ಭಾರತೀಯತೆ - ಹಿಂದುತ್ವ - ಹವ್ಯಕ ಸಮ್ಮೇಳನ…
ಬರೆಯಬಾರದೆಂದಿದ್ದರೂ ಮನಸ್ಸು ತಡೆಯಲಿಲ್ಲ. ಸತ್ಯದ ಹುಡುಕಾಟದಲ್ಲಿ ನಿಂದನೆಗೆ ಒಳಗಾಗುವ ಸಾಧ್ಯತೆಯಿದ್ದರೂ ನಾವು ಕಂಡ ಸತ್ಯವನ್ನು, ನಮಗೆ ಅನಿಸಿದ ಅಭಿಪ್ರಾಯಗಳನ್ನು ಹೇಳಲೇಬೇಕಾಗುತ್ತದೆ. ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹವ್ಯಕ ಮಹಾಸಭಾ ಕಾರ್ಯಕ್ರಮ ಮೂರು ದಿನ ಅದ್ದೂರಿಯಾಗಿ ನಡೆಯಿತು. ಎಷ್ಟೋ ಜಾತಿ ಸಮಾವೇಶಗಳ ರೀತಿ ಇದೂ ಸಹ ಒಂದು.
ಆದರೆ ಅಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳು, ಸ್ವಾಮೀಜಿಗಳು, ಪತ್ರಕರ್ತರು, ಹಾಲಿ ನ್ಯಾಯಾಧೀಶರು, ಉದ್ಯಮಿಗಳು, ರಾಜಕಾರಣಿಗಳು, ಇತರ ವೃತ್ತಿಪರರು, ಅವರ ಭಾಷಣ, ಆ ಭಾಷಣದ ಒಟ್ಟು ಸಾರಾಂಶ, ಅದಕ್ಕೆ ಬಂದ ಪ್ರತಿಕ್ರಿಯೆ ಹೀಗೆ ಎಲ್ಲವನ್ನು ಗಮನಿಸುತ್ತಿದ್ದರೆ ಈ ದೇಶದ ಜಾತಿ ವ್ಯವಸ್ಥೆ ಇನ್ನಷ್ಟು ಆಳಕ್ಕೆ ಇಳಿಯುತ್ತಿದೆ, ಮುಖ್ಯವಾಗಿ ಬುದ್ಧಿವಂತ, ಸುಸಂಸ್ಕೃತ, ಸುಶಿಕ್ಷಿತ ಎಂದು ಕರೆಯಲಾಗುವ ಮೇಲ್ವರ್ಗದವರೇ ಈ ರೀತಿಯ ಜಾತಿ ಪೋಷಣೆ ಮಾಡುತ್ತಾ ಹೋದರೆ ದೇಶ ಮತ್ತೊಮ್ಮೆ ವಿಭಜನಾತ್ಮಕ ಮನಸ್ಥಿತಿಯ ಕಡೆ ಹೊರಳುವ ಎಲ್ಲ ಸಾಧ್ಯತೆಯೂ ಇದೆ.
ಏಕೆಂದರೆ ಈ ದೇಶಕ್ಕೆ ಇರುವ ಮೂರು ಬಹುದೊಡ್ಡ ಶಾಪಗಳಲ್ಲಿ ಒಂದು ಜಾತಿ ಪದ್ಧತಿ, ಎರಡು ಭ್ರಷ್ಟಾಚಾರ, ಮೂರು ಹಿಂದು ಮುಸ್ಲಿಂ ಕೋಮುವಾದ. ಇದನ್ನು ಎಷ್ಟು ಬೇಗ ತುಂಬಾ ಸೂಕ್ಷ್ಮವಾಗಿ ಗ್ರಹಿಸಿ, ಸಾಧ್ಯವಾದಷ್ಟು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿಸುತ್ತೇವೋ ಅಷ್ಟೂ ಒಳ್ಳೆಯದು. ಇಲ್ಲದಿದ್ದರೆ ತುಂಬಾ ಅಪಾಯಕಾರಿ ಅಂತ ತಲುಪುವ ಸಾಧ್ಯತೆ ಇದೆ.
