ಭಾರತಿ ಹೆಜ್ಜೆ...

ಭಾರತಿ ಹೆಜ್ಜೆ...

ಬರಹ

 ನಟಿ ಭಾರತಿ...


ತಮ್ಮ ಚಿತ್ರ ಬದುಕನ್ನ ಮತ್ತೆ ನೆನೆಪಿಸಿಕೊಂಡಿದ್ದಾರೆ. ನಡೆದು ಬಂದ "ಬೆಳ್ಳಿ ಹೆಜ್ಜೆ"ಯನ್ನ ಮನಸಾರೆ ತಿರುವಿ ಹಾಕಿದ್ದಾರೆ. ಏನು ಹೇಳಲು ಸಾಧ್ಯವೋ ಅದನ್ನೆಲ್ಲ ಕನಾರ್ಟಕ ಚಲನ ಚಿತ್ರ ಅಕಾಡೆಮಿ ತಿಂಗಳ ಪ್ರತಿ ಎರಡನೇ ಶನಿವಾರ ಆಯೋಜಿಸುವ "ಬೆಳ್ಳಿ ಹೆಜ್ಜೆ" ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾರೆ. ಹೆಚ್ಚು ಕಡಿಮೆ ಗಂಟೆ ನಡೆಯುವ ಬೆಳ್ಳಿ ಹೆಜ್ಜೆಯಲ್ಲಿ ಸಾಕಷ್ಟು ವಿಷಯಗಳನ್ನ ನೆನಪಿಸಿಕೊಂಡಿದ್ದಾರೆ. ಅವುಗಳಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಇಲ್ಲಿವೆ ಓದಿ ಎಂಜಾಯ್ ಮಾಡಿ....

ಭಾರತಿಯವರು ಕನ್ನಡದವರೇ. ಹಾಗಂತ ಇದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಓದುತಿದ್ದಾಗಿನ ದಿನಗಳವು. ಕಾಲೇಜಿನ ಕಾರ್ಯಕ್ರಮದಲ್ಲಿ ಗೆಳೆತಿಯೊಂದಿಗೆ ಕಾಣಿಸಿಕೊಂಡ ಸಂತದ ಕ್ಷಣಗಳು. ಅದೇ ಖುಷಿಯಲ್ಲಿಯೇ ಕಾಲೇಜಿನವರು ನೋಟೀಸ್ ಬೋರ್ಡ್ ನಲ್ಲಿ ಭಾರತಿ ಮತ್ತು ಅವರ ಗೆಳತಿ ಫೋಟೊ ಅಂಟಿಸಿದ್ದರು. ಅದೃಷ್ಟವೋ ಏನೋ. ಇದನ್ನ ನೋಡಿದ ನಟ ಕಲ್ಯಾಣಕುಮಾರ್ ಮತ್ತು ಚಿನ್ನಿ ಸಂಪತ್ತ ಭಾರತಿಯವರನ್ನ ಆಡಿಷನ್ ಗೆ ಕರೆದಿದ್ದರು. ಇದಾದ ಮೇಲೆ ಎಲ್ಲವೂ ನಾರ್ಮಲ್ ಡೇಸ್.

ಆದ್ರೆ, ಒಂದು ದಿನ ಅವರ ತಂದೆ ಕಾಲೇಜಿಗೆ ಬಂದಿದ್ದರು. ಬಂದೊಡನೆಯೇ ಅಮ್ಮ ನಾವೀಗ ಮದ್ರಾಸಿಗೆ ಹೋಗಬೇಕು. ನಡೆ ಬೇಗ ಅಂದ್ರು. ಆದ್ರೆ, ಭಾರತಿಯವರಿಗೆ ಒಂದೂ ಗೊತ್ತಾಗ್ತಿಲ್ಲ. ನಾನೇಕೆ ಮದ್ರಾಸ್ ಗೆ ಹೋಗಬೇಕು. ಓದು ಬಿಟ್ಟು ನಾನೇಕೆ ಹೋಗಬೇಕು. ಇಂತಹ ಪ್ರಶ್ನೆಯನ್ನ ತಂದೆಗೆ ಕೇಳಿದ್ದೇ ಕೇಳಿದ್ದು. ಅಷ್ಟೇ,ಅಲ್ಲ. ಒಲ್ಲೆ ಎಂದು ಅತ್ತಿದ್ದೇ ಅತ್ತಿದ್ದು. ಆದ್ರೂ, ಅಪ್ಪ ಕೇಳಲಿಲ್ಲ. ಕಾಲೇಜಿನ ಗುರುಗಳು ನಾಯಕಿಯಾಗುವ ಅವಕಾಶ ಅಂತ ಹೇಳೋದನ್ನ ಬಿಡಲಿಲ್ಲ. ಕೊನೆಗೆ ಭಾರತಿಯೆಂಬ ಕಾಲೇಜು ಯುವತಿ ಮದ್ರಾಸ್ ಗೆ ಬಂದೇ ಬಿಟ್ಟರು.

