ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು

ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು

ಬರಹ

 

(ನಗಾರಿ ಕಿರಿಕಿರಿ ಕ್ರಿಕೆಟ್ಟು ಬ್ಯೂರೋ)

ಅಫಘಾನಿಸ್ತಾನದ ಬಾಡಿಗೆ ಹಂತಕರು, ತಮ್ಮದೇ ಸೈನ್ಯದ ಬೇನಾಮಿ ಸೈನಿಕರು, ಬಲೂಚಿಸ್ತಾನದ ಬುಡಕಟ್ಟು ಪಂಗಡದ ಯೋಧರನ್ನು ಭಾರತದೊಳಕ್ಕೆ ನುಗ್ಗಿಸಿ ಭಾರತೀಯ ಸೇನೆಯ ತಾಣಗಳ ಮೇಲೆ, ಕಾಶ್ಮೀರದಲ್ಲಿನ ಮುಸ್ಲಿಮೇತರ ಜನರ ಮೇಲೆ ದಾಳಿ ನಡೆಸಿ ಅದನ್ನು ಜಿಹಾದ್, ಸ್ವಾತಂತ್ರ್ಯ ಹೋರಾಟ, ಧರ್ಮ ಯುದ್ಧ ಎಂದು ಕರೆದುಕೊಂಡು ಹೆಮ್ಮೆಯಿಂದ ಸೋಲುತ್ತಿದ್ದ ಪಾಕಿಸ್ತಾನ ತನ್ನ ಹೋರಾಟವನ್ನು ಹೊಸತೊಂದು ಎತ್ತರಕ್ಕೆ ಕೊಂಡೊಯ್ದದ್ದು ಇತ್ತೀಚೆಗೆ. ಆಟದ ಮೈದಾನದಲ್ಲಿ ನಡೆಯುವ ಕಾಳಗವನ್ನು ಬೌಂಡರಿ ಲೈನ್ ದಾಟುತ್ತಿದ್ದಂತೆಯೇ ಮರೆತು ಬಿಡಬೇಕು ಎಂದು ವಿವೇಕಿ ಕ್ರಿಕೆಟಿಗರು ಹೇಳಿದ್ದಾರಾದರೂ ಈ ಬೌಂಡರಿಯಿಲ್ಲದ, ಮಿತಿಯಿಲ್ಲದ, ಮತಿಯಿಲ್ಲದ ಭಯೋತ್ಪಾದಕರಿಗೆ ಶ್ರೀಲಂಕಾದ ಕ್ರಿಕೆಟಿಗರೂ ಗುರಿಯಾದದ್ದು ದುರದೃಷ್ಟಕರ. ಅಷ್ಟು ಮಂದಿ ಆಟಗಾರರು ಎದುರು ಸಿಕ್ಕರೂ ಒಂದೂ ಗುರಿಯನ್ನು ಸರಿಯಾಗಿ ಮುಟ್ಟದಂತೆ ಶೂಟ್ ಮಾಡಿದ ಭಯೋತ್ಪಾದಕರಿಗೆ ತರಬೇತಿ ಸಿಕ್ಕಿದ್ದು ಪಾಕಿಸ್ತಾನದಲ್ಲೇ ಎಂದು ಸಾಬೀತು ಮಾಡಲು ಬೇರೆ ಸಾಕ್ಷಿಗಳೇ ಬೇಕಿಲ್ಲ.

ಲಂಕನ್ ಕ್ರಿಕೆಟ್ ತಂಡದೊಂದಿಗೇ ತಾವೂ ಹೊರಡುತ್ತಿದ್ದ ಪಾಕಿಸ್ತಾನದ ತಂಡ ಆ ದಿನ ಮಾತ್ರ ಹಿಂದಕ್ಕೆ ಉಳಿಯಲು ಯಾವ ಕೋಚು ಚಿಟ್ ಕಳುಹಿಸಿರಬೇಕು ಎಂದು ಜಗತ್ತೇ ತಲೆ ಕೆಡಿಸಿಕೊಂಡು ಕೂತಿರುವಾಗ ನಾವು ಸತ್ಯಶೋಧನೆಗಾಗಿ, ಕಾಣದ ಕೈಗಳ ಕೈವಾಡದ ತನಿಖೆಗಾಗಿ ನಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಪಾಕಿಸ್ತಾನಕ್ಕೆ ಅಟ್ಟುತ್ತಿದ್ದೇವೆ.