ಅವರು ಸರಿಯಿಲ್ಲ ಅವರಿಂದ ನಮಗೆ ತೊಂದರೆ ಎಂದು ಇವರು, ಇವರು ಸರಿ ಇಲ್ಲ ಇವರಿಂದ ನಮಗೆ ತೊಂದರೆ ಎಂದು ಅವರು ಅನುಮಾನ ಪಡುತ್ತಾ ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಹೊರಿಸುತ್ತಾ ಭಾರತೀಯತೆ ಎಂಬ ಮೂಲ ಅಂಶವನ್ನೇ ಮರೆಯುತ್ತಿದ್ದಾರೆ. ಇಡೀ ದೇಶ ಛಿದ್ರ ಛಿದ್ರವಾಗಿದ್ದು, ಅನೇಕ ವಿದೇಶಿ ದಾಳಿ ಕೋರರಿಂದ ನಾಶವಾಗಿದ್ದು ಈ ಪ್ರತ್ಯೇಕತಾ ಮನೋಭಾವದಿಂದಲೇ. ಭಿನ್ನತೆಯಲ್ಲಿ ಐಕ್ಯತೆ ಭಾರತದ ವೈವಿಧ್ಯತೆ ನಿಜ. ಆದರೆ ದ್ವೇಷ ಅಸೂಯೆ, ಭಿನ್ನಾಭಿಪ್ರಾಯಗಳು ವೈವಿಧ್ಯತೆಯ ಸಮಾಜದ ಸಮಗ್ರತೆಗೆ ಗಂಡಾಂತರಕಾರಿ ಎಂಬುದೂ ಅಷ್ಟೇ ನಿಜ.
ಮನುಷ್ಯ ಕೇಂದ್ರಿತ ಮೌಲ್ಯಯುತ, ಭಾರತೀಯತೆಯ ಒಂದು ಹೊಸ ಸಮ ಸಮಾಜ ಸೃಷ್ಟಿಯಾಗಬೇಕಾದ ಸಂದರ್ಭದಲ್ಲಿ ದೈವ ಕೇಂದ್ರೀಕೃತ, ಧರ್ಮ ಕೇಂದ್ರೀಕೃತ, ಜಾತಿ ಕೇಂದ್ರೀಕೃತ ಅಸಹಿಷ್ಣುತೆಯ ಲೋಕದ ಸಮಾಜದೊಳಗೆ ಮುನ್ನಡೆಯುತ್ತಿರುವ ದುರ್ದೈವದ ದಿನಗಳಲ್ಲಿ ನಾವಿದ್ದೇವೆ. ಇಲ್ಲಿ ಹವ್ಯಕ ಮಹಾಸಭಾ ಕಾರ್ಯಕ್ರಮ ಒಂದು ನೆಪ ಮಾತ್ರ. ಎಲ್ಲಾ ಜಾತಿಯ ಜನರು ಈ ರೀತಿ ಒಗ್ಗೂಡುತ್ತಲೇ ಇದ್ದಾರೆ. ಇವರನ್ನು ರಾಜಕೀಯ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಲೇ ಇದ್ದಾರೆ. ಆ ಕಾರಣದಿಂದಾಗಿಯೇ ಭಾರತದ ಸಾಮಾಜಿಕ ರಚನೆ ಅಂದರೆ ಸೋಶಿಯಲ್ ಸ್ಟ್ರಕ್ಚರ್ ಅತ್ಯಂತ ಅಸಮಾನತೆ, ಅಮಾನವೀಯ, ಮೌಢ್ಯದ, ವಿಭಜನಾತ್ಮಕ ರಚನೆಯನ್ನು ಹೊಂದಿದೆ. ಅದರ ಸಂಪೂರ್ಣ ಲಾಭ ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಪಡೆಯುತ್ತಿದ್ದಾರೆ.