ದುರಾಷ್ಟವೋ ಏನೋ. ಮೊದಲ ಆಫರ್ ಚಿತ್ರ ಪೂರ್ಣಗೊಳ್ಳಲೇ ಇಲ್ಲ. ಆದ್ರೂ, ಕರೆತಂದ ಚಿನ್ನಿ ಸಂಪತ್ತ ಅವರು ಮದ್ರಾಸ್ ನಲ್ಲಿ ಬಿ.ಆರ್ ಪಂತಲು ಅವರನ್ನ ಪರಿಚಿಯಿಸಿದರು. ಅದರ ಫಲ "ದುಡ್ಡೇ ದೊಡ್ಡಪ್ಪ" ಚಿತ್ರದಲ್ಲಿ ಭಾರತಿ ನಟಿಸಿದರು. ಅಲ್ಲಿಂದ ಅನೇಕ ಚಿತ್ರಗಳಲ್ಲಿ ಭಾರತಿಯವರ ಅಭಿನಯ ಪಂತಲು ಅವರ ಹಲವು ಪಿಕ್ಚರ್ ಗಳಲ್ಲಿ ಕಂಡು ಬಂತು. ಬಂಗಾರದ ಮನುಷ್ಯ, ಮೇಯರ್ ಮುತ್ತಣ್ಣದಂತಹ ಚಿತ್ರದಲ್ಲಿ ರಾಜ್ ಗೆ ಜೋಡಿಯಾಗಿದ್ದರು. ಬಂಗಾರದ ಜಿಂಕೆ ಚಿತ್ರದಲ್ಲಿ ಪತಿ ವಿಷ್ಣುವರ್ಧನ್ ಅವರೊಟ್ಟಿಗೆ ನಟಿಸಿದ್ದರು..ಕೃಷ್ಣದೇವರಾಯ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿಯೂ ಬಂತು. ಹೆಸರು ಎಲ್ಲಡೆ ರಾರಾಜಿಸಿತು.

ಕಾಲೇಜು ದಿನಗಳಲ್ಲಿ ಭಾರತಿಯವರಿಗೆ ಕ್ರೀಡೆ ಅಂದ್ರೆ ತುಂಬಾ ಇಷ್ಟ. ಶಾಲಾ ದಿನಗಳಲ್ಲಿ ಕಂಡಿತ ಒಂದಿಲ್ಲ ಒಂದು ಕ್ರೀಡೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕಾಲೇಜು ಮೆಟ್ಟಿಲೇರಿದ ನಂತರವೂ ಇದು ಮುಂದುವರೆದಿತ್ತು. ಶಾಲಾ ದಿನಗಳಲ್ಲಿಯ ಸಮವಸ್ತ್ರವನ್ನ ಧರಿಸಿಕೊಂಡೇ ಕಾಲೇಜಿಗೆ ಬಂದು ಆಟವಾಡಿದ್ದು ಇದೆ. ಅಷ್ಟೊಂದು ಕ್ರೀಡಾಸಕ್ತಿ ಭಾರತಿಯವರ ಮನದಲ್ಲಿ ಮನೆ ಮಾಡಿತ್ತು. ಸಂಗೀತದೆಡೆಗೂ ಒಂಚೂರು ಒಲವಿತ್ತು. ಆದ್ರೆ, ನಟಿಯಾದ ಮೇಲೆ ಬಹುತೇಕ ಎಲ್ಲವೂ ಮರೆತು ಹೋಯಿತು. ನಟನೆಯ ಕಲಿಕೆಯಲ್ಲಿಯೇ ಪಯಣ ಸಾಗಿತ್ತು. ಕನ್ನಡ ಸೇರಿದಂತೆ ತಮಿಳು.ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ಭಾರತಿ ನಟಿಸಿದರು. ಹಿಂದಿಯಲ್ಲೂ ಬೆಂಗಳೂರಿನ ಭಾರತಿ ಅಭಿನಯ ಕಣ್ಮನ ಸೆಳೆದಿತ್ತು.

