ಭಾರತರತ್ನ ಭೀಮಣ್ಣ
ಭಾರತ ರತ್ನ ಡಾ. ಭೀಮಸೇನ ಜೋಶಿಯವರ ಕುರಿತಾದ ಈ ಪುಸ್ತಕವನ್ನು ಬರೆದವರು ಶಿರೀಷ್ ಜೋಶಿ ಇವರು. ಭೀಮಸೇನ ಜೋಶಿಯವರ ಬದುಕು-ಸಂಗೀತ ಸಾಧನೆಯ ಎತ್ತರಗಳನ್ನು ಪರಿಚಯಿಸುವ ಕೃತಿ ಇದು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರಾದ ಭೀಮಸೇನ ಜೋಶಿ ಅವರು ಬಾಲ್ಯದಿಂದಲೇ ಸಂಗೀತದ ಹುಚ್ಚು ಹಚ್ಚಿಕೊಂಡು, ಉತ್ತರ ಭಾರತದ ವಿವಿದೆಡೆಯೂ ಸಂಚರಿಸಿ, ಗುರುಗಳನ್ನು ಹುಡುಕಾಡಿ ಸಂಗೀತ ಕಲಿತರು. ನಂತರ ಅವರು ಮುಂಬೈನಲ್ಲಿ ಖಾಯಂ ಆಗಿ ನೆಲೆಸಿ, ಭಾರತದಾದ್ಯಂತ ಸಂಗೀತ ಕ್ಷೇತ್ರವನ್ನು ಆಸಕ್ತರಿಗೆ ಆತ್ಮೀಯವಾಗಿಸಿದ್ದರು. ಇಂದಿಗೂ ಅವರ ಗಾಯನ ಕೇಳುವ ಆಸಕ್ತರು ಅಸಂಖ್ಯಾತ. ಇಂತಹ ಹಲವಾರು ಸಂಗತಿಗಳನ್ನು ಈ ಕೃತಿ ತಿಳಿಸುತ್ತದೆ.
ಲೇಖಕರಾದ ಪಂ. ಗಣಪತಿ ಭಟ್, ಹಾಸಣಗಿಯವರು ತಮ್ಮ ಮುನ್ನುಡಿಯಲ್ಲಿ “ಭೀಮಣ್ಣ ಅವರ ಸಂಗೀತ ರಸಯಾತ್ರೆಯ ಮೈಲುಗಲ್ಲುಗಳನ್ನೂ ಗುರುತಿಸುತ್ತ, ಕ್ರಿಟಿಕಲ್ ಆಗಿ ವಿಮರ್ಶಿಸುತ್ತ, ರೆಫರೆನ್ಸ್ ಗಳ ಮೂಲಕ ಅದನ್ನು ಪರಾಮರ್ಶಿಸುತ್ತ ಒಂದು ಸುದೀರ್ಘವಾದ ಮತ್ತು ಅಷ್ಟೇ ಪ್ರಬುದ್ಧವಾದ ರಾಗವಿಸ್ತಾರದ ಹಾಗೆ ಬರವಣಿಗೆಯನ್ನು ಮಾಡುವುದು ಅಷ್ಟು ಸುಲಭವಲ್ಲ. ಅದೂ ಕೂಡ ಸಮಯ, ಶ್ರಮ, ಅಧ್ಯಯನ, ಚಿಂತನೆ, ಮನನ ಮುಂತಾಗಿ ಅನೇಕ ಹಂತಗಳನ್ನು ಹಾದು ಶಬ್ದಗಳ ಮೂಲಕ ಅಭಿವ್ಯಕ್ತಿಗೊಳ್ಳುವ ಹೊತ್ತಿಗೆ ಸಂಗೀತಗಾರನೊಬ್ಬನಿಗೆ ಕಾರ್ಯಕ್ರಮದ ಮೊದಲು ‘ಹೆರಿಗೆ ಬೇನೆಯಂತಹ' ಸಂಕಟವಿರುತ್ತದೆಯೋ ಹಾಗೆಯೇ ಕೃತಿಗಾರನೊಬ್ಬನಿಗೆ ಅದು ಪೂರ್ಣ ಮುಗಿಯುವವರೆಗೂ ಇದ್ದೇ ಇರುತ್ತದೆ. ಆ ರೀತಿಯ ನೋವನ್ನು ಅನುಭವಿಸಿ ಯಶಸ್ವಿಯಾಗಿ, ಸಮರ್ಪಕವಾಗಿ ಮತ್ತು ಸಮರ್ಥವಾಗಿ ಭಾರತರತ್ನ ಭೀಮಣ್ಣ ಕೃತಿಯನ್ನು ಶಿರೀಷ್ ಜೋಶಿ ಕಟ್ಟಿಕೊಟ್ಟಿದ್ದಾರೆ.
ಸಂಗೀತದ ಕುರಿತಾಗಿ ಯಾವ ಜ್ಞಾನವಿಲ್ಲದಿದ್ದವರೂ ಕೂಡ ಇಲ್ಲಿ ವಿವರಿಸಲಾದ ಸಂಗತಿಗಳ ಮೂಲಕ ಈ ಕೃತಿಯನ್ನು ಆಸ್ವಾದಿಸಬಹುದು. ಸಂಗೀತದ ವಿದ್ಯಾರ್ಥಿಗಳಿಗಂತೂ ಇದು ಅಧ್ಯಯನಕ್ಕೆ ಪೂರಕವಾದ ಅತ್ಯುತ್ತಮ ಪರಾಮರ್ಶನ ಗ್ರಂಥ “ಎಂದು ಅಭಿಪ್ರಾಯ ಪಟ್ಟಿದ್ದಾರೆ.