ಪಾಕಿಸ್ತಾನವೆಂಬ ‘ಪಾತಕಿ ಸ್ಥಾನ’ದಲ್ಲಿ ಬಾಳುವೆ ಮಾಡುವುದಕ್ಕಿರಲಿ, ಆಟವಾಡುವುದಕ್ಕೂ ಜಗತ್ತು ಹೆದರುವಂತಾಗಿದೆ. ಜಗತ್ತಿನ ಕ್ರಿಕೆಟ್ ವೀರರೆಲ್ಲಾ ಪಾಕಿಸ್ತಾನಕ್ಕೆ ಕಾಲಿಡಲು ಭಯಭೀತರಾಗಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಭಾರತ ಯಾವ ಕಾಲದಿಂದಲೂ ಜರೆಯುತ್ತಿದ್ದರೂ ಅದನ್ನು ಪ್ರತಿನಿತ್ಯ ಕೇಳುವ ದೂರದ ದೇವಸ್ಥಾನದ ಗಂಟೆಯ ನಾದದ ಹಾಗೆ ಭಾವಿಸಿ ಮೈಮರೆಯುತ್ತಿದ್ದ ಜಗತ್ತು ಈಗ ಎಚ್ಚೆತ್ತುಕೊಂಡಿದ್ದೆ. ಗಂಟೆಯ ಸದ್ದಿಗೆ ತಲೆದೂಗಿಸುತ್ತಿದೆ.

ಆದರೆ ಅದರ ನಡುವೆಯೇ ಅತ್ಯಂತ ಕರ್ಕಶವಾದ ಸದ್ದೊಂದು ಕೇಳಿಬರಲು ತೊಡಗಿದೆ. ಪಾಕಿಸ್ತಾನವೆಂಬ ಹೋಲಿಕೆಗೆ ಸಿಗದ ದೇಶದ ಜೊತೆಗೆ ಭಾರತದ ಹೆಸರನ್ನೂ ತಳುಕು ಹಾಕಲಾಗುತ್ತಿದ್ದ. ಜಗತ್ತಿನಾದ್ಯಂತ ಕ್ರಿಕೆಟ್ ಕಲಿಗಳು  ಪಾಕಿಸ್ತಾನ ಮಾತ್ರವಲ್ಲ ಭಾರತದ ಹೆಸರು ಕೇಳಿದರೂ ನಮ್ಮ ತೊಡೆಗಳು ನಡುಗುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಜೊತೆಗೆ ಭಾರತವೂ ತಮಗೆ ದುಃಸ್ವಪ್ನವನ್ನು ತರಿಸುತ್ತಿವೆ ಎಂದು ವರದಿ ಮಾಡಿದ್ದಾರೆ. ಪಾಕ್ ಜೊತೆಗೆ ಭಾರತವನ್ನೂ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕಾಗಿ ಒಕ್ಕೊರಲಿನಿಂದ ಆಗ್ರಹಿಸುತ್ತಿವೆ. ಈ ಆಗ್ರಹದ ಧ್ವನಿಗೆ ಕ್ರಿಕೆಟ್ ಜಗತ್ತಿನದಲ್ಲದೆ ಇತರ ಧ್ವನಿಗಳೂ ಸೇರಿಕೊಂಡಿವೆ.

ಇವರ ಆಗ್ರಹಕ್ಕೆ ಕಾರಣವೇನೆಂದು ನಮ್ಮ ಆತ್ಮೀಯ ಗೆಳೆಯ ತೊಣಚಪ್ಪನವರು ವಿಚಾರಿಸಿದಾಗ ಆಸ್ಟ್ರೇಲಿಯಾ ತಂಡದ ಹೆಸರು ಹೇಳಲಿಚ್ಚಿಸದ ಆಟಗಾರನೊಬ್ಬ ಹೀಗೆಂದ, “ಭಾರತ ಭಯೋತ್ಪಾದಕ
ರಾಷ್ಟ್ರವಾಗಿದೆ. ಅದರ ಹೆಸರು ಕೇಳಿದರೆ ನಮ್ಮ ಆಟಗಾರರು ಭಯದಿಂದ ತತ್ತರಿಸಿ ಹೋಗುತ್ತಾರೆ. ಹಿಂದೆಯೂ ಅನೇಕ ಬಾರಿ ಇಂತಹ ಘಟನೆಗಳು ನಡೆದಿದ್ದವು. ಇಡೀ ಭಾರತ ತಂಡವಲ್ಲ, ಅದರ ಒಬ್ಬ ಆಟಗಾರನನ್ನು ಕಂಡು ನಮ್ಮ ತಂಡವೇ ಭಯಭೀತಗೊಂಡಿತ್ತು. ನಮ್ಮ ತಂಡದ ಪ್ರಮುಖ ಸ್ಪಿನ್ ಬೌಲರ್ ಕನಸಿನಲ್ಲಿ ಆ ಆಟಗಾರ ಬಂದು ಭಯವನ್ನು ಹುಟ್ಟಿಸುತ್ತಿದ್ದ. ಹೇಗೋ ಭಾರತದ ಸರಣಿ ಪ್ರವಾಸದ ಸಂದರ್ಭದಲ್ಲಿ ಕಲಿತಿದ್ದ ‘ರಾಮ ರಕ್ಷಾ ಸ್ತೋತ್ರ’ವನ್ನು ಪಠಿಸಿ ಆತನನ್ನು ಸಹಿಸಿಕೊಂಡು ಆಡುತಿದ್ವಿ. ಆದರೆ ಈಗ ಇಡೀ ತಂಡಕ್ಕೆ ತಂಡವೇ ಭಯೋತ್ಪಾದಕ ಯುನಿಟ್ ಆಗಿದೆ. ಅವರ ಮೇಲೆ ಆಡಿದ ಎಲ್ಲಾ ತಂಡಗಳೂ ಸೀರೀಸ್ ಸೋಲುವುದರ ಜೊತೆಗೆ ಆ ತಂಡದ ನಾಯಕ ತಲೆ ದಂಡ ಕೊಡಬೇಕಾಗಿ ಬಂತು. ನೋಡಿ, ಈ ಧೋನಿ ಎಂಬ ಬಂಡು ಕೋರನ ನಾಯಕತ್ವದಲ್ಲಿ
ಭಾರತ ಕ್ರಿಕೆಟ್ ತಂಡ ನಡೆಸಿರುವ ಭಯೋತ್ಪಾದನೆಯನ್ನ, ಇವರು ಸತತವಾಗಿ ಆರು ಸರಣಿಗಳನ್ನು ಗೆದ್ದಿದ್ದಾರೆ. ನಮ್ ತಂಡದ ಮೇಲೆ ಆಡಿ ಮಣಿಸಿದ ನಂತರ ನಮ್ಮದೇ ದೇಶದ ಮಂದಿ ನನ್ನನ್ನು
ಶತ್ರುವಾಗಿ ಕಾಣಲು ಶುರುಮಾಡಿದ್ರು, ಗಾಯವಾಗದಿದ್ದರೂ, ಆಯಾಸವಾಗದಿದ್ದರೂ ನನಗೆ ವಿಶ್ರಾಂತಿ ಕೊಟ್ಟು ಕೂರುವಂತೆ ಮಾಡಿದರು. ಅಲ್ಲಿ ಇಂಗ್ಲೆಂಡಿನಲ್ಲಿ ಪೀಟರ್ ಸನ್ನಿಗೆ ಗೂಸಾ ತಿನ್ನಿಸಿದರು. ಶ್ರೀಲಂಕಾದ ನಾಯಕ ಪದವಿ ತ್ಯಾಗ ಮಾಡುವ ಮಾತನಾಡಿದ. ಜೊತೆಗೆ ಈ ಭಯೋತ್ಪಾದಕ ತಂಡಕ್ಕೆ ಸಿಕ್ಕುತ್ತಿರುವ ಆರ್ಥಿಕ ಬೆಂಬಲವೂ ಸಹ ಅಗಾಧ ಮಟ್ಟದ್ದಾಗಿದೆ. ನಮ್ ನೆಲದ ಮೇಲೆ ಬಂದು ನಮ್ಮನ್ನೇ ಎದುರು ಹಾಕಿಕೊಂಡ ಭಜ್ಜಿ ಸಿಂಗರನ್ನು ನಾವು ಏನೂ ಮಾಡಲಾಗಲಿಲ್ಲ. ಅದೇ ಕೊರಗಿನಲ್ಲಿ ನಮ್ ಸೈ-ಮೊಂಡನು ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾನೆ. ಇಷ್ಟೆಲ್ಲಾ ಕಷ್ಟ ನಷ್ಟ, ಧ್ವಂಸ-ದಾಳಿಯನ್ನು ಮಾಡಿದ ಭಾರತವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕಾಗಿ ನಾನು ಸಮಸ್ತ ಕ್ರಿಕೆಟ್ ಜಗತ್ತಿನ ಪರವಾಗಿ ಆಗ್ರಹಿಸುತ್ತೇನೆ.”

