ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯರ ನೆನಪಿನಲ್ಲಿ...
ಕೋಲಾರದ ಮುದ್ದೇನಹಳ್ಳಿಯೆಂಬ ಪುಟ್ಟ ಹಳ್ಳಿಯಲ್ಲಿ ೧೮೬೧ ಸಪ್ಟಂಬರ ೧೫ ರಂದು ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದ ಮಗುವಿನ ಹೆಸರು ಅಜರಾಮರವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಸ್ವತಃ ಪರಿಶ್ರಮ, ಏನಾದರೂ ಸಾಧಿಸಬೇಕೆಂಬ ಛಲ, ಭಗವಂತನ ಆಶೀರ್ವಾದ, ಪ್ರೋತ್ಸಾಹ ಇದ್ದಾಗ ಸಫಲತೆ ಸಿಗಬಹುದೆಂಬುದನ್ನು ತೋರಿಸಿಕೊಟ್ಟ ಮಹಾನುಭಾವರು. ಯಾವುದೇ ಕೆಲಸವಾದರೂ ಸರಿ, ಕೀಳಲ್ಲ, ನೀಡಿದ, ಮಾಡುವ ಕೆಲಸವನ್ನು ಶ್ರದ್ಧೆಯಲ್ಲಿ ಪೂರೈಸು, ಕೇವಲ ಅದೃಷ್ಟ ಮಾತ್ರ ಸಾಲದು, ನಿನ್ನ ಕೈಯಲ್ಲೂ ಇದೆ ಎಂದು ಸಾರಿದವರು, ಮಾಡಿ ತೋರಿಸಿ ಯಶಸ್ಸನ್ನು ಕಂಡವರು.
ಈ ಶತಮಾನದ ಅತ್ಯಂತ ಮೇಧಾವಿ ವ್ಯಕ್ತಿಯೆಂದರೂ ತಪ್ಪಾಗಲಾರದು. ಮೈಸೂರಿನ ನಾಲ್ಕನೆಯ ಕೃಷ್ಣರಾಜ ಒಡೆಯರ ಆಳ್ವಿಕೆಯ ಸಮಯದಲ್ಲಿ ದಿವಾನರಾಗಿದ್ದರು. ಕಾವೇರಿ ನದಿಗೆ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಜಗತ್ಪ್ರಸಿದ್ಧ. ಅಗಾಧ ಜಲರಾಶಿಯನ್ನು ಸಂಗ್ರಹಿಸುವ ಇವರ ಆಲೋಚನೆಗೆ ತಲೆದೂಗಲೇ ಬೇಕು. ಇವರನ್ನು ಕಾಯಕ ಯೋಗಿಯೆಂದರೂ ತಪ್ಪಾಗಲಾರದು. ನಾಡುನುಡಿಗೆ ಸಲ್ಲಿಸಿದ ಸೇವೆ ಅಪಾರವಾದುದು. ತಾಂತ್ರಿಕ ಕ್ಷೇತ್ರದಲ್ಲಿ ಬಹಳಷ್ಟು ದುಡಿದವರು. ಇವರ ದೂರದೃಷ್ಟಿ ,ಸಮಾಜಮುಖಿ ಚಿಂತನೆಗಳು, ಬಡವರ ಮೇಲಿನ ಕಾಳಜಿ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾಲೇಜ್ ಸ್ಥಾಪನೆ, ಸೌಲಭ್ಯಗಳು, ಸಾರ್ವಜನಿಕ ಗ್ರಂಥಾಲಯಗಳು, ಹಾಸ್ಟೆಲ್ ಗಳ ನಿರ್ಮಾಣ, ಕೈಗಾರಿಕೆಗಳು ಮುಂತಾದ ಬಹುಜನರ ಜೀವನಕ್ಕೆ ಅಗತ್ಯವಾದುದ್ದನ್ನು ಸ್ಥಾಪಿಸಲು ಕಾರಣರಾದರು. ಇದರಿಂದ ಆರ್ಥಿಕ ಅಭಿವೃದ್ಧಿಯೂ ಆಯಿತು. ಆಧುನಿಕ ಮೈಸೂರನ್ನು ಹುಟ್ಟುಹಾಕಿದವರು ಇವರೇ ಎಂದೂ ಹೇಳಬಹುದು. ಹೈದರಾಬಾದಿನಲ್ಲಿ ಪ್ರವಾಹ ಬಂದ ಕಾಲದಲ್ಲಿ ನಿಜಾಮರಿಂದ ವಿಶ್ವೇಶ್ವರಯ್ಯನವರಿಗೆ ಕರೆ ಬಂದು, ಅಲ್ಲಿ ಹೋಗಿ ರಕ್ಷಣೆಗಾಗಿ ಆಲೋಚಿಸಿ, ಸುಮಾರು ೧೫-೧೬ ಮೈಲುಗಳ ದೂರದಲ್ಲಿ ಓಸ್ಮಾನ್ ಮತ್ತು ಹಿಮಾಯತ್ ಸಾಗರಗಳನ್ನು ನಿರ್ಮಿಸಲು ಕಾರಣರಾಗಿ, ಪ್ರವಾಹದ ವೇಗವನ್ನು, ಹಾನಿಯನ್ನು ತಡೆಗಟ್ಟಿದರು. ಒಳಚರಂಡಿ, ನೀರಿನ ಕಾಲುವೆಗಳ ವ್ಯವಸ್ಥೆ ಮಾಡಿದರು. ಕನ್ನಂಬಾಡಿ ಕಟ್ಟೆಯ ತೆರೆದ ಬಾಗಿಲುಗಳಿಂದ ಧುಮ್ಮಿಕ್ಕುವ ಜಲಧಾರೆ ನೋಡಿದಾಗ, ಎಂಥ ಅದ್ಭುತ ಶಕ್ತಿ ಶ್ರೀಯುತರದ್ದೆಂದು ಅನಿಸುತ್ತದೆ. ತುಂಬಾ ಬಡತನದಲ್ಲಿಯೇ ಬೆಳೆದ ಶ್ರೀಯುತರು ಬಡವರ ಕಷ್ಟಗಳನ್ನು ಅರ್ಥಮಾಡಿಕೊಂಡವರು. ತಂದೆಯನ್ನು ಕಳಕೊಂಡ ಇವರು ತಾಯಿಯ ಕಷ್ಟವನ್ನು ನೋಡಿ ಮರುಗುತ್ತಿದ್ದರು. ಸೋದರಮಾವನ ಸಹಕಾರದಿಂದ ವಿದ್ಯಾಭ್ಯಾಸವನ್ನು ಪೂರೈಸಿದರು. ಕಷ್ಟದ ಬದುಕನ್ನು ಎದುರಿಸಿ ಮೇಲೇರಬೇಕೆಂಬ ಉತ್ಸಾಹ, ಚೇತನವಿತ್ತು, ಶ್ರದ್ಧೆಯಿತ್ತು, ಸಂಕಲ್ಪವಿತ್ತು, ಖರ್ಚುವೆಚ್ಚಗಳಿಗೆ ಹಣವಿಲ್ಲದಾಗ ಮನೆಪಾಠ ಹೇಳಿಕೊಡುತ್ತಿದ್ದರು. ಪ್ರತಿಭಾವಂತರಾದ ಕಾರಣ ವಿದ್ಯಾರ್ಥಿವೇತನ ಸಿಗುತ್ತಿತ್ತು. ಮುಂಬಯಿ ನಗರದ ಪಿ.ಡಬ್ಲ್ಯೂ.ಡಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಮೊದಲು ಕೆಲಸ ಸಿಕ್ಕಿತು. ಕರ್ತವ್ಯದ ಸಮಯದಲ್ಲಿ ಹಲವಾರು ಅನ್ವೇಷಣೆಯನ್ನು ಕೈಗೊಂಡರು. ಬ್ರಿಟಿಷರ ಆಡಳಿತವಿದ್ದ ಯೆಮೆನ್ ದೇಶದಲ್ಲಿ ಕುಡಿಯುವ ನೀರಿಗಾಗಿ ನಡೆಸಿದ ಸಂಶೋಧನೆ ಹಾಗೂ ವ್ಯವಸ್ಥೆಯನ್ನು ಮೆಚ್ಚಿದ ಏಡನ್ ಸರಕಾರವು ಶ್ರೀಯುತರಿಗೆ ಕೈಸರ್-ಎ-ಹಿಂದ್ ಬಿರುದನ್ನು ನೀಡಿ ಗೌರವಿಸಿತು.
ಮೈಸೂರು ಸಂಸ್ಥಾನದಲ್ಲಿ ಕರ್ತವ್ಯಕ್ಕೆ ಸೇರಿದ ಮೇಲೆ ಕಾರ್ಖಾನೆಗಳ ಅಭಿವೃದ್ಧಿ,ತಾಂತ್ರಿಕ ಶಿಕ್ಷಣ, ಕೈಗಾರಿಕೆಯ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಟ್ಟರು. ದೇಶದ ಅತ್ಯುನ್ನತ ಪ್ರಶಸ್ತಿ ‘ಭಾರತರತ್ನ’ 1955ರಲ್ಲಿ ಮುಡಿಗೇರಿತು. 1962ನೇ ಎಪ್ರಿಲ್ 12 ರಂದು ವಿಧಿವಶರಾದರು. ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಸಮಯ ಪರಿಪಾಲನೆ, ಅತ್ಯಂತ ಜವಾಬ್ದಾರಿ ನಿರ್ವಹಿಸುವಿಕೆ, ತಂತ್ರಜ್ಞಾನ ಕ್ಷೇತ್ರದಲ್ಲಿ ದೂರದೃಷ್ಟಿ, ದುಡಿಮೆಯ ಮಹತ್ವದಲ್ಲಿ ತಮ್ಮ ಬದುಕನ್ನು ನಾಡಿನ ಏಳಿಗೆಗಾಗಿ ದುಡಿದ ಮಹಾನ್ ಚೇತನ ಸರ್ ಎಂ ವಿಶ್ವೇಶ್ವರಯ್ಯನವರ ಜನುಮ ದಿನವನ್ನು “ಇಂಜಿನಿಯರ್ಸ್ ಡೇ” ಎಂಬುದಾಗಿ ಘೋಷಿಸಿ ನ್ಯಾಯ ಒದಗಿಸಲಾಗಿದೆ. ತಾಂತ್ರಿಕ ಕ್ಷೇತ್ರದಲ್ಲಾಗುವ ನವನವೀನ ಸಂಶೋಧನೆ, ಕೆಲಸಕಾರ್ಯಗಳನ್ನು ನಿಭಾಯಿಸಿ, ದೇಶದ ಆರ್ಥಿಕ ಪ್ರಗತಿಗೆ ಸಹಕರಿಸುತ್ತಿರುವ ಎಲ್ಲಾ ಅಭಿಯಂತರರಿಗೂ ಅಭಿನಂದನೆಗಳು. ವಿಶ್ವೇಶ್ವರಯ್ಯನವರನ್ನು ನೆನಪಿಕೊಳ್ಳುತ್ತಾ ಅವರ ಜನ್ಮ ದಿನಕ್ಕೊಂದು ಕಿರು ಲೇಖನ.
-ರತ್ನಾ ಕೆ ಭಟ್,ತಲಂಜೇರಿ
(ವಿವಿಧ ಮೂಲಗಳಿಂದ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