ಹೇಗೆ ಬಲಿಷ್ಠ ವರ್ಗಗಳು ಅಧಿಕಾರ ಹಿಡಿಯಲು ಸಣ್ಣ ಸಣ್ಣ ಸಮುದಾಯಗಳನ್ನು ಮತ್ತಷ್ಟು ವಿಭಜಿಸಿ ಒಂದು ಬಲಿಷ್ಠ ವರ್ಗ ಒಂದು ಪಕ್ಷದ ಕಡೆ ಇದ್ದರೆ, ಇನ್ನೊಂದು ಬಲಿಷ್ಠ ವರ್ಗ ಇನ್ನೊಂದು ಪಕ್ಷದ ಕಡೆ ಇರುತ್ತದೆ. ಆದರೆ ಕೊನೆಗೆ ಆಯ್ಕೆಯಾಗುವುದು ಮಾತ್ರ ಜಾತಿವಾದಿ, ಭ್ರಷ್ಟವ್ಯಾಧಿ, ಕೋಮುವಾದಿ ವ್ಯಕ್ತಿಗಳು. ಖಂಡಿತವಾಗಲೂ ಈ ವಿಷಯದಲ್ಲಿ ನಮ್ಮ ದೇಶದ ಭವಿಷ್ಯ ಆತಂಕಕಾರಿಯಾಗಿದೆ ಎಂಬುದಂತೂ ನಿಜ. ಅದು ಭ್ರಷ್ಟಾಚಾರದಿಂದಲೋ, ಜಾತಿವಾದದಿಂದಲೋ ಅಥವಾ ಕೋಮುವಾದದಿಂದಾಗುತ್ತದೋ ಗೊತ್ತಿಲ್ಲ. ಆ ಸಮಾವೇಶದದಲ್ಲಿ ಈ ಸಮಾಜದ ಜನಪ್ರಿಯ ವ್ಯಕ್ತಿಗಳು ಎನಿಸಿಕೊಂಡವರು ಅತ್ಯಂತ ಬಾಲಿಶವಾಗಿ ಮಾತನಾಡಿರುವುದನ್ನು ಕೇಳಿಸಿಕೊಂಡಿದ್ದೇನೆ. "ಹಿಂದೂ ನಾವೆಲ್ಲ ಒಂದು " ಎನ್ನುವ ಮಾತಿಗೆ ಸಂಪೂರ್ಣ ವಿರುದ್ಧವಾದ ಚಿಂತನೆಗಳೇ ಅಲ್ಲಿ ಮೂಡಿ ಬಂದವು. ವಿಶ್ವ ಮಾನವ ಪ್ರಜ್ಞೆ ಎಂಬ ಆಶಯ ದೂರವೇ ಉಳಿಯಿತು. ಎಲ್ಲಿಯೂ ಭಾರತೀಯತೆ ಅಥವಾ ಹಿಂದುತ್ವದ ಅಥವಾ ಜಾತಿ ವ್ಯವಸ್ಥೆಯ ವಿರೋಧದ ಅಥವಾ ತಾರತಮ್ಯದ ಮಾತುಗಳು ಕೇಳಿ ಬರಲಿಲ್ಲ. ಕೇವಲ ಹವ್ಯಕ ಮತ್ತು ಬ್ರಾಹ್ಮಣ ಶ್ರೇಷ್ಠತೆಯ ಅತಿರೇಕದ ಮಾತುಗಳೇ ಕೇಳಿ ಬಂದವು.
ಮೇಲ್ವರ್ಗದವರು ಧರ್ಮರಕ್ಷಣೆಯ ವಿಷಯದಲ್ಲಿ ಕೆಳ ವರ್ಗದವರನ್ನು ಪ್ರೇರೇಪಿಸುತ್ತಾರೆ. ಆದರೆ ತಾವು ಮಾತ್ರ ಜಾತಿ ಸಮಾವೇಶಗಳನ್ನು ಮಾಡುವುದು ಎಷ್ಟು ಸರಿ? ಮತ್ತೆ ಹೇಳಬೇಕಾಗಿದೆ, ಬುದ್ಧಿವಂತ, ಪ್ರಜ್ಞಾವಂತ ಸಮೂಹಗಳೇ ಈ ರೀತಿ ಜಾತಿ ಪ್ರೀತಿಯನ್ನು ಬಹಿರಂಗವಾಗಿ ತೋರಿಸಿ ನಾವೇ ಒಂದು ಪ್ರತ್ಯೇಕ ವರ್ಗ ಎಂದು ಹೇಳುವುದಾದರೆ ಅತ್ಯಂತ ಹಿಂದುಳಿದ, ತುಳಿತಕ್ಕೊಳಗಾದ, ಅಸ್ಪೃಶ್ಯತೆಗೊಳಗಾದ ಜನರನ್ನು ಹೇಗೆ ನಾವು ಮುಖ್ಯ ವಾಹಿನಿಗೆ ತರುವುದು, ಅವರ ಪ್ರಶ್ನೆಗಳಿಗೆ ಉತ್ತರಿಸುವುದಾದರೂ ಹೇಗೆ ? ಭಾರತೀಯತೆ ಎಂದರೆ ಏನು ? ದೇಶದ ಐಕ್ಯತೆ ಕಾಪಾಡುವ ಜವಾಬ್ದಾರಿ ಹೊರಬೇಕಾಗಿರುವವರು ಯಾರು ? ಪ್ರಜ್ಞಾವಂತ ಮೇಲ್ವರ್ಗದ ಸಮೂಹವೇ ಜಾತಿಯ ಶ್ರೇಷ್ಠತೆಯ ವ್ಯಸನಕ್ಕೆ ಬಲಿಯಾಗಿ ದೇಶ ಮರೆಯುತ್ತಿರುವಾಗ ಧರ್ಮವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುತ್ತಿರುವಾಗ ಶೋಷಣೆಗೊಳಗಾದವರು ಹೇಗೆ ರಾಷ್ಟ್ರೀಯವಾದಿಗಳಾಗಿ ಮುಂದೆ ಬಂದಾರು. ತಾವು ಮಾತ್ರ ಶ್ರೇಷ್ಠ, ನಮ್ಮ ಸಮುದಾಯ ಮಾತ್ರ ವಿಶೇಷ ಸಾಮರ್ಥ್ಯ ಹೊಂದಿದೆ ಎಂದರೆ ದೇಶದ ಒಟ್ಟು ಸಾಮಾಜಿಕ ಪರಿಸ್ಥಿತಿಯಲ್ಲಿ ಇತರರನ್ನು ಕೀಳಾಗಿ ಕಂಡಂತೆ, ಅವಹೇಳನ ಮಾಡಿದಂತೆ ಆಗುವುದಿಲ್ಲವೇ?
ಕಲಿತ, ಬಲಿತ ಕೈಗಳು ಇನ್ನೊಬ್ಬರನ್ನು ರಕ್ಷಿಸಬೇಕು, ಇನ್ನೊಬ್ಬರನ್ನು ತಿದ್ದಬೇಕೆ ಹೊರತು ವಿಭಜಕ ಮನಸ್ಥಿತಿಯನ್ನು ಸೃಷ್ಟಿಸಬಾರದು. ಏನೋ ಒಂದು ಸಮುದಾಯ ಒಟ್ಟಾಗಿ ಸೇರಿ ಸಾಂಸ್ಕೃತಿಕವಾಗಿ ಒಂದಷ್ಟು ಚಟುವಟಿಕೆಗಳನ್ನು ಮಾಡುವುದು, ಸಂಬಂಧಗಳನ್ನು ಬೆಸೆಯುವುದು, ದೇಶದ ಬಗ್ಗೆ ಚರ್ಚಿಸುವುದು ಸ್ವೀಕಾರಾರ್ಹ. ಆದರೆ ಆ ಕಾರ್ಯಕ್ರಮದಲ್ಲಿ ಮಾತನಾಡಿದ ವ್ಯಕ್ತಿಗಳು ಮಾತ್ರ ತಮ್ಮನ್ನು ತಾವು ಪ್ರತ್ಯೇಕವೆಂಬಂತೆ ಮಾತನಾಡಿದ್ದು ವೈಯಕ್ತಿಕವಾಗಿ ಸಹ್ಯವಾಗಲಿಲ್ಲ.
ಇಲ್ಲಿ ಹವ್ಯಕ ಸಮ್ಮೇಳನ ಒಂದು ನೆಪ ಮಾತ್ರ ಅಥವಾ ಸಾಂಕೇತಿಕ ಮಾತ್ರ. ಇನ್ನೂ ಅನೇಕ ಜನ ಜಾತಿ ಆಧಾರದ ಮೇಲೆ ಸಂಘಟಿತರಾಗುತ್ತಿರುವುದು ಈ ದೇಶದ ರಾಜಕೀಯ ಭವಿಷ್ಯ ಅಥವಾ ಒಟ್ಟು ಭವಿಷ್ಯ ಕತ್ತಲೆಡೆಗೆ ನಡೆಯುತ್ತಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಧರ್ಮ ಮತ್ತು ದೇವರು ಕೇಂದ್ರೀಕೃತ ಸಮಾಜಕ್ಕಿಂತ ಮನುಷ್ಯ ಕೇಂದ್ರೀಕೃತ ಸಮಾಜ ಮುನ್ನಡೆ ಬಂದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಅವರವರು ಅವರವರಿಗೆ ತೋಚಿದಂತೆ ಸಂಕುಚಿತ ಮನೋಭಾವದಲ್ಲಿ ಸಮಾಜವನ್ನು