುತ್ತಿತ್ತು. ಬ್ರಿಟಿಷರು ನೆಹರುಗೆ ನೀಡಿದ ಆ ಸೆಂಗೋಲ್ ಅನ್ನು ಅಲಹಾಬಾದ್ ಮ್ಯೂಸಿಯಂನಿಂದ ಹೊರ ತೆಗೆದು ಹೊಸದಾಗಿ ನಿರ್ಮಾಣಗೊಂಡ ಸಂಸತ್ತಿನಲ್ಲಿ ಸ್ಪೀಕರ್ ಆಸನದ ಪಕ್ಕದಲ್ಲಿ ಸ್ಥಾಪಿಸಿದೆ. ಆ ದಂಡವನ್ನ ಅಲ್ಲಿ ಸ್ಥಾಪಿಸುವುದರಿಂದ ನಾವು ಆಯ್ಕೆ ಮಾಡಿ ಕಳಿಸಿದ ಮಹಾನುಭಾವರೂ ಒಳ್ಳೆಯ ನಡತೆ ಪ್ರದರ್ಶಿಸುತ್ತಾರೆ ಎನ್ನುವ ಭ್ರಮೆ ಬೇಡ. ಹಾಗೆ ಅದರಿಂದ ರಾಜ್ಯ ಪ್ರಭುತವು ಮರುಕಳಿಸುವುದು ಸಾಧ್ಯವಿಲ್ಲ. ಅದೊಂದು ಸಂಕೇತವಾಗಿರಬಹುದು ಅಷ್ಟೇ, ಅದನ್ನ ಬಿಟ್ಟು ಮತ್ಯಾವ ನಿರೀಕ್ಷೆಯು ಅದರಿಂದ ಈ ದೇಶಕ್ಕೆ ಆಗದು. ಹೊಸ ಸಂಸತ್ ಕಟ್ಟಡದಲ್ಲಾದರೂ ಯೋಗ್ಯವಾದ ಚರ್ಚೆಗಳು ನಡೆಯಲಿ ಎಂಬುದೇ ನಮ್ಮ ಬಯಕೆ.

-ಶ್ರೀರಾಮಕೃಷ್ಣ ದೇವರು. ಮರೆಗುದ್ದಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