ಭಾರತೀಯ ಅಂಚೆಚೀಟಿಗಳಲ್ಲಿ ವಿದೇಶೀ ವಿಜ್ಞಾನಿಗಳು
ಭಾರತೀಯ ಅಂಚೆಚೀಟಿಗಳಲ್ಲಿ ಗೌರವ ಸಂಪಾದಿಸಿದ ಕೆಲವು ಭಾರತೀಯ ವಿಜ್ಞಾನಿಗಳ ಬಗ್ಗೆ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಈ ಬಾರಿ ನಾನು ನಮ್ಮ ದೇಶದ ಅಂಚೆ ಚೀಟಿಗಳಲ್ಲಿ ಮುದ್ರಿತವಾದ ಕೆಲವು ಖ್ಯಾತ ವಿದೇಶೀ ವಿಜ್ಞಾನಿಗಳ ಬಗ್ಗೆ ಮಾಹಿತಿ ನೀಡಲಿರುವೆ. ಇಲ್ಲಿರುವ ವಿಜ್ಞಾನಿಗಳು ಮಾತ್ರವಲ್ಲ, ಇನ್ನೂ ಹಲವಾರು ವಿದೇಶೀ ವಿಜ್ಞಾನಿಗಳ ಚಿತ್ರವನ್ನು ಅಂಚೆ ಚೀಟಿಯಲ್ಲಿ ಮುದ್ರಿಸುವುದರ ಮೂಲಕ ಭಾರತ ಸರಕಾರ ಅವರ ಸಾಧನೆಯನ್ನು ಗೌರವಿಸಿದೆ.
ಅಲ್ಬರ್ಟ್ ಐನ್ ಸ್ಟೀನ್ (೧೮೭೯-೧೯೫೫): ಜರ್ಮನಿಯಲ್ಲಿ ೧೮೭೯ರಲ್ಲಿ ಹುಟ್ಟಿದ, ೨೦ನೇ ಶತಮಾನ ಕಂಡ ಶ್ರೇಷ್ಟ ಭೌತ ವಿಜ್ಞಾನಿ. ಅವರೊಬ್ಬ ಉತ್ತಮ ಗಣಿತಜ್ಞ ಕೂಡ ಹೌದು. ಚಿಕ್ಕಂದಿನಲ್ಲಿ ಅಂತರ್ಮುಖಿಯಾಗಿದ್ದರೂ ಇವರು ಚುರುಕಾದ ಬುದ್ಧಿಶಕ್ತಿಯನ್ನು ಹೊಂದಿದ್ದರು. ತರಗತಿಯೊಳಗೆ ಕುಳಿತು ಪುಸ್ತಕದ ಬದನೇಕಾಯಿ ಓದುವುದಕ್ಕೆ ಇವರ ಮನಸ್ಸು ಕೇಳುತ್ತಿರಲಿಲ್ಲ. ಈ ಕಾರಣದಿಂದ ಇವರ ವಿದ್ಯಾಭ್ಯಾಸವು ಹಲವು ಏರಿಳಿತಗಳನ್ನು ಕಾಣಬೇಕಾಯಿತು. ಆದರೂ ಇವರ ಮನಸ್ಸು ಭೌತಶಾಸ್ತ್ರದಿಂದ ವಿಚಲಿತವಾಗಲಿಲ್ಲ. ೧೯೦೫ರಲ್ಲಿ ಇವರು ಮಂಡಿಸಿದ ನಾಲ್ಕು ಪ್ರಬಂಧಗಳು ಆಧುನಿಕ ಭೌತ ವಿಜ್ಞಾನದ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ವಿಶೇಷ ಸಾಪೇಕ್ಷ ಸಿದ್ಧಾಂತ, ದ್ಯುತಿ ವಿದ್ಯುತ್ ಪರಿಣಾಮ, ಅವಗಾಡ್ರೋ ಸಂಖ್ಯೆ e = mc2 ಸೂತ್ರ - ಈ ಮೂಲಕ ಹೊರಜಗತ್ತಿಗೆ ಅನಾವರಣಗೊಂಡವು. ಫೊಟೋ ಇಲೆಕ್ಟ್ರಿಕ್ ಇಫೆಕ್ಟ್ (ದ್ಯುತಿ ವಿದ್ಯುತ್ ಪರಿಣಾಮ) ಸಂಶೋಧನೆ ಹಾಗೂ ಸೈದ್ಧಾಂತಿಕ ಭೌತ ವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಗೆ ೧೯೨೧ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು. ಅವರ ಜನ್ಮಶತಾಬ್ದಿಯ ಸ್ಮರಣಾರ್ಥ ೧೯೭೯ರಲ್ಲಿ ಅವರ ಚಿತ್ರವುಳ್ಳ ಅಂಚೆ ಚೀಟಿಯನ್ನು ಹೊರತರಲಾಯಿತು.