ಬೆಳೆಸಿದರೆ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ನನಗೆ ತಿಳಿದಂತೆ ಬಹುಶಃ ಈ ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಇದನ್ನು 150 ವರ್ಷಗಳ ಹಿಂದೆಯೇ ಹೇಳಿದ್ದರು. ಈ ದೇಶಕ್ಕೆ ನಿಜವಾದ ಅಪಾಯ ಇಲ್ಲಿನ ಜಾತಿ ವ್ಯವಸ್ಥೆಯಿಂದ. ಮುಖ್ಯವಾಗಿ ಮೇಲ್ವರ್ಗದವರ ಜಾತಿ ಶ್ರೇಷ್ಠತೆಯ ವ್ಯಸನದಿಂದ. ಮೊದಲು ಅದರ ನಿರ್ಮೂಲನೆಗೆ ಮಹತ್ವ ಕೊಡಿ. ನಾವೆಲ್ಲರೂ ಭಾರತೀಯರು. ಅದನ್ನು ಸಾಕಷ್ಟು ಶ್ರಮಪಟ್ಟು ಸ್ವಾತಂತ್ರ್ಯ ಗಳಿಸಿದ್ದೇವೆ. ನಾವೇ ಇಂದು ಅದನ್ನು ಮರೆಯುತ್ತಿದ್ದೇವೆ. ನನಗೆ ಆ ಕಾರ್ಯಕ್ರಮದ ಬಗ್ಗೆ ಯಾವುದೇ ಬೇಸರವಿಲ್ಲ. ಆದರೆ ಕಾರ್ಯಕ್ರಮದಲ್ಲಿ ಮಾತನಾಡಿದವರು ಜಾತಿ ವ್ಯವಸ್ಥೆಯನ್ನು, ಸಂಕುಚಿತ ಮನೋಭಾವವನ್ನು ಪ್ರೇರೇಪಿಸುವಂತಿತ್ತು. ಅದು ಸಾಕಷ್ಟು ನೋವನ್ನುಂಟು ಮಾಡಿದೆ.
ಇದು ಕೇವಲ ಹವ್ಯಕರು ಮಾತ್ರ ಮಾಡಿದ್ದಾರೆ ಎಂದಲ್ಲ. ಆ ರೀತಿ ಮಾಡುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಮುಖ್ಯವಾಗಿ ಮೇಲ್ವರ್ಗದವರ ಜಾತಿ ಸಮಾವೇಶಗಳು ಖಂಡಿತ ಸ್ವೀಕಾರಾರ್ಹವಲ್ಲ. ಏಕೆಂದರೆ ಜಾತಿ ವ್ಯವಸ್ಥೆಯ ಮೇಲ್ಪದರದಲ್ಲಿರುವ ವಿದ್ಯಾವಂತರು, ಪ್ರಜ್ಞಾವಂತರು ತಾವೇ ತಪ್ಪುಗಳನ್ನು ಮಾಡುತ್ತಾ ಇತರರಿಗೆ ಒಳ್ಳೆಯದನ್ನು ಬೋಧನೆ ಮಾಡುವ ನೈತಿಕತೆ ಹೊಂದಿರುವುದಿಲ್ಲ.
ಹವ್ಯಕ ಸಮ್ಮೇಳನ ಅತ್ಯಂತ ಶಿಸ್ತುಬದ್ಧವಾಗಿ, ಶ್ರೀಮಂತವಾಗಿ, ಕ್ರಮಬದ್ಧವಾಗಿ ನಡೆದಿದ್ದನ್ನು ನೋಡಿದರೆ ಆ ಶಿಸ್ತು ಬುದ್ಧಿವಂತಿಕೆಯ ಲಕ್ಷಣ. ಆ ಬುದ್ಧಿವಂತಿಕೆ ಹವ್ಯಕರಿಗೆ ಮಾತ್ರವಲ್ಲ ದೇಶಕ್ಕೆ, ಸಮಾಜಕ್ಕೆ ಉಪಯೋಗವಾಗಬೇಕು. ಏಕೆಂದರೆ ತಿಳಿವಳಿಕೆ ನಡವಳಿಕೆಯಾದಾಗ ಮಾತ್ರ ಅದು ಒಳ್ಳೆಯ ಪ್ರಯೋಜನಕ್ಕೆ ಬರುತ್ತದೆ.
-ವಿವೇಕಾನಂದ. ಎಚ್. ಕೆ , ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