ದಿಲೀಪ್ ಕುಮಾರ್ ಅವರೊಟ್ಟಿಗೆ ಸಹ ಭಾರತಿ ಕಾಣಿಸಿಕೊಂಡ್ರು. ಒಂದಲ್ಲ, ಎರಡಲ್ಲ ಎಷ್ಟೇ ಟೇಕ್ ತೆಗೆದುಕೊಂಡರೂ ಸಹನೆಯಿಂದ ಭಾರತಿ ನಟಿಸಿ ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಅವರಿಂದ ಬೇಷ್ ಅನಿಸಿಕೊಂಡ್ರು. ತಮ್ಮ ಶಿಸ್ತಿನಿಂದ ಎಲ್ಲಡೆ ಹೆಸರು ವಾಸಿಯಾದ ಭಾರತಿ ಈಗಲೂ ಹಾಗೇನೆ. ಹೇಳಿದ ಟೈಮ್ ಗೆ ಸರಿಯಾಗಿ ಸೆಟ್ ನಲ್ಲಿ ಹಾಜರಿರುತ್ತಿದ್ದರು. ತಮ್ಮ ಟೈಮ್ ಸೆನ್ಸ್ ನಿಂದಲೇ ಭಾರತಿಯವರು ಹಿಸ್ಟೋರಿಕಲ್ ಚಿತ್ರದ ಅವಕಾಶ ಪಡೆದಿದ್ದರು. ಅದ್ಯಾವುದೋ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪಂತಲು ಅವರು ಭಾರತಿಯವರ ಶಿಸ್ತು ನೋಡಿ ಬೆರಗಾಗಿದ್ದರು. ಐತಿಹಾಸಿಕ ಚಿತ್ರದ ಅವಕಾಶ ನೀಡುವುದಾಗಿಯೂ ಹೇಳಿದ್ರು.

ರೀತಿ ಪ್ರಶಂಸೆಗೆ ಪಾತ್ರವಾದ ನಟಿ ಇತ್ತೀಚಿನ "ರಾಜ್ ದಿ ಶೋ ಮ್ಯಾನ್" ಚಿತ್ರದ ಹಾಡೊಂದರಲ್ಲಿ ಪುನಿತ್ ಜೊತೆಗೆ ಡಾನ್ಸ್ ಮಾಡಿದ್ದರು. ಕವಿತಾ ಲಂಕೇಶ್ ಅವರ "ಪ್ರೀತಿ ಪ್ರೇಮ ಪ್ರಣಯ" ಚಿತ್ರದಲ್ಲಿ ಅನಂತ್ ನಾಗ್ ಪೇರ್ ಆಗಿ ಭಾರತಿ ಕಾಣಿಸಿಕೊಂಡ್ರು. ತಮ್ಮ ನೆನಪಿನ ಬುತ್ತಿಯನ್ನ "ಬೆಳ್ಳಿ ಹೆಜ್ಜೆ" ಯಲ್ಲಿ ಬಿಚ್ಚಿ ಹಲವರಿಗೆ ಬ್ಲ್ಯಾಕ್ ಅಂಡ್ ವೈಟ್ ದಿನದ ಕಲರ್ ಫುಲ್ ಕಥೆಯ ರಸದೌತಣ ನೀಡಿದರು.

- ರೇವನ್ ಪಿ.ಜೇವೂರ್