ಭಾರತದ ಹೊಸ್ತಿಲಲಿ ಸ್ವಾತಂತ್ರದ ಹಣತೆ

ಭಾರತದ ಹೊಸ್ತಿಲಲಿ ಸ್ವಾತಂತ್ರದ ಹಣತೆ

ಕವನ


 

ಹಿಂದೂಸ್ಥಾನವೆಂಬ ಹಾಲಿನಲಿ ಹುಳಿ ಹಿಂಡುತಿದ್ದ

ಹಡಗಿನವರ ಹೀನಕೃತ್ಯಗಳು ಹೇಳತೀರದ್ದು,

ಹೂಬಿರಿದರೂ ಹೆದರುವಷ್ಟು

ಹತೋಟಿ, ಹಾರಾಟ, ಹಡಗಿನವರದ್ದು

 

ಹಾಡುಹಗಲೇ ಹಗೆತನದ ಹಾಡು,

ಹದೆದವ್ವನ ಹಾಡನು

ಹಸಿ-ಹಸಿಯಾಗಿ ಹೂಳುತಿದ್ದರು, 

ಹಿಂದುಸ್ಥಾನದಲಿ

 

ಹೂತಿಟ್ಟ ಹೆಣಗಳನು ಹೊರಗೆಳೆಯುತ್ತಿದ್ದರು

ಹರಪ್ಪದಿಂದ ಹಿಮಾಲಯದವರೆಗೆ,

ಹಚ್ಚ ಹಸಿರಾಗಿದ್ದ ಹಿಸ್ಟರಿಯನ್ನು ಹೋಳು ಹೋಳಾಗಿ ಹರಿದು

ಹೀನವಾಗಿಸಿದರು ಹರಿದು ಹೋಗುವ ಹಾಳೆಗಳಲಿ

 

ಹೊರಗೆಲ್ಲೂ ಹೋಗಲೋಲ್ಲರು ಹಡಗನೇರಿ

ಹೋರಾಟದ ಹೊಗೆಯೆಬ್ಬಿಸಿದವನನು

ಹೀನವಾಗಿ ಹಿಂಸಿಸುತ್ತಿದ್ದರಾತನ

ಹೆಣವು ಹೊಗೆಯಾಡುವವರೆಗೆ

 

ಹೆಜ್ಜೆ ಹೆಜ್ಜೆಗೂ ಹೆಡೆಯೇತ್ತುವ ಹೆದರಿಕೆಗಳಿಗೆ

ಹತಾಷೆಗೊಂಡಿದ್ದರೆಲ್ಲ,

ಹದ್ದಿಗೆ ಹೆದರಿ ಹೊತ್ತದೊಳಗೊಡುವ ಹಾವಿನಂತೆ,

ಹೆರೆಯಲು ಹೆದರುವ ಹೊಸ ಹಜಾಮನಂತೆ.,

 

ಹಿಡುವಳಿಗಳಿಂದ ಹೊರಗೆಸದರೆಲ್ಲ ಹಿಂದುಗಳನು,

ಹಿಂದುಸ್ಥಾನದ ಹಿರಿಮೆ ಹೀನತೆಯೆಡೆಗೆ ಹರಿಯುತಿತ್ತು

ಹಡಗಿನವರನು ಹೊಡೆದೋಡಿಸುವ ಹುಂಬರಿಲ್ಲವೇ

ಹಿಂದೂಸ್ಥಾನದಲಿ.................?

 

ಹೊಸ ಹುರುಪು ಹುಮ್ಮಸ್ಸಿನಲಿ

ಹೋರಾಡಿದನು ಹೈದರಾಲಿ ಹದಿನಾರರ ಹುಡುಗನೊಡನೆ

ಹೆಗಲಲಿ ಹೊತ್ತು ಹೋಗುವ ಹೆಣವಾಗಿದ್ದರು ಹಾಡುಹಗಲೇ

ಹದಗೆಟ್ಟ ಹೇಡಿಯೊಬ್ಬನ ಹಣದಾಸೆಗೆ

 

ಹೋರಾಡಿದವರು ಹೆಣವಾಗುತ್ತಿದ್ದರು

ಹಡಗಿನವರ ಹಸ್ತಗಳಲಿ

ಹೆಣ್ಣು-ಹೊನ್ನುಗಳೆಲ್ಲ ಹರಿದು ಹೋಗುತಿತ್ತು ಹಡಗುಗಳಲಿ

ಹಿಂದೂಸ್ಥಾನದ ಹಿಸ್ಟರಿ ಹರಿದ ಹಾಳೆಯಂತಾಗುತಿತ್ತು 

 