ಅಲೆಕ್ಸಾಂಡರ್ ಗ್ರಹಾಂಬೆಲ್ (೧೮೪೭- ೧೯೨೨) : ದೂರವಾಣಿ ಎಂದಾಕ್ಷಣ ನಮ್ಮ ನೆನಪಿಗೆ ಬರುವ ವ್ಯಕ್ತಿ ಅಲೆಕ್ಸಾಂಡರ್ ಗ್ರಹಾಂಬೆಲ್. ಇವರ ತಾಯಿ ಹಾಗೂ ಒಲವಿನ ಮಡದಿ ಇಬ್ಬರೂ ಕಿವುಡರು. ಈ ಕಾರಣದಿಂದ ಗ್ರಹಾಂಬೆಲ್ ಅವರಿಗೆ ಆರಂಭದಿಂದಲೂ ಧ್ವನಿ ತಂತ್ರಜ್ಞಾನದ ಮೇಲೆ ಕುತೂಹಲ ಮತ್ತು ಆಸಕ್ತಿ. ತನ್ನ ತಂದೆ ಅಭಿವೃದ್ಧಿ ಪಡಿಸಿದ “Visible Speech” ಎಂಬ ನುಡಿ ಸಂಕೇತಗಳನ್ನು ಬಳಸಿ ಕಿವುಡ ಮಕ್ಕಳಿಗೆ ಬೋಧಿಸುತ್ತಿದ್ದರಲ್ಲದೆ ಅವರ ಅನುಕೂಲಕ್ಕಾಗಿ ಒಂದು ಕಿವುಡ ಮಕ್ಕಳ ಶಾಲೆಯನ್ನೂ ತೆರೆದರು. ಹಾರ್ಮೋನಿಕ್ ಟೆಲಿಗ್ರಾಫ್ ನ ಅನ್ವೇಷಣೆಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಅನುಭವವು, ತಂತಿಯ ಮೂಲಕ ಧ್ವನಿ ಸಂಕೇತ ಕಳುಹಿಸಲು ಸಾಧ್ಯ ಎಂಬ ಯೋಚನೆ ಮೂಡಲು ಕಾರಣವಾಯಿತು. ೧೮೭೫ರಲ್ಲಿ ಆವಿಷ್ಕರಿಸಿದ ದೂರವಾಣಿಯನ್ನು ಒಳಗೊಂಡಂತೆ ಇಂದು ಬಳಕೆಯಲ್ಲಿರುವ ಲೋಹ ಪರಿಶೋಧಕ, ಆಡಿಯೋಮೀಟರ್ ಇತ್ಯಾದಿಗಳು ಇವರ ಸಂಶೋಧನೆಗಳಾಗಿವೆ. ವಾಯುಯಾನ ಮತ್ತು ಹೈಡ್ರೋಫಾಯಿಲ್ ಆವಿಷ್ಕಾರಗಳಲ್ಲೂ ಕೆಲಸ ಮಾಡಿದ್ದಾರೆ. ೧೯೨೨ರಲ್ಲಿ ಇವರು ವಿಧಿವಶರಾದಾಗ ಅಮೇರಿಕಾದಲ್ಲಿ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲಾಯಿತು. ಹೇಗೆ ಗೊತ್ತೇ? ಅಲ್ಲಿನ ಪ್ರತಿಯೊಂದು ಫೋನನ್ನು ಸೈಲೆಂಟ್ ಮೋಡ್ ನಲ್ಲಿ ಇಡುವ ಮೂಲಕ.
ಚಾರ್ಲ್ಸ್ ಡಾರ್ವಿನ್ (೧೮೦೯- ೧೮೮೨): ಶ್ರೀಮಂತ ವೈದ್ಯ ಕುಟುಂಬದ ಹಿನ್ನಲೆ ಹೊಂದಿದ್ದ ಡಾರ್ವಿನ್ ಗೆ ವೈದ್ಯನಾಗುವುದು ಇಷ್ಟವಿಲ್ಲದೆ ವೈದ್ಯಕೀಯ ಅಧ್ಯಯನವನ್ನು ಅರ್ಧಕ್ಕೇ ಮೊಟಕುಗೊಳಿಸಿದರು. ಧರ್ಮಗುರುವಾಗು ಎನ್ನುವ ಆತನ ಅಪ್ಪನ ಆಸೆಯನ್ನೂ ಪೂರೈಸಲಿಲ್ಲ. ಡಾರ್ವಿನ್ ಆಸಕ್ತಿ ಇದ್ದುದು ಸಸ್ಯವಿಜ್ಞಾನ, ಜೀವ ವಿಜ್ಞಾನ, ಭೂವಿಜ್ಞಾನ, ನಿಸರ್ಗ ಇತಿಹಾಸ ಇತ್ಯಾದಿ ಸಂಗತಿಗಳಲ್ಲಿ.