ಆಸ್ಟ್ರೇಲಿಯಾ ನಾಯಕನ ಈ ಮಾತಿಗೆ ತಮ್ಮ ಧ್ವನಿಯನ್ನು ಸೇರಿಸಿರುವ ಅನೇಕರು, “ಭಾರತಕ್ಕೆ ಹೆದರಿ ನಮ್ಮ ದೇಶದ ಅಧ್ಯಕ್ಷ ಹೊರಗುತ್ತಿಗೆಯನ್ನು ನಿಯಂತ್ರಿಸುವ, ತನ್ನದೇ ದೇಶದ ಕಂಪೆನಿಗಳಿಗೆ ನಷ್ಟವುಂಟು ಮಾಡುವ ನಿರ್ಧಾರ ಮಾಡಬೇಕಿದೆ. ಕ್ರಿಕೆಟ್ಟಿನಲ್ಲಿ ಪುರುಷರ ತಂಡ ಮಾಡಿದ ದಾಳಿ ಸಾಲದು ಎಂಬಂತೆ ಮಹಿಳೆಯರ ತಂಡವೂ ವರ್ತಿಸುತ್ತಿದೆ. ಒಬ್ಬನೇ ಭಾರತೀಯ ಎರಡು ಆಸ್ಕರ್ ಬಾಚಿದ್ದಾನೆ, ಭಾರತದ ಕತೆಯಿರುವ ಎರಡು ಸಿನೆಮಾಗಳು ಪ್ರಶಸ್ತಿಯನ್ನು ಗೋಣಿ ಚೀಲಗಳಲ್ಲಿ ತುಂಬಿಕೊಂಡು ಪರಾರಿಯಾಗಿವೆ. ನಮಗಿಂತ ನಿಖರವಾಗಿ ಚಂದ್ರನನ್ನು ಪರಿಚಯಮ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗೇ ಮುಂದುವರಿದರೆ ಭಾರತದ ಭಯದಲ್ಲಿ ಜಗತ್ತಿನೆಲ್ಲಾ ರಾಷ್ಟ್ರಗಳು ಅಳುತ್ತಾ ಕೂರುವುದು ನಿಶ್ಚಿತ. ಅದಕ್ಕೇ ಭಾರತವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲೇ ಬೇಕು.” ಎಂದು ನಮ್ಮ ತೊಣಚಪ್ಪನವರಲ್ಲಿ ತಮ್ಮ ದುಃಖ ತೋಡಿಕೊಂಡರು.

ತಮ್ಮ ಸಂದರ್ಶನವನ್ನು ಮುಗಿಸಿಕೊಂಡು ತೊಣಚಪ್ಪನವರು ವಿಮಾನ ನಿಲ್ದಾಣದಲ್ಲಿನ ನೌಕರಿಗೆ, ವಿಮಾನದೊಳಗಿನ ಗಗನ ಸಖಿಯರಿಗೆ ತಮ್ಮ ಭಾರತದ ಪಾಸ್ ಪೋರ್ಟ್ ತೋರಿಸಿ ಭಯ
ಹುಟ್ಟಿಸಿದ ಘಟನೆ ತಡವಾಗಿ ವರದಿಯಾಗಿದೆ.

(ಚಿತ್ರ: ಸಾಮ್ರಾಟರ ಕೈಚಳಕ)