ಹೂದೋಟವಾಗಿದ್ದ ಹಿಂದೂಸ್ಥಾನವನ್ನು

ಹುಲ್ಲು ಹುಟ್ಟದ ಹಿರೋಷಿಮವಾಗಿಸ ಹೊರಟಿದ್ದರು

ಹೆಗಲಲಿ ಹೊನ್ನಿನ ಹೊರೆ ಹೊತ್ತಿದ್ದರು

ಹಟ್ಟಿಯೊಳಗೆ ಹಳಸು, ಹಸಿದ ಹೊಟ್ಟೆಗೆ

 

ಹೊಸ ಹೋರಾಟ ಹಬ್ಬಿತು ಹಸಿಕೊಬ್ಬುಗಳ ಹೂರಣದಲಿ

ಹಿಂದೂಸ್ಥಾನದ ಹೊಸ ಹೊಸ್ತಿಲಲಿ,

ಹಚ್ಚಿದ್ದ ಹಣತೆಯ ಹಿಡಿಗಿಚ್ಚು ಹುಣ್ಣಿಮೆಯಂತೆ ಹರಡಿತು

ಹಳ್ಳಿ-ಹಳ್ಳಿಯ ಹಟ್ಟಿಯೊಳಗಿನ ಹೃದಯಗಳಲಿ

 

ಹೆಂಗಸರು, ಹುಡುಗ-ಹುಡುಗಿಯರು,

ಹಸಿಗೂಸುಗಳು, ಹೇಳಲು ಹೆಸರಿಲ್ಲದ ಹುಚ್ಚರೂ

ಹೊರಾಡುತಿದ್ದರು ಹೊಂಗನಸ ಹೊತ್ತು

ಹೊಸ ಹುಮ್ಮಸ್ಸಿನಲಿ, ಹಿಂದೂಸ್ಥಾನದಲಿ

 

ಹೊಗೆಯಾಡಿದ ಹಗೆತನಕೆ

ಹೋರಾಟದ ಹಾದಿ ಹಳ್ಳ ಹಿಡಿಯಿತು,

ಹಿರಿತನವ ಹೊತ್ತ ಹೆಣ್ಣು ಹಾಡಿದಳು ಹಳೆಯ ಹಾಡನು ಹೊಸದಾಗಿ,

ಹಡಗಿನವರ ಹೊಸಹೆಜ್ಜೆಯಾರಂಭ, ಹಂತ ಹಂತವಾಗಿ

 

ಹೋರಾಟಗಾರರ ಹೊಸ ಹುರುಪು,

ಹುಟ್ಟುತಿದ್ದ ಹೊಸ ಹಾಡುಗಳು,

ಹಿಡಿಕಿಚ್ಚ ಹೊಲಿಯುತಿದ್ದವು ಹೃದಯದಲಿ

ಹರಿದ ಹಿಂದೂಸ್ಥಾನವನು ಹೊಲಿವ ಹಿಗ್ಗಿನಲಿ

 

ಹೈರಾಣಾದ ಹಳ್ಳಿಗಳಲ್ಲಿ ಹಟ್ಟಿಗಳು ಹಾಳಾಗಿವೆ,

ಹೇಳಲು ಹೆಸರುಳಿಯಲಿಲ್ಲ ಹಲವರಿಗೆ,

ಹೆತ್ತವಳ ಹಿರಿಮೆಯನೆತ್ತರಕೇರಿಸಿ

ಹಳಯಿಗೆ ಹಾರಿಸುವ ಹಠಕ್ಕಾಗಿ

 

ಹಮ್ಮಿನಿರುಳಲಿ ಹಣತೆಯ ಹಸ್ತಾಂತರ,

ಹಿಂದೂಸ್ಥಾನದ ಹೊಸ್ತಿಲಿಗೆ ಹೊಸಹೂವು,

ಹೋರಾಡಿದವರ ಹೃದಯದಲಿ ಹರುಷದ ಹೊನಲು,

ಹಳಯಿಗೆ ಹಾರಲು ಹನಿಗೂಡಿತು ಹಿಂದೂಸ್ಥಾನದೊಡಲು...

 

Comments