೧೮೩೧-೩೬ರ ಐದು ವರ್ಷಗಳ ಕಾಲ ಬೀಗಲ್ ಎಂಬ ಹೆಸರಿನ ಹಡಗಿನಲ್ಲಿ ಡಾರ್ವಿನ್ ಭೂವಿಜ್ಞಾನದ ವಿದ್ಯಾರ್ಥಿಯಾಗಿ, ವಿಜ್ಞಾನಿಯಾಗಿ ಪ್ರಪಂಚ ಪರ್ಯಟನೆ ಮಾಡಿದರು. ಬಗೆ ಬಗೆಯ ಪಳೆಯುಳಿಕೆಗಳನ್ನು ಸಂಗ್ರಹಿಸಿದರು. ಸಂಗ್ರಹಿಸಿದ ಎಲ್ಲ ವಸ್ತುಗಳ ಆಳವಾದ ಅಧ್ಯಯನ ಮಾಡಿ ಅದರ ಆಧಾರದಲ್ಲಿ “ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ರೂಪಾಂತರಗಳಿಗೆ ಒಳಗಾಗಿದೆ" ಎಂದು ತಮ್ಮ ‘ಆನ್ ದಿ ಒರಿಜಿನ್ ಆಫ್ ಸ್ಪೀಶಿಸ್' ಎಂಬ ಪುಸ್ತಕದಲ್ಲಿ ದಾಖಲಿಸಿದರು. ಈ ಪುಸ್ತಕದಲ್ಲಿ ಪ್ರತಿಪಾದಿಸಿದ ಸಂಗತಿಯೇ ಮುಂದೆ ‘ವಿಕಾಸವಾದ ಸಿದ್ಧಾಂತ' ಎಂದು ಪ್ರಸಿದ್ಧಿಯನ್ನು ಪಡೆಯಿತು.
ನಿಕೊಲಸ್ ಕೋಪರ್ನಿಕಸ್ (೧೪೭೩- ೧೫೪೩) : ಪೋಲೆಂಡ್ ದೇಶದ ಥಾರ್ನ್ ನಲ್ಲಿ ಜನಿಸಿದ ಕೋಪರ್ನಿಕಸ್ ಓರ್ವ ಖಗೋಳಜ್ಞ. ‘ಭೂಮಿಯೇ ವಿಶ್ವದ ಕೇಂದ್ರ ; ಉಳಿದೆಲ್ಲಾ ಆಕಾಶಕಾಯಗಳು ಅದರ ಸುತ್ತ ಪ್ರದಕ್ಷಿಣೆ ಹಾಕುತ್ತವೆ ಎಂಬ ನಂಬಿಕೆ ಬಲವಾಗಿದ್ದ ಕಾಲವದು. ಗ್ರಹಗಳ ಚಲನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ಕೋಪರ್ನಿಕಸ್, ಅದನ್ನಾಧರಿಸಿ ೧೫೪೩ರಲ್ಲಿ ಸೂರ್ಯಕೇಂದ್ರ ವಾದವನ್ನು ಮಂಡಿಸಿ, ಭೂಕೇಂದ್ರ ವಾದವನ್ನು ಅಲ್ಲಗಳೆದ. ಆದರೆ ಕೋಪರ್ನಿಕಸ್ ನ ಈ ವಾದ ಚರ್ಚ್ ವ್ಯವಸ್ಥೆಗೆ ಪಥ್ಯವಾಗಲಿಲ್ಲ. ಸೂರ್ಯನನ್ನೂ ಒಳಗೊಂಡು ಜಗತ್ತಿನ ಎಲ್ಲವೂ ಭೂಮಿಗೆ ಸುತ್ತು ಹಾಕುತ್ತವೆ ಎಂಬುದೇ ಚರ್ಚ್ ನ ಪ್ರಬಲ ನಂಬಿಕೆಯಾಗಿತ್ತು. ಸ್ವತಃ ಪಾದರಿಯಾಗಿದ್ದ ಕೋಪರ್ನಿಕಸ್ ಗೆ ತನ್ನ ಸಿದ್ಧಾಂತದಿಂದ ಏನೆಲ್ಲಾ ವಿರೋಧಗಳನ್ನು ಕಟ್ಟಿಕೊಳ್ಳಬೇಕೆಂಬ ಕಲ್ಪನೆ ಇಲ್ಲದೇ ಇರಲಿಲ್ಲ. ಆದರೂ ಸೂರ್ಯ ಕೇಂದ್ರ ಸಿದ್ಧಾಂತವನ್ನು ಪ್ರತಿಪಾದಿಸುವ ಕೃತಿಯ ರಚನೆಗೆ ತೊಡಗಿದ. ಕೃತಿ ಪ್ರಕಟವಾಗಿ ಬರುವ ಹೊತ್ತಿಗೆ ಆತ ತನ್ನ ಜೀವನದ ಅಂತಿಮ ಬಿಂದುವನ್ನು ಮುಟ್ಟಿಯಾಗಿತ್ತು. ವಿಪರ್ಯಾಸವೆಂದರೆ, ಕೋಪರ್ನಿಕಸ್ ಮಂಡಿಸಿದ ವಾದನೇ ಸತ್ಯವೆಂದು ಸಾಬೀತಾಗಿ ಅದನ್ನು ಎಲ್ಲರೂ ಸ್ವೀಕರಿಸುವ ಹೊತ್ತಿಗೆ ಆತ ಕಾಲವಾಗಿ ಶತಮಾನಗಳೇ ಕಳೆದಿದ್ದವು!
ಮಾರ್ಕೋನಿ (೧೮೭೪- ೧೯೩೭) : ಅಟ್ಲಾಂಟಿಕ್ ಮಹಾಸಾಗರದ ಮೂಲಕ ಹಾದುಹೋಗುವಂತೆ ಯಶಸ್ವಿಯಾಗಿ ನಿಸ್ತಂತು ಸಂಕೇತಗಳನ್ನು ಕಳುಹಿಸುವ ಮೂಲಕ, ಭೂಮಿಯ ವಕ್ರತೆ ಈ ಸಂಕೇತಗಳ ರವಾನೆಯನ್ನು ಅಡ್ಡಿಪಡಿಸುತ್ತದೆ ಎಂಬ ಬಲವಾಗಿದ್ದ ನಂಬಿಕೆಯನ್ನು ನಿರಾಧಾರ ಎಂದು ಸಾಬೀತು ಪಡಿಸಿದ ಇಟಲಿಯ ವಿಜ್ಞಾನಿ ಗುಗ್ಗಿಯೆಲ್ಮೋ ಮಾರ್ಕೋನಿ ಮೊತ್ತ ಮೊದಲ ರೇಡಿಯೋ ಟ್ರಾನ್ಸಿಸ್ಟರ್ ನ್ನು ಕಂಡುಹಿಡಿದವರು. ತಂದೆಯ ಎಸ್ಟೇಟ್ ನಲ್ಲಿ ಇಂಡಕ್ಷನ್ ಕಾಯಿಲ್, ರೇಡಿಯೋ ಅಲೆಗಳನ್ನು ಗುರುತಿಸುವ ಸಣ್ಣ ಉಪಕರಣಗಳನ್ನು ಬಳಸಿಕೊಂಡು ಸಂಶೋಧನೆ ನಡೆಸಿದರು. ನಿಸ್ತಂತು ಟೆಲಿಗ್ರಾಫನ್ನು ಸಾಧ್ಯವಾಗಿಸಿದ್ದ ಇವರು ಮೊದಲ ರೇಡಿಯೋ ಸಂವಹನವನ್ನು ಅಭಿವೃದ್ಧಿಪಡಿಸಿದರು. ಭವಿಷ್ಯದ ರೇಡಿಯೋ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನ್ವೇಷಣೆಗಳಿಗೆ ಇದು ಅಡಿಪಾಯ ಹಾಕಿಕೊಟ್ಟಿತು. ಕಾರ್ಲ್ ಬ್ರೌನ್ಸ್ ರವರ ಜತೆಗೆ ಜಂಟಿಯಾಗಿ ೧೯೦೯ರಲ್ಲಿ ಭೌತವಿಜ್ಞಾನ ನೊಬೆಲ್ ಪುರಸ್ಕಾರ ಪಡೆದರು.
ಮಾಹಿತಿ ಮೂಲ: ಸೂತ್ರ ಮಾಸ ಪತ್ರಿಕೆ
ಚಿತ್ರ ಕೃಪೆ: ಅಂತರ್ಜಾಲ ತಾಣ